ಇತ್ತೀಚೆಗಷ್ಟೇ ಕಲರ್ಸ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ ಶೋ ಅಫ್ ಎಂದರೆ ಯಶ್ ನೆನಪಾಗ್ತಾರೆ ಎಂದು ಹೇಳಿದ್ದ ರಶ್ಮಿಕಾ, ಯಶ್ ಅಭಿಮಾನಿಗಳ ಕಟು ಟೀಕೆಗೆ ಗುರಿಯಾಗಿದ್ದರು. ನಂತರ ಅವರು ಕ್ಷಮೆ ಕೇಳಿದ್ದು, ಯಶ್ ಕೂಡಾ ಮಧ್ಯ ಪ್ರವೇಶಿಸಿ ಅಭಿಮಾನಿಗಳನ್ನು ಶಾಂತರಾಗಿಸಿದ್ದು ಈಗ ಮುಗಿದ ಅಧ್ಯಾಯ. ಈಗ ಅಂತಾದ್ದೇ ವಿವಾದ ಮೈಮೇಲೆಳೆದುಕೊಂಡಿದ್ದಾರೆ ನಟಿ ಸಂಜನಾ. ಈ ಸಂಜನಾ ಗಂಡ ಹೆಂಡತಿ ಖ್ಯಾತಿಯ ಸಂಜನಾ ಅಲ್ಲ. ಇತ್ತೀಚೆಗೆ ಬಿಗ್ಬಾಸ್ ಮೂಲಕ ಖ್ಯಾತಿಗೆ ಬಂದ ಸಂಜನಾ.
ಪ್ರಥಮ್ ಮತ್ತು ಭುವನ್ ನಡುವಿನ ಜಗಳದಲ್ಲಿ ಪದೇ ಪದೇ ಪ್ರಸ್ತಾಪವಾಗಿದ್ದ ಹೆಸರು ಈ ಸಂಜನಾ ಅವರದ್ದು. ಈ ಸಂಜನಾ ಅದೇ ಕಲರ್ಸ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ ಅಕುಲ್ ಬಾಲಾಜಿಯ ರ್ಯಾಪಿಡ್ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿದ್ದರು. ಹಾಗೆ ಉತ್ತರ ಕೊಡುವಾಗ ಬಿಲ್ಡಪ್ ಎಂದರೆ ಯಾರು ನೆನಪಾಗ್ತಾರೆ ಎಂದು ಹೇಳಬೇಕಿತ್ತು. ಆಗ ಸಂಜನಾ ಕೊಟ್ಟಿರುವ ಉತ್ತರ ದರ್ಶನ್ ಅವರದ್ದು.
ಕಾರ್ಯಕ್ರಮ ಪ್ರಸಾರವಾಗಿದ್ದೇ ತಡ. ದರ್ಶನ್ ಅಭಿಮಾನಿಗಳು ಸಂಜನಾ ಅವರ ವಿರುದ್ಧ ಅಭಿಯಾನವನ್ನೇ ಆರಂಭಿಸಿಬಿಟ್ಟಿದ್ದಾರೆ. ಸಂಜನಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಟಿ ಸಂಜನಾ ದರ್ಶನ್ ಅವರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ನನಗೆ ಆ ಸ್ವಾತಂತ್ರ್ಯವಿದೆ ಎನ್ನುವುದು ಕಾಲೆಳೆದವರಿಗೆ ಸಂಜನಾ ಕೊಟ್ಟಿರುವ ಉತ್ತರ.