` ಪ್ರಥಮ್ ಭುವನ್ ಜಗಳ್‍ಬಂದಿಯ ಹಿಂದೆ ಗೋಮಾಂಸದ ಕಥೆ..! - ಥ್ರಿಲ್ಲರ್ ಸಿನಿಮಾಗಿಂತ ಕಡಿಮೆಯೇನಿಲ್ಲ - ಚಿತ್ರಲೋಕ ಎಕ್ಸ್‍ಕ್ಲೂಸಿವ್ ಭಾಗ 01 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pratham bhuvan sotry
Pratham, Bhuvan Image

ಇದುವರೆಗೆ ಪ್ರಥಮ್, ಭುವನ್ ಜಗಳದ ಕಥೆ ನೋಡಿದವರಿಗೆ ಪ್ರಥಮ್ ಖಳನಾಯಕನಂತೆಯೂ, ಭುವನ್ ಸಂತ್ರಸ್ತನಂತೆಯೂ ಕಾಣಿಸಿದೆ. ಆದರೆ, ಕಥೆ ಇಷ್ಟೇ ಅಲ್ಲ. ಹೀಗಾಗಿಯೇ ನಿಜವಾಗಿಯೂ ನಡೆದದ್ದೇನು ಎಂದು ಪತ್ತೆ ಮಾಡಲು ಚಿತ್ರಲೋಕ ಬೆನ್ನು ಹತ್ತಿದಾಗ ಒಂದೊಂದೇ ಕಥೆ ಬಿಚ್ಚಿಕೊಳ್ಳುತ್ತಾ ಹೋಯ್ತು. ಯಾವ ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗೂ ಕಡಿಮೆಯಿಲ್ಲದಂತಾ ಕಥೆಯೊಂದು ಓಪನ್ ಆಯ್ತು.

ಇದುವರೆಗೆ ಎಲ್ಲರಿಗೂ ಗೊತ್ತಿರೋದು ಇಷ್ಟು. ಭಾನುವಾರ ಸಂಜೆಯ ಹೊತ್ತಿಗೆ ಪ್ರಥಮ್, ಸಂಜು ಮತ್ತು ನಾನು ಧಾರಾವಾಹಿಯ ಶೂಟಿಂಗ್‍ನಲ್ಲಿ ಸಹನಟ ಭುವನ್ ತೊಡೆಗೆ ಕಚ್ಚಿದ್ದಾನೆ ಎಂದು ನ್ಯೂಸ್ ಚಾನೆಲ್ಲುಗಳಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟವಾಯ್ತು. ಅದಾದ ನಂತರ ಭುವನ್ ದೂರು ಕೊಟ್ಟಿದ್ದು, ಪ್ರಥಮ್ ಜಾಮೀನು ಪಡೆದಿದ್ದು, ನಂತರ ಪ್ರಥಮ್ ಭುವನ್ ವಿರುದ್ಧ ದೂರು ಕೊಟ್ಟಿದ್ದು, ನಾನು ಹಲ್ಲೆ ಮಾಡಿಲ್ಲ ಎಂದು ಹೇಳುತ್ತಿರುವುದು. ಇದೆಲ್ಲ ಇಡೀ ಘಟನೆಯ ಸಂಕ್ಷಿಪ್ತ ಚಿತ್ರಣ. ಆದರೆ, ಇಡೀ ಘಟನೆ ಇಷ್ಟೇ ಅಲ್ಲ. ಈ ಬಗ್ಗೆ ಚಿತ್ರಲೋಕ ಮೊದಲು ಸಂಪರ್ಕಿಸಿದ್ದು ಸಂಜು ಮತ್ತು ನಾನು ಧಾರಾವಾಹಿಯ ನಿರ್ದೇಶಕ ರಾಜೇಶ್ ಅವರನ್ನ.

