ಇದನ್ನು ತುಘಲಕ್ ದರ್ಬಾರ್ ಎನ್ನದೇ ವಿಧಿಯಿಲ್ಲ. ಕೊರೊನಾ ಏರಿಕೆ ಕಾಣುತ್ತಿರುವುದು ಈಗಲ್ಲ. ಆದರೆ, ರಾಜ್ಯ ಸರ್ಕಾರ ಏಪ್ರಿಲ್ 1ರ ರಾತ್ರಿಯವರೆಗೂ ಹೇಳಿದ್ದೇ ಬೇರೆ. ಏಪ್ರಿಲ್ 2ರ ಬೆಳಗ್ಗೆಯೂ ಹೇಳಿದ್ದು ಬೇರೆ. ಸಂಜೆಯ ಹೊತ್ತಿಗೆ ಮಾಡಿದ್ದೇ ಬೇರೆ. ಇದ್ದಕ್ಕಿದ್ದಂತೆ ಥಿಯೇಟರುಗಳಲ್ಲಿ 50% ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ಎಂದು ಘೋಷಿಸಿಬಿಟ್ಟಿತು ಸರ್ಕಾರ. ಇದನ್ನು ಮೊದಲೇ ಹೇಳಿದ್ದರೆ ಯುವರತ್ನ ಚಿತ್ರ ರಿಲೀಸ್‍ನ್ನೇ ಮುಂದಕ್ಕೆ ಹಾಕಬಹುದಿತ್ತು. ಚಿತ್ರದ ನಿರ್ಮಾಪಕರು, ವಿತರಕರು, ಥಿಯೇಟರಿನವರು.. ಹೀಗೆ ಎಲ್ಲರೂ ಬಚಾವ್ ಆಗುತ್ತಿದ್ದರು. ಆದರೆ ಕಟ್ಟಕಡೆಯ ಕ್ಷಣದವರೆಗೂ ನೋ ಪ್ರಾಬ್ಲಂ.. ಬನ್ನಿ ಬನ್ನಿ.. ಎಂದು ಹೇಳಿ ಸಡನ್ ರೂಲ್ಸ್ ಚೇಂಜ್ ಮಾಡಿದ ಸರ್ಕಾರದ ಕ್ರಮ ಬಲಿಪೀಠಕ್ಕೆ ಹಾರ, ತುರಾಯಿ ಕರೆದುಕೊಂಡು ಬಂದು ಬಲಿ ಕೊಡುವವರಂತೆಯೇ ಇದೆ. ತುಘಲಕ್ ದರ್ಬಾರ್ ಅನ್ನೋಕೆ ಇದೊಂದೇ ಕಾರಣ ಅಲ್ಲ.
ತುಘಲಕ್ ದರ್ಬಾರ್ : 01
ಥಿಯೇಟರಿನಲ್ಲಿ ಸರ್ಕಾರ 50% ನಿರ್ಬಂಧ ಹೇರಿದೆ. ಅರ್ಥಾತ್, ಥಿಯೇಟರಿಗೆ ಬಂದವರು ಪ್ರತಿ ಸೀಟಿನ ಮಧ್ಯೆ ಗ್ಯಾಪ್ ಇಟ್ಟುಕೊಂಡು ಸಿನಿಮಾ ನೋಡಬೇಕು. ಅಂದರೆ, ಸಿನಿಮಾ ನೋಡೋಕೆ ಬರುವವರು ಒಟ್ಟಿಗೇ ಆಟೋ, ಬೈಕ್ ಅಥವಾ ಕಾರ್‍ನಲ್ಲಿ ಅಕ್ಕಪಕ್ಕದಲ್ಲೇ ಕುಳಿತುಕೊಂಡು ಬರಬಹುದು. ಥಿಯೇಟರಿನಲ್ಲಿ ಅಕ್ಕಪಕ್ಕ ಕೂತರೆ ಮಾತ್ರ ಕೊರೊನಾ ಬಂದುಬಿಡುತ್ತಾ..?
