ನೀರ್ದೋಸೆ. ಜಗ್ಗೇಶ್-ವಿಜಯ್ ಪ್ರಸಾದ್-ದತ್ತಣ್ಣ-ಹರಿಪ್ರಿಯಾ-ಸುಮನ್ ರಂಗನಾಥ್ ಅಭಿನಯದ ಸೂಪರ್ ಹಿಟ್ ಸಿನಿಮಾ. ಈ ಸಿನಿಮಾಗೆ ಮೊದಲು ನಾಯಕಿಯಾಗಿದ್ದವರು ರಮ್ಯಾ. ಆಗಿನ್ನೂ ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರಲಿಲ್ಲ. ಆನಂತರ ಸಿನಿಮಾದಿಂದ ಹೊರನಡೆದಿದ್ದರು. ಆದರೆ, ಆ ಚಿತ್ರದ ಶೂಟಿಂಗ್ ವೇಳೆ ವಿವಾದವೊಂದನ್ನು ಸೃಷ್ಟಿಸಿದ್ದರು ರಮ್ಯಾ. ಅದು ಕೋರ್ಟ್ ಮೆಟ್ಟಿಲೇರಿತ್ತು. ಈಗ ಕೋರ್ಟ್ನಲ್ಲಿ ರಮ್ಯಾ ವಾದಕ್ಕೆ ಹಿನ್ನಡೆಯಾಗಿದ್ದು, ಕೇಸ್ನ್ನು ನ್ಯಾಯಾಲಯ ವಜಾ ಮಾಡಿದೆ.
ಪತ್ರಕರ್ತ ಶ್ಯಾಂ ಪ್ರಸಾದ್, ಫೋಟೋ ಜರ್ನಲಿಸ್ಟ್ ನಾಗೇಶ್ ಕುಮಾರ್ ಕುಮಾರ್ ಮತ್ತು ಮನೋಹರ್ ವಿರುದ್ಧ ತಮ್ಮ ಅನುಮತಿಯಿಲ್ಲದೆ ಆಕ್ಷೇಪಾರ್ಹ ಫೋಟೋ ತೆಗೆದಿದ್ದಾರೆ ಎಂದು ರಮ್ಯಾ ಕೇಸ್ ಹಾಕಿದ್ದರು. ಅನುಮತಿಯಿಲ್ಲದೆ ಫೋಟೋ ತೆಗೆಯಲಾಯಿತು ಎಂಬ ರಮ್ಯಾ ವಾದಕ್ಕೆ ಯಾವುದೇ ಸಮರ್ಥನೆ ಅಥವಾ ಸಾಕ್ಷ್ಯ ಸಿಗದ ಕಾರಣ, ಕೋರ್ಟ್ ಕೇಸ್ನ್ನು ವಜಾ ಮಾಡಿದೆ. ಎಲ್ಲ ಪತ್ರಕರ್ತರನ್ನೂ ದೋಷಮುಕ್ತಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿಯನ್ನು ಕಳ್ಳ ಎಂಬಂತೆ ಬಿಂಬಿಸಿದ ಫೋಟೋ ಹಾಕಿದ್ದಕ್ಕೆ ರಮ್ಯಾ ವಿರುದ್ಧ ಎರಡು ಕೇಸ್ ದಾಖಲಾದ ಮರುದಿನವೇ, 2013ರಲ್ಲಿ ರಮ್ಯಾ ಹಾಕಿದ್ದ ಕೇಸ್ ವಜಾ ಆಗಿರುವುದು ವಿಶೇಷ.