ಸಿನಿಮಾ ಶೂಟಿಂಗ್ ಶುರುವಾಗಿದೆ. ತೆಲುಗಿನಲ್ಲಿ ಸ್ವಲ್ಪ ಬೇಗನೇ ಶುರುವಾದ ಕಾರಣ, ಸೂಪರ್ ಮಚ್ಚಿ ಚಿತ್ರದ ಶೂಟಿಂಗ್‍ಗೆ ತೆರಳಿದ್ದಾರೆ ರಚಿತಾ ರಾಮ್. ಅದು ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ ಅನ್ನೋ ಹೆಸರಲ್ಲಿ ಕನ್ನಡಕ್ಕೂ ಬರುತ್ತಿದೆ. ಹೈದರಾಬಾದ್‍ನಲ್ಲಿ ನಡೆಯುತ್ತಿರೋ ಆ ಶೂಟಿಂಗ್‍ನಲ್ಲಿ ರಚಿತಾ ರಾಮ್ ಹಾಗೂ ಚಿತ್ರತಂಡ ತೆಗೆದುಕೊಂಡಿರೋ ಮುನ್ನೆಚ್ಚರಿಕೆಗಳು ಅಚ್ಚರಿಯಾಗುವಂತಿವೆ.
ರಚಿತಾ ರಾಮ್ ಇಲ್ಲಿಂದ ಹೈದರಾಬಾದ್‍ಗೆ ಹೋಗಿದ್ದು ಕಾರ್‍ನಲ್ಲಿ. ವಿಮಾನ ಇಲ್ಲ. ಅಲ್ಲಿ ಉಳಿದುಕೊಂಡಿರೋ ಹೋಟೆಲ್‍ನಲ್ಲಿ ಬೇರೆಯವರಿಗೆ ನೋ ಎಂಟ್ರಿ. ರಚಿತಾ ಮನೆಯವರಿಗೂ ಪ್ರವೇಶ ಇಲ್ಲ.
ಇನ್ನು ಸೆಟ್‍ನಲ್ಲಿ ಆರಂಭದ ದಿನ ಎಲ್ಲರಿಗೂ ಪಿಪಿಇ ಕಿಟ್ ವ್ಯವಸ್ಥೆ ಮಾಡಲಾಗಿತ್ತಂತೆ. ಆದರೆ, ಅದನ್ನು ಧರಿಸಿ ಚಿತ್ರೀಕರಣ ಮಾಡಲು ಅಸಾಧ್ಯವಾಯ್ತು. ಹೀಗಾಗಿ ಈಗ ಎಲ್ಲರೂ ಮಾಸ್ಕ್, ಗ್ಲೌಸ್, ಫೇಸ್ ಗಾರ್ಡ್ ಬಳಸುತ್ತಿದ್ದಾರೆ. ಸೆಟ್‍ಗೆ ಬರುವ ಹೊಸಬರು ಸ್ಯಾನಿಟೈಸರ್ ಬಳಸಿಯೇ ಬರಬೇಕು. ಅವರು ತರುವ ವಸ್ತುಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿ 15 ನಿಮಿಷಕ್ಕೊಮ್ಮೆ ಕ್ಯಾಮೆರಾ ಮತ್ತಿತರ ವಸ್ತುಗಳಿಗೂ ಸ್ಯಾನಿಟೈಸ್ ಮಾಡುತ್ತಿದ್ದಾರೆ. ಊಟ, ತಿಂಡಿಯ ವ್ಯವಸ್ಥೆ ನಿರ್ಮಾಪಕರು, ನಿರ್ದೇಶಕರ ಮನೆಯಿಂದಲೇ ಆಗುತ್ತಿದೆ.
ಇನ್ನು ರಚಿತಾ ಅವರ ಮೇಕಪ್ ಸ್ವತಃ ಅವರದ್ದೇ. ನೋ ಮೇಕಪ್ ಮ್ಯಾನ್. ಚಿತ್ರದಲ್ಲಿದ್ದ ರೊಮ್ಯಾಂಟಿಕ್ ಮತ್ತು ಕ್ಲೋಸಪ್ ದೃಶ್ಯಗಳ ಚಿತ್ರೀಕರಣ ಮೊದಲೇ ಮುಗಿದಿತ್ತು. ಹೀಗಾಗಿ ಅಂತಹ ದೃಶ್ಯಗಳ ಅಗತ್ಯ ಬಂದಿಲ್ಲ. ಇನ್ನೊಂದು ಹಾಡಿನ ಚಿತ್ರೀಕರಣಕ್ಕೆ 150 ಜ್ಯೂ.ಆರ್ಟಿಸ್ಟ್‍ಗಳು ಬೇಕಿತ್ತು. ಈಗ ಅವರಿಲ್ಲದೇ ಹಾಡಿನ ಪ್ಲಾನ್ ಮಾಡಿ ಶೂಟ್ ಮಾಡಲಾಗಿದೆ ಎಂದು ವಿವರಿಸಿದ್ದಾರೆ ರಚಿತಾ ರಾಮ್.
ಇನ್ನು ಚಿತ್ರದ ಹೀರೋ ಮೆಗಾಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಅವರು ತಮ್ಮ ಮನೆಯ ಔಟ್ ಹೌಸ್‍ನಲ್ಲಿ ಉಳಿದುಕೊಂಡಿದ್ದು ಕುಟುಂಬದಿಂದ ದೂರವಿದ್ದಾರೆ. ನಾನೂ ಕೂಡಾ ಶೂಟಿಂಗ್ ಮುಗಿಸಿ ಬಂದವಳು 14 ದಿನ ಕ್ವಾರಂಟೈನ್ ಆಗುತ್ತೇನೆ ಎಂದು ಮಾಹಿತಿ ನೀಡಿದ್ದಾರೆ ರಚಿತಾ.