ಮಕ್ಕಳ ಪ್ರೀತಿ ತಾಯಿಯ ಮೇಲೆ ಒಂಚೂರು ಜಾಸ್ತಿನೇ ಇರುತ್ತೆ. ತಾಯಿಯ ತ್ಯಾಗ,ಪ್ರೀತಿ, ಮಮತೆ, ವಾತ್ಸಲ್ಯ ಬಣ್ಣಿಸುವ ಸಾವಿರಾರು ಗೀತೆಗಳಿವೆ. ಒಂದೊಂದು ಹಾಡು ಅಮೂಲ್ಯವೇ. ಚೌಕ ಚಿತ್ರದಲ್ಲಿ ಅಪ್ಪನನ್ನು ಪ್ರೀತಿಸುವ ಮಕ್ಕಳಿಗಾಗಿ ಅಪ್ಪ ಐ ಲವ್ ಯೂ ಪಾ.. ಹಾಡು ಕೊಟ್ಟಿದ್ದ ದ್ವಾರಕೀಶ್ ಸಂಸ್ಥೆ, ಈಗ ಅಮ್ಮ ಐ ಲವ್ ಯೂ ಚಿತ್ರದಲ್ಲಿ ಅಮ್ಮನನ್ನು ಪ್ರೀತಿಸುವವರಿಗಾಗಿ ಅದ್ಭುತ ಹಾಡು ಕೊಟ್ಟಿದೆ.
ಅಮ್ಮಾ.. ನನ್ನ ಈ ಜನುಮಾ..
ನಿನ್ನಾ.. ವರದಾನವಮ್ಮಾ..
ಅಮ್ಮಾ.. ನಿನಗ್ಯಾರು ಸಮ..
ನನ್ನ ಜಗ ನೀನೇ ಅಮ್ಮಾ..
ನಿನ್ನ ಆ ಲಾಲಿ ಪದ
ನನ್ನ ಒಳಗೆ ಸದಾ..
ನಿನದೇ ಮಿಡಿದಿದೆ ಅಮ್ಮಾ..
ಗುಡಿಯ ಹಂಗಿರದ
ಕೀರ್ತನೆ ಬೇಕಿರದ
ನಡೆವಾ ದೈವವೇ ಅಮ್ಮಾ..
ಹೀಗೆ ಶುರುವಾಗುವ ಹಾಡು ಚರಣದಲ್ಲಿ ಕಣ್ಣೀರು ಜಿನುಗುವಂತೆ ಮಾಡುತ್ತೆ. ಅಮ್ಮನ ಕೈತುತ್ತು ನೆನಪಿಸುತ್ತೆ.
ನಿನ್ನ ಒಂದು ಕೈ ತುತ್ತೂ ಸಾಕು..
ಈ ಜನ್ಮ ಪೂರ್ತಿ ಉಪವಾಸ ಇರುವೆನು..
ನಿನ್ನ ಒಂದು ಅಪ್ಪುಗೆಯೂ ಸಾಕು
ಆ ನೆನಪಿನಲ್ಲೇ ಸೆರೆವಾಸ ಇರುವೆನೂ..
ನೀನೆ ನನ್ನ ಲೋಕವೂ.. ನೀನೆ ನನ್ನ ಜೀವವೂ..
ನೀನೆ ನನಗೆ ಎಲ್ಲವೂ..
ಅಮ್ಮಾ...
ಅಂದಹಾಗೆ ಈ ಹಾಡಿಗೆ ಸಾಹಿತ್ಯ ಬರೆದಿರುವದು ನಾಗೇಂದ್ರ ಪ್ರಸಾದ್. ಸಂಗೀತ ಗುರುಕಿರಣ್. ದ್ವಾರಕೀಶ್ ಪಿಕ್ಚರ್ಸ್ ಲಾಂಛನದ ಚಿತ್ರಕ್ಕೆ ಯೋಗಿ ದ್ವಾರಕೀಶ್ ನಿರ್ಮಾಪಕರಾದರೆ, ಆ ದಿನಗಳು, ಆಟಗಾರ.. ಖ್ಯಾತಿಯ ಚೈತನ್ಯ ನಿರ್ದೇಶಕ. ಚಿರಂಜೀವಿ ಸರ್ಜಾ ಮಗನಾಗಿದ್ದರೆ, ತಾಯಿಯಾಗಿರುವುದು ಹಾಲುಂಡ ತವರು ಸಿತಾರಾ.
ತಾಯಿ, ಮಗನ ಬಾಂಧವ್ಯವೇ ಚಿತ್ರದ ಕಥೆ. ಈ ಹಾಡನ್ನು ಹಾಡಿರುವುದು ಸಾಧುಕೋಕಿಲ. ಅದೂ ಸ್ವಾರಸ್ಯವೇ. ಹಾಡನ್ನು ಪುನೀತ್ ಅವರಿಗೆ ಕೇಳಿಸೊಕೆ ಎಂದು ಗುರುಕಿರಣ್ ಹೋಗಿದ್ದರಂತೆ. ಆಗ ಅಲ್ಲೇ ಇದ್ದ ಸಾಧುಕೋಕಿಲಾ, ಈ ಹಾಡನ್ನು ನಾನು ಹಾಡುತ್ತೇನೆ, ಇಷ್ಟವಾದರೆ ಇಟ್ಟುಕೊಳ್ಳಿ ಎಂದು ಕೇಳಿಕೊಂಡು ಹಾಡಿದ ಹಾಡು ಇದು.
ಸ್ವತಃ ಒಬ್ಬ ಸಂಗೀತ ನಿರ್ದೇಶಕನ ಹೃದಯ ತಟ್ಟಿದ ಹಾಡು, ತಾಯಿಯನ್ನು ಪ್ರೀತಿಸುವ ಮಕ್ಕಳ ಹೃದಯ ತಟ್ಟೋದಿಲ್ವಾ.. ಅದು ಅಮ್ಮ ಐ ಲವ್ ಯೂ ಚಿತ್ರತಂಡದ ನಂಬಿಕೆ. ನಂಬಿಕೆ ಸುಳ್ಳಾಗಲ್ಲ.