` ಸೆನ್ಸಾರ್ ಬೋರ್ಡ್ ಅಂದ್ರೆ ಅಕಾಡೆಮಿ ಕುಟುಂಬದವರಿಗೆ ಮಾತ್ರನಾ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
censor office
censor office

ಸಿಬಿಎಫ್ಸಿಬ. ನೀವು ಥಿಯೇಟರಿನಲ್ಲಿ ಯಾವುದೇ ಒಂದು ಸಿನಿಮಾ ಶುರುವಾಗುವ ಮುಂಚೆ ಒಂದು ಸರ್ಟಿಫಿಕೇಟ್ ತೋರಿಸುತ್ತಾರೆ. ನೀವೂ ನೋಡಿರುತ್ತೀರಿ. ನಾವು ನೋಡುತ್ತಿರುವ ಸಿನಿಮಾ ಎ ಸರ್ಟಿಫಿಕೇಟ್ ಚಿತ್ರವೋ, ಯು ಅಥವಾ ಯು/ಎ ಸರ್ಟಿಫಿಕೇಟ್ ಚಿತ್ರವೋ ಎಂಬುದನ್ನ ಖಂಡಿತಾ ಗಮನಿಸುರುತ್ತೀರಿ. ಎಸ್ ಎಂಬ ಇನ್ನೊಂದು ಕೆಟಗರಿಯೂ ಇದೆ. ಅದು ಸೈಂಟಿಫಿಕ್ ಚಿತ್ರಗಳಿಗೆ ಮಾತ್ರ. ಬಹುಶಃ ಅದನ್ನು ಬಹುತೇಕ ಸಿನಿಮಾ ಪ್ರೇಕ್ಷಕರು ನೋಡಿರುವ ಸಾಧ್ಯತೆ ಕಡಿಮೆ. ಆದರೆ ನಾವು ಹೇಳುತ್ತಿರೋ ವಿಷಯ ಅದಲ್ಲ.

ಇವುಗಳಿಗೆಲ್ಲ ಸರ್ಟಿಫಿಕೇಟ್ ಕೊಡೋಕೆ ಒಂದು ಕಮಿಟಿ ಇರುತ್ತೆ. ಆ ಕಮಿಟಿಗೆ ಸದಸ್ಯರನ್ನು ಸರ್ಕಾರಗಳೇ ನೇಮಕ ಮಾಡುತ್ತವೆ. ಆಡಳಿತದಲ್ಲಿ ಯಾವ ಪಕ್ಷ ಇರುತ್ತೋ.. ಆ ಪಕ್ಷಗಳಿಗೆ ಹತ್ತಿರವಾದವರೇ ಸಾಮಾನ್ಯವಾಗಿ ಸೆನ್ಸಾರ್ ಬೋರ್ಡ್ ಅಧ್ಯಕ್ಷರಾಗಿರುತ್ತಾರೆ. ಇತ್ತೀಚೆಗೆ ಸೆನ್ಸಾರ್ ಬೋರ್ಡ್ ಪಂಕಜ್ ನಿಹಲಾನಿ ಎಂಬ ಬಿ ಗ್ರೇಡ್ ಸಿನಿಮಾ ನಟನನ್ನು ಸೆನ್ಸಾರ್ ಬೋರ್ಡ್ ಅಧ್ಯಕ್ಷನನ್ನಾಗಿ ನೇಮಕ ಮಾಡಿದಾಗ ದೇಶಾದ್ಯಂತ ಕೋಲಾಹಲವೇ ಎದ್ದಿತ್ತು. ಆತ ಮಹಾಭಾರತ ಸೀರಿಯಲ್ಲಿ ನಟಿಸಿದ್ದ ಕಲಾವಿದ. ಆದರೆ ಅದೊಂದನ್ನು ಬಿಟ್ಟರೆ ಆತ ನಟಿಸಿದ್ದ ಚಿತ್ರಗಳೆಲ್ಲ ಬಿ ಗ್ರೇಡ್ ಸಿನಿಮಾಗಳೇ. ಕೊನೆಗೆ ಆತ ರಾಜೀನಾಮೆ ಕೊಟ್ಟು ಹೊರ ನಡೆದಿದ್ದೂ ಆಯಿತು. ಆದರೆ ವಿಚಿತ್ರವೇನು ಗೊತ್ತೇ.. ಆಗ ಅಂತಹ ನೇಮಕವನ್ನು ವಿರೋಧಿಸಿದ್ದವರ ಸಮೂಹದಲ್ಲಿದ್ದ ವ್ಯಕ್ತಿಗಳೇ ಈಗ ಕರ್ನಾಟಕದ ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಸದಸ್ಯರಾಗಿ ಬಂದಿದ್ದಾರೆ. ಅವರು ಸಿನಿಮಾದವರಾಗಿದ್ದರೆ ಓಕೆ ಎನ್ನಬಹುದಿತ್ತೇನೋ. ಬಹುತೇಕರಿಗೆ ಸಿನಿಮಾಗಳ ಗಾಳಿ ಗಂಧವೂ ಗೊತ್ತಿಲ್ಲ. ಅದೂ ಹೋಗಲಿ ಎಂದರೆ ಸದಸ್ಯರಲ್ಲಿ ಬಹುತೇಕರು ರಾಜ್ಯ ಸರ್ಕಾರದ ವಿವಿಧ ಅಕಾಡೆಮಿಗಳ ಕುಟುಂಬ ಸದಸ್ಯರು.

