ಕ್ರೇಜಿಸ್ಟಾರ್ ರವಿಚಂದ್ರನ್, ಕನ್ನಡ ಚಿತ್ರರಂಗದ ಪ್ರೇಮಲೋಕದ ಸೂರ್ಯನಿದ್ದ ಹಾಗೆ. ಲವ್ ಸಬ್ಜೆಕ್ಟ್ ಬಿಟ್ಟು ಬೇರೆ ಮಾಡೋಕೆ ನನಗೆ ಬರಲ್ಲ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ ರವಿಚಂದ್ರನ್. ರವಿಚಂದ್ರನ್ ನಟಿಸಿರುವ ಚಿತ್ರಗಳ ಒಟ್ಟು ಸಂಖ್ಯೆ ಎಲ್ಲ ಭಾಷೆಗಳದ್ದೂ ಸೇರಿ100ರ ಗಡಿ ದಾಟಿದೆ. ಇಷ್ಟೂ ಚಿತ್ರಗಳಲ್ಲಿ ರವಿಚಂದ್ರನ್ರನ್ನು ಮೀಸೆಯಿಲ್ಲದೆ ನೋಡಿದವರೇ ಇಲ್ಲ. ಇದೇ ಮೊದಲ ಬಾರಿಗೆ ಕುರುಕ್ಷೇತ್ರದಲ್ಲಿ ಮೀಸೆಯಿಲ್ಲದೆ ಕಾಣಿಸಿಕೊಳ್ಳುತ್ತಿದ್ದಾರೆ ರವಿಮಾಮ. ಮೀಸೆ ತೆಗೆಸೋಕೆ ತುಂಬಾ ಬೇಸರವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ ರವಿಚಂದ್ರನ್.
ಅಷ್ಟೇ ಅಲ್ಲ, ಪಾತ್ರಕ್ಕಾಗಿ ಸಣ್ಣಗಾಗಲು ಡಯಟ್ ಮಾಡುತ್ತಿದ್ದಾರೆ. ಮಾಂಸಾಹಾರವನ್ನು ಸಂಪೂರ್ಣ ಬಿಟ್ಟುಬಿಟ್ಟಿದ್ದಾರೆ. ಕಾಫಿ ಕುಡಿಯುವುದನ್ನೂ ತ್ಯಜಿಸಿದ್ದಾರೆ. ಇದರಿಂದಾಗಿ ಈಗಾಗಲೇ 8 ಕೆಜಿ ತೂಕ ಇಳಿಸಿಕೊಂಡಿದ್ದಾರೆ ರವಿಚಂದ್ರನ್.
ರವಿಚಂದ್ರನ್ ಇದುವರೆಗೆ ಪೌರಾಣಿಕ ಚಿತ್ರಗಳನ್ನು ಮಾಡಿಯೇ ಇಲ್ಲ. ಇಂತಹ ರವಿಚಂದ್ರನ್, ಪೌರಾಣಿಕ ಚಿತ್ರದಲ್ಲಿನ ಪಾತ್ರವನ್ನು ಬಹಳ ಸೀರಿಯಸ್ ಆಗಿ ತೆಗೆದುಕೊಂಡಿದ್ದಾರೆ. ಡೈಲಾಗ್ಗಳನ್ನು ತರಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದ್ದು, ಆಗಸ್ಟ್ 28ಕ್ಕೆ ರವಿಚಂದ್ರನ್ ರಾಮೋಜಿ ಫಿಲ್ಮ್ ಸಿಟಿ ಪ್ರವೇಶಿಸಲಿದ್ದಾರೆ.