ನಟನಾಗಿದ್ದಾಗ ಪ್ರೀತಿಸುವುದೇ ಬೇರೆ. ಕಲಾವಿದನಾಗಿದ್ದಾಗ ಆರಾಧಿಸುವುದೇ ಬೇರೆ. ಆದರೆ ರಾಜಕೀಯ ಹಾಗಲ್ಲ. ಅಲ್ಲಿಗೆ ಬರುತ್ತೇನೆ ಎಂದರೆ ಕೆಸರು, ಹೊಲಸು ಎರಚೋಕೆ ಜನ ಕಾಯ್ತಿರುತ್ತಾರೆ. ಪಾಲಿಟಿಕ್ಸ್ ಈಸ್ ನಾಟ್ ಕ್ಲೀನ್. ರಾಜಕೀಯಕ್ಕೆ ಬಂದು ಶುದ್ಧನಾಗಿ, ಶುಭ್ರನಾಗಿ ಇರುವವರು ಇಲ್ಲವೇ ಇಲ್ಲ. ಸುದೀಪ್ ಅವರಿಗೂ ಈ ಅನುಭವ ಮೊದಲ ದಿನದಲ್ಲೇ ಆಗಿದೆ.
ಸುದೀಪ್ ಬಿಜೆಪಿಗೆ ಸೇರ್ತಾರಂತೆ ಎನ್ನುವ ಸುದ್ದಿ ಖಚಿತವಾಗುವ ಮೊದಲೇ ನಟ ಪ್ರಕಾಶ್ ರೈ, ಸುದೀಪ್ ಮಾರಿಕೊಳ್ಳುವವರಲ್ಲ ಎಂದಿದ್ದರು. ಆ ಮೂಲಕ ಬಿಜೆಪಿ ಸೇರಿದರೆ ಮಾರಿಕೊಂಡಿರುತ್ತಾರೆ ಎಂಬ ಸಿಗ್ನಲ್`ನ್ನೂ ಕೊಟ್ಟಿದ್ದರು. ಸುದೀಪ್ ಏನೇ ಮಾತನಾಡಿರಲಿ, ಅವರೀಗ ಬಿಜೆಪಿ ನಾಯಕರಲ್ಲಿ ಒಬ್ಬರು. ಸುದೀಪ್ ಬಿಜೆಪಿಯ ಪ್ರಾಥಮಿಕ ಸದಸ್ಯರಲ್ಲದೇ ಇರಬಹುದು. ನಾನು ಬೊಮ್ಮಾಯಿ ಮಾಮ ಪರವಾಗಿರುತ್ತೇನೆ. ಅವರು ನನ್ನ ಕಷ್ಟ ಕಾಲದಲ್ಲಿ ಆಗಿರುವವರು. ನಾನು ಇಲ್ಲಿ ನಿಲುವುಗಳನ್ನು ತೆಗೆದುಕೊಳ್ಳುವುದಿಲ್ಲ. ನಾನು ಬಿಜೆಪಿ ಸೇರುತ್ತಿಲ್ಲ. ಸ್ಪರ್ಧೆ ಮಾಡುತ್ತಿಲ್ಲ.. ಹೀಗೆ ಯಾವ ಕಾರಣಗಳನ್ನೇ ಕೊಟ್ಟರೂ, ಸುದೀಪ್ ಉತ್ತರ ಕೊಡುವುದಕ್ಕೆ ಚೆನ್ನಾಗಿರುತ್ತದೆಯೇ ಹೊರತು, ಸುದೀಪ್ ಒಬ್ಬ ಬಿಜೆಪಿ `ನಾಯಕ’ನಾಗಿ ಹೊರಹೊಮ್ಮಿದ್ದಾರೆ. ಈ ವಿಷಯ ಹೊರಬಿದ್ದಿದ್ದೇ ತಡ.. ಹೇಗೆಲ್ಲ ಸುದೀಪ್ ಅವರನ್ನು ಟೀಕೆಗೆ ಗುರಿ ಮಾಡಬಹುದೋ.. ಎಲ್ಲವೂ ಆಗುತ್ತಿದೆ.
ಸುದೀಪ್ ಆರಂಭದ ದಿನಗಳಲ್ಲಿ ಕಿಚ್ಚ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಿರುದ್ಯೋಗಿ ಯುವಕನೊಬ್ಬ ಕಾರ್ಪೊರೇಟರ್, ಎಮ್‍ಎಲ್‍ಎ, ಸಿಎಂ ಆಗುವ ಕಥೆ ಇತ್ತು. ಆ ಚಿತ್ರದ ಕ್ಲೈಮಾಕ್ಸ್‍ನಲ್ಲಿ ಶಾಸಕರನ್ನು ಕಾಸು ಕೊಟ್ಟು ಖರೀದಿ ಮಾಡುವವರನ್ನು ಟೀಕಿಸುವ ಡೈಲಾಗ್ ಇತ್ತು. ಮೊದಲಿಗೆ ಹೊರ ಬಂದಿದ್ದೇ ಆ ವಿಡಿಯೋ.
