` daniel balaji, - chitraloka.com | Kannada Movie News, Reviews | Image

daniel balaji,

 • ಯಶ್ ಮಾಡಿದ್ದ ದೇವರ ಕೆಲಸ ಇವಾಗ ಗೊತ್ತಾಯ್ತು..!

  ಯಶ್ ಮಾಡಿದ್ದ ದೇವರ ಕೆಲಸ ಇವಾಗ ಗೊತ್ತಾಯ್ತು..!

  ಯಶ್ ಕೇವಲ ನಟರಲ್ಲ. ಸಮಾಜ ಸೇವೆಯಲ್ಲೂ ಮುಂದಿರುತ್ತಾರೆ. ಅವರ ಯಶೋಮಾರ್ಗದ ಸೇವೆಯೇ ಅದಕ್ಕೆ ಉದಾಹರಣೆ. ಯಶೋಮಾರ್ಗದ ಮೂಲಕ ಹಲವು ಕೆರೆ, ಕಲ್ಯಾಣಿಗಳ ಜೀರ್ಣೋದ್ಧಾರ ಮಾಡಿಸಿರುವ ಯಶ್, ಕೊರೊನಾ ಸಂಕಷ್ಟದಲ್ಲಿ ಚಿತ್ರರಂಗದ ಕಿರಿಯ ಕಲಾವಿದರು, ತಂತ್ರಜ್ಞರ ನೆರವಿಗೆ ಬಂದಿದ್ದರು. ಇದೀಗ ಅವರು ಮಾಡಿದ್ದ ಮತ್ತೊಂದು ದೇವರ ಕೆಲಸ ಬೆಳಕಿಗೆ ಬಂದಿದೆ.

  ಡೇನಿಯಲ್ ಬಾಲಾಜಿ. ತಮಿಳು ನಟ. ವಿಲನ್ ಪಾತ್ರಗಳಲ್ಲಿ ಹೆಚ್ಚು ಫೇಮಸ್. ವಡಚೆನ್ನೈ, ಪೊಲ್ಲದವನ್ ಮತ್ತು ವಡಚೆನ್ನೈ ಮುಂತಾದ ಚಿತ್ರಗಳಲ್ಲಿನ ಬಾಲಾಜಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರು ಧನುಷ್ ಅವರ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಜೊತೆ ಕಿರಾತಕ ಚಿತ್ರದಲ್ಲಿಯೂ ನಟಿಸಿದ್ದರು. ಹೀರೋಯಿನ್ ಅಣ್ಣನ ಪಾತ್ರದಲ್ಲಿ ನಟಿಸಿದ್ದವರೇ ಈ ಡೇನಿಯಲ್ ಬಾಲಾಜಿ.

  ಕ್ರಿಶ್ಚಿಯನ್ ಆದರೂ ಡೇನಿಯಲ್ ಬಾಲಾಜಿ ಅವರ ತಾಯಿಗೆ ಅಂಗಲಾ ಪರಮೇಶ್ವರಿ ದೇವಸ್ಥಾನ ಕಟ್ಟಿಸುವ ಆಸೆಯಿತ್ತು. ಆ ದೇವಸ್ಥಾನ ಕಟ್ಟಿಸುವ ಕೆಲಸಕ್ಕಾಗಿ ಹಲವು ಸಿನಿಮಾಗಳನ್ನು ಕೈಬಿಟ್ಟು ದೇವಸ್ಥಾನ ಕಟ್ಟಿಸುವ ಕೆಲಸಕ್ಕೆ ನಿಂತಿದ್ದರು ಡೇನಿಯಲ್ ಬಾಲಾಜಿ. ಆ ಸಂದರ್ಭದಲ್ಲಿಯೇ ಬಾಲಾಜಿ ಅವರಿಗೆ ಯಶ್ ಅವರು ಫೋನ್ ಮಾಡಿದ್ದರಂತೆ.

  4 ವರ್ಷಗಳ ಹಿಂದೆ ಯಶ್ ಅವರಿಂದ ಸಿನಿಮಾದಲ್ಲಿ ನಟಿಸುವಂತೆ ಕರೆ ಬಂದಿತ್ತು. ಆ ಸಮಯದಲ್ಲಿ ನಾನು ದೇವಾಲಯದ ನಿರ್ಮಾಣದ ಕೆಲಸ ಮಾಡ್ತಿದ್ದೆ. ಮುಂದಿನ 20 ದಿನಗಳವರೆಗೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ತಿಳಿಸಿದ್ದೆ. ಓಕೆ ಎಂದು ಫೋನ್ ಇಟ್ಟರು ಯಶ್. ಅದಾದ ಕೆಲವೇ ನಿಮಿಷಗಳಲ್ಲಿ ಹಣ ಅಕೌಂಟಿಗೆ ಬಂದಿತ್ತು. ನಾನು ತಕ್ಷಣ ಯಶ್ ಅವರಿಗೆ ನಾನು ಸಿನಿಮಾ ಕಥೆ ಕೇಳಿಲ್ಲ. ನಿರ್ಮಾಪಕರ ಜೊತೆ ಮಾತನಾಡಿಲ್ಲ. ಡೇಟ್ಸ್ ಹೇಳಿಲ್ಲ. ಯಾವುದೂ ಇಲ್ಲದೆ ಅಡ್ವಾನ್ ಯಾಕೆ ಕೊಟ್ಟಿರಿ ಎಂದು ಕೇಳಿದೆ.. ಆಗ ಯಶ್ ನಾನು ಹಣ ಕಳಿಸಿದ್ದು ದೇವಸ್ಥಾನಕ್ಕೆ, ಸಿನಿಮಾಗೆ ಅಲ್ಲ. ಒಳ್ಳೆ ಕೆಲಸ ಮಾಡುತ್ತಿದ್ದೀರಿ. ಶುಭವಾಗಲಿ ಎಂದರು. ಇದೆಲ್ಲವನ್ನೂ ಸ್ವತಃ ಡೇನಿಯಲ್ ಬಾಲಾಜಿ ಈಗ.. 4 ವರ್ಷಗಳ ಬಳಿಕ ಹೇಳಿಕೊಂಡಿದ್ದಾರೆ.