ಅವರು ಮಾಡಿದ ಮೊದಲ ಸಿನಿಮಾ ದುನಿಯಾ. ಅದು ಅವರ ಹೆಸರಿಗೇ ಅಂಟಿಕೊಂಡಿತು. ದುನಿಯಾ ಸೂರಿ ಆಗಿಬಿಟ್ಟರು ಸೂರಿ. ಅದಾದ ಮೇಲೆ ಹಲವು ಹಿಟ್ ಕೊಟ್ಟರೂ, ಅವರಿಗೆ ಹೊಸದೊಂದು ಚಾರ್ಮ್ ಕೊಟ್ಟಿದ್ದು ಟಗರು. ಅದಾದ ಮೇಲೆ ಟಗರು ಸೂರಿ ಆಗಿಬಿಟ್ಟರು. ಈಗ ಮಂಕಿ ಟೈಗರ್ ಜೊತೆ ಬಂದಿದ್ದಾರೆ. ಸೂರಿ ಕನ್ನಡದ ಬೇರೆ ನಿರ್ದೇಶಕರ ಹಾಗಲ್ಲ. ಅವರ ಕೆಲಸವೇ ಡಿಫರೆಂಟ್. ಅದನ್ನು ನಿವೇದಿತಾ ಅವರ ಬಾಯಲ್ಲಿ ಕೇಳಬೇಕು.
ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲಿ ನಟಿಸಿರುವುದಕ್ಕೆ ಹೆಮ್ಮೆಯಿದೆ. ಮೊದಲು ಸೂರಿ ಅವರ ನಿರ್ದೇಶನದ ಶೈಲಿ ಅರ್ಥವಾಗಲು ಅವರಿಗೆ ಸಾಕಷ್ಟು ಸಮಯ ಹಿಡಿಯಿತು. ಅರ್ಥವಾದ ಮೇಲೆ ಗೌರವ ಹೆಚ್ಚಿತು ಎನ್ನುತ್ತಾರೆ ನಿವೇದಿತಾ. ಅವರು ಇಲ್ಲಿ ದೇವಿಕಾ ಎಂಬ ಹೆಸರಿನ ಪಾತ್ರ ಮಾಡಿದ್ದಾರೆ.
ಮಂಕಿ ಸೀನನ ಬದುಕಿನ ಕಥೆ ಇದು. ಕೆಲವು ಘಟನೆಗಳಿಂದ ದೇವಿಕಾಳ ಬದುಕಿನಲ್ಲಿ ಹೇಗೆಲ್ಲಾ ಪರಿವರ್ತನೆಯಾಗುತ್ತದೆ; ಯಾವ ಹಾದಿಯಲ್ಲಿ ಹೋಗುತ್ತಾಳೆ ಎನ್ನುವುದೇ ಕಥೆ ಎನ್ನುವ ನಿವೇದಿತಾ ಮತ್ತೆ ಮಾತು ಶುರುವಿಟ್ಟುಕೊಳ್ಳೋದು ಸೂರಿ ಬಗ್ಗೆ.
ಅವರ ಕೆಲಸದ ಶೈಲಿಯೇ ಭಿನ್ನ. ಈ ಕಥೆಯ ಬಗ್ಗೆ ಒಂದು ಸಾವಿರ ಪುಟಗಳನ್ನು ಬರೆದಿರಬಹುದು. ನಾನು ಅವರ ಕಚೇರಿಗೆ ಹೋದಾಗಲೆಲ್ಲಾ ಟೇಬಲ್ ಮೇಲೆ ಏನಾದರೂ ಬರೆಯುತ್ತಲೇ ಇರ್ತಾ ಇದ್ರು. ಯಾವುದಕ್ಕೂ ಅಂಟಿಕೊಳ್ಳುತ್ತಿರಲಿಲ್ಲ; ಎಲ್ಲವೂ ಸಿದ್ಧವಾಗಿ ಸೆಟ್ಟಿಗೆ ಬಂದರೂ, ಹೊಸದೇನಾದರೂ ಹೊಳೆದರೆ.. ಇಷ್ಟವಾದರೆ.. ಅದನ್ನು ಇಂಪ್ಲಿಮೆಂಟ್ ಮಾಡೋದು ಸೂರಿ ಸ್ಟೈಲ್. ಅವರೊಬ್ಬ ಚಿತ್ರ ಕಲಾವಿದ. ಅವರ ಮನಸ್ಸಿನಲ್ಲಿ ಒಂದು ಚಿತ್ರವಿರುತ್ತದೆ. ಅದನ್ನು ಕ್ಯಾನ್ವಾಸ್ ಮೇಲೆ ತರಲು ಯತ್ನಿಸುತ್ತಾರೆ. ಬರೆಯುತ್ತಾ ಹೋದಂತೆ ಹೊಸ ಬಣ್ಣ, ಛಾಯೆಗಳು ಮೂಡುತ್ತವೆ. ಹೊಸ ಆಲೋಚನೆ ಮೂಡಿದರೆ ಅದಕ್ಕೆ ಪುಷ್ಟಿ ನೀಡುತ್ತಾರೆ. ಹಾಗೆ ರೂಪುಗೊಂಡಿರುವುದೇ ಪಾಪ್‌ಕಾರ್ನ್ ಮಂಕಿಟೈಗರ್ ಎನ್ನವುದು ನಿವೇದಿತಾ ಕಂಡ ಸಿನಿಮಾ ಕಥೆ.
ಎಂದಿನಂತೆ ಈ ಬಾರಿಯೂ ಸೂರಿ ಚೌಕಟ್ಟು ಬ್ರೇಕ್ ಮಾಡಿಕೊಂಡೇ ಸಿನಿಮಾ ಮಾಡಿದ್ದಾರೆ. ತಂಡದ ಎಲ್ಲರನ್ನೂ ಒಟ್ಟುಗೂಡಿಸಿ ಸಿನಿಮಾ ಮಾಡಿದ್ದಾರೆ ಎನ್ನುವ ನಿವೇದಿತಾ, ಧನಂಜಯ್ ಬಗ್ಗೆ ಹೇಳೋದೇ ಬೇರೆ. ನನಗೆ ಒಂದು ದುಃಖದ ಸೀನ್ ಇದ್ದರೆ, ಇಡೀ ದಿನ ದುಃಖದ ಮೂಡಲ್ಲಿಯೇ ಇರ್ತೇನೆ. ಆದರೆ ಧನಂಜಯ್ ಹಾಗಲ್ಲ, ಸೀನ್ಗೆ ತಕ್ಕಂತೆ ಮೂಡ್ ಬದಲಿಸಿಕೊಳ್ತಾರೆ ಎನ್ನುವ ನಿವೇದಿತಾಗೆ ಸಿನಿಮಾ ಮೇಲೆ ತುಂಬಾ ನಿರೀಕ್ಷೆಯಿದೆ.