ಎಲ್ಲವೂ ಸರಿಯಾಗಿ ಆಗಿದ್ದರೆ ಇಷ್ಟೊತ್ತಿಗೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ಅಭಿನಯದ ಚಿತ್ರ ತೆರೆಗೆ ಬಂದು ಅದ್ಧೂರಿ ಸಂಭ್ರಮದಲ್ಲಿರಬೇಕಿತ್ತು. ಆಗಲಿಲ್ಲ. ಅದಾದ ಮೇಲೆ ಜಯಣ್ಣ-ಭೋಗೇಂದ್ರ ಸ್ವಲ್ಪ ದಿನ ಮೌನಕ್ಕೆ ಶರಣಾಗಿದ್ದರು. ಪ್ರಾಜೆಕ್ಟ್ ಕೈಬಿಟ್ಟಿರಲಿಲ್ಲ. ಕಥೆ ಬೇರೆಯದನ್ನು ಆಯ್ಕೆ ಮಾಡಿ ದಿನಕರ್ ತೂಗುದೀಪ ನಿರ್ದೇಶನದಲ್ಲೇ ಹೊಸ ಚಿತ್ರ ಘೋಷಿಸಿದ್ದರು. ವಿರಾಟ್ ಹೀರೋ ಆಗಿ ಆಯ್ಕೆಯಾಗಿದ್ದರು. ಈಗ ಚಿತ್ರದ ಟೈಟಲ್ ಲಾಂಚ್ ಆಗಿದ್ದು, ಚಿತ್ರಕ್ಕೆ ರಾಯಲ್ ಎಂದು ಟೈಟಲ್ ಫಿಕ್ಸ್ ಮಾಡಲಾಗಿದೆ. ಚಿತ್ರದ ಟೈಟಲ್ ಲಾಂಚ್ ಮಾಡಿದ್ದು ಅಶ್ವಿನಿ ಪುನೀತ್ ರಾಜಕುಮಾರ್.
ಜಯಣ್ಣ-ಭೋಗೇಂದ್ರ ಬ್ಯಾನರ್‍ನ ಚಿತ್ರದ ಟೈಟಲ್ ಲಾಂಚ್‍ಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದವರು ಹೊಂಬಾಳೆಯ ವಿಜಯ್ ಕಿರಗಂದೂರು. ಲೈಫ್ ಜೊತೆ ಒಂದ್ ಸೆಲ್ಫಿ ನಂತರ ದಿನಕರ್ ನಿರ್ದೇಶಿಸುತ್ತಿರುವ ಚಿತ್ರವಿದು. ಕಿಸ್ ಖ್ಯಾತಿಯ ವಿರಾಟ್‍ಗೆ ದೊಡ್ಡ ಅವಕಾಶವಂತೂ ಇದೆ. ಹೀರೋಯಿನ್ ಆಗಿ ಸಂಜನಾ ಆನಂದ್ ಆಯ್ಕೆಯಾಗಿದ್ದು ಶೀಘ್ರದಲ್ಲೇ ಚಿತ್ರೀಕರಣವೂ ಶುರುವಾಗಲಿದೆ. ಅಂದಹಾಗೆ ಇದು ಜಯಣ್ಣ-ಭೋಗೇಂದ್ರ ನಿರ್ಮಾಣದ 23ನೇ ಸಿನಿಮಾ.