` saptami gowda, - chitraloka.com | Kannada Movie News, Reviews | Image

saptami gowda,

 • ಕಾಂತಾರ ದಾಖಲೆಗಳ ಬೇಟೆಗಾರ : 200 ಕೋಟಿ ಕ್ಲಬ್ ಸೇರುತ್ತಾ?

  ಕಾಂತಾರ ದಾಖಲೆಗಳ ಬೇಟೆಗಾರ : 200 ಕೋಟಿ ಕ್ಲಬ್ ಸೇರುತ್ತಾ?

  ಕಾಂತಾರ ಚಿತ್ರದ ಅಬ್ಬರ.. ಆರ್ಭಟ.. ನಿಂತಿಲ್ಲ. ಬಾಕ್ಸಾಫೀಸ್ ಸಂಚಲನ ಗುಳಿಗನ ಆರ್ಭಟದಂತೆಯೇ ಜೋರಾಗಿದೆ. ಪಂಜುರ್ಲಿಯ ದೈವವರೀತಂ.. ಚಿತ್ರದ ಓಟಕ್ಕೆ ಚಿತ್ರರಂಗ ಬೆರಗಾಗಿದೆ. ಚಿತ್ರ ಈಗಾಗಲೇ ಎಲ್ಲ ಭಾಷೆಗಳಲ್ಲೂ 150 ಕೋಟಿ ಕಲೆಕ್ಷನ್ ದಾಟಿ ಮುನ್ನಡೆಯುತ್ತಿದೆ. ಕನ್ನಡದಲ್ಲಿಯೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿರುವುದು ಕಾಂತಾರದ ದಾಖಲೆ.

  ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ಕಾಂತಾರ ಹಿಂದಿಯಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದು. ಹಿಂದಿಯಲ್ಲಿ 20 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮೊದಲ ದಿನಕ್ಕಿಂತ 2ನೇ ದಿನ, 2ನೇ ದಿನಕ್ಕೆ 3ನೇ ದಿನ, 3ನೇ ದಿನಕ್ಕಿಂತ 4ನೇ ದಿನ.. ಹೀಗೆ ಕಲೆಕ್ಷನ್ ಏರುಗತಿಯಲ್ಲೇ ಇದೆ. 8ನೇ ದಿನಕ್ಕೆ 20 ಕೋಟಿ ಕ್ಲಬ್ ಸೇರಿದ್ದು ಹಿಂದಿಯೊಂದರಲ್ಲಿಯೇ 50 ಕೋಟಿ ಗಡಿ ದಾಟುವ ಎಲ್ಲ ಸಾಧ್ಯತೆಗಳೂ ಇವೆ.

  ತೆಲುಗಿನಲ್ಲಿ 25 ಕೋಟಿ ಕಲೆಕ್ಷನ್ ದಾಟಿ ಮುನ್ನಡೆದಿದ್ದರೆ ತಮಿಳಿನಲ್ಲಿ ಹಿಟ್ ಎನಿಸಿಕೊಂಡಿದೆ. ಕಲೆಕ್ಷನ್ ಲೆಕ್ಕ ಸಿಕ್ಕಿಲ್ಲ. ಮಲಯಾಳಂನಲ್ಲಿ ಸೂಪರ್ ಹಿಟ್ ಎನಿಸಿಕೊಳ್ಳುವ ಹಾದಿಯಲ್ಲಿದೆ. ಕನ್ನಡದಲ್ಲಿ 25 ದಿನ ದಾಟಿ ಮುನ್ನಡೆಯುತ್ತಿರುವ ಕಾಂತಾರ ಹೊಂಬಾಳೆಗೆ ಮತ್ತೊಮ್ಮೆ ಯಶಸ್ಸು ತಂದುಕೊಟ್ಟಿದೆ.

 • ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ..

  ಕಾಂತಾರ ನೋಡಿದವರ ಮಾತು : ಅಶ್ವಿನಿ ಪುನೀತ್, ರಮ್ಯಾ, ರಕ್ಷಿತ್ ರಿಂದ ಫ್ಯಾನ್ಸ್ ವರೆಗೆ..

  ಕಾಂತಾರ ನೋಡಿದ ಪ್ರೇಕ್ಷಕರು ಥ್ರಿಲ್ಲಾಗಿದ್ದಾರೆ. ಕಾಡನ್ನು ಉಳಿಸಲು ಹೋರಾಡುವ ಅಧಿಕಾರಿ ಮುರಳೀಧರ್ ಆಗಿ ಕಿಶೋರ್, ಊರಿನ ಪರವಾಗಿ ಶಿವ, ದೇವೇಂದ್ರನ ದುರಾಸೆ, ಅಚ್ಯುತ್, ಫಾರೆಸ್ಟ್ ಗಾರ್ಡ್ ಆಗಿ ಲೀಲಾ..ಮಾನಸಿ ಸುಧೀರ್.. ಎಲ್ಲರೂ ಅದ್ಭುತ ಎನ್ನಿಸುವಂತೆ ನಟಿಸಿದ್ದಾರೆ. ನಿರ್ದೇಶಕರಾಗಿ ರಿಷಬ್ ಶೆಟ್ಟಿ 100ಕ್ಕೆ 100 ಅಂಕ ಗಿಟಿಸಿದರೆ, ನಟನಾಗಿ ಇಡೀ ಚಿತ್ರವನ್ನು ಆವರಿಸಿಕೊಂಡಿದ್ಧಾರೆ.ಅದರಲ್ಲೂ ಕೊನೆಯ 30 ನಿಮಿಷಗಳ ಭೂತದ ಕೋಲದಲ್ಲಿ ದೈವದ ರೂಪದಲ್ಲಿ ಬೆರಗು ಹುಟ್ಟಿಸುತ್ತಾರೆ. ಚಿತ್ರ ನೋಡಿದವರೆಲ್ಲ ಚಿತ್ರಕ್ಕೆ ಶಹಬ್ಬಾಸ್ ಎಂದಿದ್ದಾರೆ.

  ಚಿತ್ರ ಮುಗಿಯುತ್ತಿದ್ದಂತೆ ರಕ್ಷಿತ್ ಶೆಟ್ಟಿ ಕುಪ್ಪಳಿಸಿಕೊಂಡು ಬಂದು ರಿಷಬ್ ಅವರನ್ನು ಅಪ್ಪಿಕೊಂಡು ಅಭಿನಂದಿಸಿದರು.

  ರಕ್ಷಿತ್ ಶೆಟ್ಟಿ : ನನಗೆ ರಿಷಬ್ ಪೂರ್ತಿ ಸಿನಿಮಾವನ್ನು ತೋರಿಸಿರಲಿಲ್ಲ. ಪ್ರೀಮಿಯರ್ ಶೋನಲ್ಲಿಯೇ ನೋಡು ಎಂದಿದ್ದ. ಕನ್ನಡದಲ್ಲಂತೂ ಇಂತಾ ಚಿತ್ರ ಬಂದಿರಲಿಲ್ಲ. ಹೊಸತನದ ಚಿತ್ರ. ಎಲ್ಲರೂ ಸಿನಿಮಾ ನೋಡಿ. ಅಷ್ಟೆ.

  ಅನೂಪ್ ಭಂಡಾರಿ : ಹೀರೋ ಮತ್ತು ಡೈರೆಕ್ಟರ್. ಇಬ್ಬರಲ್ಲಿ ಯಾರು ಬೆಟರ್ ಎಂದು ಹೇಳೋದು ಕಷ್ಟವಾಗುತ್ತಿದೆ.

  ವಿನಯ್ ರಾಜಕುಮಾರ್ : ಏನು ಹೇಳಬೇಕು ಗೊತ್ತಾಗುತ್ತಿಲ್ಲ. ತುಂಬಾ ಒಳ್ಳೆಯ ಸಿನಿಮಾ.

  ಅನುಶ್ರೀ : ಕಾಂತಾರ ಈ ವರ್ಷದ ಕನ್ನಡದ ಹೆಮ್ಮೆ. ಭಾರತದ ಹೆಮ್ಮೆ.

  ಸಿಂಪಲ್ ಸುನಿ : ಕನ್ನಡದ ಮಣ್ಣಿನ ಚಿತ್ರ. ದೈವಿಕ ಚಿತ್ರ. ಅನುಭವಿಸುವಂತ ಚಿತ್ರ. ಚಿತ್ರಕ್ಕೆ ಹೋಗುವಾಗ ಕೈಮುಗಿದು ಹೋಗಬೇಕು. ಕೈ ಮುಗಿದೇ ಹೊರಬರಬೇಕು.

  ಸಂತೋಷ್ ಆನಂದರಾಮ್ : ಕೊನೆಯ 20 ನಿಮಿಷಗಳಂತೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ.

  ಅಶ್ವಿನಿ ಪುನೀತ್ ರಾಜಕುಮಾರ್ : ನ್ಯೂನತೆಗಳೇ ಕಾಣದ ಸಿನಿಮಾ. ಕನ್ನಡ ಚಿತ್ರರಂಗದ ಕಿರೀಟಕ್ಕೊಂದು ಗರಿ ಕಾಂತಾರ. ಹೊಂಬಾಳೆ ಮತ್ತು ರಿಷಬ್ ಶೆಟ್ಟಿಯವರ ಶ್ರಮ ಎದ್ದು ಕಾಣುತ್ತದೆ. ಖಂಡಿತಾ ಪ್ರತಿಯೊಬ್ಬ ಕನ್ನಡಿಗರೂ ನೋಡಬೇಕಾದ ಸಿನಿಮಾ.

  ಯುವ ರಾಜಕುಮಾರ್ : ಚಿತ್ರದ ಕ್ಲೈಮಾಕ್ಸ್ ಅಂತೂ ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಅದ್ಭುತ ಸಿನಿಮಾ.

  ರಮ್ಯಾ : ಕನ್ನಡದಲ್ಲಿ ಇಂತಹ ಚಿತ್ರಗಳು ಬರುತ್ತಿರುವುದು ನೋಡುವುದೇ ಒಂದು ಖುಷಿ. ಇಂತಹ ಚಿತ್ರ ಎಲ್ಲಿಯೂ ಆಗಿಲ್ಲ. ಹೊಂಬಾಳೆ, ರಿಷಬ್ ಶೆಟ್ಟಿ ಅದ್ಭುತ ಸಿನಿಮಾ ಕೊಟ್ಟಿದ್ದಾರೆ.

  ಒಟ್ಟಿನಲ್ಲಿ ಚಿತ್ರ ನೋಡಿದ ಪ್ರೇಕ್ಷಕರು ಮತ್ತು ಸೆಲಬ್ರಿಟಿಗಳಂತೂ ಕುಣಿದು ಕುಪ್ಪಳಿಸುತ್ತಿದ್ದಾರೆ ಥಿಯೇಟರಿನಲ್ಲಿ ಕ್ಷಣ ಕ್ಷಣವೂ ರಕ್ಷಿತ್ ಶೆಟ್ಟಿ ಸೀಟಿನಿಂದ ಎದ್ದು ನಿಂತು ಎಕ್ಸೈಟ್ ಆಗುತ್ತಿದ್ದರು. ಅದೇ ರೀತಿಯಲ್ಲಿ ಪ್ರೇಕ್ಷಕರೂ ಇದ್ದರು.

