ಭಾಗ 01ರ ವಿವರ
ಪ್ರಥಮ್ ಭುವನ್ ಮಧ್ಯೆ ಜಗಳವಾಗಿದ್ದು ನಿಜ. ಆದರೆ ಕಚ್ಚಿರುವುದು ಧಾರಾವಾಹಿ ತಂಡದವರಿಗೆ ಗೊತ್ತಿಲ್ಲ. ಆ ದಿನ ಜಗಳವಾದ ನಂತರವೂ ರಾತ್ರಿವರೆಗೆ ಶೂಟಿಂಗ್ ಆಗಿತ್ತು. ಭುವನ್ ನಾರ್ಮಲ್ಲಾಗಿಯೇ ಇದ್ದರು. ಮಾರನೇ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಯ್ತು. ಮೊದಲು ಬುದ್ದಿ ಹೇಳಿದ್ದ ತಲಘಟ್ಟಪುರ ಠಾಣೆಯ ಇನ್ಸ್‍ಪೆಕ್ಟರ್, ನ್ಯೂಸ್ ಚಾನೆಲ್‍ಗಳಲ್ಲಿ ವಿಡಿಯೋ, ಫೋಟೋ ಬಹಿರಂಗವಾದ ಮೇಲೆ ಎಫ್‍ಐಆರ್ ದಾಖಲಿಸಿದರು. ನ್ಯೂಸ್ ಚಾನೆಲ್ಲುಗಳಿಗೆ ವಿವರ ನೀಡಿದ ಅಸೋಸಿಯೇಟ್ ಡೈರೆಕ್ಟರ್ ಪವನ್ ಯಾರೆಂಬುದು ಧಾರಾವಾಹಿ ನಿರ್ದೇಶಕ ರಾಜೇಶ್‍ಗೆ ಗೊತ್ತಿಲ್ಲ. ಇಷ್ಟೆಲ್ಲ ಆದ ಮೇಲೆ ಎಂಎಲ್‍ಎ ಚಿತ್ರದ ಶೂಟಿಂಗ್‍ನಲ್ಲಿದ್ದ ಪ್ರಥಮ್, ಚಿತ್ರ ನಿರ್ದೇಶಕರ ಸಲಹೆಯಂತೆ ಕೋರ್ಟ್‍ಗೆ ಶರಣಾಗಿ ಜಾಮೀನು ಪಡೆದರು.
ಭಾಗ 02
ಮೊದಲ ಭಾಗದಲ್ಲಿ ಇಡೀ ಘಟನೆಯ ವಿವರ ಓದಿದಿರಿ. ಈ ಇಬ್ಬರ ಮಧ್ಯೆ ಮುನಿಸು ಶುರುವಾಗಲು ಏನು ಕಾರಣ..? ಯಾರು ಕಾರಣ..? ಪ್ರಥಮ್ ಮತ್ತು ಭುವನ್ ಮಧ್ಯೆ ಇಷ್ಟೆಲ್ಲ ಜಗಳವಾಗೋಕೆ ಸಂಜನಾ ಕಾರಣ ಎಂದುಕೊಂಡರೆ, ತಪ್ಪಾದೀತು.
ಬಿಗ್‍ಬಾಸ್‍ನಿಂದ ಶುರುವಾಗಿತ್ತು ಜಗಳ್‍ಬಂದಿ
ಇಬ್ಬರ ಮಧ್ಯೆ ಮುನಿಸು, ಮನಸ್ತಾಪ, ಜಗಳ, ಬೈಗುಳ ಶುರುವಾಗಿದ್ದು ಸಂಜು ಮತ್ತು ನಾನು ಧಾರಾವಾಹಿ ಶೂಟಿಂಗ್‍ನಲ್ಲಿ ಅಲ್ಲ. ಬಿಗ್‍ಬಾಸ್ ಸೀಸನ್4ಗೆ ಎಂಟ್ರಿ ಕೊಟ್ಟಾಗಿನಿಂದ ಶುರುವಾಗಿತ್ತು. ಎಲ್ಲರಿಗೂ ಗೊತ್ತಿರುವ ಹಾಗೆ, ಪ್ರಥಮ್ ಆಗ ಸೆಲಬ್ರಿಟಿಯೇನೂ ಆಗಿರಲಿಲ್ಲ. ಆದರೆ, ತಮ್ಮ ಬಿಗ್‍ಬಾಸ್ ಪ್ರವೇಶಕ್ಕೆ ಹೆಚ್.ಡಿ. ದೇವೇಗೌಡರ ಶುಭಾಶಯದ ಹೇಳಿಕೆಯನ್ನೂ ತೆಗೆದುಕೊಂಡು ಬಂದಿದ್ದ ಚತುರ. ಹಾಗೆ ಬಿಗ್‍ಬಾಸ್‍ಗೆ ಎಂಟ್ರಿ ಕೊಟ್ಟ ದಿನದಿಂದ ಪ್ರಥಮ್ ಎಲ್ಲರ ಆಕರ್ಷಣೆಯ ಬಿಂದುವಾಗುತ್ತಾ ಹೋದರು. ಅಷ್ಟು ಹೊತ್ತಿಗೆ ಭುವನ್ ಮತ್ತು ಸಂಜನಾ ಎಷ್ಟು ಅನ್ಯೋನ್ಯವಾಗಿದ್ದರು ಎಂದರೆ, ನೋಡಿದವರಿಗೆ ಅವರು ಪ್ರೇಮಿಗಳೇ ಇರಬಹುದಾ ಎಂಬ ಅನುಮಾನವೂ ಬಂದಿತ್ತು.