ಅದಾದ ಮೇಲೆ ಪ್ರಕಾಶ್ ರೈ ನನಗೆ ಕಳವಳವಾಗಿದೆ. ಆತಂಕವಾಗಿದೆ. ನೋವಾಗಿದೆ ಎಂದು ಹೇಳಿಕೆ ನೀಡಿದರೆ, ಸೋಷಿಯಲ್ ಮೀಡಿಯಾದಲ್ಲಂತೂ ಸುದೀಪ್ ಅವರನ್ನು ಹೇಗೆಲ್ಲ ಬೇಕೋ ಅಷ್ಟೂ ಲೇವಡಿ ಮಾಡಿಬಿಡಿದರು.
ಸುದೀಪ್ ಅವರು ವಾಲ್ಮೀಕಿ ಜನಾಂಗದವರು. ಗೊತ್ತಿಲ್ಲದ ವಿಷಯವೇನೂ ಅಲ್ಲ. ರಾಜಕೀಯಕ್ಕೆ ಬರುತ್ತೇನೆ ಎಂದು ಸುದೀಪ್ ಹೇಳುತ್ತಿದ್ದಂತೆಯೇ ಜಾತಿಯನ್ನು ಎಳೆದು ತಂದು ಟೀಕೆ ಮಾಡಿದರು.
ಸುದೀಪ್ ಕಟ್ಟಾ ಅಭಿಮಾನಿಗಳೂ ಕೂಡಾ ಬೇಸರ ಪಟ್ಟುಕೊಂಡರು. ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ರಾಜಕೀಯಕ್ಕೆ ಬರುವುದು ಬೇಡ ಎಂಬುದು ಟ್ರೆಂಡ್ ಆಗಿತ್ತು.
ಇನ್ನು ಬಿಜೆಪಿ ಬೆಂಬಲಿಗರು ಇದು ಯಾವ ರೀತಿಯ ನಡೆ. ಒಂದೋ ಅಧಿಕೃತವಾಗಿ ಸೇರಿಬಿಡಿ. ಈ ರೀತಿ ಅಡ್ಡಗೋಡೆ ಮೇಲೆ ದೀಪ ಇಟ್ಟು ಆಟವಾಡಬೇಡಿ ಎಂದರೆ, ಬಿಜೆಪಿ ವಿರೋಧಿಗಳೂ ಕೂಡಾ ಇದೇ ಮಾತು ಹೇಳಿದ್ದು ವಿಶೇಷ. ಎರಡೂ ಕಡೆ ಇಲ್ಲದವರು ಸುದೀಪ್ ಅವರಿಗೆ ರಾಜಕೀಯ ಪಕ್ಷವನ್ನು ಆಯ್ಕೆ ಮಾಡಿಕೊಳ್ಳಲು ಹಕ್ಕಿದೆ. ಅಧಿಕಾರ ಇದೆ. ಆದರೆ ಅದನ್ನು ಸ್ಪಷ್ಟವಾಗಿ ಹೇಳಬೇಕು ಎಂದರು.
ಇದರ ನಡುವೆ ಶಿವಮೊಗ್ಗದ ವಕೀಲ ಕೆ.ಪಿ.ಶ್ರೀಪಾಲ ಎಂಬುವವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕನ್ನಡದ ಚಲನಚಿತ್ರ ನಟ ಕಿಚ್ಚ ಸುದೀಪ್ ಅವರು ಬಿಜೆಪಿಯ ಸ್ಟಾರ್ ಪ್ರಚಾರಕರಾಗಿರುವುದರಿಂದ ಚುನಾವಣೆ ಮುಗಿಯುವವರೆಗೂ ಅವರ ನಟನೆಯ ಯಾವುದೇ ಚಲನಚಿತ್ರಗಳು ಚಿತ್ರ ಮಂದಿರಗಳಲ್ಲಿ ಮತ್ತು ಟಿ.ವಿಗಳಲ್ಲಿ ಪ್ರದರ್ಶನವಾಗದಂತೆ, ಅವರು ನಡೆಸಿಕೊಡುವ ಟಿ.ವಿ ಶೋಗಳು ಪ್ರಸಾರವಾಗದಂತೆ ಮತ್ತು ನಟಿಸಿರುವ ಜಾಹಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜಕೀಯಕ್ಕೆ ಬರುತ್ತೇನೆ ಎಂದು ನಿರ್ಧಾರ ಮಾಡಿದ ಮೇಲೆ ಫೇಸ್ ಮಾಡಲೇಬೇಕು. ಕೆಸರು ಎರಚುತ್ತಾರೆ. ಒರೆಸಿಕೊಳ್ಳಲೇಬೇಕು. ಯಾವ್ಯಾವುದೋ ಸಂದರ್ಭದಲ್ಲಿ ಯಾವ ಕಾರಣಕ್ಕೋ ಮಾತನಾಡಿದ್ದ ವಿಡಿಯೋಗಳಿಗೆ ರಾಜಕೀಯದ ಟಚ್ ಕೊಟ್ಟು ಓಪನ್ ಮಾಡುತ್ತಾರೆ. ಟೀಕಿಸ್ತಾರೆ. ಟೀಕೆ ಸಹಿಸಿಕೊಳ್ಳಲೇಬೇಕು. ಏಕೆಂದರೆ ಇದು ರಾಜಕೀಯ.