 • ಕಾಂತಾರ ಹಿಂದಿಗೆ ರೆಡಿ : ನಾಳೆ ಟ್ರೇಲರ್

  ಕಾಂತಾರ ಹಿಂದಿಗೆ ರೆಡಿ : ನಾಳೆ ಟ್ರೇಲರ್

  ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿರುವ ಕಾಂತಾರಾ ಹಿಂದಿಗೆ ಹೊರಡೋಕೆ ಸಜ್ಜಾಗಿದೆ. ರಿಷಬ್ ಶೆಟ್ಟಿಯವರ ಕಾಂತಾರ ಯಾತ್ರೆ, ಥಿಯೇಟರ್ಗಳಲ್ಲಿ ಜಾತ್ರೆ ಸೃಷ್ಟಿಸಿದೆ. ಹೊಂಬಾಳೆ ಇದನ್ನು ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಯೋಜನೆ ಹೊಂದಿರಲಿಲ್ಲ. ರಿಷಬ್ ಶೆಟ್ಟಿಯವರಿಗೂ ಇದು ಕನ್ನಡದ ನೆಲದ ಸಂಸ್ಕೃತಿ ಸಿನಿಮಾ. ಬೇರೆಯವರಿಗೆ ರೀಚ್ ಆಗುವುದು ಕಷ್ಟ ಎಂದಿದ್ದರು. ಆದರೆ ಚಿತ್ರ ಇಲ್ಲಿ ಹಿಟ್ ಆಗುತ್ತಿದ್ದಂತೆಯೇ ಶುರುವಾದ ಬೇಡಿಕೆ ಕಾಂತಾರವನ್ನೂ ಈಗ ಪ್ಯಾನ್ ಇಂಡಿಯಾ ಸಿನಿಮಾ ಆಗಿಸಲು ಹೊರಟಿದೆ. ಬಹುಭಾಷೆಗಳಿಗೆ ಡಬ್ ಮಾಡಲು ಬೇಡಿಕೆ ಜಾಸ್ತಿಯಾಗಿದೆ. ಇದೀಗ ಕಾಂತಾರಾ ಹಿಂದಿ ಟ್ರೈಲರ್ ರಿಲೀಸ್ ಮಾಡಲು ಕೌಂಟ್ ಡೌನ್ ಶುರುವಾಗಿದೆ.

  ಸೆಪ್ಟೆಂಬರ್ 30ರಂದು ರಿಲೀಸ್ ಆಗಿರುವ `ಕಾಂತಾರಾ’ ಸಿನಿಮಾ ಎಲ್ಲ ಕಡೆಯಲ್ಲೂ  ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಮೊದಲ ವಾರ ರಿಲೀಸ್ ಆದ ಚಿತ್ರಮಂದಿರಗಳಿಗಿಂತ ಮೂರು ಪಟ್ಟು ಹೆಚ್ಚು ಶೋ, ಥಿಯೇಟರುಗಳು ಸಿಕ್ಕಿವೆ. ಎಲ್ಲವೂ ಹೌಸ್ಫುಲ್. ಒಂದು ಮೂಲದ ಪ್ರಕಾರ ಮೊದಲ ವಾರದ ಕಲೆಕ್ಷನ್ 50 ಕೋಟಿ ದಾಟಿದೆ.

  ಕಾಂತಾರಾ’ ಚಿತ್ರದ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9ರಂದು ಅಂದರೆ ನಾಳೆ ಬೆಳಗ್ಗೆ 9.10ಕ್ಕೆ ರಿಲೀಸ್ ಆಗಲಿದೆ. ನಂತರ ಹಂತ ಹಂತವಾಗಿ ತಮಿಳು, ತೆಲುಗು, ಮಲಯಾಳಂಗೂ ಡಬ್ ಆಗಲಿದೆ. 

 • ಕಾಂತಾರಕ್ಕೆ ಪುನೀತ್ ಸೂಚಿಸಿದ ಹೆಸರು ರಿಷಬ್ ಶೆಟ್ಟಿ..!

  ಕಾಂತಾರಕ್ಕೆ ಪುನೀತ್ ಸೂಚಿಸಿದ ಹೆಸರು ರಿಷಬ್ ಶೆಟ್ಟಿ..!

  ಪುನೀತ್ ರಾಜಕುಮಾರ್ ಹೊಂಬಾಳೆಯನ್ನು ತಮ್ಮ ಸಂಸ್ಥೆಯೆಂದೇ ಭಾವಿಸಿದ್ದರು. ಅದನ್ನು ಹಲವೆಡೆ ಹೇಳಿಕೊಂಡೂ ಇದ್ದರು. ಹೋಮ್ ಬ್ಯಾನರ್ ನಂತೆಯೇ ಇತ್ತು. ಹೀಗಾಗಿಯೇ ಮೂರು ಚಿತ್ರಗಳನ್ನು ಮಾಡಿದ್ದರು. ನಾಲ್ಕನೇ ಚಿತ್ರ ಸೆಟ್ಟೇರಿತ್ತು. ವಿಧಿಯಾಟ ಬಿಡಿ. ಆದರೆ.. ಈಗ ರಿಷಬ್ ಶೆಟ್ಟಿಯವರ ಕಾಂತಾರ ಚಿತ್ರಕ್ಕೂ ಅವರೇ ಹೀರೋ ಆಗಬೇಕಿತ್ತಂತೆ.

  ಕಾಂತಾರ ಚಿತ್ರದ ಸ್ಕ್ರಿಪ್ಟ್ ಓಕೆ ಆದಾದ ರಿಷಬ್ ಶೆಟ್ಟಿಯವರ ತಲೆಯಲ್ಲಿದ್ದುದು ಪುನೀತ್ ಹೆಸರು. ಚಿತ್ರದ ಕಥೆ ಪುನೀತ್ ಅವರಿಗೆ ಇಷ್ಟವಾದರೂ ಡೇಟ್ ಕ್ಲಾಷ್ ಆಗುತ್ತಿತ್ತು. ಏಕೆಂದರೆ ಒಂದು ನಿರ್ದಿಷ್ಟ ಸಮಯದಲ್ಲಿಯೇ ಚಿತ್ರದ ಚಿತ್ರೀಕರಣ ಆಗಬೇಕಿತ್ತು. ಅದಕ್ಕೆ ಸಮಯ ಹೊಂದಿಸೋಕೆ ಆಗುತ್ತಿರಲಿಲ್ಲ. ಹೀಗಾಗಿ ಪುನೀತ್ ಅವರೇ ರಿಷಬ್ ಶೆಟ್ಟಿಯವರ ಹೆಸರು ಸೂಚಿಸಿದರು. ರಿಷಬ್ ಶೆಟ್ಟಿ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ ಕಾರ್ತಿಕ್ ಗೌಡ.

  ಸೆಪ್ಟೆಂಬರ್ 30ರಂದು ಕಾಂತಾರ ರಿಲೀಸ್ ಆಗುತ್ತಿದ್ದು, ಕನ್ನಡದಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್ ನಟಿಸಿರುವ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತವಿದೆ.

 • ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

  ಕಾಂತಾರದ ಮ್ಯೂಸಿಕ್ ಕದ್ದಿದ್ದಲ್ಲ

  ಕಾಂತಾರ ಚಿತ್ರ ಹಿಟ್ ಆದ ಕೆಲವು ದಿನಗಳಲ್ಲೇ ಈ ಸುದ್ದಿ ಹರಿದಾಡೋಕೆ ಶುರುವಾಯ್ತು. ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರದ ಹೈಲೈಟ್ಸ್‍ಗಳಲ್ಲಿ ಒಂದು ಮ್ಯೂಸಿಕ್. ಅಜನೀಶ್ ಲೋಕನಾಥ್ ಮ್ಯೂಸಿಕ್ ಗುಂಗು ಹಿಡಿಸುತ್ತದೆ. ಚಿತ್ರದ ಕಥೆಗೆ ಕಥೆಯ ವೇಗಕ್ಕೆ ಹೊಂದಿಕೊಂಡು ಹೋಗುವ ಪ್ರೇಕ್ಷಕರನ್ನು ಬೇರೆಯದೇ ಲೋಕಕ್ಕೆ ತೆಗೆದುಕೊಂಡು ಹೋಗುವುದು ಅಜನೀಶ್ ಲೋಕನಾಥ್ ಸಂಗೀತ. ಚಿತ್ರದಲ್ಲಿ ವರಾಹ ರೂಪಂ.. ಹಾಡು ಚಿತ್ರಕ್ಕೊಂದು ಕಿರೀಟವಿದ್ದಂತೆ. ಆದರೆ ಅದೇ ಹಾಡನ್ನು ಕದ್ದಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

  5 ವರ್ಷಗಳ ಹಿಂದೆ ಮಲಯಾಳಂನಲ್ಲಿ ನವರಸಂ ಅನ್ನೋ ಆಲ್ಬಂ ಬಂದಿತ್ತು. ಅದರಲ್ಲಿ ಬರುವ ಥೈಕ್ಕುಡಂ ಬ್ರಿಡ್ಜ್‍ನ ಮ್ಯೂಸಿಕ್  ಹಾಗೂ ಕಾಂತಾರದ ವರಾಹ ರೂಪಂ ಮ್ಯೂಸಿಕ್ ಎರಡೂ ಒಂದೇ ಎನ್ನುವುದು ಆರೋಪ.

  ಆ ಹಾಡನ್ನು ನಾನೂ ಕೇಳಿದ್ದೇನೆ. ಸ್ಫೂರ್ತಿಗೊಂಡಿದ್ದೇನೆ. ಆದರೆ ಈ ವರಾಹ ರೂಪಂ ಹಾಡು.. ಕದ್ದಿದ್ದಲ್ಲ ಎನ್ನುವುದು ಅಜನೀಶ್ ಲೋಕನಾಥ್ ಪ್ರತಿಕ್ರಿಯೆ. ಅಲ್ಲದೆ ನವರಸಂನ ಹಾಡಿನಲ್ಲಿರುವ ತೋಡಿ, ವರಾಳಿ ಹಾಗೂ ಮಖಾರಿ ರಾಗಗಳನ್ನೇ ಬಳಸಿದ್ದೇವೆ. ಹೀಗಾಗಿ ಸಂಗೀತದ ಹೋಲಿಕೆಯ ಭಾವನೆ ಬರುತ್ತದೆ. ಆದರೆ ಸಂಯೋಜನೆ ಬೇರೆ. ಟ್ಯೂನ್ ಕೂಡಾ ಬೇರೆ. ಕಂಪೋಸಿಷನ್ ಬೇರೆ. ರಾಗಗಳ ಛಾಯೆ ಒಂದೇ ರೀತಿ ಇರುತ್ತಾದ ಕಾರಣ ಹಾಗೆ ಅನಿಸುತ್ತದೆ. ಆದರೆ ಒಬ್ಬ ಸಂಗೀತ ನಿರ್ದೇಶಕನಿಗೆ ಅದರ ಸೂಕ್ಷ್ಮಗಳು ಅರ್ಥವಾಗುತ್ತವೆ ಎಂದಿದ್ದಾರೆ ಅಜನೀಶ್ ಲೋಕನಾಥ್.