ಅಲ್ಲಿದೆ ಗೋಮಾಂಸದ ಕಥೆ..!
ಹಾಗಾದರೆ ಬಿಗ್‍ಬಾಸ್‍ನಲ್ಲಿ ಏನಾಗಿತ್ತು ಎಂಬುದರ ಬಗ್ಗೆ ಚಿತ್ರಲೋಕ ಬೆನ್ನು ಹತ್ತಿದಾಗಬಿಗ್‍ಬಾಸ್ ಮನೆಯಲ್ಲಿ ಸಂಜನಾ ವಿಚಾರಕ್ಕೆ ಕುರಿತಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಪ್ರಥಮ್ ಬಡಬಡನೆ ಮಾತನಾಡುವ ಮಾತುಗಾರನಾದರೆ, ಭುವನ್ ಸೈಲೆಂಟ್. ಭುವನ್ ಮಾಂಸಾಹಾರಿಯಾದರೆ, ಪ್ರಥಮ್ ಸಸ್ಯಾಹಾರಿ. ಹಾಗೆಂದು ಪ್ರಥಮ್ ಮಾಂಸಾಹಾರಿಗಳನ್ನು ದ್ವೇಷಿಸುವ ವ್ಯಕ್ತಿಯೇನಲ್ಲ. ಆದರೆ, ಗೋಮಾಂಸ ತಿನ್ನುವವರನ್ನು ಕಂಡರೆ ಉರಿದುಬೀಳುವ ಆಸಾಮಿ. ಜೋರಾಗಿ ಕೂಗಾಡಿ, ಬೀಫ್ ತಿನ್ನುವವರನ್ನು ಬಾಯಿಗೆ ಬಂದಂತೆ ಬೈದುಬಿಡುತ್ತಿದ್ದರು. ಈ ವೀಕ್‍ನೆಸ್‍ನ್ನು ಭುವನ್ ಅರ್ಥ ಮಾಡಿಕೊಂಡಿದ್ದರು ಮತ್ತು ಭುವನ್‍ಗೆ ಬೀಫ್ (ಗೋಮಾಂಸ) ಎಂದರೆ ಇಷ್ಟ.
ಬೀಫ್ ತಿನ್ನು, ಚೆನ್ನಾಗಿ ಆಗ್ತೀಯ ಎನ್ನುತ್ತಿದ್ದ ಭುವನ್
ಬೀಫ್ ತಿಂದರೆ ಬಲಿಷ್ಠನಾಗುತ್ತೀಯ ಎಂದು ಪದೇ ಪದೇ ಹೇಳುತ್ತಿದ್ದ ಭುವನ್, ಪ್ರಥಮ್‍ನನ್ನು ಆಗಾಗ್ಗೆ ಬೀಫ್ ವಿಚಾರಕ್ಕೆ ಕೆಣಕುತ್ತಿದ್ದರು. ನೋಡೋಕೆ ಕೋತಿ ಥರಾ ಇದ್ದೀಯಾ, ಬೀಫ್ ತಿನ್ನು, ಹೀರೋ ತರಹ ಆಗ್ತೀಯ ಎಂದು ರೇಗಿಸುತ್ತಿದ್ದರು. ಭುವನ್ ಹಾಗೆ ಹೇಳಿದಾಗಲೆಲ್ಲ ಪ್ರಥಮ್ ಸಿಡಿದುಬೀಳುತ್ತಿದ್ದರು. ಕೂಗಾಡುತ್ತಿದ್ದರು. ಬಾಯಿಗೆ ಬಂದಂತೆ ಭುವನ್‍ನ್ನು ಬಯ್ಯುತ್ತಿದ್ದರು. ಆಮೇಲೆ ಪ್ರಥಮ್ ಬಿಗ್‍ಬಾಸ್ ವಿನ್ನರ್ ಆದರು ಅದು ಬೇರೆ ಕಥೆ.
