ದನಕಾಯೋನು, ದುನಿಯಾ ವಿಜಿ, ಪ್ರಿಯಾಮಣಿ ಅಭಿನಯದ ಚಿತ್ರ. ಕಳೆದ ವರ್ಷ ರಿಲೀಸ್ ಆಗಿದ್ದ ಚಿತ್ರವನ್ನು ನಿರ್ದೇಶಿಸಿದ್ದವರು ಯೋಗರಾಜ್ ಭಟ್. ನಿರ್ಮಾಪಕ ಕನಕಪುರ ಶ್ರೀನಿವಾಸ್. ಆದರೆ, ಸಿನಿಮಾ ರಿಲೀಸ್ ಆದ ಹೆಚ್ಚೂ ಕಡಿಮೆ ಒಂದು ವರ್ಷದ ನಂತರ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ಕಾನೂನು ಸಮರ ಸಾರಿದ್ದಾರೆ.
ಏಕೆಂದರೆ, ಚಿತ್ರವನ್ನು ನಿರ್ದೇಶಿಸದ್ದಕ್ಕೆ ಕೊಡಬೇಕಾಗಿದ್ದ ಸಂಭಾವನೆಯನ್ನು ನಿರ್ಮಾಪಕ ಶ್ರೀನಿವಾಸ್ ಇದುವರೆಗೆ ಕೊಟ್ಟಿಲ್ಲ. ಭಟ್ಟರು, ಚಿತ್ರದ ಛಾಯಾಗ್ರಾಹಕರೂ ಸೇರಿದಂತೆ ಹಲವರಿಗೆ ಶ್ರೀನಿವಾಸ್ ಸಂಭಾವನೆಯನ್ನೇ ನೀಡಿಲ್ಲ. ಸಾಲದ ಸುಳಿಯಲ್ಲಿದ್ದ ಶ್ರೀನಿವಾಸ್, ಚಿತ್ರವನ್ನು ರಿಲೀಸ್ ಮಾಡುವುದೇ ಕಷ್ಟವಾಗಿತ್ತು. ಆಗ ಯೋಗರಾಜ್ ಭಟ್ ಅವರೇ ಮುತುವರ್ಜಿ ವಹಿಸಿ, ಸಿನಿಮಾ ಬಿಡುಗಡೆಗೆ ಸಹಕರಿಸಿದ್ದರು.
ದನಕಾಯೋನು ಸಿನಿಮಾ ಬಿಡುಗಡೆಯಾಗಿ, ಸಿನಿಮಾ ಒಂದು ಹಂತಕ್ಕೆ ಹಿಟ್ ಕೂಡಾ ಆಗಿತ್ತು. ಚಿತ್ರ ಈಗಾಗಲೇ ಟಿವಿಯಲ್ಲೂ ಪ್ರಸಾರವಾಗಿದೆ. ಆದರೆ, ಚಿತ್ರಮಂದಿರದ ಕಲೆಕ್ಷನ್ ಮತ್ತು ಟಿವಿ ರೈಟ್ಸ್ ಎಲ್ಲವನ್ನೂ ಪಡೆದುಕೊಂಡ ನಿರ್ಮಾಪಕ ಶ್ರೀನಿವಾಸ್, ಸಂಭಾವನೆಯನ್ನು ಮಾತ್ರ ಕೊಡದೆ ಕೈ ಎತ್ತಿಬಿಟ್ಟಿದ್ದಾರೆ.
ಹಾಗೆಂದು ಭಟ್ಟರು ಏಕಾಏಕಿ ಕಾನೂನು ಸಮರ ಸಾರಿಲ್ಲ. ಫಿಲಂ ಚೇಂಬರ್ ಹಾಗೂ ನಿರ್ದೇಶಕರ ಸಂಘಕ್ಕೆ ದೂರು ಕೊಟ್ಟಿದ್ದಾರೆ. ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಹಾಗೂ ನಿರ್ದೇಶಕರ ಸಂಘದ ಅಧ್ಯಕ್ಷ ವಿ.ನಾಗೇಂದ್ರ ಪ್ರಸಾದ್ ಮಧ್ಯಸ್ಥಿಕೆಯಲ್ಲಿ ಸಂಧಾನವೂ ನಡೆದಿದೆ. ಯೋಗರಾಜ್ ಭಟ್ ಅವರಿಗೆ ಬರಬೇಕಿರುವ ಒಂದು ಕೋಟಿ 31 ಲಕ್ಷ ರೂ. ಸಂಭಾವನೆಯನ್ನು ಎರಡು ಕಂತುಗಳಲ್ಲಿ ಕೊಡುವುದಾಗಿ ಒಪ್ಪಿಕೊಂಡಿದ್ದ ಶ್ರೀನಿವಾಸ್, ನಂತರ ಅದನ್ನೂ ಪಾಲಿಸಿಲ್ಲ.
ಹೀಗಾಗಿ ಯೋಗರಾಜ್ ಭಟ್, ನಿರ್ಮಾಪಕ ಶ್ರೀನಿವಾಸ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.ಕನಕಪುರ ಶ್ರೀನಿವಾಸ್ ಅವರ ಆರ್.ಎಸ್. ಪ್ರೊಡಕ್ಷನ್ನ ಮುಂದಿನ ಚಿತ್ರಗಳಿಗೆ ತಡೆ ನೀಡುವಂತೆ ಕೋರಿದ್ದಾರೆ. ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆಯುವ ಕುರಿತು ನೀಡಬೇಕಿರುವ ಅನುಮತಿ ಪತ್ರಕ್ಕೆ ತಾವು ಸಹಿ ಹಾಕಿಲ್ಲ ಎಂದು ಕೂಡಾ ತಿಳಿಸಿ, ವಾರ್ತಾ ಇಲಾಖೆಗೂ ಮಾಹಿತಿ ನೀಡಿದ್ದಾರೆ.
ತಮ್ಮ ನಿರ್ದೇಶನದ ಚಿತ್ರಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸುವ ಯೋಗರಾಜ್ ಭಟ್, ನೋವಿನಿಂದಲೇ ಕೋರ್ಟ್ ಮೆಟ್ಟಿಲೇರುತ್ತಿದ್ದೇನೆ. ಯಾವುದೇ ಕನ್ನಡ ಚಿತ್ರಗಳಿಗೆ ತೊಂದರೆಯಾಗಬಾರದು ಎನ್ನುವುದು ನನ್ನ ಕಳಕಳಿ. ಹಾಗೆಯೇ ಯಾವುದೇ ತಂತ್ರಜ್ಞರಿಗೆ ಮೋಸವಾಗಬಾರದು ಎನ್ನುವುದನ್ನೂ ನಾವು ಅರ್ಥ ಮಾಡಿಕೊಳ್ಳಬೇಕು. ಹೀಗಾಗಿ ನಾನು ಕೋರ್ಟ್ ಮೆಟ್ಟಿಲೇರಿದ್ಧೇನೆ ಎಂದು ಹೇಳಿದ್ಧಾರೆ ಯೋಗರಾಜ್ ಭಟ್.
Related Articles :-
Danakayonu Vs Bharjari