 • ಕಾಂತಾರದ ಲೀಲಾ ಕಥೆ ಕೇಳಿ

  ಕಾಂತಾರದ ಲೀಲಾ ಕಥೆ ಕೇಳಿ

  ಲೀಲಾ. ಕಾಂತಾರದ ಸಿಂಗಾರ ಸಿರಿಯೇ.. ಆಕೆ. ಫಾರೆಸ್ಟ್ ಗಾರ್ಡ್ ಆಗಬೇಕು ಅನ್ನೋದು ಅವಳ ಕನಸು ಮತ್ತು ಗುರಿ. ಕನಸು ಈಡೇರುತ್ತೆ. ಫಾರೆಸ್ಟ್ ಗಾರ್ಡ್ ಆದ ನಂತರ ಹಳ್ಳಿಯವರು ಮತ್ತು ಕಾಡಿನ ಅಧಿಕಾರಿಗಳ ನಡುವಿನ ಕೊಂಡಿಯಾಗುತ್ತಾಳೆ. ಅಲ್ಲಿಂದ ಕಥೆ ತಿರುವು ಪಡೆಯುತ್ತೆ.. ಕಥೆಯನ್ನು ಬಿಚ್ಚಿಡುತ್ತಾರೆ ಸಪ್ತಮಿ ಗೌಡ.

  ಪಾಪ್ ಕಾರ್ನ್ ಮಂಕಿ ಟೈಗರ್ ಗಿರಿಜಾ, ಕಾಂತಾರದಲ್ಲಿ ಲೀಲಾ ಆಗಿ ಬದಲಾಗಿದ್ದಾರೆ. ಎರಡು ವರ್ಷಗಳ ನಂತರ ಇದು ಅವರ 2ನೇ ಚಿತ್ರ. ಚಿತ್ರದಲ್ಲಿ ನನ್ನದು ಮಂಗಳೂರು ಕನ್ನಡ ಮಾತನಾಡುವ ಪಾತ್ರ. ಟೀಮಿನವರು ಅದೆಷ್ಟು ಪರ್ಫೆಕ್ಟ್ ಇದ್ದರು ಅಂದ್ರೆ 2 ತಿಂಗಳ ವರ್ಕ್ ಶಾಪ್ ಮಾಡಿಸಿದರು. ಇದು ನನ್ನ ಪಾತ್ರ ಮತ್ತು ಅಭಿನಯದ ಮೇಲೆ ಪ್ರಭಾವ ಬೀರಿದೆ. ಇದರಿಂದಾಗಿ ನಾನು ಕ್ಯಾರೆಕ್ಟರ್ ಅರ್ಥ ಮಾಡಿಕೊಳ್ಳೋಕೆ ಸುಲಭವಾಯ್ತು ಎನ್ನುತ್ತಾರೆ ಸಪ್ತಮಿ ಗೌಡ.

  ಕಾಡಿನಲ್ಲಿ ಚಿತ್ರೀಕರಣ ಮಾಡಿದ್ದೇವೆ. 2 ಕಿ.ಮೀ. ದಾರಿ ಸಾಗೋಕೆ 45 ನಿಮಿಷ ವ್ಯಯಿಸಿದ್ದೇವೆ. ಕಾಡಿನ ಬದುಕು ಕಷ್ಟ ಕಷ್ಟ ಎನ್ನುವ ಸಪ್ತಮಿಗೆ ಸಿಂಗಾರ ಸಿರಿಯೇ ಹಾಡು ಹಿಟ್ ಆಗಿರುವುದು ಖುಷಿ ಕೊಟ್ಟಿದೆ.

  ನಮ್ಮ ಚಿತ್ರತಂಡದ ಕ್ಯಾಪ್ಟನ್ ರಿಷಬ್ ಶೆಟ್ಟಿ. ಅವರ ಎನರ್ಜಿ ದೊಡ್ಡದು. ಒಂದು ಕಡೆ ನಟನೆ, ಇನ್ನೊಂದು ಕಡೆ ನಿರ್ದೇಶನ. ಇದೆಲ್ಲದರ ನಡುವೆ ಅವರಿಗೆ ಪ್ರತಿ ಪಾತ್ರದ ಸಣ್ಣ ಸಣ್ಣ ವ್ಯತ್ಯಾಸವನ್ನೂ ಗುರುತಿಸುವ ಪರಿಗೆ ಬೆರಗಾಗಿದ್ದಾರಂತೆ ಸಪ್ತಮಿ.

  ಕಾಂತಾರ ಚಿತ್ರ ಇದೇ ಸೆ.30ರಂದು ಬಿಡುಗಡೆಯಾಗುತ್ತಿದ್ದು, 250ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಹೊಂಬಾಳೆ ಪ್ರೊಡಕ್ಷನ್ಸ್ ಭರ್ಜರಿಯಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದೆ. ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಚಿತ್ರದ ಪ್ರೀಮಿಯರ್ ಶೋಗಳು ಶುರುವಾಗಿವೆ.

 • ಕಾಂತಾರದಲ್ಲಿ ಕಿಶೋರ್ ಪಾತ್ರ ಏನು?

  ಕಾಂತಾರದಲ್ಲಿ ಕಿಶೋರ್ ಪಾತ್ರ ಏನು?

  ಕಾಂತಾರ ಚಿತ್ರ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ರಿಷಬ್ ಶೆಟ್ಟಿ ಡೈರೆಕ್ಟರ್ ಕಂ ಹೀರೋ. ಸಪ್ತಮಿ ಗೌಡ ನಾಯಕಿ. ಚಿತ್ರದ ಟ್ರೇಲರ್ ನೋಡಿದವರಿಗೆ ಬೆರಗು ಹುಟ್ಟಿಸುವುದು ಕಿಶೋರ್ ಪಾತ್ರ ಹೊರಹೊಮ್ಮಿರುವ ರೀತಿ.

  ಕಿಶೋರ್`ಗೆ ರಿಷಬ್ ಶೆಟ್ಟಿ ಜೊತೆಗಿನ ಗೆಳೆತನ ಇಂದಿನದಲ್ಲ. ಅಟ್ಟಹಾಸ ಚಿತ್ರದಿಂದಲೂ ಇದೆ. ಉಳಿದವರು ಕಂಡಂತೆ, ಕಥಾ ಸಂಗಮ ಚಿತ್ರದಲ್ಲೂ ಅದು ಕಂಟಿನ್ಯೂ ಆಗಿದೆ. ಈ ಚಿತ್ರದಲ್ಲಿ ಮುಖ್ಯವಾದ ಪಾತ್ರವನ್ನೇ ಕೊಟ್ಟಿದ್ದಾರೆ ರಿಷಬ್.

  ನನಗಿಂತ ಹೆಚ್ಚು ಕಥೆ ಮುಖ್ಯ. ಕಲಾವಿದರು ಕಥೆ ಹೇಳೋ ಟೂಲ್ ಅಷ್ಟೆ. ಇದು ವ್ಯವಸ್ಥೆ, ರಾಜಕೀಯ ಮತ್ತು ಅಧಿಕಾರದ ನಡುವೆ ಈಗೋಗನ್ನೇ ಮೈತುಂಬಾ ತುಂಬಿಕೊಂಡಿರುವವನ ಪಾತ್ರ. ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷವೇ ಚಿತ್ರದ ಕಥೆ. ಚಿತ್ರದ ಕಥೆ ಹೃದಯಕ್ಕೆ ಹತ್ತಿರವಾದದ್ದು ಎನ್ನುತ್ತಾರೆ ಕಿಶೋರ್.

  ಕಿಶೋರ್ ಅವರಿಗೆ ಸೆಪ್ಟೆಂಬರ್ 30 ಎರಡು ಟೆನ್ಷನ್. ಕನ್ನಡದಲ್ಲಿ ಕಾಂತಾರಾ ತೆರೆಗೆ ಬರುತ್ತಿದೆ. ಕಾಂತಾರಾದಲ್ಲಿ ಹೀರೋಗಿರುವಷ್ಟೇ ಪ್ರಾಮುಖ್ಯತೆ ಇರುವ ಪಾತ್ರ ಕಿಶೋರ್ ಅವರದ್ದು. ಅತ್ತ.. ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಕೂಡಾ ತೆರೆಗೆ ಬರುತ್ತಿದೆ. ಸ್ಟಾರುಗಳಿಂದ ತುಂಬಿ ತುಳುಕುತ್ತಿರುವ ಆ ಚಿತ್ರದಲ್ಲಿ ಕಿಶೋರ್ ಅವರಿಗೂ ಪ್ರಧಾನ ಪಾತ್ರವಿದೆ.

  ನನಗೂ ನಿರೀಕ್ಷೆಯಿದೆ. ಆದರೆ ಇದು ಎರಡು ಒಳ್ಳೆ ಕಥೆಗಳನ್ನು ನೋಡುವ ಸಮಯ ಅಷ್ಟೆ. ಸ್ಪರ್ಧೆ ಅಥವಾ ಪೈಪೋಟಿ ಅಲ್ಲ. ಎರಡೂ ಸಿನಿಮಾಗಳಲ್ಲಿ ಸುಂದರವಾದ ಕಥೆಯಿದೆ ಎನ್ನುತ್ತಾರೆ  ಕಿಶೋರ್.

 • ಕಾಶ್ಮೀರ್ ಫೈಲ್ಸ್ ಡೈರೆಕ್ಟರ್ ಸಿನಿಮಾದಲ್ಲಿ ಕಾಂತಾರ ಲೀಲಾ

  ಕಾಶ್ಮೀರ್ ಫೈಲ್ಸ್ ಡೈರೆಕ್ಟರ್ ಸಿನಿಮಾದಲ್ಲಿ ಕಾಂತಾರ ಲೀಲಾ

  ಕಾಶ್ಮೀರ್ ಫೈಲ್ಸ್ ಸಿನಿಮಾ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಡೈರೆಕ್ಟರ್ ವಿವೇಕ್ ಅಗ್ನಿಹೋತ್ರಿ. ಒಂದು ಸಿನಿಮಾ ಮೂಲಕ ಕಾಶ್ಮೀರಿ ಪಂಡಿತರು ಅನುಭವಿಸಿದ್ದ, ಸ್ವಂತ ದೇಶದಲ್ಲೇ ಯಾರೊಬ್ಬರೂ ಕಿವಿಗೊಡದ, ಕಣ್ಬಿಟ್ಟು ನೋಡದ ಸತ್ಯವನ್ನು ಜಗತ್ತಿನ ಎದುರು ತೆರೆದಿಟ್ಟವರು ವಿವೇಕ್ ಅಗ್ನಿಹೋತ್ರಿ. ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ಹೇಳಿಕೊಂಡಿದ್ದ ಹಲವರಿಗೆ ಇರಿಸು ಮುರಿಸಾಯಿತಾದರೂ ವಿವೇಕ್ ಅಗ್ನಿಹೋತ್ರಿ ಗೆದ್ದಿದ್ದರು. ಅವರೀಗ ವ್ಯಾಕ್ಸಿನ್ ವಾರ್ ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಆಯ್ಕೆಯಾಗಿರೋದು ಸಪ್ತಮಿ ಗೌಡ.

