ಕೊರೊನಾ ಲಾಕ್‍ಡೌನ್ ಮುಗಿದು, ಥಿಯೇಟರುಗಳೆಲ್ಲ ಓಪನ್ ಆದರೂ ಸರ್ಕಾರದ ನಿರ್ಬಂಧ ಮಾತ್ರ ರಿಲ್ಯಾಕ್ಸ್ ಆಗಿಲ್ಲ. ಹೀಗಿರುವಾಗಲೇ ಥಿಯೇಟರಿಗೆ ಬರುವ ನಿರ್ಧಾರ ಮಾಡಿ ಗೆದ್ದಿದೆ ತಮಿಳಿನ ಮಾಸ್ಟರ್. ವಿಜಯ್ ಅಭಿನಯದ ಮಾಸ್ಟರ್ 50% ಸೀಟುಗಳ ನಿರ್ಬಂಧದ ನಡುವೆಯೇ ಮೊದಲ 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇದರ ಅರ್ಥ ಇಷ್ಟೆ, ಪ್ರೇಕ್ಷಕರು ಸ್ಟಾರ್ ಚಿತ್ರಗಳಿಗೆ ಕಾಯುತ್ತಿದ್ದಾರೆ. ಸದ್ಯಕ್ಕೆ ಪ್ರೇಕ್ಷಕರಿಗೆ ನೊಣ ಹೊಡೆಯುತ್ತಿರುವ ಥಿಯೇಟರುಗಳು ತುಂಬೋಕೆ ಶುರುವಾಗೋದು ಸ್ಟಾರ್ ಚಿತ್ರಗಳ ಎಂಟ್ರಿ ನಂತರಾನೇ. ಸ್ಸೋ.. ಸ್ಟಾರ್ ಚಿತ್ರಗಳಿಗೆ ರಿಲೀಸ್ ಡೇಟ್ ಫಿಕ್ಸ್ ಆಗುತ್ತಿವೆ.
ಮೊದಲ ಸ್ಟಾರ್ ಸಿನಿಮಾ ಆಗಿ ರಿಲೀಸ್ ಆಗಲಿರುವ ಚಿತ್ರ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ಅಭಿನಯದ ಪೊಗರು. ಇದು ಫೆಬ್ರವರಿ 5ರಂದು ರಿಲೀಸ್ ಆಗುತ್ತಿದೆ. ಆದರೂ ಅದೇಕೋ ಏನೋ.. ನಿರ್ಮಾಪಕ ಬಿ.ಕೆ. ಗಂಗಾಧರ್ ರಿಲೀಸ್ ಡೇಟ್‍ನ್ನು ಅಧಿಕೃತವಾಗಿ ಘೋಷಿಸುತ್ತಿಲ್ಲ.
ನಂತರ ಬರಲಿರೋ ಚಿತ್ರ ಸಲಗ. ಕೆ.ಪಿ.ಶ್ರೀಕಾಂತ್ ನಿರ್ಮಾಣದ ಚಿತ್ರಕ್ಕೆ ಮೊದಲ ಬಾರಿಗೆ ದುನಿಯಾ ವಿಜಯ್ ಡೈರೆಕ್ಷನ್ ಮಾಡಿದ್ದಾರೆ. ಈ ಸಿನಿಮಾ ದುನಿಯಾ ಸೆಂಟಿಮೆಂಟ್ ಕಾರಣಕ್ಕೆ ಫೆ.23ರಂದು ರಿಲೀಸ್ ಮಾಡ್ತಾರೆ ಅನ್ನೋ ಲೆಕ್ಕಾಚಾರವಿದೆ. ಅಂದಹಾಗೆ, ಈ ಡೇಟ್ ಕೂಡಾ ಅಫಿಷಿಯಲ್ ಅಲ್ಲ.
ಅಫಿಷಿಯಲ್ ಆಗಿ ಘೋಷಿಸಿಕೊಂಡಿರೋದು ದರ್ಶನ್ ಅಭಿನಯದ ರಾಬರ್ಟ್, ಮಾರ್ಚ್ 11ಕ್ಕೆ ರಿಲೀಸ್. ಪುನೀತ್ ಅಭಿನಯದ ಯುವರತ್ನ ಏಪ್ರಿಲ್ 1ಕ್ಕೆ ರಿಲೀಸ್. ಸುದೀಪ್ ಅಭಿನಯದ ಕೋಟಿಗೊಬ್ಬ 3, ಏಪ್ರಿಲ್ 23ಕ್ಕೆ ರಿಲೀಸ್.
ಆಗಸ್ಟ್ ನಂತರ ಶಿವಣ್ಣ ಅಭಿನಯದ ಭಜರಂಗಿ 2, ಯಶ್ ಅಭಿನಯದ ಕೆಜಿಎಫ್ 2, ಸುದೀಪ್ ಅಭಿನಯದ ಪ್ಯಾಂಟಮ್, ರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ, ಗಣೇಶ್-ಭಟ್ಟರ ಕಾಂಬಿನೇಷನ್ನಿನ ಗಾಳಿಪಟ 2, ಚಿತ್ರಗಳಿವೆ.