`
ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.
ಈ ಮಾತನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಹೇಳಿದ್ಧಾರೆ. ಅವರ ಇಂತಹ ಮಾತಿಗೆ ಕಾರಣವಾಗಿದ್ದು ಮಂಡ್ಯ ಜಿಲ್ಲೆಯ ಕೋಡಿದೊಡ್ಡಿ ಗ್ರಾಮದ ರಾಮಕೃಷ್ಣ. ಆತ ಅದೇನು ಕಾರಣಕ್ಕೋ ಏನೋ.. ನೊಂದು ಆತ್ಮಹತ್ಯೆ ಮಾಡಿಕೊಂಡಿದ್ಧಾನೆ. ತನ್ನ ಅಂತಿಮ ಪತ್ರದಲ್ಲಿ ನಾನು ಸಿದ್ದರಾಮಯ್ಯ ಮತ್ತು ಯಶ್ ಅಭಿಮಾನಿ. ನನ್ನ ಅಂತ್ಯ ಸಂಸ್ಕಾರಕ್ಕೆ ಅವರು ಬರಬೇಕು ಎಂದು ಬರೆದಿಟ್ಟಿದ್ದ. ಸಿದ್ದರಾಮಯ್ಯನವರೇನೋ ಬಿಡುವು ಮಾಡಿಕೊಂಡು ಹೋದರಾದರೂ, ನಟ ಯಶ್ ಹೋಗೋಕೆ ಸಾಧ್ಯವಾಗಲಿಲ್ಲ.
ಅತ್ತ ಸಂಸ್ಕಾರ ಮುಗಿಸಿದ ಬಳಿಕ ಸಿದ್ದರಾಮಯ್ಯ ಹಾಗೂ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಯಶ್ ಇಬ್ಬರೂ ಒಂದೇ ಮಾತು ಹೇಳಿದ್ರು. ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ. ಆದರೆ, ನಿಮ್ಮ ಇಂತಹ ಅಭಿಮಾನ ಯಾರಿಗೂ ಮಾದರಿಯಾಗೋದು ಬೇಡ.
ನಿಮ್ಮ ಅಭಿಮಾನಕ್ಕೆ ಹೆಮ್ಮೆ ಪಡಲು ಸಾಧ್ಯವಿಲ್ಲ. ಸಾವು ಎಲ್ಲದಕ್ಕೂ ಪರಿಹಾರವಲ್ಲ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಆದರೆ, ಆತ್ಮಹತ್ಯೆ ಕೆಟ್ಟದ್ದು ಎಂಬರ್ಥದಲ್ಲಿಯೇ ಇಬ್ಬರೂ ಮಾತನಾಡಿದ್ದಾರೆ. ಅದು ಸತ್ಯ ತಾನೇ..
ಇಲ್ಲ.. ಇಲ್ಲ.. ನಾನು ರಾಜ್ ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿಲ್ಲ. ನಾನು ಡಾ.ರಾಜ್ ಅಭಿಮಾನಿ. ಯಾರೋ ನನ್ನ ಬಗ್ಗೆ ಸುಮ್ಮನೆ ಕಟ್ ಅಂಡ್ ಪೇಸ್ಟ್ ಮಾಡಿ ಹಾಕುತ್ತಿದ್ದಾರೆ. Sorry ಸಹೋದರರೆ ದಯವಿಟ್ಟು ಹೀಗೆಲ್ಲ ಮಾಡಬೇಡಿ ಹೀಗೆಂದು ಮನವಿ ಮಾಡಿರೋದು ಶಾಸಕ ಹ್ಯಾರಿಸ್.