ತುಘಲಕ್ ದರ್ಬಾರ್ : 02
ಇನ್ನು ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಂತಹ ಯಾವುದೇ ನಿರ್ಬಂಧ ಇಲ್ಲ. ಎಲೆಕ್ಷನ್ ನಡೆಯುವ ಜಾಗದಲ್ಲಿ ಕೊರೊನಾ ಇರೋದೇ ಇಲ್ವಾ..? ರಾಜಕೀಯ ಪಕ್ಷಗಳಿಗೆ ಲಾಭ ಆಗುತ್ತೆ ಅನ್ನೋವಾಗ ಕೊರೊನಾ ಅಡ್ಡಿ ಆಗುವುದಿಲ್ಲವಾ..?
ತುಘಲಕ್ ದರ್ಬಾರ್ : 03
ಹೀಗೆ 50% ನಿರ್ಬಂಧ ಹೇರಿರುವ ಸರ್ಕಾರ, ಇದುವರೆಗೆ ಚಿತ್ರರಂಗಕ್ಕೆ ಸಂಬಂಧಪಟ್ಟ ಯಾವುದೇ ವಿಭಾಗಕ್ಕಾದರೂ ಕನಿಷ್ಠ ಮಟ್ಟದ ನೆರವನ್ನಾದರೂ ನೀಡಿದೆಯಾ..? ಬದಲಿಗೆ ಇನ್ನಷ್ಟು ಮತ್ತಷ್ಟು ಹೊರೆಗಳನ್ನೇ ಹೇರಿದೆ. ಇದೆಲ್ಲದರ ಮಧ್ಯೆ ಕೊರೊನಾ ಜಾಗೃತಿ ನಿಯಮಗಳನ್ನು ಈಗಲೂ ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದು ಥಿಯೇಟರಿನಲ್ಲಿ. ಇದೊಂದು ರೀತಿ ಕಷ್ಟಪಟ್ಟು ದುಡಿದು ಊಟಕ್ಕೆ ಕುಳಿತವರ ಅನ್ನದ ತಟ್ಟೆಯನ್ನೇ ಕಿತ್ತುಕೊಂಡಂತಲ್ಲವೇ..? ಈಗಾಗಲೇ ಬಿಕರಿಯಾಗಿರುವ ಟಿಕೆಟ್‍ಗಳನ್ನು ಏನು ಮಾಡಬೇಕು..?
ತುಘಲಕ್ ದರ್ಬಾರ್ : 04
ಬೆಳಗ್ಗೆ ಒಂದು ಮಾತು.. ಮಧ್ಯಾಹ್ನ ಇನ್ನೊಂದು ಹೇಳಿಕೆ.. ಸಂಜೆ ಅವುಗಳಿಗೆ ಸಂಬಂಧವೇ ಇಲ್ಲದಂತೆ ಹೊಸ ರೂಲ್ಸು.. ಇದು ಸರ್ಕಾರ ನಡೆಸುವವರು ಇರೋ ರೀತಿನಾ..? ಕಾಮನ್‍ಸೆನ್ಸ್ ಕೊರತೆ ಕಾಡುತ್ತಿದೆ ಎನಿಸುವುದಿಲ್ಲವಾ..?
ತುಘಲಕ್ ದರ್ಬಾರ್ : 05
ರಾಜಕೀಯ ರ್ಯಾಲಿಗಳಲ್ಲಿ ಈಗಲೂ ಜನ ಸಾವಿರಾರು ಸಂಖ್ಯೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಅಲ್ಲಿ ಇದೇ ಸಚಿವರು, ಶಾಸಕರು ಹೋಗ್ತಾರೆ. ನಯಾಪೈಸೆಯ ಕೊರೊನಾ ರೂಲ್ಸ್‍ನ್ನೂ ಅಲ್ಲಿ ಫಾಲೋ ಮಾಡಲ್ಲ. ಅಲ್ಲಿಗೆ ಬಾರದ ಕೊರೊನಾ, ಥಿಯೇಟರಿಗೆ ಮಾತ್ರ ಬರುತ್ತೆ ಎಂದರೆ ಇದರ ಹಿಂದಿರೋದು ತುಘಲಕ್ ವಂಶಸ್ಥರು ಎನ್ನಿಸುವುದಿಲ್ಲವೇ..?
