ಓಂಪ್ರಕಾಶ್ ರಾವ್. ಒಂದು ಕಾಲದಲ್ಲಿ ಸೂಪರ್ ಡ್ಯೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದ ನಿರ್ದೇಶಕ. ಲಾಕಪ್ ಡೆತ್, ಎಕೆ 47 ನಂತಹ ಸಖತ್ ಸಿನಿಮಾ ಕೊಟ್ಟಿದ್ದವರೂ ಇವರೇ. ರೀಮೇಕ್ಸ್ ಆಫ್ ರೀಮೇಕ್ ಚಿತ್ರಗಳನ್ನು ಮಾಡಿದವರೂ ಇವರೇ. ತಮಿಳಿನ ನಾಲ್ಕೈದು ಸಿನಿಮಾ ಮಿಕ್ಸ್ ಮಾಡಿ ಬೆರಕೆ ಸೊಪ್ಪಿನ ಸಾರು ಎಂದು ಓಪನ್ ಆಗಿಯೇ ಹೇಳುತ್ತಿದ್ದ ಓಂಪ್ರಕಾಶ್, ಟ್ರೆಂಡ್ ಸೆಟ್ಟರ್ ಚಿತ್ರಗಳನ್ನು ಡೈರೆಕ್ಟ್ ಮಾಡಿದ್ದವರು. ಇದೀಗ ಕಿರಿಕ್ ಕೀರ್ತಿ ಅನ್ನೋ ಹೆಸರಿನ ಚಿತ್ರ ಮಾಡಿದ್ದಾರಂತೆ. ಆದರೆ ಆ ಚಿತ್ರದಲ್ಲಿ ಕಿರಿಕ್ ಕೀರ್ತಿ ಇಲ್ಲ.
ಕೀರ್ತಿ ಕ್ಯಾರೆಕ್ಟರ್ ಇಷ್ಟ ಆಗಲಿಲ್ಲ. ಹಾಗಾಗಿ ಆ ಚಿತ್ರವನ್ನು ಕೈಬಿಟ್ಟೆ. ಕೀರ್ತಿ ಜೊತೆ ಸಿನಿಮಾ ಮಾಡ್ತಿಲ್ಲ ಎನ್ನುವ ಓಂಪ್ರಕಾಶ್ ರಾವ್, ತಮ್ಮ ಚಿತ್ರಕ್ಕೆ ಕಿರಿಕ್ ಕೀರ್ತಿ ಎಂದೇ ಏಕೆ ಟೈಟಲ್ ಇಟ್ಟಿದ್ದಾರೋ ಗೊತ್ತಿಲ್ಲ. ಆದರೆ ಕ್ಯಾರೆಕ್ಟರ್ ಸರಿ ಇಲ್ಲ ಎಂಬ ಮಾತಿಗೆ ಕೀರ್ತಿ ರೊಚ್ಚಿಗೆದ್ದಿದ್ದಾರೆ.
'ಓಂ ಪ್ರಕಾಶ್ ರಾವ್ ಸರ್..ನಾನು ಡಿಸ್ಕಶನ್ಗೆ ರೆಡಿ ಇದ್ದೀನಿ ನನ್ನ ಆಟಿಟ್ಯೂಡ್ನಿಂದ ಸಿನಿಮಾ ನಿಲ್ತಾ? ಅಥವಾ ಅದಕ್ಕೆ ಬೇರೆ ಕಾರಣನೇ ಇತ್ತಾ ಅಂತ ಜನರಿಗೆ ಗೊತ್ತಾಗಲ್ಲಿ. ನಾನು ನಿಮ್ಮ ಹೆಸರು ಎಲ್ಲೂ ತೆಗೆದುಕೊಂಡಿಲ್ಲ ನೀವು ಹೇಳಿದ ಮೇಲೆ ನಾನು ಹೇಳಿಲ್ಲ ಅಂದ್ರೆ ತಪ್ಪಾಗುತ್ತಲ್ವಾ ಸರ್? ಕೆಲವು ಕೋತಿಗಳು ನನ್ನ ವಿರುದ್ಧ ಯಾರ್ ಏನ್ ಮಾತಾಡ್ತಾರೆ ಅಂತ ಕಾಯ್ಕಂಡ್ ಕೂತವೆ. ಅವುಗಳೂ ಮೈ ಪರಚಿಕೊಳ್ಳೋ ಹಾಗೆ ಯಾಕ್ ಮಾಡ್ತೀರಿ' ಎಂದು ಬರೆದುಕೊಂಡಿರುವ ಕಿರಿಕ್ ಕೀರ್ತಿ 2 ನಿಮಿಷಗಳ ಕಾಲ ಸಿಟ್ಟಿನಿಂದ ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.