ಡಾ ರಾಜ್ ಕುಮಾರ್ ಪರವಾಗಿ ಏನು ಬೇಕಾದರೂ ಮಾಡಲು ನಾನು ತಯಾರಿದ್ದೇನೆ. ಸ್ಟ್ಯಾಚ್ಯೂ ಇಟ್ಟು ಯಾರಾದ್ರೂ ಕವರ್ ಮಾಡ್ತಾರಾ.?..ಪ್ರತಿಮೆ ಇಟ್ಟು ಮುಚ್ಚೋದು ಸರಿಯಲ್ಲ..ಕವರ್ ಮಾಡೋದು ಸರಿಯಲ್ಲ ಅಂತ ಅಷ್ಟೇ ನಾನು ಹೇಳಿದ್ದು ಎಂದಿದ್ದಾರೆ ಹ್ಯಾರಿಸ್.
ಹ್ಯಾರಿಸ್ ಈ ಸ್ಪಷ್ಟನೆ ಕೊಡಲು ಕಾರಣವಾಗಿದ್ದು ಒಂದು ವಿಡಿಯೋ. ದೊಮ್ಮಲೂರಿನಲ್ಲಿ ಡಾ.ರಾಜ್ ಪ್ರತಿಮೆಯನ್ನು ಕವರ್ ಹಾಕಿ ಮುಚ್ಚಲಾಗಿತ್ತು. ಕಾರಣವೂ ಇತ್ತು. ಅಲ್ಲಿಯೇ ಅಂಬೇಡ್ಕರ್ ಮತ್ತು ಕೆಂಪೇಗೌಡ ಪ್ರತಿಮೆ ಕೆಲಸ ನಡೆಯುತ್ತಿದೆ. ಅದರ ದೂಳು ಬೀಳದಂತೆ ಮುಚ್ಚಲಾಗಿದೆ.
ಇದರ ವೀಕ್ಷಣೆಗೆ ಹೋಗಿದ್ದಾಗ ಹ್ಯಾರಿಸ್, ಅವರಿಗೆ ಸ್ಟ್ಯಾಚ್ಯೂ ಇಡೋದೇ ದೊಡ್ಡದು. ಇನ್ನು ಆಫೀಸ್ ಬೇರೆ ಮಾಡಿಕೊಡೋಕೆ ಆಗುತ್ತಾ..? ಏನೂ ಆಗಲ್ಲ. ಓಪನ್ ಮಾಡಿ ಇಡಿ. ಪ್ರೊಟೆಕ್ಷನ್ ಏನಾದರೂ ಬೇಕಿದ್ದರೆ, ಅವರ ಮನೆಯಲ್ಲೇ ಇಟ್ಟುಕೊಳ್ಳಲಿ ಎಂದಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದಕ್ಕೆ ಡಾ.ರಾಜ್ ಅಭಿಮಾನಿಗಳು ಕೆರಳಿದ್ದರು. ಜೊತೆಗೆ ಹ್ಯಾರಿಸ್ ಪುತ್ರ ನಲಪಾಡ್ ಗಲಾಟೆಯೂ ನೆನಪಾಗಿತ್ತು. ಹೀಗಾಗಿ ಹ್ಯಾರಿಸ್ರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ, ಹ್ಯಾರಿಸ್ ಈ ಸ್ಪಷ್ಟನೆ ಕೊಟ್ಟಿದ್ದಾರೆ.
ಅದು ಅಭಿಮಾನಿಗಳೆಲ್ಲ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಕ್ಷಣ. ಹೀಗಾಗಿಯೇ ದರ್ಶನ್ ಹುಟ್ಟುಹಬ್ಬಕ್ಕೆಂದು ರಿಲೀಸ್ ಆದ ರಾಬರ್ಟ್ ಟ್ರೇಲರ್ ಹವಾ ಎಬ್ಬಿಸಿದೆ. ಟ್ರೇಲರ್ನ ಒಂದೊಂದು ಡೈಲಾಗುಗಳೂ ಶಿಳ್ಳೆ ಹೊಡೆಸಿಕೊಳ್ಳುತ್ತಿವೆ.
ಒಬ್ಬರ ಲೈಫ್ನಲ್ಲಿ ಹೀರೋ ಆಗಬೇಕು ಅಂದ್ರೆ, ಇನ್ನೊಬ್ಬರ ಲೈಫಿನಲ್ಲಿ ವಿಲನ್ ಆಗಲೇಬೇಕು..
ನಾವು ನೋಡೋಕೆ ಮಾತ್ರ ಕ್ಲಾಸು. ವಾರ್ಗೆ ಇಳಿದ್ರೆ ಫುಲ್ ಮಾಸು..
ಏ ತುಕಾಲಿ.. ನೀನು ಮಾಸ್ ಆದ್ರೆ, ನಾನು ಮಾಸ್ಗೇ ಬಾಸು..
ಈ ಕೈಗೆ ಶಬರಿ ಮುಂದೆ ಸೋಲೋದೂ ಗೊತ್ತು. ರಾವಣನ ಎದುರು ಗೆಲ್ಲೋದೂ ಗೊತ್ತು..
ಡೈಲಾಗುಗಳು ಅಭಿಮಾನಿಗಳ ಹೃದಯದಲ್ಲಿ ಅಕ್ಷರಶಃ ಕಿಚ್ಚೆಬ್ಬಿಸಿವೆ. ಉಮಾಪತಿ ನಿರ್ಮಾಣದ ಈ ಚಿತ್ರಕ್ಕೆ ತರುಣ್ ಸುಧೀರ್ ನಿರ್ದೇಶನವಿದೆ. ಆಶಾಭಟ್, ವಿನೋದ್ ಪ್ರಭಾಕರ್, ಜಗಪತಿ ಬಾಬು, ಸೋನಲ್ ಮಂಥೆರೋ, ಅವಿನಾಶ್, ರವಿ ಕಿಶನ್.. ಹೀಗೆ ಭರ್ಜರಿ ತಾರಾಗಣ ಇರೋ ಚಿತ್ರದ ಟ್ರೇಲರ್ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ ಮಾರ್ಚ್ 11ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದೆ.
ಕಾಮಿಡಿಯನ್ಗಳು ಹೀರೋ ಆಗುವ ಪರಂಪರೆ ಮುಂದುವರೆಯುತ್ತಿದೆ. ಶರಣ್, ಕೋಮಲ್, ಸಾಧು, ಚಿಕ್ಕಣ್ಣ.. ನಂತರ ಈಗ ಕುರಿ ಪ್ರತಾಪ್ ಹೀರೋ ಆಗುತ್ತಿದ್ದಾರೆ. ಚಿತ್ರದ ಹೆಸರು ಆರ್ಸಿ ಬ್ರದರ್ಸ್. ಪ್ರಕಾಶ್ ಕುಮಾರ್ ಎಂಬುವವರು ಚಿತ್ರದ ಡೈರೆಕ್ಟರ್.
ಈ ಚಿತ್ರದಲ್ಲಿ ನಾನು ಹೀರೋ. ಇದೊಂದು ಅಣ್ಣ ತಮ್ಮಂದಿರ ಕಥೆ. ತಬಲಾ ನಾಣಿ ನನಗೆ ಅಣ್ಣ. ನಾಣಿಗೆ ಹುಡುಗಿ ಸಿಕ್ಕಲ್ಲ. ಮದುವೆಯಾಗೊಲ್ಲ. ಆದರೆ, ಅಣ್ಣನಿಗಿಂತ ಮೊದಲು ನನಗೆ ಮದುವೆಯಾಗುತ್ತೆ. ಆದರೆ, ಮದುವೆಯಾದ ನಂತರೂ ಹೆಂಡತಿ ಜೊತೆಗೆ ಇರೋಕೆ ಆಗೊಲ್ಲ. ಇದರ ಮಧ್ಯೆ ನಾನು ಜಾಲಿಯಾಗಿರುವ ಯುವಕ. ನಾಣಿಯವರದ್ದು ಸೀರಿಯಸ್ ರೋಲ್. ಇಬ್ಬರ ಮಧ್ಯೆ ಡಿಫರೆನ್ಸ್ ಇದ್ದರೂ, ಅಣ್ಣ-ತಮ್ಮ ಚೆನ್ನಾಗಿರುತ್ತೇವೆ. ಹೀಗಿರೋವಾಗ ಮದುವೆಯಾಗಿಯೂ ಹೆಂಡತಿಯನ್ನು ಸೇರಲು ಸಾಧ್ಯವಾಗದೆ ನಾನು ಅರ್ಥಾತ್ ನನ್ನ ಪಾತ್ರ ಪರದಾಡುತ್ತೆ. ಈ ಹಾದಿಯಲ್ಲಿ ಸಖತ್ ತರಲೆ, ತಮಾಷೆ, ತುಂಟಾಟಗಳಿವೆ ಎಂದು ಚಿತ್ರದ ಕಥೆಯನ್ನೇ ಬಿಚ್ಚಿಟ್ಟಿದ್ದಾರೆ ಕುರಿ ಪ್ರತಾಪ್.