  ಕಾಂತಾರದ ಲೀಲಾ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಸಪ್ತಮಿ ಗೌಡ, ಈಗಾಗಲೇ ಕಾಳಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್ ಅಂಬರೀಷ್-ಕೃಷ್ಣ ಕಾಂಬಿನೇಷನ್ ಸಿನಿಮಾ ಅದು. ಇದರ ಜೊತೆಯಲ್ಲೇ ಒಪ್ಪಿಕೊಂಡಿರುವ ಸಿನಿಮಾ ವ್ಯಾಕ್ಸಿನ್ ವಾರ್. ಕಾಂತಾರ ಮೂಲಕ ಇಡೀ ಭಾರತೀಯ ಚಿತ್ರರಂಗಕ್ಕೆ ಪರಿಚಿತವಾಗಿರುವ ಸಪ್ತಮಿ ಗೌಡ, ವಿವೇಕ್ ಅಗ್ನಿಹೋತ್ರಿಯವರ ಮೊದಲ ಚಾಯ್ಸ್ ಎನ್ನುವುದು ವಿಶೇಷ.

  ಹಿಂದಿ, ಕನ್ನಡ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ಈ ಸಿನಿಮಾ ಬರಲಿದೆ. ಹಾಗಾಗಿಯೇ ಚಿತ್ರಕ್ಕೆ ಬೇರೆ ಬೇರೆ ಭಾಷೆಯ ಕಲಾವಿದರನ್ನೂ ಆಯ್ಕೆ ಮಾಡಿದ್ದೇವೆ. ವ್ಯಾಕ್ಸಿನ್ ಕಂಡು ಹಿಡಿದದ್ದು ಭಾರತೀಯರು ಭಾರತದ ಬಗ್ಗೆ ಹೆಮ್ಮೆ ಪಡುವ ಸಾಧನೆ. ವಿಶ್ವದಲ್ಲೇ ಅತ್ಯಂತ ಅಗ್ಗದ ಹಾಗೂ ಸುರಕ್ಷಿತವಾದ ಲಸಿಕೆ ಕಂಡು ಹಿಡಿದ ಸಾಧನೆ ಬಗ್ಗೆ ಸಿನಿಮಾ ಮಾಡುತ್ತಿದ್ದೇವೆ ಎಂದಿದ್ದಾರೆ ವಿವೇಕ್ ಅಗ್ನಿಹೋತ್ರಿ.

  ಚಿತ್ರದಲ್ಲಿ ನನ್ನದು ನಾಯಕಿಯ ಪಾತ್ರ ಹಾಗೆ ಹೀಗೆ ಅಂದೆಲ್ಲ ಇಲ್ಲ. ಚಿತ್ರದಲ್ಲಿ ಕಥೆಯೇ ಹೀರೋ. ಹೀರೋಯಿನ್ ಎಲ್ಲ. ನನ್ನದು ಪ್ರಮುಖ ಪಾತ್ರ ಎಂದಷ್ಟೇ ಹೇಳಬಲ್ಲೆ ಎಂದಿದ್ದಾರೆ ಸಪ್ತಮಿಗೌಡ.

  ಈ ಚಿತ್ರಕ್ಕೆ ಪಲ್ಲವಿ ಜೋಶಿ ನಿರ್ಮಾಪಕಿಯಾಗಿದ್ದಾರೆ. ಅನುಪಮ್ ಖೇರ್, ನಾನಾ ಪಾಟೇಕರ್, ದಿವ್ಯಾ ಸೇಠ್ ಕೂಡಾ ನಟಿಸುತ್ತಿದ್ದಾರೆ. ಪ್ರಿಪ್ರೊಡಕ್ಷನ್ ಕೆಲಸಗಳೆಲ್ಲ ಬಹುತೇಕ ಮುಗಿದಿದ್ದು ಆಗಸ್ಟ್ 15ಕ್ಕೆ ಚಿತ್ರ ಬಿಡುಗಡೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ ವಿವೇಕ್ ಅಗ್ನಿಹೋತ್ರಿ.

 • ಕಾಳಿಯಲ್ಲಿ ತಮಿಳು ಹುಡುಗಿಯಾದ ಲೀಲಾ

  ಕಾಳಿಯಲ್ಲಿ ತಮಿಳು ಹುಡುಗಿಯಾದ ಲೀಲಾ

  ಕಾಂತಾರ ನಂತರ ಸಪ್ತಮಿ ಗೌಡ ಹೊಸ ಸಿನಿಮಾಗೆ ಓಕೆ ಎಂದಿದ್ದಾರೆ. ಪೈಲ್ವಾನ್ ಕೃಷ್ಣ ನಿರ್ದೇಶನದ ಕಾಳಿ. ಅಭಿಷೇಕ್ ಅಂಬರೀಷ್ ಹೀರೋ ಆಗಿರುವ ಚಿತ್ರದ ಮುಹೂರ್ತವೂ ನೆರವೇರಿದೆ. ಬೆಂಗಳೂರಿನ ಬಂಡಿ ಮಾಂಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತವಾಗಿದೆ. ಅಭಿಷೇಕ್ ಅಂಬರೀಷ್ ಎದುರು ನಟಿಸುತ್ತಿರುವ ಸಪ್ತಮಿ ಗೌಡಗೆ ಚಿತ್ರದಲ್ಲಿ ಕರ್ನಾಟಕದಲ್ಲಿರುವ ತಮಿಳು ಹುಡುಗಿಯ ಪಾತ್ರ ಇದೆಯಂತೆ.

  ಕಾಂತಾರ ಮುಗಿದ ಮೇಲೆ ನಾನು ಕೇಳಿದ ಹಲವು ಕಥೆಗಳಲ್ಲಿ ಬೆಸ್ಟ್ ಎನಿಸಿದ್ದು ಇದು. ನನ್ನ ಪ್ರತಿ ಪಾತ್ರವೂ ವಿಭಿನ್ನವಾಗಿರಬೇಕು ಎಂದು ನಾನು ಬಯಸುತ್ತೇನೆ. ಒಂದೊಂದು ಪಾತ್ರ ಮಾಡುತ್ತ ಒಂದೊಂದು ಪಾಠ ಕಲಿಯಬೇಕು. ಸಿನಿಮಾ ನೋಡಿದವರು ಈ ಹುಡುಗಿ ಹೊಸ ಪಾತ್ರವನ್ನೇ ಮಾಡಿದ್ದಾಳೆ ಎನ್ನಬೇಕು. ಕಾಳಿಯಲ್ಲಿ ಅಂತಹ ಪಾತ್ರವಿದೆ ಎಂದಿದ್ದಾರೆ ಸಪ್ತಮಿ ಗೌಡ.

  ಹಿಂದಿಯಲ್ಲೂ ಒಂದು ಆಫರ್ ಬಂದಿದ್ದು ದೊಡ್ಡ ಬ್ಯಾನರ್ ಆಗಿದ್ದರೂ ಕಥೆ ಇಷ್ಟವಾಗದೆ ಒಪ್ಪಿಕೊಂಡಿಲ್ಲ ಎಂದೂ ಗೊತ್ತಾಗಿದೆ. ಆ ವಿಷಯದ ಬಗ್ಗೆ ಮಾತನ್ನೇ ಆಡದ ಸಪ್ತಮಿ ಗೌಡ ಇನ್ನೂ ಒಂದು ಚಿತ್ರವನ್ನು ಒಪ್ಪಿಕೊಂಡಿದ್ದಾರಂತೆ. ಶೀಘ್ರದಲ್ಲೇ ಆ ಚಿತ್ರದ ಘೋಷಣೆಯೂ ಹೊರಬೀಳಲಿದೆ. ಇಷ್ಟಿದ್ದರೂ ಸಂಭಾವನೆ ಹೆಚ್ಚಾಗಿದ್ಯಾ ಎಂದರೆ.. ಆಗಿದೆ ಎಂದುಕೊಂಡರೆ ಆಗಿದೆ. ಆಗಿಲ್ಲ ಎಂದುಕೊಂಡರೆ ಆಗಿಲ್ಲ ಎನ್ನುವ ಮಾರ್ಮಿಕ ಉತ್ತರ ಕೊಟ್ಟು ಮುಗುಳ್ನಗುತ್ತಾರೆ ಸಪ್ತಮಿ ಗೌಡ.

 • ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

  ಕೆಜಿಎಫ್..ರಾಜಕುಮಾರ ದಾಖಲೆಗಳನ್ನು ಹಿಂದಿಕ್ಕಿದ ಕಾಂತಾರ

  ಕನ್ನಡದಲ್ಲಿ ಕಾಂತಾರ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಸೃಷ್ಟಿಸುತ್ತಿದೆ. ದಾಖಲೆಗಳೆಲ್ಲ ಪುಡಿ ಪುಡಿಯಾಗುತ್ತಿದೆ. ಡಿವೈನ್ ಹಿಟ್ ಎಂಬ ಹೊಸ ಪದಪುಂಜವನ್ನು ಕನ್ನಡಕ್ಕೆ ಕೊಟ್ಟ ಸಿನಿಮಾ ಕಾಂತಾರ. ರಿಷಬ್ ಶೆಟ್ಟಿ, ಹೊಂಬಾಳೆ ಫಿಲಮ್ಸ್ ಎರಡೂ ಹೊಸ ದಾಖಲೆ ಬರೆದಿವೆ. ಈ ಹಾದಿಯಲ್ಲಿ ಕಾಂತಾರ ಯಶ್, ಪುನೀತ್ ರಾಜಕುಮಾರ್ ಹೆಸರಲ್ಲಿದ್ದ ದಾಖಲೆಗಳನ್ನೆಲ್ಲ ಅಳಿಸಿ ಹಾಕಿದೆ. ಹೊಸ ಮೈಲುಗಲ್ಲು ಸ್ಥಾಪಿಸಿದೆ.

  25 ದಿನಗಳಲ್ಲಿ ಕಾಂತಾರ ಚಿತ್ರವನ್ನು ನೋಡಿದವರ ಸಂಖ್ಯೆ 77 ಲಕ್ಷಕ್ಕೂ ಹೆಚ್ಚು. ಇದು ಹೊಸ ದಾಖಲೆ. ಈ ಹಿಂದೆ ಈ ದಾಖಲೆ ಇದ್ದದ್ದು ಕೆಜಿಎಫ್ ಚಾಪ್ಟರ್ 2 ಹೆಸರಲ್ಲಿ. ಕೆಜಿಎಫ್ 2 ಚಿತ್ರವನ್ನು 75 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದರು. ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಸಿನಿಮಾವನ್ನು 65 ಲಕ್ಷ ಜನ ವೀಕ್ಷಿಸಿದ್ದರು. ಅ ದಾಖಲೆಯನ್ನು ಕೆಜಿಎಫ್ ಚಾಪ್ಟರ್ 1 ಬ್ರೇಕ್ ಮಾಡಿತ್ತು. ಕೆಜಿಎಫ್ ಸಿನಿಮಾವನ್ನು 72 ಲಕ್ಷ ಜನ ವೀಕ್ಷಿಸಿದ್ದರು. ಆ ಎರಡೂ ಚಿತ್ರಗಳು ಹೊಂಬಾಳೆ ಚಿತ್ರಗಳೇ.

