ಸ್ಟಾರ್ ಆದ ನಂತರ ಹಲವರು ಹೊಸಬರನ್ನು ದೂರವೇ ಇಟ್ಟುಬಿಡುತ್ತಾರೆ. ಆದರೆ ದುನಿಯಾ ವಿಜಯ್ ಈ ವಿಷಯದಲ್ಲಿ ವಿಶೇಷ. ತಮ್ಮ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ನೀಡೋದ್ರಲ್ಲಿ ಅವರು ಸದಾ ಮುಂದು. 15 ವರ್ಷಗಳ ಹಿಂದೆ ನಾಯಕರಾದ ವಿಜಯ್, ನಂತರ ನಿರ್ಮಾಪಕರಾಗಿ, ನಿರ್ದೇಶಕರೂ ಆಗಿ ಗೆದ್ದಿದ್ದಾರೆ. ಈಗ ತಮ್ಮ ನಿರ್ದೇಶನದ 2ನೇ ಸಿನಿಮಾದಲ್ಲೂ ಹೊಸಬರಿಗೆ ಚಾನ್ಸ್ ಕೊಡೋ ಸಂಪ್ರದಾಯ ಮುಂದುವರೆಸಿದ್ದಾರೆ.
ಮೊದಲ ಸಿನಿಮಾ ‘ಸಲಗ’ದಲ್ಲಿ ಅವರು ಹಲವು ಹೊಸ ಪ್ರತಿಭೆಗಳನ್ನು ಗುರುತಿಸಿದ್ದ ವಿಜಯ್ ಈಗ ಭೀಮ ಚಿತ್ರದಲ್ಲೂ ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಈಗಾಗಲೇ ಭೀಮ ಚಿತ್ರದ ವಿಲನ್ ಆಗಿ ಮಂಜು ಎಂಬ ಬಾಡಿ ಬಿಲ್ಡರ್ನ್ನ ಆಯ್ಕೆ ಮಾಡಿರೋ ವಿಜಯ್, ತಮ್ಮ ಸಿನಿಮಾದ ಇನ್ನೊಂದು ಖಡಕ್ ಪಾತ್ರ ಗಿರಿಜಾಗೂ ಆಯ್ಕೆ ಮಾಡಿಕೊಂಡಿರೋದು ಹೊಸ ಪ್ರತಿಭೆಯನ್ನೇ. ಗಿರಿಜಾ ಪಾತ್ರ ಮಾಡುತ್ತಿರೋ ಯುವತಿಯ ಹೆಸರು ಪ್ರಿಯಾ ಶಠಮರ್ಷಣ. ರಂಗಭೂಮಿ ಕಲಾವಿದೆ. ನಟನದಲ್ಲಿ ಹಲವು ನಾಟಕ ಮಾಡಿರುವ ಪ್ರಿಯಾ, ಚಾಮ ಚೆಲುವೆ ನಾಟಕದಲ್ಲಿ ಗಮನ ಸೆಳೆದಿದ್ದರು.
ಅದೊಂದು ಪ್ರಾಮಾಣಿಕ ಮತ್ತು ಖಡಕ್ ಪೊಲೀಸ್ ಅಧಿಕಾರಿಯ ಪಾತ್ರ. ಖಡಕ್ ಆಫೀಸರ್ ಪಾತ್ರಕ್ಕೆ ಮಹಿಳೆ ಇದ್ದರೆ ಚೆನ್ನಾಗಿರುತ್ತೆ ಎಂದುಕೊಂಡು ಈ ಪಾತ್ರ ರೂಪಿಸಿದೆ. ಇದುವರೆಗೆ ಅವರು ನಟಿಸಿರುವ ದೃಶ್ಯಗಳಲ್ಲಿ ನನ್ನ ಆಯ್ಕೆ ಸರಿಯಾಗಿದೆ ಎಂದು ಸಾಬೀತು ಮಾಡಿದ್ದಾರೆ ಎಂದು ಶಹಬ್ಬಾಸ್ ಎಂದಿದ್ದಾರೆ ದುನಿಯಾ ವಿಜಯ್.
ಅಷ್ಟೇ ಅಲ್ಲ, ಈ ಚಿತ್ರದ ಸಾಹಸ ನಿರ್ದೇಶಕ ಶಿವು ಕೂಡಾ ಹೊಸಬರೇ. ಮಾಸ್ ಮಾದ ಬಳಿ ಕೆಲಸ ಮಾಡುತ್ತಿದ್ದ ಶಿವು, ಇದುವರೆಗೆ ಸುಮಾರು 800 ಚಿತ್ರಗಳಲ್ಲಿ ಸ್ಟಂಟ್ ಮ್ಯಾನ್ ಆಗಿ ಕೆಲಸ ಮಾಡಿದ್ದವರು. ವಿಜಯ್ ಸರ್ ನನಗೆ ಸ್ವತಂತ್ರವಾಗಿ ಸಾಹಸ ದೃಶ್ಯ ಕಂಪೋಸ್ ಮಾಡೋ ಅವಕಾಶ ಕೊಟ್ಟಿದ್ದಾರೆ. ನನ್ನಂತಹ ಹೊಸಬರಿಗೆ ಅವಕಾಶ ಕೊಡುತ್ತಿದ್ದಾರೆ. ಖಂಡಿತಾ ಅವರ ಆಯ್ಕೆಗೆ ನ್ಯಾಯ ಸಲ್ಲಿಸುತ್ತೇನೆ ಎಂದಿದ್ದಾರೆ ಶಿವು.
ಇದು ಕೃಷ್ಣ ಸಾರ್ಥಕ್ ನಿರ್ಮಾಣದ ಸಿನಿಮಾ. ಸದ್ಯಕ್ಕೆ ಕೃಷ್ಣ ಸಾರ್ಥಕ್ ಬೈರಾಗಿ ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಭೀಮ ಚಿತ್ರದ ಶೂಟಿಂಗ್ ನಿರಂತರವಾಗಿ ನಡೆಯುತ್ತಿದೆ.