ದೇವರ ಕೃಪೆಯಿದ್ದರೆ ಇಷ್ಟು ಹೊತ್ತಿಗೆ ದಿನಕರ್ ತೂಗುದೀಪ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ನಟಿಸಬೇಕಿದ್ದ ಸಿನಿಮಾ ಶುರುವಾಗಿರುತ್ತಿತ್ತು. ಆದರೀಗ ದಿನಕರ್ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಆ ಚಿತ್ರದಲ್ಲಿ ವಿರಾಟ್ ಹೀರೋ. ಕಿಸ್ ಚಿತ್ರದ ಮೂಲಕ ಬೆಳಕಿಗೆ ಬಂದ ಪ್ರತಿಭೆ ವಿರಾಟ್ ಅವರಿಗೆ ದಿನಕರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಚಿತ್ರದ ನಿರ್ಮಾಪಕರು. ಪುನೀತ್-ದಿನಕರ್ ಚಿತ್ರಕ್ಕೆ ನಿರ್ಮಾಪಕರಾಗಿದ್ದವರೂ ಜಯಣ್ಣ-ಭೋಗೇಂದ್ರ ಜೋಡಿಯೇ.
ಹೀಗಾಗಿ.. ಆ ತಕ್ಷಣ ಎಲ್ಲರಿಗೂ ಕಾಡಿದ್ದ ಪ್ರಶ್ನೆ ಒಂದೇ. ಪುನೀತ್ ಅವರಿಗೆ ಬರೆದಿದ್ದ ಕಥೆಯನ್ನೇ ವಿರಾಟ್ ಅವರಿಗೆ ಸಿನಿಮಾ ಮಾಡ್ತಿದ್ದಾರಾ ದಿನಕರ್ ತೂಗುದೀಪ ಅನ್ನೋದು. ಅದಕ್ಕೆ ದಿನಕರ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಅಪ್ಪು ಸರ್‍ಗಾಗಿ ಕಥೆ ಬರೆದಿದ್ದೆ. ಆದರೆ ಈಗ ವಿರಾಟ್ ಅವರಿಗೆ ಮಾಡ್ತಿರೋದು ಆ ಕಥೆಯಲ್ಲ. ವಿರಾಟ್ ಅವರಿಗೆ ಸಂಭಾಷಣೆಕಾರ ರಘು ನಿಡುವಳ್ಳಿ ಅವರು ಬರೆದಿದ್ದ ಕಥೆಯನ್ನು ಆಯ್ಕೆ ಮಾಡಿಕೊಂಡು ಡೆವಲಪ್ ಮಾಡಿದ್ದೇವೆ. ಅಪ್ಪು ಸರ್‍ಗೆ ಬರೆದಿದ್ದ ಕಥೆಗೂ, ಈ ಕಥೆಗೂ ಸಂಬಂಧವೇ ಇಲ್ಲ ಎಂದಿದ್ದಾರೆ ದಿನಕರ್.
ಇನ್ನೊಂದು ವಾರದಲ್ಲಿ ಚಿತ್ರದ ಉಳಿದ ಕಲಾವಿದರು, ತಂತ್ರಜ್ಞರ ಆಯ್ಕೆ ಮುಗಿಯಲಿದೆ. ಅಷ್ಟು ಹೊತ್ತಿಗೆ ವಿರಾಟ್ ನಟಿಸುತ್ತಿರೋ ಅದ್ಧೂರಿ ಲವರ್ ಕೂಡಾ ಮುಗಿಯಲಿದೆ. ನಂತರ ಈ ಚಿತ್ರದ ಚಿತ್ರೀಕರಣ ಶುರುವಾಗಲಿದೆ.