ರಾಜ್ ಬಿ.ಶೆಟ್ಟಿ ಟೋಬಿಯ ಕಥೆಗಳನ್ನು ಹಂಚಿಕೊಂಡಿದ್ದಾರೆ. ಚಿತ್ರದ ಟ್ರೇಲರ್ ಬೊಂಬಾಟ್ ಆಗಿ ಹಿಟ್ ಆದ ಬೆನ್ನಲ್ಲೇ ಟೋಬಿಯ ಒಂದಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಟೋಬಿ ಚಿತ್ರಕ್ಕೆ ಕಥೆ ಬರೆದಿರೋದು ಟಿಕೆ ದಯಾನಂದ್. ಬೆಲ್ ಬಾಟಂ ಖ್ಯಾತಿಯ ಟಿಕೆ ದಯಾನಂದ್. ಟೋಬಿ ಕಥೆಯನ್ನು ಮೊದಲು ಅಪ್ಪುಗೆ ಹೇಳಿದ್ದರಂತೆ. ಅಶ್ವಿನಿಯವರೂ ಇದ್ದರಂತೆ. ಗ್ರಾಮಾಯಣ ಡೈರೆಕ್ಟರ್ ದೇವನೂರು ಚಂದ್ರು ಅವರ ಜೊತೆ ಅಪ್ಪು ಅವರ ಆಫೀಸಿಗೆ ಹೋಗಿದ್ದೆ.
ಸುಮಾರು ಎರಡೂವರೆ ಗಂಟೆ ಇಡೀ ಕಥೆಯನ್ನು ಕೇಳಿದ ಅಪ್ಪು ಸರ್, ಎಮೋಷನಲಿ ಕಥೆ ಚೆನ್ನಾಗಿದೆ. ಭಾವನೆಗಳಂತೂ ಕಿತ್ತು ತಿನ್ನುವಂತಿವೆ. ಆದರೆ ನಾನೀಗ ಫ್ಯಾಮಿಲಿ & ಯೂತ್ಗೆ ಹೆಚ್ಚು ಕನೆಕ್ಟ್ ಆಗಿರುವಂತಹ ನಟ. ನನ್ನ ವೃತ್ತಿ ಬದುಕಿನ ಈ ಘಟ್ಟದಲ್ಲಿ ಇಂಥದ್ದೊಂದು ಪಾತ್ರ ಮಾಡಿದರೆ, ಪ್ರೇಕ್ಷಕರು ರಿಸೀವ್ ಮಾಡ್ತಾರಾ ಅನ್ನೋ ಡೌಟು ಇದೆ ನಂಗೆ. ಸದ್ಯಕ್ಕೆ ಇಂತಹ ಪ್ರಯೋಗ ಮಾಡೋದಕ್ಕೆ ಆಗಲ್ಲ ಎಂದಿದ್ದರು. ನಂತರ ಈ ಕಥೆಯನ್ನು ರಿಷಬ್ ಶೆಟ್ಟಿಯವರಿಗೂ ಹೇಳಿದ್ದರು. ಅವರು ಬೇರೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಕಾರಣ ಆಗಲಿಲ್ಲ, ಕೊನೆಗೆ ಅದು ರಾಜ್ ಬಿ.ಶೆಟ್ಟಿ ಅವರಿಗೆ ದಕ್ಕಿತು ಎಂದಿದ್ದಾರೆ. ಅಷ್ಟೇ ಅಲ್ಲ, ತಮನ್ನಾ ಭಾಟಿಯಾ ಅವರಿಗೂ ಈ ಕಥೆ ಇಷ್ಟವಾಗಿತ್ತಂತೆ.
ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸಂಸ್ಥೆ ನಡೆಸುವ ಕಥಾ ಸ್ಪರ್ಧೆಯಲ್ಲಿ ನಾನು ಬರೆದಿದ್ದ ಈ 'ಟೋಬಿ' ಕಥೆಯನ್ನೂ ಕಳಿಸಿದ್ದೆ. ಅಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳು ಬಂದಿದ್ದವು. ಆಯುಷ್ಮಾನ್ ಖುರಾನಾ, ಕುಬ್ರಾ ಸೇಠ್, ರಾಜ್ಕುಮಾರ್ ರಾವ್ ಮತ್ತು ತಮನ್ನಾ ಭಾಟಿಯಾ ಈ ಕಥಾ ಸ್ಪರ್ಧೆಯ ಜಡ್ಜ್ ಆಗಿದ್ದರು. ನನಗೆ ಅವಾರ್ಡ್ ಬರಲ್ಲ ಎಂದುಕೊಂಡೇ ನಾನು ಅಂದಕೊಂಡಿದ್ದೆ. ಲಕ್ಷಾಂತರ ಕಥೆಗಳ ಮಧ್ಯೆ 'ಟೋಬಿ' ಕಥೆ ಆಯ್ಕೆಯಾಗಿ, ಅದಕ್ಕೆ ಪ್ರಶಸ್ತಿ ಬಂತು. ಆಗ ತಮನ್ನಾ ಅವರು, 'ನೀನು ಈ ಕಥೆಯನ್ನು ಯಾಕೆ ಬರೆದೆಯೋ, ಏನಕ್ಕೆ ಬರೆದೆಯೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನನ್ನು ತುಂಬ ಡಿಸ್ಟರ್ಬ್ ಮಾಡ್ತು ಎಂದಿದ್ದರು. ಆ ಟೋಬಿ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾನೆ' ಅಂತ ಟಿಕೆ ದಯಾನಂದ ಅವರು ತಿಳಿಸಿದ್ದಾರೆ.
ಅಪ್ಪು, ತಮನ್ನಾ ಭಾಟಿಯಾ, ರಿಷಬ್ ಶೆಟ್ಟಿ.. ಇವರಿಗೆಲ್ಲ ಇಷ್ಟವಾಗಿದ್ದ ಟೋಬಿ, ಆಗಸ್ಟ್ 25ಕ್ಕೆ ತೆರೆಗೆ ಬರುತ್ತಿದೆ. ಬಾಸಿಲ್ ನಿರ್ದೇಶನದ ಚಿತ್ರಕ್ಕೆ ರಾಜ್ ಬಿ.ಶೆಟ್ಟಿಯವರೇ ಹೀರೋ ಕಂ ಪ್ರೊಡ್ಯೂಸರ್. ಚೈತ್ರಾ ಆಚಾರ್, ಸಂಯುಕ್ತ ಹೊರನಾಡು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.