ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 6ನೇ ಸಿನಿಮಾ ಶುರುವಾಗಿದೆ. ಕೆಡಿ. ಒಂದು ಸಿನಿಮಾ ನಡೆಯುತ್ತಿರುವಾಗಲೇ ಇನ್ನೊಂದು ಸಿನಿಮಾ ಸೆಟ್ಟೇರಿರುವುದು ಧ್ರುವ ಸರ್ಜಾ ರೆಕಾರ್ಡ್. ಅತ್ತ ಮಾರ್ಟಿನ್ ತಯಾರಾಗುತ್ತಿರುವಾಗಲೇ ಇತ್ತ ಕೆಡಿ ಸೆಟ್ಟೇರಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್‍ನಲ್ಲಿ ಸಿದ್ಧವಾಗುತ್ತಿರೋ ಸಿನಿಮಾ ಕೆಡಿ. ಸಂಜಯ್ ದತ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ಟೈಟಲ್ ಲಾಂಚ್ ಟೀಸರ್ ರಿಲೀಸ್ ಆಗಿದೆ. ರಾಮಾಯಣ ಹೆಣ್ಣಿಗಾಗಿ.. ಮಹಾಭಾರತ ಮಣ್ಣಿಗಾಗಿ..
ಈಗ ರಕ್ತಕ್ಕಾಗಿ ಯುದ್ಧ ನಡೆಯುತ್ತೆ ಎನ್ನುವ ಖಡಕ್ ಡೈಲಾಗ್.. ಜೈಲಿಂದ ರಿಲೀಸ್ ಆಗಿ ಬರುವ ಧ್ರುವ ಸರ್ಜಾ.. ಧ್ರುವನನ್ನು ಎತ್ತೋಕೆ ಸಾವಿರ ಜನ.. ಸ್ವಾಗತ ಮಾಡೋಕೆ ಲಕ್ಷ ಜನ.. ಬೆಂಕಿ ಶೂಗಳಲ್ಲಿ ಹೆಜ್ಜೆ ಹೆಜ್ಜೆಯಿಟ್ಟು ಹೋಗುವ ಧ್ರುವ ರೌಡಿಯೊಬ್ಬನನ್ನು ಮೂಟೆಯಲ್ಲಿ ಹಾಕಿಕೊಂಡು ಹೊರಡುವ ದೃಶ್ಯದ ಟೀಸರ್.. ಎಂದಿನಂತೆ ಪ್ರೇಮ್ ಸಖತ್ತಾಗಿಯೇ ಮಾಡಿದ್ದಾರೆ. ಧುವ ಸರ್ಜಾ ಖಡಕ್ ವಾಯ್ಸ್ ಇದೆ.
ಈ ಸಿನಿಮಾಗಾಗಿ ಪ್ರೇಮ್ ಹಳೇ ಬೆಂಗಳೂರನ್ನು ಮರುಸೃಷ್ಟಿ ಮಾಡಲಿದ್ದು, ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿ ಬೃಹತ್ ಸೆಟ್ ಒಂದನ್ನು ನಿರ್ಮಾಣ ಮಾಡಲಿದ್ದಾರಂತೆ. ಅರ್ಜುನ್ ಜನ್ಯ ಸಂಗೀತ ನೀಡಲಿರುವ ಈ ಸಿನಿಮಾಗೆ ವಿಲಿಯಂ ಡೇವಿಡ್ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಲಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಕೆಲ ನೈಜ ಘಟನೆಗಳನ್ನು ಇಟ್ಟುಕೊಂಡು ಈ ಕಥೆ ಬರೆಯಲಾಗಿದ್ದು, ಪ್ರೇಮ್ ಅವರ ಕರಿಯರ್ನಲ್ಲಿ ಬಹಳ ದೊಡ್ಡ ಸಿನಿಮಾ ಇದು ಎನ್ನಲಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರೇಮ್ ಈಗಾಗಲೇ ಮೋಹನ್ಲಾಲ್, ಸಂಜಯ್ ದತ್, ವಿಜಯ್ ಸೇತುಪತಿ ಸೇರಿದಂತೆ ಹಲವು ಕಲಾವಿದರನ್ನು ಭೇಟಿ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಧ್ರುವ ಸರ್ಜಾ 6 ನನ್ನ ಲಕ್ಕಿ ನಂಬರ್. ಇದು ನನ್ನ 6ನೇ ಸಿನಿಮಾ. ನನ್ನ ಜನ್ಮದಿನವೂ ಆರು. ಅಲ್ಲದೆ ಇನ್ನು ನನ್ನ ಮಗಳು ಹುಟ್ಟಿದ ನಂತರ ಸೆಟ್ಟೇರುತ್ತಿರುವ ಸಿನಿಮಾ. ಕೆವಿಎನ್ ಮತ್ತು ಪ್ರೇಮ್ ಅದ್ಧೂರಿಯಾಗಿ ಮಾಡುತ್ತಿದ್ದಾರೆ. ನನ್ನ ಕೆರಿಯರ್‍ನಲ್ಲೇ ಇದು ಅದ್ಧೂರಿ ಚಿತ್ರವಾಗಲಿದೆ ಎಂದಿದ್ದಾರೆ ಧ್ರುವ ಸರ್ಜಾ. ಈ ಸಿನಿಮಾಗಾಗಿ ನಾನು ಎಷ್ಟು ಸಮಯ ಬೇಕಾದ್ರೂ ಕೊಡುತ್ತೇನೆ ಎಂದವರು ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ.
ಸಂಜಯ್ ದತ್ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೌಥ್ ಸಿನಿಮಾದಲ್ಲಿ ಎನರ್ಜಿ ಇರುತ್ತೆ. ಪ್ರೇಮ್ ಅವರ ತಲೆಯಲ್ಲಿ ಏನಿದೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಹೊಸದೇನನ್ನೋ ಮಾಡ್ತಾರೆ ಅನ್ನೋ ಕಾನ್ಫಿಡೆನ್ಸ್ ಇದೆ. ಪ್ರೇಮ್ ಹೇಳಿದಂತೆ ನಟಿಸುತ್ತೇನೆ ಎಂದರು ಸಂಜಯ್ ದತ್. ಧ್ರುವ ಸರ್ಜಾ ಸಂಜಯ್ ದತ್ ಕಾಲುಮುಟ್ಟಿ ಆಶೀರ್ವಾದ ಪಡೆದರು.
ಅಂದಹಾಗೆ ಎಲ್ಲ ಭಾಷೆಗಳಲ್ಲೂ ಟೀಸರ್ ಬಿಡುಗಡೆಯಾಗಿದ್ದು ಒಂದೊಂದು ಭಾಷೆಯ ಟೀಸರ್‍ಗೂ ಒಬ್ಬೊಬ್ಬ ಸ್ಟಾರ್ ವಾಯ್ಸ್ ಕೊಟ್ಟಿದ್ಧಾರೆ. ತಮಿಳಿಗೆ ವಿಜಯ್ ಸೇತುಪತಿ, ಮಲಯಾಳಂಗೆ ಮೋಹನ್ ಲಾಲ್, ಹಿಂದಿಗೆ ಸಂಜಯ್ ದತ್ ವಾಯ್ಸ್ ಕೊಟ್ಟಿದ್ದಾರೆ.