censor_members_21.jpg

ಕೇಂದ್ರ ಸರ್ಕಾರದ 71 ಸದಸ್ಯರ ಪಟ್ಟಿಯಲ್ಲಿ ಕರ್ನಾಟಕದಿಂದ ನೇಮಕವಾಗಿರುವ ಸದಸ್ಯರಲ್ಲಿ ಬಹುತೇಕ ಮಂದಿ ಅಕಾಡೆಮಿಗಳ ಅಧ್ಯಕ್ಷರು, ಸದಸ್ಯರ ಕುಟುಂಬ ಸದಸ್ಯರೇ ಆಗಿರುವುದು ದುರಂತ. ಸೆನ್ಸಾರ್ ಮಂಡಳಿಯನ್ನು ಈ ಅಕಾಡೆಮಿ ಶೂರರು ಗುತ್ತಿಗೆ ತೆಗೆದುಕೊಂಡುಬಿಟ್ಟಿದ್ದಾರೆ. ಅಫ್ಕೋ ರ್ಸ್, ಅಲ್ಲಿ ಆದಾಯದ ಮೂಲ ಹುಡುಕುವ ಹಪಾಹಪಿಯೂ ಇದೆಯೆನ್ನಿ. ಸಿನಿಮಾದವರಿಗಿಂತ ಹೆಚ್ಚಾಗಿ ಇಲ್ಲಿ ಟಿವಿ, ಸೀರಿಯಲ್ಲು, ರಿಯಾಲಿಟಿ ಶೋ ಮಾಡುವ ಮಂದಿ ತುಂಬಿಕೊಂಡಿದ್ದಾರೆ.

ನಾಗಾಭರಣ ನಿಮಗೆ ಗೊತ್ತು. ಅವರು ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು. ಅವರ ಪತ್ನಿ ನಾಗಿಣಿ ಭರಣ, ಕಾಸ್ಟ್ಯೂಮ್ ಡಿಸೈನರ್ ಆಗಿದ್ದವರು. ಅವರು ಈ ಸೆನ್ಸಾರ್ ಬೋರ್ಡಿನ ಸದಸ್ಯರು. ನಾಗಾಭರಣ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದರು ಎನ್ನುವುದು ನೆನಪಿನಲ್ಲಿರಲಿ.