ಆ ವಿಡಿಯೋದಲ್ಲಿ ಕಿರಿಕ್ ಕೀರ್ತಿ ಎತ್ತಿರುವ ಪ್ರಶ್ನೆಗಳು ಓಂ ಪ್ರಕಾಶ್ ರಾವ್ ವ್ಯಕ್ತಿತ್ವ ಪ್ರಶ್ನಿಸುವಂತಿರುವುದು ಸತ್ಯ. ಗೌರವಾನ್ವಿತ ಓಂ ಪ್ರಕಾಶ್ ಸರ್ ಅವರೇ ಸಿನಿಮಾ ಯಾಕೆ ನಿಂತ್ತು ಹೋಯ್ತು? ನಾನು ಯಾಕೆ ಸಿನಿಮಾದಿಂದ ಹೊರ ಬಂದೆ? ಮೊದಲ ಹೀರೋಯಿನ್ ಸಿನಿಮಾದಿಂದ ಯಾಕೆ ಹೊರ ಹೋದಳು? ಫೋಟೋಶೂಟ್ ದಿನ ಏನಾಯ್ತು? ಬಿಗ್ ಬಾಸ್ ಮೈಸೂರು ಈವೆಂಟ್ ದಿನ ಏನು ಗಲಾಟೆ ಆಯ್ತು? ಅಲ್ಲಿಂದ ಫಸ್ಟ್ ಹೀರೋಯಿನ್ ಯಾಕೆ ಬಿಟ್ಟು ಹೋದಳು? ಆಮೇಲೆ ಸೆಂಕೆಂಡ್ ಹೀರೋಯಿನ್ ಹೆಂಗ್ ಸೆಲೆಕ್ಟ್ ಆದಳು? ಸ್ಕ್ರಿಪ್ಟ್ಗೆಂದು ಮೈಸೂರಿನಲ್ಲಿ ರೂಮ್ ಹಾಕಿದ್ರಿ ಅಲ್ವಾ ಅದಾದ ಮೇಲೆ ಸೆಕೆಂಡ್ ಹೀರೋಯಿನ್ ಸಿನಿಮಾದಿಂದ ಯಾಕೆ ಬಿಟ್ಟು ಹೋದಳು? ಆಮೇಲೆ ನಾನು ನಿಮಗೆ ಏನು ಹೇಳಿ ಹೊರ ಬಂದೆ? ಸಿನಿಮಾದಿಂದ ಕಿರಿಕ್ ಕೀರ್ತಿ ಯಾಕೆ ಹೊರ ಬಂದಾ? ಇದೆಲ್ಲಾ ಚರ್ಚೆ ಮಾಡಬೇಕು ಅಂದ್ರೆ ಒಂದು ಸಲ ಕುಳಿತುಕೊಳ್ಳೋಣ ನೇರಾ ನೇರಾ ಲೈವ್ನಲ್ಲಿ...ಸಿನಿಮಾದಿಂದ ಯಾರು ಹೊರ ಬಂದರು ಸಿನಿಮಾದಿಂದ ಯಾರನ್ನು ತೆಗೆದು ಹಾಕಿದರು ಅಂತ ಮಾತನಾಡಬಹುದು. ಸಿನಿಮಾ ಯಾಕೆ ಅರ್ಧಕ್ಕೆ ನಿಂತು ಹೋಯಿತ್ತು? ಪದೇ ಪದೇ ನಾಯಕಿಯರು ಯಾಕೆ ಬದಲಾಗುತ್ತಾರೆ? ಇದರ ಬಗ್ಗೆ ದಯವಿಟ್ಟು ಮಾತಾಡೋಣ…
ಹೀಗೆ ಮುಂದುವರೆಯುತ್ತೆ ಕೀರ್ತಿ ಆರ್ಭಟ. ಪ್ರಶ್ನೆಗಳ ಸುರಿಮಳೆ.
ಅಂದಹಾಗೆ ಇದಕ್ಕೆ ಓಂಪ್ರಕಾಶ್ ರಾವ್ ಇನ್ನೂ ಯಾವುದೇ ಉತ್ತರ ಕೊಟ್ಟಿಲ್ಲ.