` ashwini puneeth rajkumar, - chitraloka.com | Kannada Movie News, Reviews | Image

ashwini puneeth rajkumar,

 • ಅನ್ ಲಾಕ್ ರಾಘವನಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಕೆ

  ಅನ್ ಲಾಕ್ ರಾಘವನಿಗೆ ಅಶ್ವಿನಿ ಪುನೀತ್ ರಾಜಕುಮಾರ್ ಹಾರೈಕೆ

  ಪುನೀತ್ ರಾಜಕುಮಾರ್ ತುಂಬಾ ಇಷ್ಟಪಡುತ್ತಿದ್ದ ನಿರ್ದೇಶಕರಲ್ಲಿ ಒಬ್ಬರು ಸತ್ಯಪ್ರಕಾಶ್. ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ, ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳ ಮೂಲಕ ಗಮನ ಸೆಳೆದ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಸತ್ಯಪ್ರಕಾಶ್. ಪುನೀತ್ ಅವರಿಗಾಗಿ ಕಥೆಯೊಂದನ್ನು ಸಿದ್ಧ ಮಾಡಿಟ್ಟುಕೊಂಡು ಕಾಯುತ್ತಿದ್ದ ಸತ್ಯಪ್ರಕಾಶ್ ಅವರ ಹೊಸ ಚಿತ್ರ ಅನ್ ಲಾಕ್ ರಾಘವ ಈಗ ಸೆಟ್ಟೇರಿದೆ. ಸತ್ಯಪ್ರಕಾಶ್ ಅವರ ಹೊಸ ಕನಸಿಗೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿ ಶುಭ ಕೋರಿದ್ದು ಅಶ್ವಿನಿ ಪುನೀತ್ ರಾಜಕುಮಾರ್. ಆದರೆ ಈ ಚಿತ್ರಕ್ಕೆ ಸತ್ಯಪ್ರಕಾಶ್ ನಿರ್ದೇಶಕರಲ್ಲ, ನಿರ್ಮಾಪಕ. ದೀಪಕ್ ಮಧುವನಹಳ್ಳಿ ನಿರ್ದೇಶಕ.

  ಇದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ತೆರೆಯ ಮೇಲೆ ಪಾತ್ರಧಾರಿಗಳು ಏನೇ ಮಾಡುತ್ತಿದ್ದರೂ ಪ್ರೇಕ್ಷಕ ನಗುತ್ತಿರುತ್ತಾನೆ. ಕಮರ್ಷಿಯಲ್ ಸಿನಿಮಾ ಎಂದು ಮಾಹಿತಿ ನೀಡಿದ್ದಾರೆ ಸತ್ಯ ಪ್ರಕಾಶ್.

  ಭಾಗ್ಯರಾಜ್, ಕಳ್ಬೆಟ್ಟದ ದರೋಡೆಕೋರರು, ರಾಜು ಜೇಮ್ಸ್ ಬಾಂಡ್ ಚಿತ್ರಗಳನ್ನು ನಿರ್ದೇಶಿಸಿದ್ದ ದೀಪಕ್ ಅವರಿಗೆ ಇದು 4ನೇ ಸಿನಿಮಾ. ಮಿಲಿಂದ್ ಹೀರೋ. ರೇಚಲ್ ಡೆವಿಡ್ ನಾಯಕಿ. ಸಾಧುಕೋಕಿಲ, ಅವಿನಾಶ್, ರಮೇಶ್ ಭಟ್, ವೀಣಾ ಸುಂದರ್, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಗಣದ ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನೀಡುತ್ತಿದ್ದಾರೆ.

 • ಅಪ್ಪು ಕನಸಿನ ಡಾಕ್ಯುಮೆಂಟರಿ ಟೈಟಲ್ ಡಿ.6ಕ್ಕೆ ರಿಲೀಸ್

  ಅಪ್ಪು ಕನಸಿನ ಡಾಕ್ಯುಮೆಂಟರಿ ಟೈಟಲ್ ಡಿ.6ಕ್ಕೆ ರಿಲೀಸ್

  ಪುನೀತ್ ರಾಜ್‍ಕುಮಾರ್ ಅವರ ಕನಸಿನ ಚಿತ್ರಗಳಲ್ಲೊಂದು ವೈಲ್ಡ್ ಡಾಕ್ಯುಮೆಂಟರಿ. ಕರುನಾಡಿನ ಬಗ್ಗೆ ವಿಶೇಷ ಮಾಹಿತಿ ಒಳಗೊಂಡ ಡಾಕ್ಯುಮೆಂಟರಿ ತಯಾರಿಸುವ ಯೋಜನೆಯಲ್ಲಿ ಕರ್ನಾಟಕದ ವೈಲ್ಡ್ ಲೈಫ್ ಬಗ್ಗೆ ಡಾಕ್ಯುಮೆಂಟರಿ ಮಾಡಿದ್ದರು ಪುನೀತ್. ಅಮೋಘವರ್ಷ ಅವರ ಕ್ಯಾಮೆರಾ ಕಣ್ಣಲ್ಲಿ ಅರಳಿದ್ದ ಡಾಕ್ಯುಮೆಂಟರಿ ಅದು. ಅಜನೀಶ್ ಲೋಕನಾಥ್ ಸಂಗೀತವಿತ್ತು. ಆ ಟೈಟಲ್‍ನ್ನು ನವೆಂಬರ್ 1ರ ರಾಜ್ಯೋತ್ಸವ ದಿನದಂದು ರಿಲೀಸ್ ಮಾಡುವ ಪ್ಲಾನ್ ಮಾಡಿದ್ದ ಪುನೀತ್, ಅನಿರೀಕ್ಷಿತವಾಗಿ ಅಗಲಿದರು. ಅವರ ಆ ಕನಸನ್ನು ನನಸು ಮಾಡುವ ಹೊಣೆ ಹೊತ್ತು ಹೊರಟಿದ್ದಾರೆ ಅಶ್ವಿನಿ ಪುನೀತ್.

  ಡಿಸೆಂಬರ್ 6ರಂದು ಆ ಡಾಕ್ಯುಮೆಂಟರಿಯ ಟೈಟಲ್ ರಿಲೀಸ್ ಆಗುತ್ತಿದೆ. ಡಿಸೆಂಬರ್ 6, ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನ ಎನ್ನುವುದು ಇನ್ನೊಂದು ವಿಶೇಷ.

 • ಅಪ್ಪು ಕನಸುಗಳೆಲ್ಲ ನನಸಾಗುತ್ತವೆ.. : ಅಶ್ವಿನಿ ಘೋಷಣೆ

  ಅಪ್ಪು ಕನಸುಗಳೆಲ್ಲ ನನಸಾಗುತ್ತವೆ.. : ಅಶ್ವಿನಿ ಘೋಷಣೆ

  ಪುನೀತ್ ರಾಜ್‍ಕುಮಾರ್ ಕನಸುಗಾರ. ಚಿತ್ರರಂಗದ ಬಗ್ಗೆ, ಸಿನಿಮಾಗಳ ಬಗ್ಗೆ, ಹೊಸ ಹೊಸ ಪ್ರಾಜೆಕ್ಟ್‍ಗಳ ಬಗ್ಗೆ.. ಹೊಸ ಹೊಸ ಕನಸು ಕಂಡಿದ್ದವರು. ಆ ಕನಸಿನ ಹಾದಿಯಲ್ಲಿ ಯಶಸ್ಸನ್ನೂ ಕಂಡಿದ್ದವರು. ಅಂತಹ ಇನ್ನೂ ಹತ್ತಾರು ಕನಸುಗಳು ಹಾಗೆಯೇ ಉಳಿದುಬಿಡುತ್ತವಾ..? ಅದಕ್ಕೆ ಅವಕಾಶ ನೀಡುವುದಿಲ್ಲ. ಪುನೀತ್ ಅವರ ಕನಸುಗಳು ಮುಂದುವರೆಯುತ್ತವೆ. ನನಸಾಗುತ್ತವೆ.. ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಘೋಷಿಸಿದ್ದಾರೆ.

  ನವೆಂಬರ್ 1ರಂದು ಪುನೀತ್ ಅವರು ಕನ್ನಡದ ಮೊದಲ ವೈಲ್ಡ್ ಲೈಫ್ ಡಾಕ್ಯುಮೆಂಟರಿ ಟ್ರೇಲರ್ ರಿಲೀಸ್ ಮಾಡುವ ಪ್ಲಾನ್‍ನಲ್ಲಿದ್ದರು. ಅಮೋಘವರ್ಷ ಅವರೊಂದಿಗೆ ರಾಜ್ಯದ ಕಾಡುಗಳನ್ನೆಲ್ಲ ಸುತ್ತಿದ್ದರು. ಡಾಕ್ಯುಮೆಂಟರಿಗಾಗಿ ಸಮುದ್ರ, ಕಾಡು ಎಲ್ಲವನ್ನು ಸುತ್ತಿದ್ದ ಅಪ್ಪು, ನವೆಂಬರ್ 1ರಂದ ಆ ಡಾಕ್ಯುಮೆಂಟರಿಯ ಟ್ರೇಲರ್ ಬಿಡುಗಡೆ ಮಾಡುವ ಉತ್ಸಾಹದಲ್ಲಿದ್ದರು.

  ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು. ಆ ಚರಿತ್ರೆ ಮರುಕಳಿಸುವ ಸಮಯ ಈಗ ಬಂದಿದೆ.. ಎಂದು ಪುನೀತ್ ಟ್ವೀಟ್ ಮಾಡಿದ್ದು ನೆನಪಿದೆಯಾ..? ಅದು ಇದೇ ಡಾಕ್ಯುಮೆಂಟರಿ ಕುರಿತಾಗಿತ್ತು.

