ದುನಿಯಾ ವಿಜಯ್ ಅಭಿನಯದ, ಅವರೇ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಸಲಗ ಚಿತ್ರ, ಆಷಾಡಕ್ಕೆ ಮೊದಲೇ ಸೆಟ್ಟೇರಿದೆ. ವಿಶೇಷವೆಂದರೆ ಚಿತ್ರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಆಶೀರ್ವಾದ ಸಿಕ್ಕಿರುವುದು.
ಈ ಹಿಂದೆ ಕೆ.ಪಿ.ಶ್ರೀಕಾಂತ್ ನಿರ್ಮಾಣದ ಮೈಲಾರಿ ಹಾಗೂ ಟಗರು ಚಿತ್ರಗಳಿಗೆ ಕ್ಲಾಪ್ ಮಾಡಿ ಶುಭ ಹಾರೈಸಿದ್ದವರು ಸಿದ್ದರಾಮಯ್ಯ. ಎರಡೂ ಚಿತ್ರಗಳು ಸೂಪರ್ ಡ್ಯೂಪರ್ ಹಿಟ್. ಈಗ ಸಲಗ ಸಿನಿಮಾಗೆ ಸಿದ್ದು ಶುಭಕೋರಿದ್ದಾರೆ, ಶ್ರೀಕಾಂತ್ ಮತ್ತೊಂದು ಗೆಲುವಿನ ಕನಸು ಕಾಣುತ್ತಿದ್ದಾರೆ.
ಸಲಗದ ಕಥೆ ನನಗೆ ಗೊತ್ತಿಲ್ಲ. ವಿಜಯ್ ಹೇಳಿಲ್ಲ. ಅದರೆ, ಗುಂಪು ಸಲಗಗಳಿಗಿಂತ ಒಂಟಿಸಲಗಗಳು ಹೆಚ್ಚು ಅಪಾಯಕಾರಿ ಎಂದ ಸಿದ್ದರಾಮಯ್ಯ, ತಾವು ದುನಿಯಾ ವಿಜಯ್ ಅಭಿನಯದ ಎರಡು ಚಿತ್ರಗಳನ್ನು ನೋಡಿದ್ದೇನೆ ಎಂದು ನೆನಪಿಸಿಕೊಂಡರು.
ಮುಹೂರ್ತ ಸಮಾರಂಭಕ್ಕೆ ಕಿಚ್ಚ ಸುದೀಪ್, ರಾಘವೇಂದ್ರ ರಾಜ್‍ಕುಮಾರ್, ಸಂಸದ ಡಿ.ಕೆ.ಸುರೇಶ್ ಮೊದಲಾದವರು ಹಾಜರಿದ್ದು ಶುಭ ಹಾರೈಸಿದರು.