  ಈಗ ಕೇವಲ 25 ದಿನಗಳಲ್ಲಿ ಕಾಂತಾರ ಚಿತ್ರವನ್ನು 25 ದಿನಗಳಲ್ಲಿ 77 ಲಕ್ಷ ವೀಕ್ಷಿಸಿದ್ದಾರೆ. ಆ ಸಂಖ್ಯೆ ಕೋಟಿ ದಾಟಿದರೂ ಅಚ್ಚರಿಯಿಲ್ಲ. ಇದು ಕೇವಲ ಕನಾಟಕದ ಲೆಕ್ಕ. ಕನ್ನಡಿಗರು ನೋಡಿರುವ ಚಿತ್ರ. ಕಾಂತಾರ ಕೆಜಿಎಫ್ ದಾಖಲೆಯನ್ನು ಹಿಂದಿಕ್ಕಿದೆ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಲ್ಲ. ಸದ್ಯಕ್ಕೆ ಆ ದಾಖಲೆಯ ಹತ್ತಿರಕ್ಕೂ ಹೋಗೋಕಾಗಲ್ಲ. ಅದು ಸೃಷ್ಟಿಸಿರುವ ಇತಿಹಾಸ ಅಂತದ್ದು.

  ಹೊಂಬಾಳೆ ಶುರುವಾಗಿದ್ದು ನಿನ್ನಿಂದಲೇ ಚಿತ್ರದ ಮೂಲಕ. ವಿಜಯ್ ಕಿರಗಂದೂರು ನಿರ್ಮಾಣದ ಮೊದಲ ನಿರೀಕ್ಷೆಯ ಮಟ್ಟ ತಲುಪಿರಲಿಲ್ಲ. ಅದಾದ ನಂತರ ಹೊಂಬಾಳೆ ಸಿನಿಮಾಗಳು ಸೋತದ್ದೇ ಇಲ್ಲ. ಮಾಸ್ಟರ್‍ಪೀಸ್, ರಾಜಕುಮಾರ. ಕೆಜಿಎಫ್ 1 & 2, ಯುವರತ್ನ ಎಲ್ಲ ಚಿತ್ರಗಳೂ ಇತಿಹಾಸ ಬರೆದವು. ಇನ್ನು ಮುಂದೆ ಜಗ್ಗೇಶ್ ಜೊತೆಗಿನ ರಾಘವೇಂದ್ರ ಸ್ಟೋರ್ಸ್ ಇದೆ. ಇದೇ ವರ್ಷ ರಿಲೀಸ್ ಆಗಲಿದೆ. ಇದು ಮಾತ್ರ ಕನ್ನಡದ ಸಿನಿಮಾ.

  ಪ್ರಭಾಸ್-ಪ್ರಶಾಂತ್ ನೀಲ್ ಜೊತೆಗಿನ  ಸಲಾರ್, ಪೃಥ್ವಿರಾಜ್ ಸುಕುಮಾರನ್ ಜೊತೆಗಿನ ಟೈಸನ್, ಪವನ್ ಕುಮಾರ್-ಫಹಾದ್ ಫಾಸಿಲ್ ಜೊತೆಗಿನ ಧೂಮಂ, ಡಾ.ಸೂರಿ-ಶ್ರೀಮುರಳಿ ಕಾಂಬಿನೇಷನ್‍ನ ಬಘೀರ, ರಕ್ಷಿತ್ ಶೆಟ್ಟಿ ಜೊತೆಗೆ ರಿಚರ್ಡ್ ಆಂಟನಿ ಘೋಷಣೆಯಾಗಿವೆ. ಬಘೀರ ಮತ್ತು ರಿಚರ್ಡ್ ಆಂಟನಿ ಇನ್ನೂ ಸೆಟ್ಟೇರಿಲ್ಲ. ಇದರ ಜೊತೆಗೆ ಸಂತೋಷ್ ಆನಂದರಾಮ್-ಯುವ ರಾಜಕುಮಾರ್ ಚಿತ್ರವೂ ಸೆಟ್ಟೇರುತ್ತಿದೆ.

 • ಗಂಧದ ಗುಡಿ ರಿಲೀಸ್.. ಅಪ್ಪು ಪುಣ್ಯತಿಥಿ.. ಕರ್ನಾಟಕ ರತ್ನ.. ಎಲ್ಲ ಬೆನ್ನು ಬೆನ್ನಿಗೆ..

  ಗಂಧದ ಗುಡಿ ರಿಲೀಸ್.. ಅಪ್ಪು ಪುಣ್ಯತಿಥಿ.. ಕರ್ನಾಟಕ ರತ್ನ.. ಎಲ್ಲ ಬೆನ್ನು ಬೆನ್ನಿಗೆ..

  ಅಕ್ಟೋಬರ್ 29. ಕನ್ನಡಿಗರನ್ನು ಅಪ್ಪು ಅಗಲಿದ ದಿನ. ಅಭಿಮಾನಿಗಳು ಈಗಲೂ ಇದು ನಿಜವೋ.. ಸುಳ್ಳೋ.. ಎಂಬ ಗೊಂದಲದಲ್ಲಿರುವಾಗಲೇ.. ಒಂದು ವರ್ಷವಾಗುತ್ತಾ ಬಂದಿದೆ. ಅಪ್ಪು ಸಮಾಧಿ ಪುಣ್ಯಕ್ಷೇತ್ರವಾಗಿ ಹೋಗಿದೆ. ದಿನ ದಿನವೂ ಸಾವಿರಾರು ಅಭಿಮಾನಿಗಳು ಬಂದು ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಇದರ ಜೊತೆಯಲ್ಲೇ ಅಕ್ಟೋಬರ್ ತಿಂಗಳ ಕೊನೆಯ ವಾರ ಅಪ್ಪು ವಾರವಾಗುತ್ತಿದೆ.

  ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ಗಂಧದ ಗುಡಿ ಟ್ರೇಲರ್ ಬಿಡುಗಡೆಯಾಗುತ್ತಿದೆ. ಆ ದಿನವನ್ನು ಹಬ್ಬ ಮಾಡಲು ಅಭಿಮಾನಿಗಳು ನಿರ್ಧರಿಸಿಬಿಟ್ಟಿದ್ದಾರೆ.

  ಅಕ್ಟೋಬರ್ 26ರಂದು ಅಪ್ಪು ಸಮಾಧಿ ಬಳಿ 75 ಕಟೌಟ್ ನಿಲ್ಲಿಸಲಾಗುತ್ತಿದೆ. 27ನೇ ತಾರೀಕು ಸ್ಮಾರಕದ ಸುತ್ತಮುತ್ತ ಒಂದು ಕಿ.ಮೀ. ಅಂತರದಲ್ಲಿ ದಸರಾ ರೀತಿ ದೀಪಾಲಂಕಾರ ಮಾಡಲಾಗುತ್ತಿದೆ. 28ರಂದು ಗಂಧದ ಗುಡಿ ಬಿಡುಗಡೆ ದಿನ ಕೆಜಿ ರಸ್ತೆ ಹಾಗೂ ಮಾಗಡಿ ರಸ್ತೆಗಳಲ್ಲಿ ಸಂಭ್ರಮಾಚರಣೆ. 29ರಂದು ಪುಣ್ಯತಿಥಿ. ಆ ದಿನ ಅಪ್ಪು ಸ್ಮಾರಕದ ಎದುರು ಅನ್ನದಾಸೋಹವಿದೆ.

  ಅಕ್ಟೋಬರ್ 21ರಂದು ಗಂಧದ ಗುಡಿ ಪ್ರಿ-ರಿಲೀಸ್ ಈವೆಂಟ್ ಇದೆ. ರಾಜ್ ಕುಟುಂಬ, ಮುಖ್ಯಮಂತ್ರಿ ಬೊಮ್ಮಾಯಿ, ರಜನಿಕಾಂತ್ ಸೇರಿದಂತೆ ಸಮಸ್ತ ಚಿತ್ರರಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದೆ.

  ಅದಾದ ನಂತರ ನವೆಂಬರ್ 1ರಂದು ಕರ್ನಾಟಕ ರತ್ನ ಗೌರವ ಪ್ರದಾನ. ರಾಜ್ಯೋತ್ಸವದ ದಿನ ಕನ್ನಡಿಗರ ರಾಜಕುಮಾರನಿಗೆ ಕರ್ನಾಟಕದ ಅತಿ ದೊಡ್ಡ ಪುರಸ್ಕಾರ.

 • ಪರಭಾಷೆಗಳಲ್ಲಿ ಕಾಂತಾರ ಕ್ರೇಜ್ ಹೇಗಿದೆ?

  ಪರಭಾಷೆಗಳಲ್ಲಿ ಕಾಂತಾರ ಕ್ರೇಜ್ ಹೇಗಿದೆ?

  ಕಾಂತಾರ. ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ ಬರೆಯುತ್ತಿರುವ ಸಿನಿಮಾ. ಕರಾವಳಿಯ ದೈವ ಮತ್ತು ಭೂತಕೋಲದ ನಂಬಿಕೆ. ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟವನ್ನು ಚೆಂದದ ಕಥೆಯೊಂದಿಗೆ ಜನರಿಗೆ ಪರಿಚಯಿಸಿದ ಸಿನಿಮಾ. ಸಿನಿಮಾ ನೋಡಿದವರು ರಿಷಬ್ ಶೆಟ್ಟಿಯವರಲ್ಲಿ ಪಂಜುರ್ಲಿ/ಗುಳಿಗನನ್ನೇ ಕಾಣುತ್ತಿದ್ದಾರೆ. ಹೊಂಬಾಳೆ ಸಿನಿಮಾ ಮತ್ತೊಂದು ಹೊಸ ಕಾನ್ಸೆಪ್ಟ್ಗೆ ಬಂಡವಾಳ ಹೂಡಿ ಗೆದ್ದಿದೆ. ಸಿನಿಮಾ ರಿಲೀಸ್ ಆದಾಗ ಪಾನ್ ಇಂಡಿಯಾ ಕಾನ್ಸೆಪ್ಟ್ ಇರಲಿಲ್ಲ. ಈಗ ಎಲ್ಲ ಭಾಷೆಗಳಲ್ಲೂ ಕಾಂತಾರಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

  ತೆಲುಗಿನಲ್ಲಿ ಕಾಂತಾರ ಕ್ರೇಜ್ ಜೋರಾಗಿದ್ದು. ಅಕ್ಟೋಬರ್ 14ಕ್ಕೆ ರಿಲೀಸ್ ಆಗುತ್ತಿದೆ. ಟ್ರೇಲರ್ ಭರ್ಜರಿ ಯಶಸ್ಸು ಗಳಿಸಿದೆ. ಈಗಾಗಳೇ ಪ್ರಭಾಸ್, ನಾನಿ ಮೊದಲಾದವರು ಚಿತ್ರದ ಬಗ್ಗೆ ಮೆಚ್ಚುಗೆ ತೋರಿಸಿದ್ದಾರೆ. ಅವರ ಹೇಳಿಕೆಗಳೇ ಚಿತ್ರಕ್ಕೆ ದೊಡ್ಡಮಟ್ಟದ ಪ್ರಚಾರ ಒದಗಿಸಿವೆ. ಟ್ರೇಲರ್ ನೋಡಿದವರ ಸಂಖ್ಯೆ 7 ಲಕ್ಷಕ್ಕೂ ಹೆಚ್ಚು. ಸಿನಿಮಾವನ್ನು ಕನ್ನಡದಲ್ಲಿ ನೋಡಿದ ತೆಲುಗರೇ ಚಿತ್ರದ ಪ್ರಚಾರವನ್ನು ತೆಲುಗಿನಲ್ಲಿ ಆರಂಭಿಸಿದ್ದಾರೆ. ಇಷ್ಟಪಟ್ಟು..

