` appu express, - chitraloka.com | Kannada Movie News, Reviews | Image

appu express,

  • ಅಪ್ಪು ಎಕ್ಸ್`ಪ್ರೆಸ್ : ಕೊಟ್ಟ ಮಾತು ಉಳಿಸಿಕೊಂಡ ಯಶ್, ಕೆವಿಎನ್ ವೆಂಕಟ್, ಚಿರಂಜೀವಿ, ಸೂರ್ಯ

    ಅಪ್ಪು ಎಕ್ಸ್`ಪ್ರೆಸ್ : ಕೊಟ್ಟ ಮಾತು ಉಳಿಸಿಕೊಂಡ ಯಶ್, ಕೆವಿಎನ್ ವೆಂಕಟ್, ಚಿರಂಜೀವಿ, ಸೂರ್ಯ

    ಸಜ್ಜನಿಕೆಯಿಂದ, ಧಾರಾಳ ಮನಸ್ಸಿನಿಂದ, ಎಂದೆಂದಿಗೂ ಮರೆಯಲಾಗದ ನೆನಪಾಗಿರುವವರು ನಮ್ಮೆಲ್ಲರ ಕಣ್ಮಣಿ ಡಾ. ಪುನೀತ್ ರಾಜ್ಕುಮಾರ್. ಅವರು ಯಾವಾಗಲೂ ನಮ್ಮೊಂದಿಗೆ ಇರಬೇಕೆಂದರ, ಅವರು ಮಾಡುತ್ತಿದ್ದ ಕೆಲಸಗಳನ್ನು ಮುಂದುವರಿಸುವುದರಿಂದ ಮಾತ್ರ ಸಾಧ್ಯ. ಆ ಆಶಯದಿಂದ, ಆ ಕನಸಿನಿಂದ ಶುರುವಾಗಿದ್ದು ಅಪ್ಪು ಎಕ್ಸ್ಪ್ರೆಸ್ ಆಂಬುಲೆನ್ಸ್. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಒಂದೊಂದು ಈ ಆಂಬುಲೆನ್ಸ್ ಇರಬೇಕು ಎಂಬುದು ನನ್ನ ಮತ್ತು ನನ್ನ ಪ್ರಕಾಶ್ ರಾಜ್ ಫೌಂಡೇಷನ್ನ ಕನಸು. ಮೈಸೂರಿನಲ್ಲಿ ಮೊದಲ ಆಂಬುಲೆನ್ಸ್ ಶುರು ಮಾಡಿದೆವು. ಮುಂದಿನ ಭಾಗವಾಗಿ ಐದು ಆಂಬುಲೆನ್ಸ್ ನಮ್ಮ ಮುಂದಿವೆ. ಬೀದರ್, ಕಲಬುರಗಿ, ಉಡುಪಿ, ಕೊಳ್ಳೆಗಾಲ, ಕೊಪ್ಪಳ ಜಿಲ್ಲೆಗಳಿಗೆ ನೀಡಲಾಗಿದೆ.

    ಹೀಗೊಂದು ವಿಡಿಯೋ ಹೊರಬಿಟ್ಟಿರುವ ಪ್ರಕಾಶ್ ರೈ ಈ ಕನಸಿನಲ್ಲಿ ನಾನೀಗ ಒಬ್ಬನೇ ಇಲ್ಲ ಎಂದಿದ್ದಾರೆ. ಅಪ್ಪು ನಿಧನದ ನಂತರ ನಟ ಪ್ರಕಾಶ್ ರೈ ಮೈಸೂರಿನಲ್ಲಿ ತಮ್ಮ ಪ್ರಕಾಶ್ ರಾಜ್ ಫೌಂಡೇಷನ್ ಮೂಲಕ 'ಪವರ್ ಸ್ಟಾರ್' ಡಾ. ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದರು. ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ 'ಅಪ್ಪು ಎಕ್ಸ್ಪ್ರೆಸ್' ಹೆಸರಿನ ಆಂಬುಲೆನ್ಸ್ ಸೇವೆ ನೀಡುವುದು ಅವರ ಉದ್ದೇಶವಾಗಿತ್ತು. ಗಂಧದ ಗುಡಿ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಯಶ್ ಆಂಬುಲೆನ್ಸ್ ಕೊಡುವ ನಿಮ್ಮ ಉದ್ದೇಶಕ್ಕೆ ನಮ್ಮ ಸಹಕಾರವೂ ಇದೆ ಎಂದಿದ್ದರು. ಯಶ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್‍ನ ವೆಂಕಟ್ ಕೂಡಾ ಕೈ ಜೋಡಿಸಿದ್ದರು.