  ಆ ಪ್ರಾಜೆಕ್ಟ್ ನಿಂತಿಲ್ಲ. ಅವರ ಕನಸುಗಳನ್ನು ನನಸಾಗಿಸುತ್ತೇವೆ. ಸದ್ಯಕ್ಕೆ ಬಿದ್ದಿರುವುದು ಅಲ್ಪವಿರಾಮವಷ್ಟೇ ಎಂದು ಅಶ್ವಿನಿ ಪುನೀತ್ ರಾಜ್‍ಕುಮಾರ್ ಘೋಷಿಸಿದ್ದಾರೆ. ಪುನೀತ್ ನಿಧನದ ನಂತರ ಸೋಷಿಯಲ್ ಮೀಡಿಯಾಗೆ ಬಂದ ಅಶ್ವಿನಿ, ಅಪ್ಪು ಕನಸುಗಳನ್ನು ನನನಸು ಮಾಡುವ ಹಾದಿಯಲ್ಲಿ ಹೆಜ್ಜೆಯಿಡುತ್ತಿದ್ದಾರೆ.

 • ಅಪ್ಪು ವಿದಾಯಕ್ಕೆ ಸಹಕರಿಸಿದವರಿಗೆ ಅಶ್ವಿನಿ ಪುನೀತ್ ರಾಜ್`ಕುಮಾರ್ ಪತ್ರ

  ಅಪ್ಪು ವಿದಾಯಕ್ಕೆ ಸಹಕರಿಸಿದವರಿಗೆ ಅಶ್ವಿನಿ ಪುನೀತ್ ರಾಜ್`ಕುಮಾರ್ ಪತ್ರ

  ಅಶ್ವಿನಿ ಪುನೀತ್ ರಾಜ್`ಕುಮಾರ್ ಹಂತ ಹಂತವಾಗಿ ಆಘಾತದಿಂದ ಹೊರಬರುತ್ತಿದ್ದಾರೆ. ಅಪ್ಪು ಅಂತ್ಯ ಸಂಸ್ಕಾರದ ವೇಳೆ ಕಣ್ಣೀರು ಅದುಮಿಟ್ಟುಕೊಂಡು ಮಕ್ಕಳಿಗೆ ಧೈರ್ಯ ಹೇಳಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್, ಅಂತ್ಯ ಸಂಸ್ಕಾರದ ವೇಳೆ ಸಹಕಾರ ನೀಡಿದ ಎಲ್ಲರಿಗೂ ಪ್ರತ್ಯೇಕವಾಗಿ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದಾರೆ.

  ಗೃಹ ಸಚಿವರು, ಬಿಬಿಎಂಪಿ ಆಯುಕ್ತರು, ಪೊಲೀಸರು.. ಎಲ್ಲರಿಗೂ ಪತ್ರ ಬರೆದು ಧನ್ಯವಾದ ಹೇಳಿದ್ದಾರೆ. ಇಂದು ಪುನೀತ್ ಅವರ ಮನೆಯಲ್ಲಿ 11ನೇ ದಿನ ಪುಣ್ಯತಿಥಿ ವಿಧಿ ವಿಧಾನಗಳು ನಡೆಯಲಿವೆ. ಮಧ್ಯಾಹ್ನ 12 ಗಂಟೆಯ ನಂತರವೇ ಅಭಿಮಾನಿಗಳು ಸಮಾಧಿ ದರ್ಶನ ಮಾಡಬಹುದಾಗಿದೆ.

