` ಪಾಕಿಸ್ತಾನದ ಅಭಿಮಾನಿ ಸುದೀಪ್‍ಗೆ ಕಣ್ಣು ತೆರೆಸಿದ್ದ ಕಥೆ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sudeep's bangakok experience
Sudeep Image

ನಮ್ಮ ಮಾತುಕತೆ ವರ್ತನೆಗಳಲ್ಲಿ ಬದಲಾವಣೆಗಳಾಗೋಕೆ ದೊಡ್ಡ ದೊಡ್ಡ ಘಟನೆಗಳೇ ನಡೆಯಬೇಕೆಂದೇನಿಲ್ಲ. ಸಣ್ಣ ಸಣ್ಣ ಘಟನೆ, ಪುಟ್ಟದೊಂದು ಮಾತು ಸಾಕು. ಕಿಚ್ಚ ಸುದೀಪ್ ಜೀವನದಲ್ಲೂ ಅಂಥಾದ್ದೊಂದು ಘಟನೆ ನಡೆದಿದೆ.

ಚಿತ್ರವೊಂದರ ಶೂಟಿಂಗ್‍ಗೆ ಸುದೀಪ್ ಬ್ಯಾಂಕಾಕ್‍ಗೆ ಹೋಗಿದ್ದರಂತೆ. ಆಗ ನಡೆದಿರುವ ಘಟನೆ ಇದು.

ಶೂಟಿಂಗ್ ಸೆಟ್‍ನಲ್ಲಿನ ಸಪ್ಪೆ ಸಪ್ಪೆ ಊಟ ತಿಂದು ಬೇಜಾರಾದ ಸುದೀಪ್ ಮತ್ತು ಜೊತೆಗಿದ್ದವರು ಖಾರದ ಊಟಕ್ಕೆ ರೆಸ್ಟೋರೆಂಟ್ ಹುಡುಕಿದ್ದಾರೆ. ಅಲ್ಲೊಂದು ರೆಸ್ಟೋರೆಂಟ್ ಕಂಡಿದೆ. ಊಟವೂ ಇಷ್ಟವಾಗಿದೆ. ಸುಮಾರು ಒಂದು ವಾರ ನಿರಂತರವಾಗಿ ಹೋಗುವಷ್ಟರಲ್ಲಿ ಅದು ಪಾಕಿಸ್ತಾನದ ವ್ಯಕ್ತಿ ನಡೆಸುತ್ತಿರುವ ರೆಸ್ಟೋರೆಂಟ್ ಎನ್ನುವುದು ಗೊತ್ತಾಗಿದೆ. ಪ್ರತಿದಿನ ಇವರಿಗೆ ಊಟ ಸಪ್ಲೈ ಮಾಡುತ್ತಿದ್ದ ಸರ್ವರ್ ಹುಡುಗನಂತೂ ಫ್ರೆಂಡ್ ಆಗಿ ಹೋಗಿದ್ದಾನೆ. 

ಹೀಗಿರುವಾಗಲೇ ಒಂದು ದಿನ ಬಾಂಗ್ಲಾದೇಶದ ಮಹಿಳೆಯೊಬ್ಬರು ರೆಸ್ಟೋರೆಂಟ್‍ಗೆ ಊಟಕ್ಕೆ ಬಂದಿದ್ದಾರೆ. ಸುದೀಪ್‍ರನ್ನು ಗುರುತಿಸಿ ಬಂದು ಮಾತನಾಡಿಸಿದ್ದಾರೆ. ನಿಮ್ಮ ಮಕ್ಕೀ(ಈಗ ಚಿತ್ರದ ಹಿಂದಿ ವರ್ಷನ್) ನೋಡಿದ್ದೇನೆ. ಬಹಳ ಇಷ್ಟವಾಯಿತು ಎಂದು ಹೇಳಿ ಫೋಟೋ ತೆಗೆಸಿಕೊಳ್ಳುವ ಬಯಕೆ ತೋಡಿಕೊಂಡಿದ್ದಾರೆ. ಸುದೀಪ್ ಊಟ ಮಾಡುತ್ತಿದ್ದುದನ್ನು ನೋಡಿ, ತಾನು ಹೊರಗೆ ಕಾಯತ್ತಿರುತ್ತೇನೆ, ಮಿಸ್ ಮಾಡಬೇಡಿ ಎಂದು ಹೇಳಿದ್ದಾರೆ. ಊಟವನ್ನು ಅರ್ಧಕ್ಕೇ ನಿಲ್ಲಿಸಿದ ಸುದೀಪ್, ಅಭಿಮಾನಿಯ ಜೊತೆಗೆ ಫೋಟೋ ತೆಗೆಸಿಕೊಂಡು ನಂತರ ಊಟಕ್ಕೆ ಕುಳಿತಿದ್ದಾರೆ. 

