ಏಕ್ ಲವ್ ಯಾ ಚಿತ್ರದ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಹೇಳೋ ಭಗವಂತ.. ಹಾಡು ಬಿಡುಗಡೆ ವೇಳೆ ಪುನೀತ್ ರಾಜ್ಕುಮಾರ್ ಫೋಟೋಗೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಜೋಗಿ ಪ್ರೇಮ್, ರಕ್ಷಿತಾ ಪ್ರೇಮ್, ರಚಿತಾ ರಾಮ್, ಅಕುಲ್ ಬಾಲಾಜಿ.. ಎಲ್ಲರೂ ಕ್ಷಮೆ ಕೇಳಿದ್ದಾರೆ.
ಕಾರ್ಯಕ್ರಮದಲ್ಲಿ ಹಾಡು ಬಿಡುಗಡೆ ನಂತರ ಅಪ್ಪು ಫೋಟೋ ಎದುರು ಶಾಂಪೇನ್ ಓಪನ್ ಮಾಡಿ ಸಂಭ್ರಮಿಸಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿತ್ತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಚಿತ್ರತಂಡ ಮಾಡಿರುವ ಈ ತಪ್ಪಿಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರು. ನಮ್ಮವರೇ.. ನಮ್ಮ ಚಿತ್ರರಂಗದವರೇ ಇಂಥ ಕೆಲಸ ಮಾಡಿದರೆ ನಾವು ಯಾರ ಮೇಲೆ ಆಪಾದನೆ ಮಾಡೋಣ. ದಯವಿಟ್ಟು ಇಂಥದ್ದನ್ನೆಲ್ಲ ಮಾಡಬೇಡಿ. ಪುನೀತ್ಗೆ ಅವಮಾನ ಆಗುವಂತೆ ನಡೆದುಕೊಂಡಿರುವುದು ನಾವೆಲ್ಲರೂ ತಲೆ ತಗ್ಗಿಸುವಂತೆ ಮಾಡಿದೆ ಎಂದಿದ್ದರು ಸಾ.ರಾ. ಗೋವಿಂದು.
ವಿವಾದವಾಗುತ್ತಿದ್ದಂತೆ ಇಡೀ ಚಿತ್ರತಂಡ ಕ್ಷಮೆ ಕೇಳಿದೆ. ಇದು ಉದ್ದೇಶಪೂರ್ವಕ ಅಲ್ಲ. ಅಚಾನಕ್ ಆಗಿ ನಡೆದ ಅಚಾತುರ್ಯ. ಅಪ್ಪು ನಮ್ಮ ಮನಸ್ಸಿನಲ್ಲಿದ್ದಾರೆ. ಹಾಡು ಶುರುವಾಗುವುದೇ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ. ಶಾಂಪೇನ್ ಬಾಟಲ್ ಓಪನ್ ಹಾಡು ಬಿಡುಗಡೆ ಕಾರ್ಯಕ್ರಮದ ಒಂದು ಅಂಗವಾಗಿತ್ತು. ಅಪ್ಪು ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಪ್ರೇಮ್.
ಒಂದು ಅಚಾತುರ್ಯವಾಗಿದೆ. ದಯವಿಟ್ಟು ಕ್ಷಮೆ ಇರಲಿ. ಅಪ್ಪು ಅವರಿಗೆ ಅವಮಾನ ಮಾಡುವ ಉದ್ದೇಶ ಯಾವುದೇ ಕನ್ನಡಿಗರಿಗೂ ಇರಲ್ಲ. ನಾನೂ ಚಿತ್ರದ ಭಾಗವಾಗಿರೋದ್ರಿಂದ ಕ್ಷಮೆ ಕೇಳುತ್ತಿದ್ದೇನೆ. ಉದ್ದೇಶಪೂರ್ವಕವಾಗಿ ಅಲ್ಲದೆ ನಡೆದಿರುವ ತಪ್ಪನ್ನು ಅಪ್ಪು ಅಭಿಮಾನಿಗಳು ಕ್ಷಮಿಸುತ್ತಾರೆಂದು ಭಾವಿಸಿದ್ದೇನೆ ಎಂದಿದ್ದಾರೆ ರಚಿತಾ ರಾಮ್.
ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್ ಕೂಡಾ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ಇದು ಉದ್ದೇಶಪೂರ್ವಕ ಅಲ್ಲ. ಅಪ್ಪು ಅಗಲಿಕೆಯ ನೋವಿನಿಂದ ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಶಾಂಪೇನ್ ಬಾಟಲ್ ಓಪನ್ ಮಾಡಿದ್ದು ಅಪ್ಪು ಅಭಿಮಾನಿಗಳಿಗೆ ಬೇಸರವಾಗಿದೆ. ಇಡೀ ಚಿತ್ರತಂಡದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ರಕ್ಷಿತಾ ಪ್ರೇಮ್.
ಕಾರ್ಯಕ್ರಮದ ನಿರೂಪಕರಾಗಿದ್ದ ಅಕುಲ್ ಬಾಲಾಜಿ, ತಾಂತ್ರಿಕ ಸಮಸ್ಯೆಯಿಂದಾಗಿ ಶಾಂಪೇನ್ ಬಾಟಲ್ ಓಪನ್ ಮಾಡುವ ವೇಳೆ ಅಪ್ಪು ಫೋಟೋ ಬಂತು. ಆದರೂ.. ಆಗಿರುವ ಅಪಚಾರಕ್ಕೆ ಕ್ಷಮೆಯಿರಲಿ ಎಂದಿದ್ದಾರೆ.