ನಿನ್ನೆ ಮೊನ್ನೆ ಬಂದವ್ರೆಲ್ಲ ನಂಬರ್ 1 ಅಂತಾರೋ.. ಅಂತಾ ಜೋಗಿ ಪ್ರೇಮ್ ವಿಲನ್ನಲ್ಲಿ ಸುಮ್ಮನೆ ಬರೆದಿದ್ದೇನೂ ಅಲ್ಲ. ಮೊದಲ ಚಿತ್ರ ಮಾಡುವಾಗಲೇ ಹೀರೋಗೊಂದು ಬಿರುದು ಕೊಟ್ಟಿರುತ್ತಾರೆ. ಎಲ್ಲರೂ ಸ್ಟಾರ್ಗಳೇ. ಆದರೆ ಶರಣ್ ಹಾಗಲ್ಲ. ನೀವು ಅವರ ಯಾವುದೇ ಸಿನಿಮಾ ನೋಡಿ.. ಟೈಟಲ್ ಕಾರ್ಡ್ನಲ್ಲಿ ಜಸ್ಟ್ ಶರಣ್ ಎಂದಷ್ಟೇ ಬರುತ್ತೆ. ಆದರೆ, ಶರಣ್ ಲಿಸ್ಟ್ನಲ್ಲಿ ಈಗಾಗಲೇ ಹಿಟ್ ಚಿತ್ರಗಳ ದೊಡ್ಡ ಸಾಲೇ ಇದೆ. ಹೀಗಿದ್ದರೂ ಶರಣ್ ಯಾಕೆ ಸ್ಟಾರ್ ಅನ್ನೋ ಬಿರುದು ಬಾವಳಿ ಇಟ್ಟುಕೊಳ್ಳೋದಿಲ್ಲ ಎಂಬ ಪ್ರಶ್ನೆಗೆ ಶರಣ್ ಅವರೇ ಉತ್ತರ ಕೊಟ್ಟಿದ್ದಾರೆ.
`ನಾನು ಹುಟ್ಟುವ ವೇಳೆ ನನ್ನ ತಂದೆ, ತಾಯಿ ಗುಬ್ಬಿ ಕಂಪೆನಿಯಲ್ಲಿದ್ದರು. ಯಾದಗಿರಿಯಲ್ಲಿ ಕ್ಯಾಂಪ್ ಹಾಕಿದ್ದಾಗ ನನ್ನ ತಾಯಿ ಗರ್ಭಿಣಿ. ಅಮ್ಮನನ್ನು ಚೆಕ್ ಮಾಡಿದ ಡಾಕ್ಟರ್, ಮಗು ಅಪಾಯದಲ್ಲಿದೆ, ತೆಗೆಸಿಬಿಡಿ ಎಂದರಂತೆ. ಆದರೆ, ಅಮ್ಮ ಗಟ್ಟಿಗಿತ್ತಿ. ಅಲ್ಲಿಯೇ ಇದ್ದ ಶ್ರೀ ಶರಣ ಬಸವೇಶ್ವರ ಸನ್ನಿಧಿಗೆ ಹೋಗಿ, ಯಾವುದೇ ತೊಂದರೆಯಾಗದೆ ಮಗು ಹುಟ್ಟಿದರೆ ನಿನ್ನ ಹೆಸರೇ ಇಡುತ್ತೇನೆ ಎಂದು ಹರಕೆ ಹೊತ್ತರು. ಆಗ ನಾನು ಹುಟ್ಟಿದೆ. ಶರಣ ಎಂದು ಹೆಸರಿಟ್ಟರು. ಯಾವುದೇ ಗಳಿಗೆ, ಜಾತಕ, ನಕ್ಷತ್ರ, ರಾಶಿ ಫಲ ನೋಡಲಿಲ್ಲ. ಅದೇ ಹೆಸರು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ. ಮತ್ತೇಕೆ ಬಿರುದು..?''
ಇದು ಶರಣ್ ಪ್ರಶ್ನೆ. ನನ್ನ ಚಿತ್ರಗಳನ್ನು ಜನ ಕಾಮಿಡಿಗಾಗಿಯೇ ನೋಡುತ್ತಾರೆ. ಶಿಳ್ಳೆ ಹಾಕುತ್ತಾರೆ. ಚಪ್ಪಾಳೆ ತಟ್ಟುತ್ತಾರೆ. ಅದು ನನಗೆ ಸಾಕು ಅನ್ನೋ ಶರಣ್, ಅಧ್ಯಕ್ಷ ಇನ್ ಅಮೆರಿಕ ಚಿತ್ರದ ಮೂಲಕ ಶೀಘ್ರದಲ್ಲೇ ಮತ್ತೊಮ್ಮೆ ನಗಿಸೋಕೆ ರೆಡಿಯಾಗಿದ್ದಾರೆ.