ರಣಬೀರ್ ಕಪೂರ್, ಅಲಿಯಾ ಭಟ್ ಪ್ರಧಾನ ಪಾತ್ರದಲ್ಲಿರೋ ಬ್ರಹ್ಮಾಸ್ತ್ರ ಚಿತ್ರ ಮುಂದಿನ ವಾರ ರಿಲೀಸ್ ಆಗುತ್ತಿದೆ. ಇವರಷ್ಟೇ ಅಲ್ಲ, ಅಮಿತಾಭ್ ಬಚ್ಚನ್, ಅಕ್ಕಿನೇನಿ ನಾಗಾರ್ಜುನ ಕೂಡಾ ಚಿತ್ರದಲ್ಲಿದ್ದಾರೆ. ಬಾಹುಬಲಿ, ಕೆಜಿಎಫ್, ಪುಷ್ಪ ಮಾದರಿಯಲ್ಲಿ ಈ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದೆ. ಮೊದಲ ಭಾಗ ರಿಲೀ ಆಗುವುದು ಸೆಪ್ಟೆಂಬರ್ 9ಕ್ಕೆ. ಆದರೆ ಚಿತ್ರದ ಮೇಲೀಗ ಹಿಂದೂಗಳ ಕೆಂಗಣ್ಣು ಬಿದ್ದಿದೆ.
ಚಿತ್ರದ ಟ್ರೇಲರಿನಲ್ಲಿ ನಾಯಕನ ಪಾತ್ರ ಶೂ ಹಾಕಿಕೊಂಡೇ ದೇವಸ್ಥಾನ ಪ್ರವೇಶಿಸುವ ಹಾಗೂ ಶೂ ಹಾಕಿಕೊಂಡೇ ದೇವಸ್ಥಾನದ ಘಂಟೆ ಬಾರಿಸುವ ದೃಶ್ಯವಿದೆ. ದೇವಸ್ಥಾನದ ಪ್ರಾಂಗಣದಲ್ಲಿ ನಡೆಯುವ ನೃತ್ಯದಲ್ಲೂ ಹೀರೋ ಶೂ ಹಾಕಿರುತ್ತಾನೆ. ಇದನ್ನು ಉದ್ದೇಶಪೂರ್ವಕಾಗಿಯೇ ಮಾಡಲಾಗಿದೆ ಎನ್ನುವುದು ಆರೋಪ. ಇದರ ಜೊತೆಗೆ ಚಿತ್ರದಲ್ಲಿ ನಾಯಕಿಯಾಗಿರೋ ಆಲಿಯಾ ಭಟ್ ಅವರ ಹಿಂದಿನ ಹೇಳಿಕೆಗಳು ಕೂಡಾ ಈ ಬಾಯ್ಕಾಟ್ ಅಭಿಯಾನಕ್ಕೆ ಕಾರಣವಾಗಿದೆ.
ಹಾಗೆ ನೋಡಿದರೆ ಬ್ರಹ್ಮಾಸ್ತ್ರ ಚಿತ್ರದಲ್ಲಿ ಶಿವ, ಆಂಜನೇಯ, ಬ್ರಹ್ಮಾಸ್ತ್ರ, ವೇದ ಮಂತ್ರಗಳ ಹಿನ್ನೆಲೆಯ ಕಥೆ ಇದ್ದಂತಿದೆ. ಆದರೆ ಅಂಥಾದ್ದೊಂದು ಸಬ್ಜೆಕ್ಟ್ ತೆಗೆದುಕೊಂಡು ಸಿನಿಮಾ ಮಾಡಿದವರಿಗೆ ಯಾವ ದೇವಸ್ಥಾನದಲ್ಲೂ ಚಪ್ಪಲಿ ಅಥವಾ ಶೂ ಹಾಕಿಕೊಂಡು ಭಕ್ತರು ಬರಲ್ಲ ಎನ್ನುವ ಕಾಮನ್ ಸೆನ್ಸ್ ಇರಲಿಲ್ಲವಾ? ಎನ್ನುವುದು ಬಾಯ್ಕಾಟ್ ಬೆಂಬಲಿಗರ ಪ್ರಶ್ನೆ.
ಒಟ್ಟಿನಲ್ಲಿ ಬಾಲಿವುಡ್‍ಗೆ ಗ್ರಹಚಾರ ಕೆಟ್ಟಿದೆ. ಒಂದಲ್ಲ ಒಂದು ಕಾರಣಕ್ಕೆ ಹಿಂದಿ ಚಿತ್ರಗಳು ಮಕಾಡೆ ಬೀಳುತ್ತಿವೆ. ಆದರೆ ಈ ಬಾಯ್ಕಾಟ್‍ಗಿಂತ ಹೆಚ್ಚಾಗಿ ಹಿಂದಿಯವರ ಕಥೆ ಹಾಗೂ ನಿರೂಪಣೆಯಲ್ಲಿ ಯಾವುದೇ ಹೊಸತನವಿಲ್ಲ ಎಂಬುದಂತೂ ಸತ್ಯ.