ಲವ್ 360. ಈಗ ಥಿಯೇಟರಿನಲ್ಲಿರೋ ಸಿನಿಮಾ. ಈ ಸಿನಿಮಾಗು ಕ್ರಿಕೆಟ್ ಲೋಕದ ದಂತಕಥೆ ಎಬಿ ಡಿವಿಲಿಯರ್ಸ್‍ಗೂ ಏನು ಸಂಬಂಧ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಅದನ್ನ ಖುದ್ದು ಶಶಾಂಕ್ ಅವರೇ ಹೇಳಿಕೊಂಡಿದ್ದಾರೆ.
ಹೇಳಿಕೇಳಿ ಶಶಾಂಕ್ 14 ವರ್ಷಗಳ ನಂತರ ಹೊಸಬರಿಗಾಗಿ ನಿರ್ದೇಶಿಸಿರೋ ಸಿನಿಮಾ ಲವ್ 360. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಯಶ್-ರಾಧಿಕಾ ಪಂಡಿತ್‍ರನ್ನು ತೆರೆಗೆ ತಂದು ಗೆಲ್ಲಿಸಿದ್ದು ಇವರೇ. ಈಗ 14 ವರ್ಷಗಳ ನಂತರ ಮತ್ತೊಮ್ಮೆ ಹೊಸಬರ ಚಿತ್ರ ಸಿದ್ಧ ಮಾಡಿದ್ದಾರೆ. ಲವ್ 360.
ಈ ಚಿತ್ರದಲ್ಲೂ ಅಷ್ಟೆ, ಹೀರೋ ಪ್ರವೀಣ್ ಅವರನ್ನು ಖುದ್ದು ಶಶಾಂಕ್ ಅವರೇ ಪರಿಚಯಿಸುತ್ತಿದ್ದಾರೆ. ನಾಯಕಿ ರಚನಾ ಇಂದರ್ ಹೆಂಗೆ ನಾವು ಖ್ಯಾತಿಯ ಚೆಲುವೆ. ಎರಡು ಚಿತ್ರಗಳಲ್ಲಿ ನಟಿಸಿದ್ದರೂ ಚಿತ್ರರಂಗದ ಮಟ್ಟಿಗೆ ಹೊಸ ಮುಖವೇ.
ಚಿತ್ರದಲ್ಲಿ ಲವ್ ಸ್ಟೋರಿ ಜೊತೆ ಕ್ರೈಂ, ಥ್ರಿಲ್ಲರ್ ಕೂಡಾ ಇದೆ. ಹೀಗಾಗಿ ಚಿತ್ರಕ್ಕೆ ಯಾವ ಟೈಟಲ್ ಇಡಬೇಕು ಎಂದು ಯೋಚಿಸುತ್ತಿದ್ದಾಗ ಕಣ್ಣ ಮುಂದೆ ಬಂದಿದ್ದು ಎಬಿಡಿ. ಕ್ರಿಕೆಟ್‍ನಲ್ಲಿ ಅವರನ್ನ ಮಿಸ್ಟರ್ 360 ಎಂದು ಕರೆಯುತ್ತಾರೆ. ಅದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಲವ್ 360 ಅನ್ನೋ ಟೈಟಲ್ ಇಟ್ಟೆ ಎಂದಿದ್ದಾರೆ ಶಶಾಂಕ್.
ಎಬಿಡಿ ಹೇಗೆ ಮೈದಾನದ ಎಲ್ಲ ಮೂಲೆಗಳಿಗೂ.. ಎಂತಹುದೇ ಬಾಲಿಗೂ ಹೊಡೆಯುತ್ತಾರೋ.. ಅದೇ ರೀತಿ ಚಿತ್ರದ ಲವ್ ಸ್ಟೋರಿ. ನಾಯಕ ನಾಯಕಿಯನ್ನು ಹೇಗೇ ಇದ್ದರೂ ಪ್ರೀತಿಸುತ್ತಾನೆ ಎನ್ನುತ್ತಾರೆ ಶಶಾಂಕ್. ಚಿತ್ರವನ್ನು ಅರ್ಜುನ್ ಜನ್ಯ ಮ್ಯೂಸಿಕ್ ಮತ್ತು ಅಭಿಲಾಷ್ ಕಳತಿಯವರ ಸಿನಿಮಾಟೋಗ್ರಫಿ ಚಿತ್ರವನ್ನು ಇನ್ನೊಂದು ಲೆವೆಲ್ಲಿಗೆ ಏರಿಸಿದೆ ಎಂದು ಖುಷಿಯಾಗಿದ್ದಾರೆ ನಿರ್ಮಾಪಕರೂ ಆಗಿರುವ ಶಶಾಂಕ್.