  ಹಿಂದಿಯಲ್ಲಿ ಕೂಡಾ ಮೋಡಿ ಮಾಡಿದೆ. ಚಿತ್ರದ ಟ್ರೇಲರ್ ಈಗಾಗಲೇ 70ಲಕ್ಷ ಹಿಟ್ಸ್ ಕಂಡಿದೆ. ಅಲ್ಲಿಯೂ ಅಷ್ಟೆ. ಕನ್ನಡದಲ್ಲಿ ಈಗಾಗಲೇ ನೋಡಿದ ಬೇರೆ ಭಾಷೆಯವರೇ ಪ್ರೀತಿಯಿಂದ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

  ತಮಿಳಿನಲ್ಲಿ ಅಕ್ಟೋಬರ್ 16ಕ್ಕೆ ರಿಲೀಸ್ ಆಗುತ್ತಿದೆ. ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಚಿತ್ರದ ಹೊಣೆ ಹೊತ್ತುಕೊಂಡಿದ್ದಾರೆ.

 • ಬಾಲಿವುಡ್‍ನಲ್ಲೀಗ ಕಾಂತಾರ ಗುಂಗು

  ಬಾಲಿವುಡ್‍ನಲ್ಲೀಗ ಕಾಂತಾರ ಗುಂಗು

  ಸ್ಯಾಂಡಲ್ವುಡ್ನಲ್ಲಿ ಈಗ ಎಲ್ಲಿ ನೋಡಿದರೂ ಕಾಂತಾರದ್ದೇ ಮಾತು. ನಿರೀಕ್ಷೆಗೂ ಮೀರಿದ ಯಶಸ್ಸು ಕಂಡ ಚಿತ್ರ ಕಾಂತಾರ. ಈ ಅದ್ಭುತ ಚಿತ್ರ ಬೇರೆ ಬೇರೆ ರಾಜ್ಯಗಳಲ್ಲಿ, ಅಯಾ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇದೇ ಅಕ್ಟೋಬರ್ 14ರ ಶುಕ್ರವಾರ ಹಿಂದಿಯಲ್ಲೂ ಕಾಂತಾರ ತೆರೆ ಕಾಣುತ್ತಿದೆ. ಮುಂಬೈ ಸೇರಿದಂತೆ ವಿವಿಧೆಡೆ ಸುಮಾರು 2,500ಕ್ಕೂ ಅಧಿಕ ಸ್ಕೀನ್ಗಳಲ್ಲಿ ಕಾಂತಾರ ಪ್ರದರ್ಶನವಾಗಲಿದೆ.

  ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆ.ಜಿ.ಎಫ್ 2 ಬಾಲಿವುಡ್ ನಲ್ಲಿ ದಾಖಲೆ ಮಟ್ಟದ ಯಶಸ್ಸು ಗಳಿಸಿತ್ತು. ಆ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ಹೊಂಬಾಳೆ ಆ ಹಿಡಿತದ ಮೂಲಕವೇ ಕಾಂತಾರವನ್ನು 2500ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿದೆ. ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವ ಹಾಗೆ ಮಾಡುತ್ತಿದ್ದಾರೆ ಕನ್ನಡದ ಹೆಮ್ಮೆಯ ನಿರ್ಮಾಪಕ ವಿಜಯ್ ಕಿರಗಂದೂರು.

  ಕಾಂತಾರ ಕನ್ನಡದಲ್ಲಿ ದಾಖಲೆ ಬರೆದಿದ್ದರೂ ಸಂಭ್ರಮಿಸುವಷ್ಟು ಪುರುಸೊತ್ತು ರಿಷಬ್ ಶೆಟ್ಟಿಯವರಿಗೆ ಇಲ್ಲ. ನಿರ್ದೇಶಕರೂ ಅವರೇ ಆದ್ದರಿಂದ ಚಿತ್ರದ ಔಟ್ ಕಮ್ ನೋಡಿಕೊಳ್ಳಬೇಕು. ಹೀರೋ ಅವರೇ ಆದ್ದರಿಂದ ಚಿತ್ರದ ಪ್ರತಿ ಪ್ರೆಸ್ ಮೀಟ್, ಈವೆಂಟ್‍ಗಳಲ್ಲೂ ಪ್ರಚಾರದ ನೇತೃತ್ವ ವಹಿಸಬೇಕು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸುತ್ತುತ್ತಿರುವ ರಿಷಬ್ ಶೆಟ್ಟಿ & ಟೀಂ ಸಂಭ್ರಮದ ಹೊಳೆಯಲ್ಲಿ ತೇಲುತ್ತಿದೆ.

 • ಮಲಯಾಳಂ ಕಾಂತಾರ ರಿಲೀಸ್ ಡೇಟ್ ಕೂಡಾ ಫಿಕ್ಸ್

  ಮಲಯಾಳಂ ಕಾಂತಾರ ರಿಲೀಸ್ ಡೇಟ್ ಕೂಡಾ ಫಿಕ್ಸ್

  ನಿಗೂಢ ಕಾಡಿನ ಲೋಕದಲ್ಲಿ ನಡೆಯುವ ದೈವದ ಪವಾಡ. ಮನುಷ್ಯರು ಮತ್ತು ಕಾಡಿನ ನಡುವಿನ ಹೋರಾಟ. ಭೂತಕೋಲ. ಪಂಜುರ್ಲಿ ಹಾಗೂ ಗುಳಿಗ ದೈವದ ಆಟ.. ಎಲ್ಲವನ್ನೂ ಹೊತ್ತು ನಗುನಗಿಸುತ್ತಲೇ ಬೇರೊಂದು ಲೋಕಕ್ಕೇ ಕರೆದೊಯ್ಯುವ ಕಾಂತಾರ ಈಗ ತಮಿಳುನಾಡು ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದೆ. ಹಿಂದಿಯಲ್ಲಿ ನಭೂತೋನಭವಿಷ್ಯತಿ ಎಂಬಂತೆ ಅದ್ಧೂರಿಯಾಗಿ ತೆರೆ ಕಂಡಿದೆ. ಈಗ ಮಲಯಾಳಂನಲ್ಲಿ ಬಿಡುಗಡೆ ಡೇಟ್ ಫಿಕ್ಸ್ ಆಗಿದ್ದು ಮುಂದಿನ ವಾರ ಅಕ್ಟೋಬರ್ 20ಕ್ಕೆ ರಿಲೀಸ್.

  ಹಾಗೆ ನೋಡಿದರೆ ಕೇರಳ ಮತ್ತು ಕರಾವಳಿಯ ಸಂಪರ್ಕಗಳು ಹಾಗೂ ಸಂಸ್ಕೃತಿ ಒಂದೇ ತೆರನಾದದ್ದು. ಮಲಯಾಳಿಗೆ ಇದು ತುಂಬಾ ಹತ್ತಿರವಾಗುವ ನಿರೀಕ್ಷೆಯೂ ಇದೆ. ಪೃಥ್ವಿರಾಜ್ ಸುಕುಮಾರನ್ ಚಿತ್ರವನ್ನು ಕೇರಳದಲ್ಲಿ ಕಾಂತಾರವನ್ನು ರಿಲೀಸ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ, ಸಪ್ತಮಿಗೌಡ, ಕಿಶೋರ್, ಅಚ್ಯುತ್, ಮಾನಸಿ ಸುಧೀರ್ ಮೊದಲಾದವರ ನಟನೆಗೆ ಮನಸೋತಿರುವ ಪ್ರೇಕ್ಷಕರು ಕಡೆಯ ಕ್ಲೈಮಾಕ್ಸ್ನಲ್ಲಂತೂ ಬೇರೆಯದೇ ಲೋಕಕ್ಕೆ ಹೋಗುತ್ತಾರೆ. ಧನುಷ್, ಪ್ರಭಾಸ್, ನಾನಿ ಸೇರಿದಂತೆ ದೊಡ್ಡ ದೊಡ್ಡ ಸ್ಟಾರ್ ನಟರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.

 • ರಾಜ್ ಬ್ಯಾನರಿಗೆ ಹೊಂಬಾಳೆ ಹೋಲಿಕೆ : ಕಾರಣ ಕಾಂತಾರ

  ರಾಜ್ ಬ್ಯಾನರಿಗೆ ಹೊಂಬಾಳೆ ಹೋಲಿಕೆ : ಕಾರಣ ಕಾಂತಾರ

  ಡಾ.ರಾಜ್ ಕುಮಾರ್ ಬ್ಯಾನರ್ ಚಿತ್ರಗಳೆಂದರೆ ಕನ್ನಡ ಪ್ರೇಕ್ಷಕರಿಗೆ ಒಂದು ಹೆಮ್ಮೆ. ಅಭಿಮಾನ. ಕೇವಲ ಅದು ಡಾ.ರಾಜ್ ಬ್ಯಾನರ್ ಎಂಬ ಕಾರಣಕ್ಕಲ್ಲ.. ಅದಕ್ಕೆ ಕಾರಣವಾಗಿದ್ದು ರಾಜ್ ಬ್ಯಾನರ್ ಸಿನಿಮಾಗಳು ಉಳಿಸಿಕೊಂಡ ಘನತೆ. ವಜ್ರೇಶ್ವರಿ, ಪೂರ್ಣಿಮಾ ಕಂಬೈನ್ಸ್ ಅಡಿಯಲ್ಲಿ ಅತೀ ಹೆಚ್ಚು ಕಾದಂಬರಿ ಆಧರಿಸಿದ ಚಿತ್ರ ನಿರ್ಮಿಸಿರುವ ಹೆಮ್ಮೆ ರಾಜ್ ಬ್ಯಾನರ್ ಚಿತ್ರಗಳದ್ದು. ಕನ್ನಡ ಹಾಗೂ ಈ ನೆಲದ ಸಂಸ್ಕøತಿಯನ್ನು ಪ್ರತಿಬಿಂಬಿಸುವ ಚಿತ್ರಗಳು ವಿಭಿನ್ನವಾಗಿರುತ್ತಿದ್ದವು. ಕುಟುಂಬ ಸಮೇತ ನೋಡುವಂತಿರುತ್ತಿದ್ದವು. ಆ ಬ್ಯಾನರ್‍ಗೆ ಈಗ ಹೊಂಬಾಳೆಯನ್ನು ಹೋಲಿಸುತ್ತಿದ್ದಾರೆ ಪ್ರೇಕ್ಷಕರು. ಅದಕ್ಕೆಲ್ಲ ಕಾರಣವಾಗಿದ್ದು ಕಾಂತಾರ.

