` ಸ್ಯಾಂಡಲ್‍ವುಡ್ ಟ್ವಿಟರಾಧಿಪತಿಗೆ ಆಗ ಟ್ವಿಟರ್ ಎಂದರೇನೆಂದೇ ಗೊತ್ತಿರಲಿಲ್ಲ..! - chitraloka.com | Kannada Movie News, Reviews | Image

User Rating: 3 / 5

Star activeStar activeStar activeStar inactiveStar inactive
 
sudeep shares his twitter story
Sudeep, Ritesh Deshmukh Image

ಸಾಮಾಜಿಕ ಜಾಲತಾಣ ಟ್ವಿಟರ್‍ನಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೊದಲ ಸ್ಯಾಂಡಲ್‍ವುಡ್ ಸ್ಟಾರ್ ಕಿಚ್ಚ ಸುದೀಪ್. ಟ್ವಿಟರ್‍ನಲ್ಲಿ ಅಭಿಮಾನಿಗಳ ಜೊತೆ ಸದಾ ಸಂಪರ್ಕದಲ್ಲಿರುವ ಸುದೀಪ್, ಅಭಿಮಾನಿಗಳ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ನೇರವಾಗಿ ಸಂಭಾಷಣೆ ನಡೆಸುತ್ತಾರೆ. ಆದರೆ, ಒಂದಾನೊಂದು ಕಾಲದಲ್ಲಿ ಸುದೀಪ್‍ಗೆ ಟ್ವಿಟ್ಟರ್ ಎಂದರೆ ಏನೆಂದೇ ಗೊತ್ತಿರಲಿಲ್ಲ ಎಂದರೆ ಅಚ್ಚರಿಯಾದೀತು.

ಕೆಲವು ವರ್ಷಗಳ ಹಿಂದೆ ಸುದೀಪ್‍ರನ್ನು ಕಾರ್‍ನಲ್ಲಿ ಡ್ರಾಪ್ ಮಾಡಿದ ಗೆಳೆಯ ರಿತೇಶ್ ದೇಶ್‍ಮುಖ್, ಸುದೀಪ್‍ಗೆ ನಿಮ್ಮ ಟ್ವಿಟರ್ ಅಕೌಂಟ್ ಏನು ಎಂದು ಕೇಳಿದರಂತೆ. ಕಕ್ಕಾಬಿಕ್ಕಿಯಾದ ಸುದೀಪ್ ಮೊದಲು ನನ್ನದು ಟ್ವಿಟರ್ ಅಕೌಂಟ್ ಇಲ್ಲ ಎಂದಿದ್ದಾರೆ. ಕೆಲವು ನಿಮಿಷಗಳ ನಂತರ ಯಾವುದೇ ಮುಜುಗರವಿಲ್ಲದೆ ಗೆಳೆಯನ ಬಳಿ ಟ್ವಿಟರ್ ಎಂದರೆ ಏನು ಎಂದು ಕೇಳಿದ್ದಾರೆ. ಆಗ ರಿತೇಶ್ ದೇಶ್‍ಮುಖ್ ಸುದೀಪ್‍ಗೆ ಟ್ವಿಟರ್ ಅಕೌಂಟ್ ಓಪನ್ ಮಾಡುವುದರಿಂದ ಹಿಡಿದು, ಅದರಲ್ಲಿ ಏನೇನೆಲ್ಲ ಮಾಡಬಹುದು ಎಂಬುದನ್ನು ವಿವರಿಸಿದರಂತೆ. ಅದು ಅರ್ಥವಾದ ನಂತರ ಸುದೀಪ್ ಮಾಡಿದ ಕೆಲಸ ಟ್ವಿಟರ್‍ನಲ್ಲಿ ಅಕೌಂಟ್ ತೆರೆದಿದ್ದು. ಅದೀಗ ಒಂದು ಮಿಲಿಯನ್ ಫಾಲೋವರ್ಸ್ ಸಂಪಾದಿಸಿಕೊಟ್ಟಿದೆ.

ಅಭಿಮಾನಿಗಳ ಜೊತೆ ಮಾತನಾಡುವಾಗ ಖುಷಿಯಾಗುವ ಕಿಚ್ಚ ಸುದೀಪ್‍ಗೆ ಕೆಲವೊಮ್ಮೆ ಬೇಸರವಾಗಿದ್ದೂ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರ ವರ್ತನೆಗಳಿಂದಾಗಿ, ಟ್ವಿಟರ್ ಸಹವಾಸವೇ ಬೇಡ ಎಂದು ನಿರ್ಧರಿಸಿದ್ದೂ ಇದೆ. ಆದರೆ, ಈಗ ಅವುಗಳನ್ನೆಲ್ಲ ಮ್ಯಾನೇಜ್ ಮಾಡುವುದು ಹೇಗೆ ಎಂಬ ಕಲೆಯೂ ಕರಗತವಾಗಿದೆ. ವಯಸ್ಸು ಹೆಚ್ಚುತ್ತಾ ಹೋದಂತೆ ಮಾಗುವ ಮನಸ್ಸು, ಎಲ್ಲವನ್ನೂ ಕಲಿಸಿಬಿಡುತ್ತೆ.

ಹಾಗೆ ನೋಡಿದರೆ, ಸುದೀಪ್ ಅಭಿಮಾನಿಗಳ ಸಂಖ್ಯೆ ಮಿಲಿಯನ್ ಅಲ್ಲ. ಅದಕ್ಕಿಂತಲೂ ಹೆಚ್ಚಿದೆ. ಆದರೆ, ಇದು ಟ್ವಿಟರ್‍ನಲ್ಲಿನ ಫಾಲೋವರ್ಸ್ ಸಂಖ್ಯೆ ಮಾತ್ರ. ಅಲ್ಲಿ ಲೆಕ್ಕ ಸಿಕ್ಕೋ ಕಾರಣಕ್ಕೆ ಮಿಲಿಯನೇರ್ ಸುದೀಪ್ ಎನ್ನಬಹುದೇ ಹೊರತು, ಸುದೀಪ್ ಕೋಟಿಗೊಬ್ಬರೇ.. ಅಂದಹಾಗೆ ಸುದೀಪ್ ಟ್ವಿಟರ್‍ನಲ್ಲಿ 1 ಮಿಲಿಯನ್ ಫಾಲೋವರ್ಸ್ ದಾಟಿದಾಗ ಟ್ವಿಟರ್‍ನಲ್ಲಿಯೇ ಅಭಿನಂದಿಸಿದವರಲ್ಲಿ ರಿತೇಶ್ ದೇಶ್‍ಮುಖ್ ಪ್ರಮುಖರು.

Related Articles :-

ಟ್ವಿಟರ್‍ನಲ್ಲಿ ನಂ. 1 ಆದ ಸುದೀಪ್ - ಸಿನಿಮಾ, ಗೆಳೆಯರ ಟ್ವೀಟ್ ಸಂಭ್ರಮ

Sudeep Twitter Story

Sudeep - The First Millionaire From Sandalwood