ಧಾರಾವಾಹಿ ಶೂಟಿಂಗ್‍ನಲ್ಲಾಗಿದ್ದು ಕೂಡಾ ಅದೇ. ಮತ್ತದೇ ಬೀಫ್ ವಿಚಾರಕ್ಕೆ ಪ್ರಥಮ್‍ನನ್ನು ಕೆಣಕಿದ ಭುವನ್, ಗಲಾಟೆ ಮಾಡಿಕೊಂಡಿದ್ದಾರೆ. ಇಡೀ ಘಟನೆ ಶುರುವಾಗಿರುವುದೇ ಅಲ್ಲಿಂದ. ಇದನ್ನು ಪ್ರಥಮ್ ಕೂಡಾ ಹೇಳಿಕೊಂಡಿದ್ದಾರೆ.
ಪ್ರಥಮ್ ಹೇಳುತ್ತಿರುವುದೇನು..?
ನೀವು ಹಾಕಿದ ವೋಟಿನ ಭಿಕ್ಷೆಯಿಂದ ನನಗೆ ಗೆಲುವು ಸಿಕ್ಕಿದೆ ಜೀವನ ರೂಪಿಸಿಕೊಂಡಿದ್ದೇನೆ. ನನ್ನ ಮತ್ತು ಭುವನ್‍ರ ನಡುವಿನ ಇಷ್ಟೂ ಗಲಾಟೆಗೆ ಕಾರಣ ಏನೆಂದರೆ, ಭುವನ್‍ರ ಅತಿಯಾದ ಗೋಮಾಂಸ ಪ್ರೀತಿ. ಅವರು ಯಾವಾಗಲೂ ನನ್ನನ್ನು ಬೀಫ್ ತಿನ್ನುವಂತೆ ಹೇಳಿ ರೇಗಿಸುತ್ತಿದ್ದರು. ಪ್ರಥಮ್, ನೀವು ಕೋತಿ ತರಹಾ ಇದ್ದೀರ.. ಈಗ ಹೀರೋ ಬೇರೆ ಆಗಿದ್ದೀರಾ.. ಬೀಫ್ ತಿನ್ನಿ. ಪರ್ಸನಾಲಿಟಿ ಡೆವಲಪ್ ಮಾಡಿಕೊಳ್ಳಿ ಎಂದು ನನ್ನ ಭಾವನೆ ಕೆರಳಿಸುತ್ತಿದ್ದರು. ಹಸುವಿನ ಗಂಜಲದಲ್ಲಿ ನಾವು ಮಾಡಿದ ಪಾಪಗಳನ್ನು ಕಳೆದುಕೊಳ್ಳಬಹುದು ಎಂದು ನಂಬಿರುವವನು ನಾನು.
ನಾನು ನಿಮ್ಮ ನಂಬಿಕೆಗೆ ಮೋಸ ಮಾಡಿಲ್ಲ. ನಾನು ಕಚ್ಚಿಲ್ಲ. ನಿಮ್ಮ ಕಾಲನ್ನು ಕಚ್ಚುತ್ತಾ ಇದ್ದರೆ, ಯಾರೂ ರಕ್ತ ಬರುವ ತನಕ ಸುಮ್ಮನಿರಲ್ಲ. ಝಾಡಿಸಿ ಒದೀತೀರ..ದಯವಿಟ್ಟು ಸತ್ಯ ಅರ್ಥ ಮಾಡಿಕೊಳ್ಳಿ.
ಪ್ರಥಮ್ ಮತ್ತು ಭುವನ್ ಮಧ್ಯೆ ನಡೆದಿರುವ ಘಟನೆಯ ಹಿಂದು ಮುಂದಿನ ಚಿತ್ರಗಳ ಸಂಪೂರ್ಣ ಚಿತ್ರಣ ಇದು. ಸದ್ಯಕ್ಕೆ ಪ್ರಥಮ್ ಸಿನಿಮಾ ಶೂಟಿಂಗ್‍ನಲ್ಲಿದ್ದರೆ, ಭುವನ್ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ.