ವಯಸ್ಸಾದ ತಂದೆ, ಸ್ವಾತಂತ್ರ್ಯ ಹೋರಾಟಗಾರ, ಬಡ ಮೇಷ್ಟ್ರು, ಅಸಹಾಯಕ ಅಜ್ಜ, ದೇವಸ್ಥಾನದ ಪೂಜಾರಿ, ನೀತಿ ಪಾಠ ಹೇಳುವ ಪ್ರಾಮಾಣಿಕ ರಾಜಕಾರಣಿ.. ಹೀಗೆ ಪಾತ್ರಗಳ ವ್ಯಕ್ತಿತ್ವ ಹೇಳುತ್ತಾ ಹೋದರೆ ಸಾಕು, ಕನ್ನಡ ಚಿತ್ರ ಪ್ರೇಕ್ಷಕರ ಕಣ್ಣಲ್ಲಿ ಥಟ್ಟಂತ ಮೂಡುವ ಚಿತ್ರ ಸದಾಶಿವ ಬ್ರಹ್ಮಾವರ್ ಅವರದ್ದು.
ಕನ್ನಡ ಚಿತ್ರಗಳಲ್ಲಿಯೇ ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿರುವ ಈ ಕಲಾವಿದ ಈಗ ಬೀದಿಪಾಲಾಗಿದ್ದಾರೆ. ಡಾ. ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್ಕುಮಾರ್, ಸುದೀಪ್, ದರ್ಶನ್.. ಹೀಗೆ ಕನ್ನಡ ಚಿತ್ರರಂಗದ ನಾಲ್ಕು ಜನರೇಷನ್ ಸ್ಟಾರ್ಗಳೊಂದಿಗೆ ನಟಿಸಿರುವ ಹಿರಿಯ ಕಲಾವಿದ ಬ್ರಹ್ಮಾವರ್. ಆದರೀಗ ಕುಮುಟಾದ ಬೀದಿಗಳಲ್ಲಿ ಅಸಹಾಯಕರಾಗಿ ಅಲೆಯುತ್ತಿದ್ದಾರೆ.
ಸುಮಾರು 2 ವರ್ಷಗಳ ಹಿಂದೆ ಬ್ರಹ್ಮಾವರ್ ಪತ್ನಿ ಮೃತಪಟ್ಟಿದ್ದರು. ಪತ್ನಿಯನ್ನು ಕಳೆದುಕೊಂಡ ಮೇಲಂತೂ ಮಕ್ಕಳು ಹೆತ್ತ ತಂದೆಯನ್ನು ದೂರವೇ ಇಟ್ಟುಬಿಟ್ಟಿದ್ದರು. ಮನೆಯಿಂದ ಆಚೆ ಹಾಕಿದ್ದರು. ಆಗಲೂ ಯಾರೋ ಅಭಿಮಾನಿಗಳು ಗುರುತಿಸಿ ಮನೆಗೆ ಕಳುಹಿಸಿದ್ದರು. ಆಗ ಸೈಕೋ ಚಿತ್ರದ ನಿರ್ದೇಶಕ ದೇವದತ್ತ ಕೆಲವು ತಿಂಗಳು ಆಶ್ರಯ ನೀಡಿದ್ದರು. ಅದಾದ ಮೇಲೆ ಕುಟುಂಬದವರು ಬಂದು ಕರೆದುಕೊಂಡು ಹೋಗಿದ್ದರು. ಈಗ ಮತ್ತೊಮ್ಮೆ ಅದೇ ಪರಿಸ್ಥಿತಿ.
ಈ ಬಾರಿ ಉ.ಕನ್ನಡ ಜಿಲ್ಲೆಯ ಕುಮುಟಾದಲ್ಲಿ ಕಾಣಿಸಿದ ಬ್ರಹ್ಮಾವರ್ ಅವರ ಬಳಿ ಊಟಕ್ಕೂ ಹಣವಿರಲಿಲ್ಲ. ಸ್ಥಳೀಯರೇ ಬ್ರಹ್ಮಾವರ್ ಅವರನ್ನು ಗುರುತಿಸಿ ಹೋಟೆಲ್ಗೆ ಕರೆದುಕೊಂಡು ತಾವೇ ಊಟ ಹಾಕಿಸಿ, ಬಸ್ ಚಾರ್ಜಿಗೆ ಹಣ ಕೊಟ್ಟು, ಖರ್ಚಿಗೆ ಸ್ವಲ್ಪ ಹಣವನ್ನೂ ಕೊಟ್ಟು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಬ್ರಹ್ಮಾವರ್ ಮಾತ್ರ ಎಂಥ ಸ್ವಾಭಿಮಾನಿಯೆಂದರೆ, ಹೆತ್ತ ಮಕ್ಕಳ ಬಗ್ಗೆ ಒಂದೇ ಒಂದು ಕೆಟ್ಟ ಮಾತನಾಡಿಲ್ಲ. ಕಾರಣವನ್ನೂ ಹೇಳಿಕೊಂಡಿಲ್ಲ. ಆದರೆ, ಇಂತಹ ಒಬ್ಬ ಕಲಾವಿದ ಹೀಗೆ ಬೀದಿಪಾಲಾಗುವುದು, ಅದು ಯಾರಿಗೂ ಗೊತ್ತಾಗದೆ ಹೋಗುವುದು ಬಣ್ಣದ ಬದುಕಿನ ಬಣ್ಣ ಮಾಸಿದ ಬದುಕಿಗೆ ಸಾಕ್ಷಿ. ಅವರ ಮಕ್ಕಳೋ, ಚಿತ್ರರಂಗದ ಹಿರಿಯ ಕಲಾವಿದರೋ ನೆರವಿಗೆ ಬಂದರೆ ಅವರು ಕೊನೆಗಾಲದಲ್ಲಿ ನೆಮ್ಮದಿಯ ಬದುಕು ಕಾಣಬಹುದು.