ನಿರ್ದೇಶಕ ರಾಜೇಶ್ ಹೇಳಿದ್ದು

ಇಡೀ ಘಟನೆ ನಡೆದಿದ್ದು ಶನಿವಾರ ಅಂದರೆ ಜುಲೈ 22ನೇ ತಾರೀಕು. ಸಂಜೆ 4.45ರಿಂದ 5.15ರ ಮಧ್ಯೆ. ಗಲಾಟೆ ಆಗಿದ್ದು ನಿಜ. ಆದರೆ, ಎಲ್ಲರೂ ಹೇಳುವಂತೆ ಭುವನ್ ಮತ್ತು ಪ್ರಥಮ್ ಮಧ್ಯೆ ಪ್ರತಿದಿನವೂ ಜಗಳ ನಡೆಯುತ್ತಿರಲಿಲ್ಲ. ಇಬ್ಬರೂ ಪರಸ್ಪರ ಮಾತನಾಡುತ್ತಿದ್ದುದೇ ಕಡಿಮೆ. ಕೆಲವು ಬಾರಿ ಪ್ರಥಮ್ ಅವರೇ ಭುವನ್ ಬಳಿ ಹೋಗಿ ಸೆಲ್ಫೀ ತೆಗೆದುಕೊಂಡು ತಮ್ಮ ಫೇಸ್‍ಬುಕ್ ಪೇಜ್‍ಗೆ ಹಾಕುತ್ತಿದ್ದರು.

ಅದು ಪ್ರಥಮ್‍ಗೆ ಲಾಸ್ಟ್ ಡೇ

ಸಂಜು ಮತ್ತು ನಾನು ಧಾರಾವಾಹಿಯಲ್ಲಿ ಪ್ರಥಮ್ ಭಾಗದ ಶೂಟಿಂಗ್ ಮುಗಿದಿತ್ತು.ಶನಿವಾರವೇ ಕೊನೆಯ ದಿನ. ಸಂಜೆ 4.45ರ ಸುಮಾರಿಗೆ ಗಲಾಟೆ ನಡೆಯಿತು. ನಂತರ ನನ್ನ ತಂಡದ ಸದಸ್ಯರ ಬಳಿ ಘಟನೆಯ ವಿವರ ತಿಳಿದುಕೊಂಡೆ. ಪ್ರಥಮ್‍ಗೆ ಮೊದಲು ಹೊಡೆದಿದ್ದು ಭುವನ್. ಪ್ರಥಮ್ ಏಕಾಏಕಿ ಹಲ್ಲೆ ಮಾಡಲಿಲ್ಲ. ನಂತರ ಇಡೀ ಚಿತ್ರತಂಡದ ಸದಸ್ಯರು ಇಬ್ಬರನ್ನೂ ಹಿಡಿದು ಸಮಾಧಾನ ಪಡಿಸುವ ಯತ್ನ ಮಾಡಿದರು. ಹೊಡೆದಾಡುತ್ತಿದ್ದವರನ್ನು ಬೇರೆ ಮಾಡಿದರು. ನಂತರ ಇಬ್ಬರೂ ತಮ್ಮ ತಮ್ಮ ರೂಮುಗಳಿಗೆ ತೆರಳಿದರು.

ಭುವನ್ ಗಾಯದ ವಿಚಾರ ಹೇಳಿದ್ದು ಭುವನ್ ಅಲ್ಲ..!

ಕೆಲವು ನಿಮಿಷಗಳ ನಂತರ ಓನರ್ ವಿಶಾಲಾಕ್ಷಮ್ಮ ಭುವನ್ ತೊಡೆಯಲ್ಲಿ ಗಾಯವಾಗಿದೆ ಎಂದು ಹೇಳಿದರು. ಅದಾದ ನಂತರವೇ ಪ್ರಥಮ್ ಭುವನ್‍ನ ತೊಡೆಗೆ ಕಚ್ಚಿದ್ದಾನೆ ಎಂಬ ಸುದ್ದಿ ಹಬ್ಬಿದ್ದು. ನಂತರ ಶೂಟಿಂಗ್ ಶುರು ಮಾಡಿದೆವು. ಭುವನ್ ನನ್ನ ಕೈ ನೋಯುತ್ತಿದೆ ಎಂದು ಹೇಳಿದರು. ಇದು ಹೊಡೆದಾಟದ ಎಫೆಕ್ಟ್. ಏನೂ ಆಗಲ್ಲ. ಕೆಲಸದ ಕಡೆ ಗಮನ ಕೊಡು, ಎಲ್ಲ ಸರಿ ಹೋಗುತ್ತೆ ಎಂದು ಹೇಳಿದೆ. 

