ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪ್ರೀತಮ್ ಗುಬ್ಬಿ ಮತ್ತೊಮ್ಮೆ ಒಂದಾಗುತ್ತಿರೋದು ಗೊತ್ತಿರೋ ವಿಷಯ. ಅವರ ಚಿತ್ರಕ್ಕೀಗ ಟೈಟಲ್ ಫಿಕ್ಸ್ ಆಗಿದೆ. ಬಾನದಾರಿಯಲ್ಲಿ.. ಅನ್ನೋದೇ ಚಿತ್ರದ ಟೈಟಲ್.
ಬಾನದಾರಿಯಲ್ಲಿ.. ಎಂದ ಕೂಡಲೇ ಪುನೀತ್ ರಾಜಕುಮಾರ್ ನೆನಪಾಗುತ್ತಾರೆ. ಬಾನದಾರಿಯಲ್ಲಿ ಸೂರ್ಯ ಜಾರಿ ಹೋದ.. ಹಾಡು ಕಣ್ಣೆದುರು ನಿಲ್ಲುತ್ತೆ. ಚಿತ್ರದ ಸ್ಕ್ರಿಪ್ಟ್ ಮುಗಿದ ಮೇಲೆ ಅಚಾನಕ್ಕಾಗಿ ಹೊಳೆದ ಟೈಟಲ್ ಅದು. ಚಿತ್ರದ ಕಥೆಗೆ ಅದು ಅತ್ಯಂತ ಚೆನ್ನಾಗಿ ಸೂಟ್ ಆಗುತ್ತದೆ. ಪುನೀತ್ ಅವರ ನೆನಪೂ ಕೂಡಾ ಇದೆ ಎಂದಿದ್ದಾರೆ ಪ್ರೀತಮ್ ಗುಬ್ಬಿ.
ಸಂಗೀತ ನಿರ್ದೇಶನಕ್ಕೆ ಹರಿಕೃಷ್ಣ ಓಕೆ ಎಂದಿದ್ದಾರೆ. ಮೇ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದ್ದು, ವರ್ಷದ ಕೊನೆಗೆ ರಿಲೀಸ್ ಮಾಡುವ ಯೋಜನೆಯಲ್ಲಿದ್ದಾರೆ ಪ್ರೀತಮ್ ಗುಬ್ಬಿ.
ಮುಂಗಾರು ಮಳೆಗೆ ಕಥೆ ಬರೆದಿದ್ದ ಪ್ರೀತಮ್ ಗುಬ್ಬಿ, ನಂತರ ಗಣೇಶ್ ಅವರಿಗಾಗಿ ಮಳೆಯಲಿ ಜೊತೆಯಲಿ, ದಿಲ್ ರಂಗೀಲಾ ಮತ್ತು 99 ಚಿತ್ರಗಳನ್ನು ನಿರ್ದೇಶಿಸಿದ್ದರು. ಆ ಎಲ್ಲ ಚಿತ್ರಗಳೂ ಹಿಟ್ ಆದ ನಂತರ ಮತ್ತೊಮ್ಮೆ 4ನೇ ಬಾರಿಗೆ ಡೈರೆಕ್ಟರ್-ಹೀರೋ ಆಗಿ ಜೋಡಿಯಾಗುತ್ತಿದ್ದಾರೆ ಪ್ರೀತಮ್-ಗಣಿ.