ಇನ್ನು ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿರುವ ಸುನಿಲ್ ಪುರಾಣಿಕ್ ಅವರ ಪುತ್ರ ಸಾಗರ್ ಅವರಿಗೂ ಸೆನ್ಸಾರ್ ಬೋರ್ಡಿನಲ್ಲಿ ಸ್ಥಾನ ಸಿಕ್ಕಿದೆ. ಸಿನಿಮಾಗೂ ಇವರಿಗೂ ದೂರ ದೂರವೇ ಇದ್ದರೂ ಸೆನ್ಸಾರ್ ಬೋರ್ಡಿನಲ್ಲಿ ಸ್ಥಾನ.

ಇನ್ನು ರೇಖಾ ರಾಣಿ. ಅಶೋಕ್ ಕಶ್ಯಪ್ ಅವರ ಪತ್ನಿ. ಪತ್ರಕರ್ತೆಯಾಗಿದ್ದವರು. ಟಿವಿಗಳಲ್ಲಿ ಕೆಲಸ ಮಾಡಿದ್ದರಾದರೂ ಸಿನಿಮಾಗಳಲ್ಲಿ ಅಲ್ಲ. ಬಹುಶ ಇವರನ್ನು ಪತ್ರಕರ್ತರೆಂದು ತೆಗೆದುಕೊಂಡಿರಬಹುದು.

ಹಿರಿಯೂರು ರಾಘವೇಂದ್ರ ಕೂಡಾ ಪತ್ರಕರ್ತ ಮತ್ತು ಸೀರಿಯಲ್ ನಿರ್ದೇಶಕ. ಸಿನಿಮಾ ಗೊತ್ತಿಲ್ಲ. ದಿ.ಸುಧೀರ್ ಅವರ ಪತ್ನಿ ಮಾಲತಿ ಸುಧೀರ್ ರಂಗಭೂಮಿ ಕಲಾವಿದೆಯಾಗಿದ್ದವರು.

ಇನ್ನ ಎಸ್.ಎಂ. ಪಾಟೀಲ್ ಎಂಬ ವ್ಯಕ್ತಿ ಸೆನ್ಸಾರ್ ಬೋರ್ಡಿನಲ್ಲಿ ಆಲ್ ಮೋಸ್ಟ್ ಖಾಯಂ ಸದಸ್ಯರಾಗಿರುವ ವ್ಯಕ್ತಿ.

ಇದು ಕೇವಲ ಸ್ಯಾಂಪಲ್ಲುಗಳಷ್ಟೇ. ವಿಚಿತ್ರವೆಂದರೆ ಸಿನಿಮಾ ಸೆನ್ಸಾರ್ ಬೋರ್ಡ್ ಸದಸ್ಯರಲ್ಲಿ ಬಹುತೇಕರು ಸಿನಿಮಾಗಳನ್ನು ಮಾಡಿಲ್ಲ. ಒಂದು ಸಿನಿಮಾದ ಅರ್ಹತೆಯನ್ನು ನಿರ್ಧರಿಸುವ ತಂಡದಲ್ಲಿ ಒಬ್ಬ ಸಿನಿಮಾ ನಿರ್ದೇಶಕರೂ ಇಲ್ಲ. ಒಬ್ಬ ಪ್ರೊಡ್ಯೂಸರ್ನ್ ಬಿಪಿ ಹೆಚ್ಚಿಸುವ ಸೆನ್ಸಾರ್ ಬೋರ್ಡಿನ ಸದಸ್ಯರಲ್ಲಿ ಹುಡುಕಿದರೂ ಒಬ್ಬ ವೃತ್ತಿಪರ ನಿರ್ಮಾಪಕ ಕಾಣಿಸುವುದಿಲ್ಲ. ಎಲ್ಲಿ, ಯಾವ ಭಾಗದಲ್ಲಿ ಕಟ್ ಮಾಡಬೇಕು ಎಂದು ಸೂಚಿಸುವ ಸೆನ್ಸಾರ್ ಬೋರ್ಡ್ ಸದಸ್ಯರಲ್ಲಿ ಒಬ್ಬನೇ ಒಬ್ಬ ಸಂಕಲನಕಾರ ಅರ್ಥಾತ್ ಎಡಿಟರ್ ಇಲ್ಲ. ಒಬ್ಬ ವೃತ್ತಿಪರ ನಟ ಅಥವಾ ನಟಿಯರೂ ಇಲ್ಲ. ಎಲ್ಲೋ.. ಅಲ್ಲೊಂದು ಸಿನಿಮಾದಲ್ಲಿ ಮುಖ ಕಾಣಿಸಿರುವ ಕೆಲವೇ ಕೆಲವು ಕಲಾವಿದರಿದ್ದಾರೆ. ಅವರು ನಟಿಸಿರುವ ಸಿನಮಾಗಳ ಸಂಖ್ಯೆ ಒಂದಂಕಿ ದಾಟಿಲ್ಲ ಎನ್ನುವುದು ಸೆನ್ಸಾರ್ ಬೋರ್ಡ್ ಅದೆಷ್ಟು ಕಾಮಿಡಿ ಪೀಸ್ ಆಗಿದೆ ಅನ್ನೋದಕ್ಕೆ ಉದಾಹರಣೆ. ಹೋಗಲಿ, ಒಬ್ಬ ನೃತ್ಯ ನಿರ್ದೇಶಕರಿದ್ದಾರಾ..? ಒಬ್ಬ ಸಿನಿಮಾಟೋಗ್ರಾಫರ್ ಇದ್ದಾರಾ ಎಂದರೆ ಅದೂ ಇಲ್ಲ. ಹಾಗಾದರೆ, ಒಂದು ಸಿನಿಮಾ ಮಾಡಿದ ಅನುಭವವೇ ಇಲ್ಲದ ಇವರು ಯಾವ ರೀತಿ ಸರ್ಟಿಫಿಕೇಟ್ ಕೊಡಬಹುದು ಎನ್ನುವುದು ಎಲ್ಲರಿಗೂ ಕಾಡುವ ಪ್ರಶ್ನೆ.

