ಟಿ.ಎನ್. ಸೀತಾರಾಮ್. ಕನ್ನಡ ಪ್ರೇಕ್ಷಕರಿಗೆ ಲಾಯರ್ ಸಿಎಸ್ಪಿಯಾಗಿಯೇ ಹೆಚ್ಚು ಪರಿಚಿತ. ಅವರ ಹೆಸರಿನ ಹಿಂದಿನ ಅಡ್ಡ ಹೆಸರುಗಳು ಕಾಲ ಕಾಲಕ್ಕೆ ಬದಲಾಗಿವೆ. ಮಾಯಾಮೃಗ ಸೀತಾರಾಮ್, ಮನ್ವಂತರ ಸೀತಾರಾಮ್, ಮುಕ್ತ ಸೀತಾರಾಮ್, ಮುಕ್ತ ಮುಕ್ತ ಸೀತಾರಾಮ್.. ಹೀಗೆ.. ಇವೆಲ್ಲವೂ ಅವರೇ ನಿರ್ದೇಶಿಸಿದ ಧಾರಾವಾಹಿಗಳು. ತಮ್ಮ ಕೃತಿಗಳ ಮೂಲಕವೇ ಹೆಸರು, ಖ್ಯಾತಿ ಪಡೆದಿದ್ದು ಸೀತಾರಾಮ್ ಸಾಧನೆ.
ಸೀತಾರಾಮ್ ಅವರ ಮೊದಲ ಚಿತ್ರಕ್ಕೂ ಮೂರನೇ ಚಿತ್ರಕ್ಕೂ ನಡುವೆ 17 ವರ್ಷಗಳ ಅಂತರವಿದೆ. ಸೀತಾರಾಮ್ ನಿರ್ದೇಶಿಸಿದ ಮೊದಲ ಚಿತ್ರ ಮತದಾನ. ರಾಷ್ಟ್ರಪ್ರಶಸ್ತಿಯನ್ನೂ ಪಡೆದ ಆ ಚಿತ್ರ ರಿಲೀಸ್ ಆಗಿದ್ದು 2001ರಲ್ಲಿ. ಈಗ ಅವರ ಮೂರನೇ ಚಿತ್ರ ಕಾಫಿತೋಟ ಬರುತ್ತಿದೆ. 2007ರಲ್ಲಿ ಮೀರಾ ಮಾಧವ ರಾಘವ ಚಿತ್ರ ಬಂದಿತ್ತು. ಮೊದಲ ಚಿತ್ರಕ್ಕೂ, ಎರಡನೇ ಚಿತ್ರಕ್ಕೂ 7 ವರ್ಷ ಗ್ಯಾಪ್ ತೆಗೆದುಕೊಂಡಿದ್ದ ಸೀತಾರಾಮ್, ಮೂರನೇ ಚಿತ್ರಕ್ಕೆ ನಿರ್ದೇಶಕನ ಕ್ಯಾಪ್ ತೊಟ್ಟಿರುವುದು 9 ವರ್ಷಗಳ ನಂತರ.
ಈ ಚಿತ್ರದ ಇನ್ನೂ ಒಂದು ವಿಶೇಷವೆಂದರೆ, ಇದು ಥ್ರಿಲ್ಲರ್ ಸಿನಿಮಾ. ಸಸ್ಪೆನ್ಸ್, ರಾಜಕೀಯ ವಿಡಂಬನೆ ಮತ್ತು ಮಧ್ಯಮ ವರ್ಗದ ಅಷ್ಟೂ ತಲ್ಲಣಗಳ ದರ್ಶನ ಚಿತ್ರದಲ್ಲಿದೆ ಎನ್ನುತ್ತಿದ್ಧಾರೆ ಸೀತಾರಾಮ್. ಚಿತ್ರ ಇದೇ 18ನೇ ತಾರೀಕಿನಂದು ಬಿಡುಗಡೆಯಾಗುತ್ತಿದೆ. ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿರುವ ಚಿತ್ರ, ಕನ್ನಡದಲ್ಲಿ ಬಹಳಷ್ಟು ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳಲ್ಲಿ ಒಂದು.