` dollu - chitraloka.com | Kannada Movie News, Reviews | Image

dollu

  • ಡೊಳ್ಳುಗೆ ಡಾಲಿ ಸಾಥ್

    ಡೊಳ್ಳುಗೆ ಡಾಲಿ ಸಾಥ್

    ಗೂಗ್ಲಿ, ನಟಸಾರ್ವಭೌಮ, ರಣವಿಕ್ರಮ, ನಟರಾಜ ಸರ್ವಿಸ್, ಗೋವಿಂದಾಯ ನಮಃದಂತಾ ಕಮರ್ಷಿಯಲ್ ಹಿಟ್ ಕೊಟ್ಟು ಗೆದ್ದಿರುವ ನಿರ್ದೇಶಕ ಪವನ್ ಒಡೆಯರ್ ನಿರ್ಮಾಪಕರಾಗಿರುವ ಮೊದಲ ಚಿತ್ರ ಡೊಳ್ಳು. ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಮೆಚ್ಚುಗೆ, ಪ್ರಶಸ್ತಿಯನ್ನೂ ಗೆದ್ದಿರುವ ಡೊಳ್ಳುಗೆ ರಾಷ್ಟ್ರಪ್ರಶಸ್ತಿಯೂ ಸಿಕ್ಕಿದೆ. ಈಗ ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು ಆಗಸ್ಟ್ 26ಕ್ಕೆ ರಿಲೀಸ್ ಆಗುತ್ತಿದೆ.

    ಡೊಳ್ಳು ಚಿತ್ರಕ್ಕೆ ಡಾಲಿ ಧನಂಜಯ ಸಾಥ್ ಕೊಟ್ಟಿದ್ದಾರೆ. ಚಿತ್ರದ ಮಾಯಾನಗರಿ ಹಾಡನ್ನು ಡಾಲಿ ಬಿಡುಗಡೆ ಮಾಡಿರುವುದು ವಿಶೇಷ. ಹಳ್ಳಿಯ ಯುವಕ ನಗರಕ್ಕೆ ಕೆಲಸ ಅರಸಿ ಬಂದಾಗ ಹಿನ್ನೆಲೆಯಲ್ಲಿ ಬರುವ ಹಾಡಿದು. ಪ್ರದ್ಯುಮ್ನ ನರಹಳ್ಳಿ ಸಾಹಿತ್ಯಕ್ಕೆ ಅನಂತ್ ಕಾಮತ್ ಸಂಗೀತ ನೀಡಿದ್ದಾರೆ. ನಿರ್ದೇಶಕ ಸಾಗರ್ ಪುರಾಣಿಕ್ ಅವರೇ ಈ ಹಾಡಿಗೆ ಗಾಯಕರಾಗಿದ್ದಾರೆ.

  • ನ್ಯಾಷನಲ್ ಫಿಲ್ಮ್ ಅವಾರ್ಡ್ ಘೋಷಣೆ : ಕನ್ನಡದ ಡೊಳ್ಳುಗೆ ಪ್ರಶಸ್ತಿ

    ನ್ಯಾಷನಲ್ ಫಿಲ್ಮ್ ಅವಾರ್ಡ್ ಘೋಷಣೆ : ಕನ್ನಡದ ಡೊಳ್ಳುಗೆ ಪ್ರಶಸ್ತಿ

    68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಹಿಂದಿ ನಟ ಅಜಯ್ ದೇವಗನ್ ಮತ್ತು ತಮಿಳು ನಟ ಸೂರ್ಯ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೂರರೈ ಪೊಟ್ರು ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಮಡಿಲಿಗೆ ಹಾಕಿಕೊಂಡಿದೆ. ಕನ್ನಡಿಗ ಕ್ಯಾ.ಗೋಪಿನಾಥ್ ಅವರ ಜೀವನ ಚರಿತ್ರೆ ಆಧರಿಸಿದ್ದ ಬಯೋಪಿಕ್ ಸೂರರೈಪೊಟ್ರು ಅತೀ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.

    ಕನ್ನಡದ ಡೊಳ್ಳು ಎರಡು ಪ್ರಶಸ್ತಿ ಸ್ವೀಕರಿಸಿದೆ. ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಮತ್ತು ಪುರಸ್ಕಾರ ಎರಡನ್ನೂ ಗಳಿಸಿದ್ದ ಡೊಳ್ಳು ಚಿತ್ರವನ್ನು ಖ್ಯಾತ ನಿರ್ದೇಶಕ ಪವನ್ ಒಡೆಯರ್ ನಿರ್ಮಾಣ ಮಾಡಿದ್ದರು. ಸರ್ಕಾರದ ಪರವಾಗಿ ನಿರ್ದೇಶಿಸಿದ್ದ ಡಾಕ್ಯುಮೆಂಟರಿಗೆ ಗಿರೀಶ್ ಕಾಸರವಳ್ಳಿ ಪುರಸ್ಕಾರ ಪಡೆದುಕೊಂಡಿದ್ದಾರೆ. ನಟ ದಿ. ಸಂಚಾರಿ ವಿಜಯ್ ನಟಿಸಿದ್ದ ತಲೆದಂಡ ಕೂಡಾ ಪ್ರಶಸ್ತಿಗೆ ಭಾಜನವಾಗಿದೆ. ಕನ್ನಡದ ಖ್ಯಾತ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮಲಯಾಳಂ ಚಿತ್ರವೊಂದಕ್ಕಾಗಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

    ಕನ್ನಡದ ಅತ್ಯುತ್ತಮ ಚಿತ್ರ : ಡೊಳ್ಳು (ನಿರ್ಮಾಪಕ : ಪವನ್ ಒಡೆಯರ್. ನಿರ್ದೇಶಕ : ಸಾಗರ್ ಪುರಾಣಿಕ್)

    ಅತ್ಯುತ್ತಮ ಪರಿಸರ ಸಂದೇಶ ಇರುವ ಚಿತ್ರ : ತಲೆದಂಡ (ನಿರ್ಮಾಣ : ಕೃಪಾನಿಧಿ ಕ್ರಿಯೇಷನ್ಸ್. ನಿರ್ದೇಶಕ : ಪ್ರವೀಣ್ ಕೃಪಾಕರ್)

    ಬೆಸ್ಟ್ ಆಡಿಯೋಗ್ರಫಿ : ಡೊಳ್ಳು  (ಸೌಂಡ್ ಎಂಜಿನಿಯರ್ : ಜಾಬಿನ್ ಜಯಮ್)

    ಬೆಸ್ಟ್ ಆರ್ಟ್ & ಕಲ್ಚರ್ ಸಿನಿಮಾ : ನಾದದ ನವನೀತ ಡಾ.ಪಿಟಿ ವೆಂಕಟೇಶ್ ಕುಮಾರ್ (ನಿರ್ದೇಶನ : ಗಿರೀಶ್ ಕಾಸರವಳ್ಳಿ)

    ಉತ್ತಮ ನಟ : ಅಜಯ್ ದೇವಗನ್ (ತಾನಾಜಿ), ಸೂರ್ಯ (ಸೂರರೈಪೊಟ್ರು)

    ಅತ್ಯುತ್ತಮ ಚಿತ್ರ : ಸೂರರೈಪೊಟ್ರು

    ಉತ್ತಮ ನಟಿ : ಅಪರ್ಣ ಬಾಲಮುರುಳಿ(ಸೂರರೈಪೊಟ್ರು)

    ಅತ್ಯುತ್ತಮ ಮಲಯಾಳಂ ಚಿತ್ರ : ತಿಂಕಲಾಜ ನಿಚ್ಚಯಂ (ಅರ್ಥ :ಎಂಗೇಜ್ಮೆಂಟ್ ಈಸ್ ಆನ್ ಮಂಡೇ) ಈ ಚಿತ್ರದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ನಿರ್ದೇಶಕ ಪ್ರಸನ್ನ ಸತ್ಯನಾಥ್ ಹೆಗ್ಡೆ ಇಬ್ಬರೂ ಕನ್ನಡಿಗರು

