ನಮ್ಮ ಸ್ನೇಹಿತರ ಮೊಬೈಲ್ ಸ್ವಿಚ್ ಆಫ್ ಆದರೆ ಏನ್ ಮಾಡ್ತೀವಿ. ನಾಟ್ ರೀಚಬಲ್ ಅಂಥಾ ಇದ್ರೆ ಏನ್ಮಾಡ್ತೀವಿ. ಏನೋ.. ಸಿಗ್ನಲ್ ಸಿಗದ ಜಾಗದಲ್ಲಿರಬೇಕು ಎಂದು ಕಾಯ್ತೀವಿ ಅಲ್ವಾ..? ದಿನಗಟ್ಟಲೆ ಸಂಪರ್ಕಕ್ಕೆ ಸಿಗದೇ ಹೋದಾಗ ಟೆನ್ಷನ್ ಆಗ್ತೀವೇನೋ..ಆದರೆ, ಪೂಜಾಗಾಂಧಿ ಅನುಭವಿಸಿದ ಕಷ್ಟವೇ ಬೇರೆ. ಅವರ ಮೊಬೈಲ್ ಕೆಲವೇ ಗಂಟೆಗಳ ಕಾಲ ಸ್ವಿಚ್ ಆಫ್ ಆಗಿದ್ದಕ್ಕೆ, ಆಕೆ ಕಾಣೆಯಾಗಿದ್ದಾರೆ..ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲೆಲ್ಲ ಹಬ್ಬಿಬಿಟ್ಟಿದೆ. ನೆಟ್ವರ್ಕ್ ಸಿಕ್ಕಾಗ ಮೊಬೈಲ್ ತೆಗೆದು ನೋಡಿದರೆ, ಕರೆಗಳ ಸುರಿಮಳೆ.
ಯಾವತ್ತೂ ಇಲ್ಲದ ಕರೆಗಳು ಇವತ್ತೇಕೆ ಇಷ್ಟೊಂದು ಎಂದು ಚೆಕ್ ಮಾಡಿದರೆ, ನೀನು ನಾಪತ್ತೆಯಾಗಿದ್ದೀಯಂತೆ ಹೌದಾ ಎಂಬ ಪ್ರಶ್ನೆ ಅವರಿಗೇ ತಿರುಗಿಬಂದಿದೆ. ಮೊದಲು ಆ ಮೆಸೇಜ್ ನೋಡಿ ಒಬ್ಬರೇ ಗಹಗಹಿಸಿ ನಕ್ಕರಂತೆ ಪೂಜಾ ಗಾಂಧಿ. ಆದರೆ, ಇದೇನೋ ಸೀರಿಯಸ್ಸಾಗಿರುವ ಹಾಗಿದೆಯಲ್ಲ ಎನಿಸಿದಾಗ, ಚಿತ್ರಲೋಕ ಸಂಪಾದ ವೀರೇಶ್ ಅವರಿಗೆ ಕರೆ ಮಾಡಿದ್ದಾರೆ.
ನಾನು ನಾಪತ್ತೆಯಾಗಿಲ್ಲ. ಈ ಸುದ್ದಿ ಹೇಗೆ ಹಬ್ಬಿತೋ ಗೊತ್ತಿಲ್ಲ. ನಾನು ಮುಂಬೈ ಹತ್ತಿರ ಪುಣೆಯಲ್ಲಿದ್ದೇನೆ. ಶೀಘ್ರದಲ್ಲೇ ಬೆಂಗಳೂರಿಗೆ ಬರುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಾಗಾದರೆ ಆಗಿದ್ದಾರೂ ಏನು..?
ಪೂಜಾ ಗಾಂಧಿ ಪುಣೆಯಲ್ಲಿ ಆನಂದ ಯೋಗ ಕಾರ್ಯಕ್ರಮಕ್ಕೆ ಪ್ರತಿ ವರ್ಷ ಹೋಗುತ್ತಿರುತ್ತಾರೆ. ಈ ವರ್ಷವೂ ಹೋಗಿದ್ದಾರೆ. ನಗರದಿಂದ ದೂರದಲ್ಲಿರುವ ಆ ಪ್ರದೇಶದಲ್ಲಿ ಮೊಬೈಲ್ ನೆಟ್ವರ್ಕ್ ಸಿಗಲ್ಲ. ಆ ಸಮಯದಲ್ಲಿ ಕರೆ ಮಾಡಿದವರಿಗೆ ನಿಮ್ಮ ಕರೆ ವ್ಯಾಪ್ತಿ ಪ್ರದೇಶದಲ್ಲಿ ಇಲ್ಲ. ನೀವು ಕರೆ ಮಾಡುತ್ತಿರುವ ಚಂದಾದಾದರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ ಎಂಬ ಉತ್ತರ ಬಂತೋ.. ಗಾಸಿಪ್ ಜೋರಾಗಿಯೇ ಹರಡೋಕೆ ಶುರುವಾಗಿದೆ.
ಸ್ವತಃ ಮೂರು ಚಿತ್ರಗಳನ್ನು ನಿರ್ಮಿಸುತ್ತಿರುವ ಈ ಸಂದರ್ಭದಲ್ಲಿ ನಾನೇಕೆ ನಾಪತ್ತೆಯಾಗಲಿ. ನಾನೇನು ಚಿಕ್ಕ ಹುಡುಗಿಯಲ್ಲ. ನಾನು ಎಲ್ಲಿಗೆ ಹೋಗುತ್ತೇನೆ..ಏನು ಮಾಡುತ್ತೇನೆ ಎಂದು ಎಲ್ಲರಿಗೂ ಹೇಳೋಕೆ ಆಗಲ್ಲ. ಅದನ್ನೆಲ್ಲ ಯಾಕೆ ನ್ಯೂಸ್ ಮಾಡ್ತಾರೋ ಅರ್ಥವೇ ಆಗಲ್ಲ ಎಂದು ಬೇಜಾರು ಮಾಡಿಕೊಂಡಿದ್ದಾರೆ ಪೂಜಾ.
ಗಾಂಧಿನಗರದಲ್ಲಿ ಹೇಳಿಕೇಳಿ ವೇಗವಾಗಿ ಹಬ್ಬೋದು ಗಾಸಿಪ್ಪುಗಳೇ. ಇದರ ಬಿಸಿ ಈ ಬಾರಿ ಮಳೆ ಹುಡುಗಿಗೆ ತಟ್ಟಿದೆಯಷ್ಟೆ. ಪೂಜಾ ಗಾಂಧಿಯ ಈ ಘಟನೆಯಿಂದ ಬೇರೆಯವರು ಕಲಿಯಬೇಕಾದ ಪಾಠವೇನೆಂದರೆ, ಎಲ್ಲೇ ಇರಿ..ಹೇಗೇ ಇರಿ.. ನಿಮ್ಮ ಮೊಬೈಲ್ ಆನ್ನಲ್ಲಿಟ್ಟಿರಿ. ಅದು ಸ್ವಿಚ್ಆಫ್ ಆಗಬಾರದು. ನೆಟ್ವರ್ಕ್ ಸಿಗುವ ಜಾಗದಲ್ಲೇ ಇರಿ. ಇಲ್ಲ ಎಂದರೆ ಕಾಣೆಯಾಗಿಬಿಡುತ್ತೀರಿ.
Related Articles :-
Pooja Gandhi Upset With Missing Reports