ಆಗ ರೆಸ್ಟೋರೆಂಟ್‍ನಲ್ಲಿ ಫ್ರೆಂಡ್ ಆಗಿದ್ದ ಸರ್ವರ್ ಹುಡುಗ ಬಂದು ಸುದೀಪ್ ಅವರಿಗೆ ಒಂದು ಘಟನೆ ಹೇಳಿದ್ದಾನೆ. ಬಾಲಿವುಡ್ ಗಾಯಕರೊಬ್ಬರು ಆಗಾಗ್ಗೆ ರೆಸ್ಟೋರೆಂಟ್‍ಗೆ ಬರುತ್ತಿರುತ್ತಾರಂತೆ. ಆದರೆ, ಅಭಿಮಾನಿಗಳು ಫೋಟೋ ತೆಗೆಸಿಕೊಳ್ಳಲು ಹೋದರೆ, ಬಾಯಿಗೆ ಬಂದಂತೆ ಬೈದು ಕಳಿಸುತ್ತಾರಂತೆ. ನೀವು ಡಿಫರೆಂಟ್ ಸರ್, ಊಟದ ಮಧ್ಯೆಯೇ ಎದ್ದು ಹೋಗಿ ಫೋಟೋ ತೆಗೆಸಿಕೊಂಡಿದ್ದು ಇಷ್ಟವಾಯಿತು ಎಂದಿದ್ದಾರೆ. ಇರಲಿ ಬಿಡಿ, ಅವರವರ ಸಮಸ್ಯೆ ಏನಿರುತ್ತೋ ಏನೋ.. ಏನ್ ಮಾಡೋಕಾಗುತ್ತೆ ಎಂದಿದ್ದಾರೆ ಸುದೀಪ್. ಆಗ ಆ ಹುಡುಗ ಕೇಳಿದ ಪ್ರಶ್ನೆ ಸುದೀಪ್ ಅವರನ್ನು ಚಿಂತಿಸುವಂತೆ ಮಾಡಿದೆ. 

ಆ ಹುಡುಗ ಕೇಳಿದ ಪ್ರಶ್ನೆ ಇಷ್ಟೆ. `` ಸರ್, ನಾವೇಕೆ ನಿಮ್ಮನ್ನು ಪ್ರೀತಿಸಬೇಕು. ನೀವು ಹಣ ತಗೊಂಡು ಸಿನಿಮಾ ಮಾಡ್ತೀರಿ. ನಾವೂ ಹಣ ಕೊಟ್ಟು ಸಿನಿಮಾ ನೋಡ್ತೀವಿ. ಅಲ್ಲಿಗೆ ಲೆಕ್ಕಾಚಾರ ಚುಕ್ತಾ ಆಗಬೇಕಲ್ವಾ..? ಆದರೂ ನಾವು ನಿಮ್ಮನ್ನು ಪ್ರೀತಿಸ್ತೇವೆ. ಆದರೆ, ಅದೇ ಪ್ರೀತಿ, ಅಭಿಮಾನ ಸ್ಟಾರ್‍ಗಳಿಂದ ನಮಗೆ ಸಿಗಲ್ಲ. ಏಕೆ ಎಂದಿದ್ದಾರೆ.

ಆ ಪ್ರಶ್ನೆ ನನಗೆ ನನ್ನೊಳಗೇ ಯೋಚಿಸುವಂತೆ ಮಾಡಿತು. ಅದಾದ ನಂತರ ಅಭಿಮಾನಿಗಳ ಜೊತೆ ಇನ್ನೂ ಹೆಚ್ಚಾಗಿ ಬೆರೆಯತೊಡಗಿದೆ ಎಂದಿದ್ದಾರೆ ಸುದೀಪ್.

Ayushmanbhava Movie Gallery

Ellidhe Illitanaka Movie Gallery