ಇದೊಂದು ಫಿಲಾಸಫಿಕಲ್ ಚಿತ್ರವಂತೆ. ಅರ್ಧ ಕೋಣ.. ಇನ್ನರ್ಧ ಹಸು ಇರುವ ಪೋಸ್ಟರ್ ಹೊರಬಿಟ್ಟಿದ್ದಾರೆ ಅರ್ಜುನ್ ಜನ್ಯ. ಕೋಣ ಎಂದರೆ ನೆನಪಾಗುವುದು ಯಮ. ಹಸು ಎಂದರೆ ಈಶ್ವರ. ಇಬ್ಬರೂ ಒಟ್ಟಿಗೇ ನೆನಪಾದರೆ ಕಣ್ಮುಂದೆ ಬರುವುದು ಮಾರ್ಕಂಡೇಯ ಪುರಾಣ. ಹೀಗೆಲ್ಲ ನೆನಪು ಮಾಡುತ್ತಿರುವ ಚಿತ್ರ 45. ಕೆಲವು ತಿಂಗಳ ಹಿಂದೆಯೇ ಘೋಷಿಸಿದ್ದ 45 ಚಿತ್ರಕ್ಕೆ ಈಗ ಮುಹೂರ್ತವೂ ಆಗಿದೆ.
ಚಿತ್ರ ಸೆಟ್ಟೇರಿರುವುದು ಈಗಲೇ. ಆದರೆ ನಾವು ಈಗಾಗಲೇ ಚಿತ್ರವನ್ನು ನೋಡಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರೂ ಆಗಿರುವ ರಮೇಶ್ ರೆಡ್ಡಿ, ಹೀರೋಗಳಾದ ಶಿವಣ್ಣ, ರಾಜ್ ಬಿ.ಶೆಟ್ಟಿ.
ನಮಗೆ ಚಿತ್ರದ ಕಥೆ ಹೇಳಿ ಆಗಿತ್ತು. ಕಥೆ ಚೆನ್ನಾಗಿತ್ತು. ಓಕೆ ಎಂದ ಮೇಲೂ ಚಿತ್ರ ಮೂವ್ ಆಗುತ್ತಿರಲಿಲ್ಲ. ತಿಂಗಳುಗಳಾದ ಮೇಲೆ ಅರ್ಜುನ್ ಜನ್ಯ ಅವರನ್ನು ಕೇಳಿದರೆ ಅವರು ಆಗಲೇ ಚಿತ್ರವನ್ನು ತೋರಿಸಿದ್ದರು ಆನಿಮೇಷನ್ನಿನಲ್ಲಿ ತೋರಿಸಿದರು. ಅರ್ಜುನ್ ಜನ್ಯ ಅವರ ಮೇಲೆ ಇನ್ನಷ್ಟು ನಂಬಿಕೆ ಬಂತು ಎನ್ನುತ್ತಾರೆ ರಮೇಶ್ ರೆಡ್ಡಿ. ಸ್ವತಃ ನಿರ್ದೇಶಕರೂ ಆಗಿರುವ ರಾಜ್ ಬಿ.ಶೆಟ್ಟಿಗೆ ಜನ್ಯ ಅವರ ತಯಾರಿ ಭರವಸೆ ಹುಟ್ಟಿಸಿದೆ. ರಾಜ್ ಬಿ.ಶೆಟ್ಟಿಯವರಿಗೆ ಈ ಚಿತ್ರದಲ್ಲಿ ನಾಯಕಿಯಾಗಿರುವುದು ಕೌಸ್ತುಭ ಮಣಿ.
ಇನ್ನು ಶಿವರಾಜ್ ಕುಮಾರ್ ಅವರಿಗಂತೂ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ನೋಡಿಯೇ ಉತ್ಸಾಹ ಮೂಡಿದೆ. ನೋಡ್ತಾ ಇರಿ, ಈ ಚಿತ್ರ ರಿಲೀಸ್ ಆದ್ಮೇಲೆ ಅರ್ಜುನ್ ಜನ್ಯ, ಕನ್ನಡದ ಟಾಪ್ ನಿರ್ದೇಶಕರಲ್ಲಿ ಒಬ್ಬರಾಗಲಿದ್ದಾರೆ ಎನ್ನುತ್ತಾರೆ ಶಿವಣ್ಣ.
‘45’ ಚಿತ್ರವನ್ನು ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಚಿತ್ರಕ್ಕೆ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಅನಿಲ್ ಕುಮಾರ್ ಸಂಭಾಷಣೆ ಬರೆದಿದ್ದು, ಕೆ. ಎಂ ಪ್ರಕಾಶ್ ಅವರ ಸಂಕಲನ ಈ ಚಿತ್ರಕ್ಕಿದೆ.