ರಚಿತಾ ರಾಮ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೂ ಮಾನ್ಸೂನ್ ರಾಗದಲ್ಲಿ. ಚಿತ್ರದ ಟ್ರೇಲರಿನಲ್ಲಿ ಇರೋ ಏಕೈಕ ಡೈಲಾಗ್ ಕೂಡ ಅವರದ್ದೇ. ಉಳಿದಂತೆ ಇಡೀ ಟ್ರೇಲರಿನಲ್ಲಿ ಗೆಲ್ಲೋದು ಅನೂಪ್ ಸಿಳೀನ್ ಮ್ಯೂಸಿಕ್ ಮತ್ತು ಡಾಲಿ, ರಚಿತಾ, ಸುಹಾಸಿನಿ, ಅಚ್ಯತ್, ಯಶಾ ಶಿವಕುಮಾರ್ ಅವರ ಕಣ್ಣುಗಳ ಆಟ.
ನನಗೆ ಈ ತಂಡದೊಂದಿಗೆ ಇದು 2ನೇ ಸಿನಿಮಾ. ಚಿತ್ರದ ಕಥೆ ಮತ್ತು ನನ್ನ ಪಾತ್ರದ ಬಗ್ಗೆ ಕೇಳಿ ತಕ್ಷಣ ಒಪ್ಪಿಕೊಂಡೆ. ನನ್ನದು ಇಲ್ಲಿ ವೇಶ್ಯೆಯ ಪಾತ್ರ. ನಿರ್ದೇಶಕರೇನೋ ಶೂಟ್ ಆದ ನಂತರ ಒಮ್ಮೆ ನೋಡಿ. ಇಷ್ಟವಾಗದಿದ್ದರೆ ಬೇರೆ ಶೂಟ್ ಮಾಡುತ್ತೇವೆ ಎಂದಿದ್ದರು. ಆದರೆ.. ಪಾತ್ರವನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ನನಗೆ ಇಡೀ ತಂಡದ ಮೇಲೆ ನಂಬಿಕೆಯಿತ್ತು. ಪಾತ್ರಕ್ಕೆ ಯಾವ ಸಿದ್ಧತೆಯನ್ನೂ ಮಾಡಿಕೊಳ್ಳಲಿಲ್ಲ. ನಿರ್ದೇಶಕರು ಹೇಳಿದ್ದಷ್ಟನ್ನು ಮಾಡಿದ್ದೇನೆ ಎಂದಿದ್ದಾರೆ ರಚಿತಾ ರಾಮ್.
ಡಾಲಿ ಧನಂಜಯ್ ಅವರನ್ನು ನಟರಾಕ್ಷಸ ಎಂದೇಕೆ ಕರೆಯುತ್ತಾರೆ ಅನ್ನೋದು ಅವರೊಂದಿಗೆ ನಟಿಸುವಾಗ ಅರ್ಥವಾಯಿತು. ನನ್ನ ಪಾತ್ರ ಮತ್ತು ಅಭಿನಯ ಚಿತ್ರದಲ್ಲಿ ಅಷ್ಟು ಚೆನ್ನಾಗಿದ್ದರೆ ಅದಕ್ಕೆ ಡಾಲಿ ಧನಂಜಯ್ ಕೂಡಾ ಕಾರಣ. ಅವರ ಜೊತೆ ನಟನೆಯಲ್ಲಿ ಸ್ಪರ್ಧಿಸೋದು ನಿಜಕ್ಕೂ ಸವಾಲು ಎಂದಿದ್ದಾರೆ ಡಿಂಪಲ್ ಕ್ವೀನ್.
ರವೀಂದ್ರನಾಥ್ ನಿರ್ದೇಶನದ ಚಿತ್ರಕ್ಕೆ ವಿಖ್ಯಾತ್ ನಿರ್ಮಾಪಕ. ಆಗಸ್ಟ್ 19ರಂದು ರಿಲೀಸ್ ಆಗುತ್ತಿರುವ ಚಿತ್ರದ ಟ್ರೇಲರ್ ಒಂದೊಳ್ಳೆ ಕಂಟೆಂಟ್ ಚಿತ್ರದಲ್ಲಿದೆ ಅನ್ನೋದನ್ನ ಹೃದಯಕ್ಕೆ ತಟ್ಟುವಂತೆ ಹೇಳಿದೆ.