  • ಸಂಪ್ರದಾಯ ಮುರಿದು ಗೆದ್ದ ಪವನ್ ಒಡೆಯರ್ ಡೊಳ್ಳು

    ಸಂಪ್ರದಾಯ ಮುರಿದು ಗೆದ್ದ ಪವನ್ ಒಡೆಯರ್ ಡೊಳ್ಳು

    ಡೊಳ್ಳು. ಇದು ಕಮರ್ಷಿಯಲ್ ಸಿನಿಮಾ ಅಲ್ಲ. ರಾಷ್ಟ್ರಪ್ರಶಸ್ತಿ ಗೆದ್ದ ಚಿತ್ರ. ದೇಶ ವಿದೇಶಗಳ ಚಲನಚಿತ್ರೋತ್ಸವಗಳಲ್ಲಿ ಮೆಚ್ಚುಗೆ ಮತ್ತು ಪ್ರಶಸ್ತಿ ಎರಡನ್ನೂ ಬಾಚಿಕೊಂಡ ಸಿನಿಮಾ. ಇಂಥಾದ್ದೊಂದು ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ ಇದ್ಯಾವುದೋ ಕತ್ತಲು ಬೆಳಕಿನ.. ಅರ್ಥವಾಗದ ಭಾರವಾದ ಸಂಭಾಷಣೆಗಳಿರೋ.. ಸ್ಲೋ ಮೋಷನ್ ಸಿನಿಮಾ ಎಂದು ಕೊಂಡಿದ್ದವರೇ ಜಾಸ್ತಿ. ಏಕೆಂದರೆ ಕನ್ನಡದ ಅವಾರ್ಡ್ ಸಿನಿಮಾಗಳ ಹಿಸ್ಟರಿಯೇ ಅಂಥದ್ದು. ಆದರೆ ಅದೆಲ್ಲವನ್ನೂ ಬ್ರೇಕ್ ಮಾಡಿ ಆರ್ಟ್ ಸಿನಿಮಾವನ್ನೂ ಅಚ್ಚುಕಟ್ಟಾಗಿ ಕಮರ್ಷಿಯಲ್ ಚಿತ್ರದಂತೆಯೇ ರೂಪಿಸಿ ತೆರೆಗೆ ತಂದಿರುವುದು ಪವನ್ ಒಡೆಯರ್.

    ಡೊಳ್ಳು ಅನ್ನೋ ಕಲೆ. ಆ ಕಲೆಯನ್ನು ದುಡ್ಡಿಗೆ ಮಾರಿಕೊಳ್ಳಬಾರದು ಹಾಗೂ ಪ್ರತಿ ವರ್ಷದ ಊರಿನ ಜಾತ್ರೆಯಲ್ಲಿ ಡೊಳ್ಳು ಕುಣಿತ ಮಾಡಲೇಬೇಕು ಎನ್ನುವ ಅಪ್ಪ. ಅಪ್ಪನ ಆಸೆಯಂತೆ ಡೊಳ್ಳು ಕುಣಿತ ಕಲಿತು ತಂಡ ಕಟ್ಟುವ ನಾಯಕ. ಆದರೆ ನಗರದತ್ತ ಆಕರ್ಷಿತರಾಗುವ ತಂಡದ ಹುಡುಗರು ಜಾತ್ರೆಗೆ ಬಂದು ಕಲೆಗಾಗಿ.. ದೇವರಂತ ಕಲೆಗಾಗಿ ಡೊಳ್ಳು ಕುಣಿತ ಕುಣಿಯುತ್ತಾರಾ..

    ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿರುವ ರೀತಿ ಹಾಗೂ ಇಂತಹ ಚಿತ್ರವನ್ನು ಪವನ್ ಒಡೆಯರ್ ಶ್ರೀಮಂತವಾಗಿಯೇ ನಿರ್ಮಾಣ ಮಾಡಿರುವ ರೀತಿ ಗಮನ ಸೆಳೆಯುತ್ತದೆ. ಕಾರ್ತಿಕ್ ನರೇಶ್, ನಿಧಿ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಚಂದ್ರ ಸುರೇಶ್ ನಟನೆ ಗಮನ ಸೆಳೆದಿದೆ.

    ಎಲ್ಲಕ್ಕಿಂತ ಹೆಚ್ಚಾಗಿ ಜನರ ಗಮನಕ್ಕೆ ಬಾರದೆ ಎಲ್ಲಿಯೋ ಕಳೆದು ಹೋಗುತ್ತಿದ್ದ ಅವಾರ್ಡ್ ಚಿತ್ರಗಳ ಮಧ್ಯೆ ಈ ಚಿತ್ರವನ್ನು ಥಿಯೇಟರಿಗೂ ತಂದು ಪ್ರೇಕ್ಷಕರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಿರುವ ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಗೆದ್ದಿದ್ದಾರೆ. ಹೊಸ ಸಂಪ್ರದಾಯಕ್ಕೆ ಗೆಲುವಾಗಲಿ.