    ಈ ಸಲ ಈ ಕನಸು ನನಸಾಗಲು ನಾನೊಬ್ಬನೇ ಕಾರಣ ಅಲ್ಲ. ನಮ್ಮ ಜೊತೆಗೆ 'ಮೆಗಾ ಸ್ಟಾರ್' ಚಿರಂಜೀವಿ, ಸೋದರ ತಮಿಳು ನಟ ಸೂರ್ಯ ಮತ್ತು ಬಹಳ ದೊಡ್ಡ ಬೆಂಬಲವಾಗಿ ನಿಂತಿರುವವರು ನಮ್ಮ ಪ್ರೀತಿಯ ಯಶ್ ಮತ್ತು ಅವರ ಸ್ನೇಹಿತ ವೆಂಕಟ್. 'ಪ್ರಕಾಶ್ ಸರ್, ನಿಮ್ಮೊಬ್ಬರದ್ದೇ ಕನಸಲ್ಲ. ಇನ್ಮೇಲೆ ಆ ಭಾರ ನಂದು ಕೂಡ ಅಂತ ಬಹಳ ದೊಡ್ಡಸ್ತಿಕೆ ಮತ್ತು ಧಾರಾಳ ಮನಸ್ಸನ್ನು ಮೆರೆದವರು ನಟ ಯಶ್ ಅವರು ಮತ್ತು ಅವರ  ಯಶೋಮಾರ್ಗ ಎಂದಿರುವ ಪ್ರಕಾಶ್ ರೈ ಇದನ್ನು ಒಂದು ದೊಡ್ಡ ಕಾರ್ಯಕ್ರಮ ಮಾಡಿ ಹೇಳಬಹುದಿತ್ತು. ಆದರೆ ಆ ಕಾರ್ಯಕ್ರಮಕ್ಕೆ ಮಾಡುವ ಖರ್ಚಿನಲ್ಲಿ ಇನ್ನೊಂದು ಆಂಬುಲೆನ್ಸ್ ಸಿಗುತ್ತೆ. ಹೀಗಾಗಿ ನಾನು ಮತ್ತು ಯಶ್ ಕಾರ್ಯಕ್ರಮ ಬೇಡ ಎಂಬ ತೀರ್ಮಾನಕ್ಕೆ ಬಂದೆವು ಎಂದಿದ್ದಾರೆ ಪ್ರಕಾಶ್ ರೈ.

    ಜೊತೆಗೆ ಇದರ ಹಿಂದೆ ರಾಜಕೀಯ ಇದೆ ಎಂಬ ಆರೋಪವೂ ಕೇಳಿ ಬಂದಿದ್ಯಂತೆ. ಇದಕ್ಕೆ ಪ್ರಕಾಶ್ ರೈ ಕೊಡುವ ಉತ್ತರ ಇದರ ಹಿಂದೆ ರಾಜಕಾರಣ ಇದೆಯಾ ಅಂತ ಕೇಳೋರು, ಕುಹಕ ಮಾತಾಡೋರು ಇರ್ತಾರೆ, ಇರಲಿ. ಹೌದು, ಇದು ರಾಜಕಾರಣನೇ. ನನ್ನ ಮತ್ತು ಯಶ್ನ ರಾಜಕಾರಣ. ಪ್ರೀತಿಯನ್ನು ಹಂಚುವ ಮಾನವೀಯತೆಯನ್ನು ಮೆರೆಯುವ, ನಮ್ಮೆಲ್ಲರ ಪ್ರೀತಿಯ ಪುನೀತ್ ರಾಜ್ಕುಮಾರ್ ಅವರನ್ನು ಸಂಭ್ರಮಿಸುವ ರಾಜಕಾರಣ. ಇದು ಪ್ರಕಾಶ್ ರೈ ಕೊಟ್ಟಿರುವ ಉತ್ತರ.