ತುಘಲಕ್ ದರ್ಬಾರ್ : 06
ಜನ ತಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕೊರೊನಾ ಓಡಿಸಬೇಕು ಎನ್ನುತ್ತಿದೆ ಸರ್ಕಾರ. ಆದರೆ ಸಿನಿಮಾಗಳನ್ನು ಬಿಟ್ಟು ನೋಡುವುದಾದರೆ ಜಿಮ್, ಸ್ವಿಮ್ಮಿಂಗ್‍ಪೂಲ್‍ಗಳನ್ನೂ ಬಾಗಿಲು ಮುಚ್ಚಿಸಿದೆ. ಜಿಮ್‍ನಲ್ಲಿ ಸಾಮಾಜಿಕ ಅಂತರ ಮತ್ತು ಕೊರೊನಾ ನಿಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬೇರೆಲ್ಲೂ ಹರಡದ ಕೊರೊನಾ, ಜಿಮ್‍ಗಳಲ್ಲಿ ಹರಡುತ್ತೆ ಎಂದು ಹೇಳಿದ ತಜ್ಞರು ಯಾರು..?
ತುಘಲಕ್ ದರ್ಬಾರ್ : 07
ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯದ ಒಟ್ಟು 8 ಜಿಲ್ಲೆಗಳಲ್ಲಿ ಮಾತ್ರ ಈ ರೂಲ್ಸ್ ಜಾರಿಯಾಗಿದೆ. ಎಲೆಕ್ಷನ್ ನಡೆಯುತ್ತಿರುವ ಬೆಳಗಾವಿ, ರಾಯಚೂರುಗಳಲ್ಲಿ ಇಲ್ಲ. ಇನ್ನು ಬೆಳಗಾವಿ, ಈಗ ಕೊರೊನಾದ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಜಿಲ್ಲೆ. ತುಘಲಕ್ ದರ್ಬಾರ್ ಅನ್ನೋದು ಇದಕ್ಕೇ ಅಲ್ಲವಾ..?
ತುಘಲಕ್ ದರ್ಬಾರ್ : 08
ಸರ್ಕಾರ 50% ಪ್ರೇಕ್ಷಕರಿಗೆ ಏನು ಸಮಸ್ಯೆ ಎನ್ನುವವರಿಗೆ ಒಂದು ಕ್ಲಾರಿಫಿಕೇಷನ್. ಥಿಯೇಟರ್ ಹೌಸ್‍ಫುಲ್ ಆಗಲೀ.. 50% ಆಗಲೀ.. ಹತ್ತು ಜನರಷ್ಟೇ ಬರಲಿ.. ಥಿಯೇಟರ್ ನಿರ್ವಹಣಾ ವೆಚ್ಚ ನಯಾಪೈಸೆಯೂ ಕಡಿಮೆಯಾಗುವುದಿಲ್ಲ. ಆದರೆ ಕಟ್ಟಬೇಕಾದ ಟ್ಯಾಕ್ಸು, ಕರೆಂಟ್ ಬಿಲ್ ಸೇರಿದಂತೆ ಮತ್ತಿತರ ಖರ್ಚುಗಳಲ್ಲಿ ಸರ್ಕಾರ ಒಂದು ಪೈಸೆಯನ್ನೂ ಬಿಡುವುದಿಲ್ಲ.