  ಹೊಂಬಾಳೆ ಇದುವರೆಗೆ ರಾಜಕುಮಾರ, ಯುವರತ್ನ, ಕೆಜಿಎಫ್ ಭಾಗ 1&2 ಮೊದಲಾದ ಚಿತ್ರಗಳನ್ನು ನಿರ್ಮಿಸಿದೆ. ಈಗ ಕಾಂತಾರ ಬಿಡುಗಡೆಯಾಗಿದೆ. ನಾನು ರಿಷಬ್ ಶೆಟ್ಟಿಯವರ ಹಳೆಯ ಸಿನಿಮಾ ನೋಡಿದ್ದೆ. ಆದರೆ ನನಗೆ ಸ್ವಲ್ಪ ಬೇಸರವಿತ್ತು. ರಿಷಬ್ ಶೆಟ್ಟಿಯವರ ಪ್ರತಿಭೆ ಹಾಗೂ ಶಕ್ತಿಯನ್ನು ಇವರ್ ಯಾರೂ ಸರಿಯಾಗಿ ಬಳಸಿಕೊಂಡಿಲ್ಲ ಎನಿಸುತ್ತಿತ್ತು. ಅದೇ ವೇಳೆಗೆ ಕನ್ನಡದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡುವ ಮನಸ್ಸು ಮಾಡಿದೆವು. ಹೀಗಾಗಿ ರಿಷಬ್ ಶೆಟ್ಟಿಯವರಿಗೆ ಆಹ್ವಾನ ಕೊಟ್ಟೆವು. ಚಿತ್ರಕ್ಕೆ ವ್ಯಕ್ತವಾದ ಮೆಚ್ಚುಗೆಯೇನಿದ್ದರೂ ನಿರ್ದೇಶಕರಿಗೆ ಸಲ್ಲಬೇಕು ಎನ್ನುತ್ತಾರೆ ವಿಜಯ್ ಕಿರಗಂದೂರು.

  ಮೊದಲಿಗೆ ರಿಷಬ್ ಶೆಟ್ಟಿಯವರು ಕಥೆ ಹೇಳಿದ್ದು ಪುನೀತ್ ರಾಜಕುಮಾರ್ ಅವರಿಗೆ. ಪುನೀತ್ ಅವರು ನನಗೆ ಈ ಸಿನಿಮಾ ಮಾಡುವಂತೆ ಸಜೆಸ್ಟ್ ಮಾಡಿದರು. ರಿಷಬ್ ಅವರಿಂದಲೇ ಡೈರೆಕ್ಷನ್ ಮತ್ತು ಹೀರೋ ರೋಲ್ ಮಾಡಿಸುವಂತೆ ಸಲಹೆ ಕೊಟ್ಟರು. ನನಗೂ ರಿಷಬ್ ಶೆಟ್ಟಿಯವರ ಮೇಲೆ ಕಾನ್ಫಿಡೆನ್ಸ್ ಇತ್ತು ಎನ್ನುತ್ತಾರೆ ವಿಜಯ್ ಕಿರಗಂದೂರು.

  500 ವರ್ಷಗಳ ಹಿಂದಿನಿಂದ ಇಲ್ಲಿಯವರೆಗೆ ನಡೆಯುವ ಕಥೆ ಹಾಗೂ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಭೂತಕೋಲದಲ್ಲಿ ಬರುವ ರಿಷಬ್ ಶೆಟ್ಟಿ ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ.

 • ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ

  ವರಾಹರೂಪಂ.. : ಹಾಡು ಬಳಸದಂತೆ ಕೋರ್ಟ್ ಆದೇಶ

  ಕಾಂತಾರ ಚಿತ್ರ ಹಿಟ್ ಅಗುತ್ತಿದ್ದಂತೆಯೇ ಕಾಂತಾರದ ವರಾಹರೂಪಂ ಹಾಡು ಕೂಡಾ ಹಿಟ್ ಆಗಿತ್ತು. ಇಡೀ ಸಿನಿಮಾಗೆ ಆ ಹಾಡು, ಸಂಗೀತದಿಂದ ದೈವೀಕ ಕಳೆ ಬಂದಿತ್ತು. ಅಜನೀಶ್ ಲೋಕನಾಥ್ ವ್ಹಾವ್ ಎನ್ನಿಸಿಕೊಂಡಿದ್ದರು. ಆದರೆ ಈಗ ಆ ಹಾಡಿಗೆ ತಡೆ ನೀಡಿದ ನ್ಯಾಯಾಲಯ. ಇದೀಗ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿದೆ.

  ‘ತೈಕ್ಕುಡಂ ಬ್ರಿಡ್ಜ್’ ಎಂಬ ಮ್ಯೂಸಿಕ್ ಬ್ಯಾಂಡ್ನ ಅನುಮತಿ ಇಲ್ಲದೆ ‘ವರಾಹ ರೂಪಂ’ ಹಾಡನ್ನ ಬಳಕೆ ಮಾಡದಂತೆ ‘ಕಾಂತಾರ’ ಚಿತ್ರತಂಡಕ್ಕೆ ಕೇರಳದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ. ‘ಕಾಂತಾರ’ ಚಿತ್ರದಲ್ಲಿ ಬಳಸಲಾದ ವರಾಹ ರೂಪಂ..  ತಮ್ಮ ಒರಿಜಿನಲ್ ಸಾಂಗ್ ನವರಸಂನಿಂದ ಯಥಾವತ್ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ‘ತೈಕ್ಕುಡಂ ಬ್ರಿಡ್ಜ್’ ಮ್ಯೂಸಿಕ್ ಬ್ಯಾಂಡ್ ಕೋರ್ಟ್ ಮೆಟ್ಟಿಲೇರಿತ್ತು.ಕೋರ್ಟ್ ತೈಕ್ಕುಡಂ ಬ್ರಿಡ್ಜ್ ಮನವಿಗೆ ಸ್ಪಂದಿಸಿ ಅವರ ಪರವಾಗಿಯೇ ತೀರ್ಪು ಕೊಟ್ಟಿದೆ.

  ರಾಗಗಳು ಒಂದೇ ಹೊರತು ಕಾಪಿ ಮಾಡಿದ್ದಲ್ಲ. ಹಾಗಾಗಿ  ಈ ರೀತಿ ಅನ್ನಿಸುವುದು ಸಹಜ ಎಂದಿದ್ದರು ಅಜನೀಶ್ ಲೋಕನಾಥ್. ನಿರ್ದೇಶಕ ರಿಷಬ್ ಶೆಟ್ಟಿ ಕೂಡಾ ಹಾಡು ಕಾಪಿ ಮಾಡಿದ್ದಲ್ಲ. ನ್ಯಾಯಾಂಗ ಹೋರಾಟ ನಡೆಸುತ್ತೇವೆ ಎಂದಿದ್ದರು. ಈಗ ಕೋರ್ಟ್ ತಡೆಯಾಜ್ಞೆ ನೀಡಿದೆ.

  ಕೊಲಿಕ್ಕೋಡ್‍ನ ಜಿಲ್ಲಾ ನ್ಯಾಯಾಲಯದ ಆದೇಶದ ಪ್ರಕಾರ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಅಮೇಜಾನ್, ಯೂಟ್ಯೂಬ್, ಸ್ಫೂಫಿ, ವಿಂಕ್ ಮ್ಯೂಸಿಕ್, ಜಿಸೋವಾನ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ. ನವರಸಂ ಹಾಡಿನ ಮೂಲ ಸೃಷ್ಟಿಕರ್ತರಾದ ತೈಕ್ಕುಡಂ ಬ್ರಿಡ್ಜ್ ಅನುಮತಿಯಿಲ್ಲದೆ ಹಾಡನ್ನು ಬಳಸುವಂತಿಲ್ಲ ಎಂಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ತೈಕ್ಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂಕೋರ್ಟ್ ವಕೀಲ ಸತೀಶ್ ಮೂರ್ತಿ ವಾದಿಸುತ್ತಿದ್ದಾರೆ.

 • ವರಾಹರೂಪಂ.. ಹಾಡು : ಗೊಂದಲಗಳಾಗಿದ್ದೇಕೆ?

  ವರಾಹರೂಪಂ.. ಹಾಡು : ಗೊಂದಲಗಳಾಗಿದ್ದೇಕೆ?

  ವರಾಹರೂಪಂ.. ಕಾಂತಾರದ ಸಿಗ್ನೇಚರ್ ಟ್ಯೂನ್ ಸಾಂಗ್ ಎನ್ನಬಹುದು. ಚಿತ್ರದ ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ನಟನೆ, ನಿರ್ದೇಶನ, ಸಪ್ತಮಿ ಗೌಡ ಅಭಿನಯ, ಚಿತ್ರದ ಎಲ್ಲ ಕಲಾವಿದರು ಮತ್ತು ತಂತ್ರಜ್ಞರ ಒಟ್ಟಾರೆ ಶ್ರಮ ಹೇಗೆ ಕಾರಣವೋ.. ಅಷ್ಟೇ ದೊಡ್ಡ ಕಾರಣ ಅಜನೀಶ್ ಲೋಕನಾಥ್ ಅವರ ಸಂಗೀತ. ಈ ಹಾಡು ಪ್ರೇಕ್ಷಕರ ಹೃದಯಕ್ಕೇ ಇಳಿದಿತ್ತು. ಆದರೆ ಸಿನಿಮಾ ಬಿಡುಗಡೆಯ ನಂತರ ಈ ಹಾಡು ತಮ್ಮದು ತೈಕ್ಕುಡಂ ಬ್ರಿಡ್ಜ್ ಎಂಬ ಕೇರಳದ ಮ್ಯೂಸಿಕ್ ತಂಡದವರು ಕೇಸು ಹಾಕಿದರು. ವರಾಹರೂಪಂ.. ರಾಗ..ತಾಳವನ್ನೇ ಹೋಲುವ ತೈಕ್ಕುಡಂ ಬ್ರಿಡ್ಜ್‍ನವರ ನವರಸನ್.. ಅಲ್ಬಂ, 2017ರಿಂದಲೇ ಯೂಟ್ಯೂಬ್‍ನಲ್ಲಿತ್ತು. ಇಲ್ಲ ಇದು ತಮ್ಮದು ಎಂದು ವಾದಿಸಿದವರು ರಿಷಬ್ ಶೆಟ್ಟಿ ಮತ್ತು ಅಜನೀಶ್ ಲೋಕನಾಥ್. ವಿವಾದ ಕೋರ್ಟ್ ಮೆಟ್ಟಿಲೇರಿತು. ಕೋರ್ಟಿನಲ್ಲಿ ವರಾಹರೂಪಂ.. ಹಾಡು ಮತ್ತು ಸಂಗೀತದ ಬಳಕೆಗೆ ತಡೆಯಾಜ್ಞೆ ನೀಡಿತು. ತಡೆಯಾಜ್ಞೆ ತೆರವುಗೊಳಿಸುವ ಕುರಿತಂತೆ ಕೇರಳ ಹೈಕೋರ್ಟ್‍ನಲ್ಲಿ ಕೂಡಾ ಹೊಂಬಾಳೆ ಸಂಸ್ಥೆಗೆ ಹಿನ್ನಡೆಯಾಗಿತ್ತು. ಕೆಳಹಂತದ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಕಾರಣ, ತಡೆಯಾಜ್ಞೆ ತೆರವು ಸಾಧ್ಯವಿಲ್ಲ ಎಂದಿತ್ತು ಹೈಕೋರ್ಟ್. ಇದರ ಮಧ್ಯೆ ನಿನ್ನೆ ಇದ್ದಕ್ಕಿದ್ದಂತೆ ಸಂಚಲನ.