ಭುವನ್ ಆರಾಮಾಗಿಯೇ ಇದ್ದ..!

ಅದಾದ ನಂತರ ಧಾರಾವಾಹಿಯ ಚಿತ್ರೀಕರಣ ರಾತ್ರಿ 9.45ರವರೆಗೂ ನಡೆಯಿತು. ಭುವನ್ ನಾರ್ಮಲ್ ಆಗಿಯೇ ಓಡಾಡಿಕೊಂಡಿದ್ದರು. ಅಲ್ಲಿಗೆ ಎಲ್ಲವೂ ಮುಗಿದಿತ್ತು. ಮಾರನೇ ದಿನ ಅದು ನ್ಯೂಸ್ ಆಯ್ತು. ಕೆಲವು ಚಾನೆಲ್ಲಿನವರು ನನ್ನನ್ನು ಕೇಳಿದರು. ನಾನು ಘಟನೆಯ ವಿವರ ನೀಡಿದೆ. 

ಪವನ್ ಎಂಬುವ ವ್ಯಕ್ತಿಯೇ ಇಲ್ಲ..!

ಅದು ನಿಜಕ್ಕೂ ನನಗೂ ಶಾಕಿಂಗ್ ನ್ಯೂಸ್. ಆ ದಿನ ನ್ಯೂಸ್ ಚಾನೆಲ್ಲುಗಳಲ್ಲಿ ಪವನ್ ಎಂಬ ವ್ಯಕ್ತಿ ಮಾತನಾಡಿದ. ಸಂಜು ಮತ್ತು ನಾನು ಧಾರಾವಾಹಿಯ ಅಸೋಸಿಯೇಟ್ ಡೈರೆಕ್ಟರ್ ಎಂದು ಹೇಳಿಕೊಂಡು ಮಾತನಾಡಿದ. ಆದರೆ, ಪವನ್ ಎಂಬ ವ್ಯಕ್ತಿ ಯಾರೋ ನಿರ್ದೇಶಕನಾದ ನನಗೂ ಗೊತ್ತಿಲ್ಲ. ನನ್ನ ಟೀಂನಲ್ಲಿ ಅಸೋಸಿಯೇಟ್ ಡೈರೆಕ್ಟರ್ ಇಲ್ಲ. ನ್ಯೂಸ್ ಚಾನೆಲ್‍ಗಳಿಗೆ ಮಾತನಾಡಿದ ಆ ವ್ಯಕ್ತಿ ಯಾರು..? ನನಗೆ ಗೊತ್ತಿಲ್ಲ.

ದೂರು ಕೊಟ್ಟಿದ್ದು 20 ಗಂಟೆಗಳ ನಂತರ..!

ಘಟನೆ ನಡೆದಿರೋದು ಜುಲೈ 22ನೇ ತಾರೀಕು. ದೂರು ಕೊಟ್ಟಿರೋದು 23ನೇ ತಾರೀಕು ಸಂಜೆ. ಘಟನೆ ಮತ್ತು ದೂರಿನ ಮಧ್ಯೆ 20 ಗಂಟೆಗಳ ಗ್ಯಾಪ್ ಇದೆ. ಅಷ್ಟು ದೊಡ್ಡ ಗಾಯವಾಗಿದ್ದರೆ, ಭುವನ್ ಯಾಕೆ ಘಟನೆ ನಡೆದ ತಕ್ಷಣ ದೂರು ಕೊಡಲಿಲ್ಲ. ತಕ್ಷಣ ಯಾಕೆ ಚಿಕಿತ್ಸೆಯನ್ನೂ ಪಡೆಯಲಿಲ್ಲ. ಅದು ಯಕ್ಷ ಪ್ರಶ್ನೆ.