ತುಘಲಕ್ ದರ್ಬಾರ್ : 09
ಸರ್ಕಾರ ಥಿಯೇಟರುಗಳನ್ನು ತೆರೆಯುವ ಮೊದಲೇ ಶಾಪಿಂಗ್ ಮಾಲ್‍ಗಳನ್ನು ಓಪನ್ ಮಾಡಿತ್ತು. ಆದರೆ, ಆ ಮಾಲ್‍ಗಳಲ್ಲಿ ಬಿಸಿನೆಸ್ ಶುರುವಾಗಿದ್ದು ಥಿಯೇಟರ್ಸ್ ಓಪನ್ ಆದ ನಂತರವೇ. ಅದರ ಅರ್ಥ ಇಷ್ಟೆ, ಥಿಯೇಟರುಗಳಿಗೆ ಬ್ರೇಕ್ ಹಾಕೋಕೆ ಹೋದರೆ.. ಬಿಸಿನೆಸ್ ಚೈನ್‍ನಲ್ಲಿರೋ ಇತರೆ ಬಿಸಿನೆಸ್‍ಗಳೂ ಹೊಡೆತ ತಿನ್ನುತ್ತವೆ. ಏಕೆಂದರೆ ಪ್ರತಿಯೊಂದು ವ್ಯವಹಾರವೂ ಇನ್ನೊಂದು ಉದ್ಯಮ, ವ್ಯವಹಾರದೊಂದಿಗೆ ಜೊತೆಗೂಡಿಯೇ ಸಾಗಬೇಕು. ಇದು ಕಾಮನ್ ಎಕನಾಮಿಕ್ಸು. ಸರ್ಕಾರ ನಡೆಸುವವರಿಗೆ ಇದು ಅರ್ಥವಾಗುತ್ತಿಲ್ಲ ಎನ್ನುವುದೇ ದುರ್ದೈವ.
ಪ್ರಾಬ್ಲಂ ಏನು ಎಂದರೆ ನಮ್ಮ ಚಿತ್ರರಂಗದವರೂ ಅಷ್ಟೆ. ಗೊಳೋ ಎನ್ನುತ್ತಿದ್ದಾರೆಯೇ ಹೊರತು, ತಿರುಗಿಸಿ ಕೇಳುವ ಧೈರ್ಯವನ್ನು ತೋರುತ್ತಿಲ್ಲ. ಗಂಟಲು ಏರಿಸಿದರೆ ಪ್ರಾಬ್ಲಂ ಆಗಬಹುದು ಎಂಬ ಆತಂಕ ಇದ್ದಹಾಗಿದೆ. ಅದರೆ ಪ್ರೀತಿಯ ಮನವಿಗೆ ಸಿಕ್ಕಿರುವ ಪುರಸ್ಕಾರವಾದರೂ ಅದೇ ಅಲ್ಲವೇ..? ಒಂದಂತೂ ಸತ್ಯ. ಚೇತರಿಸಿಕೊಳ್ಳುತ್ತಿದ್ದ ಉದ್ಯಮಕ್ಕೆ ಅರ್ಧ ಬೀಗ ಜಡಿದ ಸರ್ಕಾರ, ಈಗಾಗಲೇ ನರಳುತ್ತಿದ್ದ ಒಂದು ದೊಡ್ಡ ಉದ್ಯಮ ಸಮೂಹವನ್ನು ಇನ್ನಷ್ಟು ಮತ್ತಷ್ಟು ಪೆಟ್ಟು ಕೊಟ್ಟು ತೆಪ್ಪಗಿರಿಸುವ ಹಠ ತೊಟ್ಟಿದೆ. ಎದ್ದು ಕಾಣುತ್ತಿರುವುದು ಕಾಮನ್‍ಸೆನ್ಸ್ ಕೊರತೆ.
ಕೆ.ಎಂ.ವೀರೇಶ್
ಸಂಪಾದಕರು
ಚಿತ್ರಲೋಕ