ನಾಟಿ ಕೋಳಿ ಹಿಡಿದು ನಿಂತಿರೋ ಈಕೆಯ ಹೆಸರು ಅಶ್ವಿನಿ. ಭೀಮ ಚಿತ್ರಕ್ಕೆ ಹೀರೋಯಿನ್. ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ಎರಡನೇ ಚಿತ್ರ ಭೀಮ. ಮೊದಲ ಚಿತ್ರದಲ್ಲೂ ಹಲವು ಹೊಸಬರಿಗೆ ಅವಕಾಶ ಕೊಟ್ಟಿದ್ದ ವಿಜಯ್, ಈ ಚಿತ್ರದ ಮೂಲಕ ಹೊಸ ನಾಯಕಿಯನ್ನೇ ಪರಿಚಯ ಮಾಡಿದ್ದಾರೆ. ಅದೂ ಪ್ರೇಮಿಗಳ ದಿನಾಚರಣೆಯಂದು. ನಾಯಕಿಯ ಪರಿಚಯ ಮಾಡುವುದಕ್ಕೆ ಆಯ್ಕೆ ಮಾಡಿರುವ ದಿನದಲ್ಲೇ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ಅಶ್ವಿನಿ ಜೋಡಿ ಎಂಬುದು ಗೊತ್ತಾಗುತ್ತೆ.
ಅಶ್ವಿನಿ ಬೆಳ್ಳಿತೆರೆ, ಸಿನಿಮಾ ಹೊಸದು. ಆದರೆ ನಟನೆ ಹೊಸದಲ್ಲ. ಈಗಾಗಲೇ ರಂಗಭೂಮಿಯಲ್ಲಿ 15ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿರುವ ಕಲಾವಿದೆ. ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಬೆಂಗಳೂರಿನಲ್ಲೇ ಆದರೂ, ಅಪ್ಪ-ಅಮ್ಮನ ಮೂಲಕ ಹಳ್ಳಿಯ ಸೊಗಡು ಚೆನ್ನಾಗಿಯೇ ಗೊತ್ತು. ದುನಿಯಾ ವಿಜಯ್ ಸೆಲೆಕ್ಷನ್ ಮತ್ತು ಫೋಟೋ ಸೆಷನ್ ಹೇಗಿರುತ್ತೆ ಅನ್ನೋದಕ್ಕೆ ಸಿಂಪಲ್ ಎಕ್ಸಾಂಪಲ್ ಹೇಳಬೇಕೆಂದರೆ ಅಶ್ವಿನಿಯ ಫೋಟೋ ರಿಲೀಸ್ ಆಗಿದ್ದೇ ತಡ, ನಾಟಿ ಕೋಳಿ, ನಾಟಿ ಹೀರೋಯಿನ್, ನಾಟಿ ಕ್ರಷ್ ಎಂದೆಲ್ಲ ಕರೆಯೋಕೆ ಶುರು ಮಾಡಿಬಿಟ್ಟರು. ಒಂದು ಫೋಟೋ ಯಾವ ಲೆವೆಲ್ಲಿನ ಕಿಚ್ಚು ಹಚ್ಚಬಹುದೋ ಅಷ್ಟನ್ನೂ ಭೀಮ ಚಿತ್ರದ ಒಂದು ಫೋಟೋ ಹಚ್ಚಾಗಿತ್ತು.
ನನ್ನನ್ನು ಒಂದು ಬುಕ್ ಶೋನಲ್ಲಿ ನೋಡಿದರು. ಭೀಮ ಚಿತ್ರದಲ್ಲಿ ಒಂದು ಪಾತ್ರ ಇದೆ, ಮಾಡ್ತೀರಾ ಎಂದು ಕೇಳಿದರು. ನಾನು ಯೆಸ್ ಎಂದಿದ್ದರೆ. ಅದಾದ ನಂತರ ನಾನು ಮರೆತೂಬಿಟ್ಟಿದ್ದೆ. ಅವರು ಮರೆತಿರಲಿಲ್ಲ. 6 ತಿಂಗಳ ಹಿಂದೆ ಕರೆ ಬಂತು. ಆಗಲೇ ನನಗೆ ಗೊತ್ತಾಗಿದ್ದು, ನನ್ನದು ಹೀರೋಯಿನ್ ಪಾತ್ರ ಅಂತ ಎಂದು ಹೇಳುತ್ತಾರೆ ಅಶ್ವಿನಿ.
ಹೊಸ ಮುಖ ಹುಡುಕುತ್ತಾ ಹೊರಟಾಗ ಸಿಕ್ಕ ಪ್ರತಿಭೆ ಅಶ್ವಿನಿ. ರಂಗಭೂಮಿಯಲ್ಲಿನ ಅವರ ನಟನೆ ನೋಡಿ ಆಯ್ಕೆ ಮಾಡಿದೆ ಎನ್ನುತ್ತಾರೆ ಡೈರೆಕ್ಟರ್ ವಿಜಯ್ ಕುಮಾರ್. ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣದ ಚಿತ್ರ ಭೀಮ.