ಚಿತ್ರಲೋಕದ ತನಿಖೆಯಲ್ಲಿ ಗೊತ್ತಾದ ಅಂಶವೆಂದರೆ, ತಲಘಟ್ಟಪುರ ಠಾಣೆಗೆ ಭುವನ್ ನಾರ್ಮಲ್ ಆಗಿಯೇ ನಡೆದುಕೊಂಡು ಬಂದರು. ಆಗ ಠಾಣೆಯಲ್ಲಿದ್ದ ಇನ್ಸ್‍ಪೆಕ್ಟರ್ ಇದನ್ನು ಗಮನಿಸಿ, ಕಂಪ್ಲೇಂಟ್ ತೆಗೆದುಕೊಂಡಿಲ್ಲ. ಫ್ರೆಂಡ್‍ಶಿಪ್ ಮಧ್ಯೆ ನಡೆದ ಸಣ್ಣ ಜಗಳವನ್ನು ಸ್ಟೇಷನ್‍ಗೇಕೆ ತರುತ್ತೀರಿ. ನೀವೇ ಮಾತನಾಡಿ ಸರಿಪಡಿಸಿಕೊಳ್ಳಿ.. ಎಂದು ಬುದ್ದಿಮಾತು ಹೇಳಿದ್ದಾರೆ. ಆದರೆ ಯಾವಾಗ ಪ್ರಕರಣ ನ್ಯೂಸ್ ಚಾನೆಲ್‍ಗಳಲ್ಲಿ ಬಂದು, ಟಿವಿಗಳಲ್ಲಿ ಭುವನ್ ತಮ್ಮ ತೊಡೆಗೆ ಪ್ರಥಮ್ ಕಚ್ಚಿದ್ದಾನೆ ಎಂದು ಫೋಟೋ ಮತ್ತು ವಿಡಿಯೋಗಳು ಹೊರಬಂದವೋ, ಆಗ ಪೊಲೀಸರು ದೂರು ಸ್ವೀಕರಿಸಿ, ಎಫ್‍ಐಆರ್ ಮಾಡಿಕೊಂಡಿದ್ದಾರೆ.

ಎಲ್ಲಿ ಹೋಗಿದ್ದರು ಪ್ರಥಮ್..?

ಇಷ್ಟೂ ಘಟನೆ ನಡೆಯುವಾಗ ಪ್ರಥಮ್ ಎಂಎಲ್‍ಎ ಚಿತ್ರದ ಶೂಟಿಂಗ್‍ನಲ್ಲಿದ್ದರು. ಧಾರಾವಾಹಿಯ ಶೂಟಿಂಗ್ ಮುಗಿಸಿ, ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿಸಿಕೊಂಡಿದ್ದರು. ಪ್ರಥಮ್‍ಗೆ ಭುವನ್ ತನ್ನ ವಿರುದ್ಧ ದೂರು ಕೊಟ್ಟಿದ್ದಾರೆ ಎನ್ನುವುದು ಗೊತ್ತಾಗಿದ್ದು ನ್ಯೂಸ್ ಚಾನೆಲ್ಲುಗಳಲ್ಲಿ ಬಹಿರಂಗವಾದ ನಂತರ. ಎಂಎಲ್‍ಎ ಚಿತ್ರದ ನಿರ್ದೇಶಕರೇ, ಪ್ರಥಮ್‍ಗೆ ಮೊದಲು ಕೋರ್ಟ್‍ಗೆ ಹೋಗಿ ಜಾಮೀನು ತೆಗೆದುಕೊಂಡು ಬರುವಂತೆ ಸಲಹೆ ನೀಡಿದರು. ಅದರಂತೆ ಪ್ರಥಮ್, ಕೋರ್ಟ್‍ನಲ್ಲಿ ಶರಣಾಗಿ ಜಾಮೀನು ಪಡೆದುಕೊಂಡರು. ನಂತರ ಭುವನ್ ವಿರುದ್ಧ ದೂರು ನೀಡಿದರು. 

ಈಗ ಭುವನ್ ಮನೆಯಲ್ಲಿಲ್ಲ. ಇಬ್ಬರ ಮಧ್ಯೆ ಇಷ್ಟು ದೊಡ್ಡ ಜಗಳ ಶುರುವಾಗಲು ಕಾರಣ ಏನು..? ಎಲ್ಲಿಂದ ಶುರುವಾಯ್ತು..? ಗೋಮಾಂಸದ ಕಥೆ ಏನು..?

ಮುಂದಿನ ಭಾಗದಲ್ಲಿ ನೋಡಿ.