ದುರಂತವೇನು ಗೊತ್ತೇ.. ಸಿನಿಮಾಗಳ ಕಷ್ಟಸುಖ, ಗಾಳಿಗಂಧ ಗೊತ್ತಿಲ್ಲದ ಇವರು ಸಿನಿಮಾಗೆ ಸರ್ಟಿಫಿಕೇಟು ಕೊಡುತ್ತಾರೆ. ಅದಕ್ಕೆ ಗೌರವಧನವನ್ನೂ ಪಡೆಯುತ್ತಾರೆ. ಇವರ ಊಟ ತಿಂಡಿ ಕಾಫಿ ವಗೈರೆ ವಗೈರೆ ಖರ್ಚುಗಳನ್ನೆಲ್ಲ ನೋಡಿಕೊಳ್ಳುವ ಹೊಣೆ ನಿರ್ಮಾಪಕರದ್ದು.

ಹಾಗಾದರೆ ಕರ್ನಾಟಕದಲ್ಲಿ ಹಿರಿಯ ಚಿತ್ರ ನಟ ನಟಿಯರ, ನಿರ್ದೇಶಕರ, ನಿರ್ಮಾಪಕರ, ಸಿನಿಮಾಟೋಗ್ರಾಫರುಗಳ ಕೊರತೆ ಕಾಡುತ್ತಿದೆಯೇ..? ಅನುಮಾನವೇ ಇಲ್ಲ. ಅಂತಹವರು ಯಾರೂ ಕೂಡಾ ಈ ಅಕಾಡೆಮಿ, ಪ್ರಾಧಿಕಾರದ ಅಧ್ಯಕ್ಷರುಗಳ ಕುಟುಂಬಸ್ಥರಾಗಿಲ್ಲ. ಗೆಳೆಯರಾಗಿಲ್ಲ. ಅಲ್ಲಿಗೆ ಸಿಬಿಎಫ್ಸಿಕ ಎನ್ನುವುದನ್ನು ಬದಲಿಸಿ ಅಕಾಡೆಮಿ ಫ್ಯಾಮಿಲಿ ಮೆಂಬರ್ಸ್ ಕಮಿಟಿ ಎಂದು ಬದಲಿಸಬೇಕಾದ ಕಾಲ ಬಂದಿದೆ.