  ಕೇರಳದ ಕೋಝಿಕ್ಕೋಡ್ ನ್ಯಾಯಾಲಯದಲ್ಲಿ ಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವಾಯ್ತು. ಅದೇ ಕೋರ್ಟಿನಲ್ಲಿ ತೈಕ್ಕುಡಂ ಬ್ರಿಡ್ಜ್ ತಂಡದವರು ಅರ್ಜಿ ಸಲ್ಲಿಸಿದ್ದರು. ತೈಕ್ಕುಡಂ ತಂಡದ ಅರ್ಜಿಯನ್ನೇ ವಜಾ ಮಾಡಿತು ಕೋಝಿಕ್ಕೋಡ್ ನ್ಯಾಯಾಲಯ. ತಡೆಯಾಜ್ಞೆ ತೆರವು ಎಂದೇ ಎಲ್ಲ ಭಾವಿಸಿದರು. ಆದರೆ ಅದು ಕೋಝಿಕ್ಕೋಡ್ ನ್ಯಾಯಾಲಯದ ತೀರ್ಪಿಗೆ ಮಾತ್ರವೇ ಸೀಮಿತವಾಗಿತ್ತು.

  ಏಕೆಂದರೆ ತೈಕ್ಕುಡಂ ತಂಡದವರು ಪಾಲಕ್ಕಾಡ್ ಕೋರ್ಟಿನಲ್ಲಿಯೂ ಅರ್ಜಿ ಸಲ್ಲಿಸಿದ್ದರು. ಪಾಲಕ್ಕಾಡ್ ಕೋರ್ಟ್ ತಡೆಯಾಜ್ಞೆ ಜಾರಿ ಮಾಡಿದೆ.

  ಹಾಗಾದರೆ ಕಾಂತಾರದಲ್ಲಿ ಈ ಮೊದಲು ಇದ್ದ ವರಾಹರೂಪಂ.. ಹಾಡನ್ನೇ ಕೇಳಬಹುದಾ? ಇಲ್ಲ. ಸದ್ಯಕ್ಕೆ ಸಾಧ್ಯವಿಲ್ಲ. ಏಕೆಂದರೆ ಪಾಲಕ್ಕಾಡ್ ಕೋರ್ಟ್ ಇನ್ನೂ ತಡೆ ನೀಡಿಲ್ಲ. ಕೋರ್ಟ್ ಅದೇಶವನ್ನು ಹೀಗೆಯೇ ಬರಲಿದೆ ಎಂದು ಹೇಳೋಕೆ ಸಾಧ್ಯವಿಲ್ಲ. ತಡೆಯಾಜ್ಞೆ ಜಾರಿಯಲ್ಲಿದೆ.

 • ಸಪ್ತಮಿ ಗೌಡ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

  ಸಪ್ತಮಿ ಗೌಡ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್

  ಕಾಂತಾರದ ಲೀಲಾ ಪಾತ್ರ ಇಡೀ ದೇಶದ ಸಿನಿಮಾ ಮಂದಿಯ ಮೆಚ್ಚುಗೆಗೆ ಪಾತ್ರವಾಗಿದೆ. ಸಿಂಗಾರ ಸಿರಿಯೇ ಹಾಡು ಎಲ್ಲೆಲ್ಲೂ ಗುನುಗುತ್ತಿದೆ. ರಿಷಬ್ ಶೆಟ್ಟಿಯವರ ಶಿವನ ಪಾತ್ರದ ಜೊತೆ ಲೀಲಾಳ ರೊಮ್ಯಾನ್ಸ್ ರೋಮಾಂಚನ ಹುಟ್ಟಿಸುತ್ತದೆ. ಒಂದೆಡೆ ಕಾಂತಾರ ಯಶಸ್ಸಿನ ನಾಗಾಲೋಟ ಹೀಗಿರುವಾಗಲೇ ಮತ್ತೊಂದು ಚಿತ್ರಕ್ಕೆ ಲೀಲಾ.. ಅಲ್ಲಲ್ಲ.. ಸಪ್ತಮಿ ಗೌಡ ಹೊಸ ಚಿತ್ರಕ್ಕೆ ಯೆಸ್ ಎಂದಿದ್ದಾರೆ. ಹೀರೋ ಅಭಿಷೇಕ್ ಅಂಬರೀಷ್. ಡೈರೆಕ್ಟರ್ ಪೈಲ್ವಾನ್ ಕೃಷ್ಣ.

  ಕಾಳಿ ಚಿತ್ರಕ್ಕೆ ಸಪ್ತಮಿ ಗೌಡ ಯೆಸ್ ಎಂದಿದ್ದಾರೆ ಅನ್ನೋ ಮಾಹಿತಿ ಇದೆಯಾದರೂ ಕೃಷ್ಣ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಇದು ಚಾಮರಾಜನಗರ ಕೊಳ್ಳೆಗಾಲದ ಕಾವೇರಿ ಹೋರಾಟದ ಬ್ಯಾಕ್‍ಗ್ರೌಂಡ್‍ನಲ್ಲಿ ನಡೆಯುವ ಕಥೆಯಾಗಿದ್ದು ಚಿತ್ರದ ಚಿತ್ರೀಕರಣ ಇನ್ನೂ ಶುರುವಾಗಿಲ್ಲ.

 • ಸುಪ್ರೀಂಕೋರ್ಟ್ ಮೊದಲ ಮೆಟ್ಟಿಲಲ್ಲಿ ಕಾಂತಾರ ಗೆಲುವು

  ಸುಪ್ರೀಂಕೋರ್ಟ್ ಮೊದಲ ಮೆಟ್ಟಿಲಲ್ಲಿ ಕಾಂತಾರ ಗೆಲುವು

  ಕಾಪಿರೈಟ್ ವಿವಾದಕ್ಕೆ ಅರೆಸ್ಟ್ ಮಾಡಲು ಅವಕಾಶ ಇದೆಯಾ? ಇಂತಹದ್ದೊಂದು ಅಚ್ಚರಿಯ ಆಘಾತ ಕಾಂತಾರ ಚಿತ್ರತಂಡಕ್ಕೆ ಎದುರಾಗಿತ್ತು. ವರಾಹರೂಪಂ ಹಾಡು ತಮ್ಮಿಂದ ಕಾಪಿ ಮಾಡಿದ್ದು ಕೇರಳದಲ್ಲಿ ಕೇಸ್ ಹಾಕಲಾಗಿದೆ. ಅಲ್ಲ, ಅದು ಕದ್ದಿದ್ದಲ್ಲ ಎಂದು ಕಾಂತಾರ ತಂಡ ವಾದಿಸುತ್ತಿದೆ. ಈ ಮೊದಲು ಹಾಡನ್ನು ಚಿತ್ರದಿಂದಲೇ ತೆಗೆದು ಹಾಕಲಾಗಿತ್ತು. ಹೊಸ ವರ್ಷನ್ ಬಳಸಿಕೊಳ್ಳಲಾಗಿತ್ತು ನಂತರ ಅದಕ್ಕೆ ತಡೆಯಾಜ್ಞೆ ತಂದು ಈಗ ಒಟಿಟಿಯಲ್ಲಿ ಹಳೆಯ ವರಾಹ ರೂಪಂ.. ಹಾಡೇ ಲಭ್ಯವಿದೆ. ಇದರ ನಡುವೆ ಕೇಸ್ ಕೂಡಾ ನಡೆಯುತ್ತಿತ್ತು. ಈ ವಿಚಾರಣೆ ವೇಳೆ ಕೇರಳ ಹೈಕೋರ್ಟ್ ನ್ಯಾಯಮೂರ್ತಿ ಎ.ಬದ್ರುದ್ದೀನ್ ಅವರು ‘ಕಾಪಿರೈಟ್ ಪ್ರಕರಣದಲ್ಲಿ ಸಿವಿಲ್ ಕೋರ್ಟ್ ನಿಂದ ಆದೇಶ ಬರೋವರೆಗೂ ವರಾಹ ರೂಪಂ ಹಾಡನ್ನು ಬಳಕೆ ಮಾಡುವಂತಿಲ್ಲ’ ಎನ್ನುವ ಷರತ್ತೂ ಸೇರಿದಂತೆ ಹಲವು ಷರತ್ತುಗಳು ಹಾಕಿತ್ತು.

  ಅಲ್ಲದೆ ನಿರ್ಮಾಪಕ ಹಾಗೂ ನಿರ್ದೇಶಕರನ್ನು ಅರೆಸ್ಟ್ ಮಾಡಿದರೆ 50 ಸಾವಿರ ರೂ. ಶ್ಯೂರಿಟಿ ಮೇಲೆ ಜಾಮೀನು ನೀಡಬೇಕು ಎಂದು ಹೇಳಿತ್ತು. ಇದು ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಅವರನ್ನು ಅರೆಸ್ಟ್ ಮಾಡುವುದಕ್ಕೂ ಅವಕಾಶವಿದೆ ಎಂಬ ಸೂಚನೆ ಎಂಬಂತಿತ್ತು.  ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ ಚಿತ್ರತಂಡಕ್ಕೆ ಸುಪ್ರೀಂಕೋರ್ಟ್ ರಿಲೀಫ್ ಕೊಟ್ಟಿದೆ.

  ಸದ್ಯಕ್ಕೆ ವರಾಹರೂಪಂ ಹಾಡಿನ ಬಳಕೆ ಮಾಡಲು ಅನುಮತಿ ನೀಡಿರುವ ಸುಪ್ರೀಂಕೋರ್ಟ್, ಬಂಧನಕ್ಕೂ ತಡೆಯಾಜ್ಞೆ ಕೊಟ್ಟಿದೆ. ಆದರೆ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿದೆ. ಸದ್ಯಕ್ಕೆ ಕಾಂತಾರ ಚಿತ್ರತಂಡಕ್ಕೆ ಇದು ರಿಲೀಫ್.