ವಯಸ್ಸು 71 ವರ್ಷ. ನೋಡುವುದಕ್ಕೆ ಆರೋಗ್ಯವಾಗಿಯೇ ಇದ್ದರು. ಆದರೆ ದೇಹ ಜರ್ಝರಿತವಾಗಿ ಹೋಗಿತ್ತು. ಶರತ್ ಬಾಬು ಅವರ ದೇಹದ ಯಾವ ಅವಯವಗಳೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕರುಳು, ಶ್ವಾಸಕೋಶ, ಕಿಡ್ನಿ ಹಾಳಾಗಿದ್ದವು. ಉಸಿರಾಟ ಕಷ್ಟವಾಗಿತ್ತು. ವೆಂಟಿಲೇಟರಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಶರತ್ ಬಾಬು ಅವರನ್ನು ಉಳಿಸಿಕೊಳ್ಳೋಕೆ ಅವರ ಕುಟುಂಬ ಶಕ್ತಿಮೀರಿ ಪ್ರಯತ್ನಿಸುತ್ತಿತ್ತು. ಆದರೆ ಅದಾವುದೂ ಈಡೇರಲಿಲ್ಲ.
ಮೇ 3ನೇ ತಾರೀಕು ಒಮ್ಮೆ ಶರತ್ ಬಾಬು ಅವರ ಸಾವಿನ ಸುದ್ದಿ ಹಬ್ಬಿತ್ತು. ಆದರೆ ಅದು ವದಂತಿಯೇ ಹೊರತು ಸತ್ಯವಾಗಿರಲಿಲ್ಲ. . ಕೆಲ ಸ್ಟಾರ್ ಕಲಾವಿದರು ಕೂಡ ಸಂತಾಪ ಸೂಚಿಸಿದ್ದರು. ಕೊನೆಗೆ ಕುಟುಂಬಸ್ಥರು ಶರತ್ ಬಾಬು ಆರೋಗ್ಯದ ಬಗ್ಗೆ ಸ್ಪಷ್ಟನೆ ನೀಡಬೇಕಾಯ್ತು.
ಹಲವು ದಿನಗಳಿಂದ ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಅವರು ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ಅವರು ಈ ಬಾರಿ ಹುಷಾರಾಗಿ ವಾಪಸ್ ಬರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಅಭಿಮಾನಿಗಳು, ಆಪ್ತರು ಶರತ್ ಬಾಬು ಕ್ಷೇಮವಾಗಿ ಬರಲಿ ಎಂದು ಪ್ರಾರ್ಥಿಸಿದ್ದರು.
ಶರತ್ ಬಾಬು 1973ರಲ್ಲಿ ರಾಮರಾಜ್ಯಂ ಅನ್ನೋ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಕೆಲವು ಚಿತ್ರಗಳಲ್ಲಿ ಹೀರೋ ಆಗಿಯೂ ನಟಿಸಿದ್ದರು. 9 ಬಾರಿ ನಂದಿ ಪ್ರಶಸ್ತಿ ಪಡೆದಿದ್ದ ಶರತ್ ಬಾಬು, ಕನ್ನಡದಲ್ಲಿ 14 ಚಿತ್ರಗಳಲ್ಲಿ ನಟಿಸಿದ್ದರು. ತುಳಸಿದಳ ಚಿತ್ರದ ಮೂಲಕ ಕನ್ನಡಕ್ಕೆ ಬಂದ ಶರತ್ ಬಾಬು ಅವರನ್ನು, ಕನ್ನಡಿಗರು ಹೃದಯಕ್ಕೆ ಹತ್ತಿರ ಮಾಡಿಕೊಂಡಿದ್ದು ಅಮೃತವರ್ಷಿಣಿ ಚಿತ್ರದ ಹೇಮಂತ್ ಪಾತ್ರದಿಂದ. ಇದೀಗ ತೆರೆಗೆ ಬರುತ್ತಿರುವ ಮತ್ತೆ ಮದುವೆ ಚಿತ್ರದಲ್ಲಿಯೂ ಶರತ್ ಬಾಬು ನಟಿಸಿದ್ದಾರೆ. ಕನ್ನಡದಲ್ಲಿ ತುಳಸಿದಳ, ಅಮೃತವರ್ಷಿಣಿ ಅಲ್ಲದೆ ಕಂಪನ, ರಣಚಂಡಿ, ಉಷಾ, ಆರ್ಯನ್, ನಮ್ಮೆಜಮಾನ್ರು, ಜನುಮದಾತ, ನೀಲ, ಹೃದಯಾ ಹೃದಯಾ. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು.