ಕಾಳಿ ಅಂದ್ರೆ ಯಾರು..? ಕಾಳಿದಾಸ ಕನ್ನಡ ಮೇಷ್ಟುç ನೋಡಿದವರಿಗೆ ನೋ ಡೌಟ್, ಜಗ್ಗೇಶ್ ಅವರಿಗಂತೂ ಕನಸಿನಲ್ಲೂ ಕಣ್ಮುಂದೆ ಬರೋ ಕಾಳಿ, ಮೇಘನಾ ಗಾಂವ್ಕರ್. ಕವಿರಾಜ್ ಸೃಷ್ಟಿಸಿದ ಪಾತ್ರ ಈಗ ಸೆನ್ಸೇಷನ್. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಮೇಘನಾ ಗಾಂವ್ಕರ್, ಸಾಕ್ಷಾತ್ ಕಾಳಿಯೇ ಆಗಿದ್ದಾರೆ. ಚಿತ್ರರಂಗದ ಗಣ್ಯರು ಮತ್ತು ಪ್ರೇಕ್ಷಕರೆಲ್ಲರ ಮೆಚ್ಚುಗೆ ಪಡೆದಿರುವ ಮೇಘನಾ, ಚಿತ್ರರಂಗಕ್ಕೆ ಬಂದಿದ್ದೇ ಆಕಸ್ಮಿಕ.
ಡೈರೆಕ್ಟರ್ ಆಗಲು ಬಂದ ಮೇಘನಾ, ಫಿಲಂ ಮೇಕಿಂಗ್ ಕ್ಲಾಸಿನಲ್ಲಿ ತರಬೇತಿ ಪಡೆದುಕೊಂಡರು. ಡ್ಯಾನ್ಸ್ ಕಲಿತಿರುವ ಮೇಘನಾ, ಒಳ್ಳೆಯ ಗಾಯಕಿಯೂ ಹೌದು. ಎಲ್ಲವೂ ಚಿತ್ರರಂಗಕ್ಕಾಗಿಯೇ. ಆದರೆ, ಮೇಘನಾಗೆ ನಾಯಕಿಯಾಗಬೇಕು ಎನ್ನುವ ಉದ್ದೇಶವೇ ಇರಲಿಲ್ಲ. ಆಕಸ್ಮಿಕವಾಗಿ ಹೀರೋಯಿನ್ ಆದ ಮೇಘನಾ, ಸತತವಾಗಿ ಗಮನ ಸೆಳೆಯುತ್ತಿದ್ದಾರೆ.
ನಮ್ ಏರಿಯಾಲ್ ಒಂದಿನ, ತುಘಲಕ್, ಚಾರ್ಮಿನಾರ್, ಸಿಂಪಲ್ ಆಗಿ ಇನ್ನೊಂದು ಲವ್ ಸ್ಟೋರಿ ಹೀಗೆ.. ಬೆರಳೆಣಿಕೆ ಚಿತ್ರಗಳಲ್ಲಿ ನಟಿಸಿದರೂ.. ಪ್ರತೀ ಚಿತ್ರದಲ್ಲೂ ಗಮನ ಸೆಳೆದ ನಟಿ. ಈಗ ಕಾಳಿದಾಸ ಕನ್ನಡ ಮೇಷ್ಟುç.
ಆಫರ್ ಬಂದಿಲ್ಲ ಅಂತಲ್ಲ, ಆದರೆ ಹಾಗೆ ಬಂದ ಅವಕಾಶಗಳು ಇನ್ಯಾವುದೋ ಕಾರಣಕ್ಕೆ ಮಿಸ್ ಆಗಿವೆ. ಸಿಕ್ಕಿರುವ ಪಾತ್ರಗಳೇನೋ ಚೆನ್ನಾಗಿದ್ದವು. ಆದರೆ, ಬ್ಯುಸಿ ಎನ್ನಿಸುವಷ್ಟು ಅವಕಾಶಗಳು ಇನ್ನೂ ಬಂದಿಲ್ಲ ಎನ್ನುವ ಮೇಘನಾ, ಚಿತ್ರರಂಗದಲ್ಲಿ ಇರಲೆಂದೇ ಬಂದವಳು ನಾನು. ನಾಯಕಿಯೋ.. ನಿರ್ದೇಶಕಿಯೋ.. ಗಾಯಕಿಯೋ.. ಏನಾದ್ರೂ ಆಗಲಿ, ಇಲ್ಲೇ ಇರುತ್ತೇನೆ ಎನ್ನುತ್ತಾರೆ ಮೇಘನಾ ಗಾಂವ್ಕರ್. ಗುಡ್ ಲಕ್.