ಕಾಮಿಡಿ ಚಿತ್ರವಾದ್ದರಿಂದ ಕಥೆಗಿಂತ ಹೆಚ್ಚು ಕೀಟಲೆಯೇ ಮುಖ್ಯ. ಹೀರೋ ಆದರೂ, ಕಾಮಿಡಿ ನಟನಾಗಿಯೇ ಕಂಟಿನ್ಯೂ ಆಗುತ್ತೇನೆ ಅನ್ನೋದು ಕುರಿ ಭರವಸೆ.
ಪ್ರೇಮಿಗಳ ದಿನಕ್ಕೆಂದೇ ಕಾದು ರಿಲೀಸ್ ಮಾಡಿದ ಹಾಡು ಏಕ್ ಲವ್ ಯಾ ಚಿತ್ರದ ಯಾರೆ ಯಾರೇ ನೀನು ನಂಗೆ..
ಚಿತ್ರದ ಸಿಗ್ನೇಚರ್ ಟ್ಯೂನ್ ಇರುವ ಹಾಡಿದು. ಹಾಡಿನಲ್ಲಿ ಕಾಣಿಸಿಕೊಂಡಿರೋದು ಹೀರೋ ರಾಣಾ ಮತ್ತು ನಾಯಕಿ ರೀಷ್ಮಾ ನಾಣಯ್ಯ. ಜೋಗಿ ಪ್ರೇಮ್ ನಿರ್ದೇಶನದ ಚಿತ್ರವಾದ್ದದರಿಂದ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿದ್ದವು. ಅದರಲ್ಲೂ ಹಾಡುಗಳ ಮೇಲೆ ಸ್ವಲ್ಪ ಜಾಸ್ತಿನೇ ಇತ್ತು. ಈ ಬಾರಿಯೂ ಅದು ಮಿಸ್ ಆಗಿಲ್ಲ.
ಅರ್ಜುನ್ ಜನ್ಯ ಸಂಗೀತ ಮತ್ತು ಅರ್ಮಾನ್ ಮಾಲಿಕ್ ಹಾಡುಗಾರಿಕೆ ಎರಡೂ ನೋಡುಗರಿಗೆ ಇಷ್ಟವಾಗಿವೆ. ಅಷ್ಟೇ ಅಲ್ಲ, ಹಾಡಿಗೆ ಪ್ರೇಮ್ ಅವರೇ ಸಾಹಿತ್ಯ ನೀಡಿದ್ದು, ಪದ ಪದಗಳೂ ಪ್ರೇಮಿಗಳ ಹೃದಯ ತಟ್ಟಿವೆ.
ಯೂ ಟ್ಯೂಬ್ನಲ್ಲಿ ಹಾಡು ನಿಧಾನವಾಗಿಯೇ ಗುಂಗು ಹಿಡಿಸುತ್ತಿದ್ದು, ವ್ಯೂಸ್ ಸಂಖ್ಯೆ 2 ಮಿಲಿಯನ್ ದಾಟಿದೆ.