 • ಅಭಿಮಾನಿ ದೇವರುಗಳಿಂದ ಗಂಧದ ಗುಡಿ ಅಭಿಯಾನ

  ಅಭಿಮಾನಿ ದೇವರುಗಳಿಂದ ಗಂಧದ ಗುಡಿ ಅಭಿಯಾನ

  ಅಭಿಮಾನಿಗಳೇ ನಮ್ಮನೆ ದೇವ್ರು ಎಂದು ಹಾಡಿ ಕುಣಿದಿದ್ದ ಪುನೀತ್ ರಾಜಕುಮಾರ್ ಈಗ ಅಭಿಮಾನಿಗಳ ಹೃದಯದಲ್ಲಿ ದೇವರಾಗಿಯೇ ಹೋಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಓಪನ್ ಆಗುತ್ತಿದ್ದ ಅಪ್ಪು, ಡಾಕ್ಯುಮೆಂಟರಿ ಮೂಲಕ ಕರ್ನಾಟಕವನ್ನು ವಿಭಿನ್ನ ರೀತಿಯಲ್ಲಿ ಕನ್ನಡಿಗರಿಗೆ ಪರಿಚಯಿಸುವ ಕನಸು ಕಂಡಿದ್ದರು. ಸಾಕ್ಷ್ಯಚಿತ್ರವಾದರೂ ಅದನ್ನು ಸಿನಿಮಾದಂತೆಯೇ ಚಿತ್ರಮಂದಿರದಲ್ಲಿ ತೋರಿಸುವ ಹೊಸ ಪ್ರಯೋಗಕ್ಕೆ ಮುಂದಾಗಿದ್ದರು. ಈಗ ಅವರಿಲ್ಲ. ಭೌತಿಕವಾಗಿ ಅವರಿಲ್ಲದೆ ಹೋದರೂ ಆ ಡಾಕ್ಯುಮೆಂಟರಿಯನ್ನು ಅವರ ಕನಸಿನಂತೆಯೇ ಚಿತ್ರಮಂದಿರದಲ್ಲಿ ತೋರಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಮುಂದಾಗಿದ್ದಾರೆ. ಗಂಧದ ಗುಡಿ ಅಕ್ಟೋಬರ್ 28ಕ್ಕೆ ಚಿತ್ರಮಂದಿರಕ್ಕೆ ಬರುತ್ತಿದೆ. ಅಕ್ಟೋಬರ್ 29ಕ್ಕೆ  ಪುನೀತ್ ಅವರ ಪುಣ್ಯತಿಥಿ. ಪ್ರಚಾರವನ್ನು ಅಭಿಮಾನಿಗಳೇ ಆರಂಭಿಸಿದ್ದಾರೆ.

  ಬೆಂಗಳೂರಿನಲ್ಲಿ ಗಂಧದ ಗುಡಿ ಪ್ರಚಾರದ ಸಲುವಾಗಿ ಬೈಕ್ ರ್ಯಾಲಿ ನಡೆಯಿತು. ಅಶ್ವಿನಿ ಪುನೀತ್ ರಾಜಕುಮಾರ್ ಬೈಕ್ ರ್ಯಾಲಿಗೆ ಉದ್ಘಾಟಿಸಿದರು. ಸಚಿವ ಅಶ್ವತ್ಥ್ ನಾರಾಯಣ್ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿದರು. ಎಲ್ಲರೂ ಗಂಧದ ಗುಡಿ ರೈಡ್ ಫಾರ್ ಅಪ್ಪು ಟೀ ಶರ್ಟ್ ಧರಿಸಿ ಗಮನ ಸೆಳೆದರು. ಗಂಧದ ಗುಡಿ ಡಾಕ್ಯುಮೆಂಟರಿ ಡೈರೆಕ್ಟರ್ ಅಮೋಘವರ್ಷ ಈ ಸಂದರ್ಭದಲ್ಲಿ ಹಾಜರಿದ್ದರು.

 • ಅಶ್ವಿನಿ ಪುನೀತ್ ತಂದೆ ನಿಧನ

  ಅಶ್ವಿನಿ ಪುನೀತ್ ತಂದೆ ನಿಧನ

  ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಇನ್ನೊಂದು ಆಘಾತ. ಅಶ್ವಿನಿ ಅವರ ತಂದೆ ರೇವನಾಥ್ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಆರೋಗ್ಯವಾಗಿಯೇ ಇದ್ದ ರೇವನಾಥ್ ಅವರ ಆರೋಗ್ಯ ದಿಢೀರನೆ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

  ರೇವನಾಥ್ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರು. ಬಿಬಿಎಂಪಿಯಲ್ಲಿ ಕೆಲಸ ಮಾಡಿದ್ದ ಅವರು ಮಾಜಿ ಸಂಸದ ಡಿ.ಬಿ.ಚಂದ್ರೇಗೌಡ ಅವರ ಸಂಬಂಧಿಕರೂ ಹೌದು. ಚಿಕ್ಕಮಗಳೂರಿನ ಮೂಡಿಗೆರೆಯವರು. 20 ವರ್ಷಗಳ ಹಿಂದೆಯೇ ಅವರಿಗೆ ಅಂಜಿಯೋಪ್ಲಾಸ್ಟಿ ಆಗಿತ್ತು.

  ಅಳಿಯ ಪುನೀತ್ ಅವರನ್ನು ತುಂಬಾ ಹಚ್ಚಿಕೊಂಡಿದ್ದ ರೇವನಾಥ್, ಪುನೀತ್ ನಿಧನದ ನಂತರ ಆಘಾತಕ್ಕೊಳಗಾಗಿದ್ದರು. ಜೊತೆಗೆ ಮಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಈಗ ಅಶ್ವಿನಿ ತಂದೆಯ ಸಾವಿನ ಆಘಾತವನ್ನೂ ಸಹಿಸಿಕೊಳ್ಳಬೇಕು. ಅಶ್ವಿನಿ ಅವರ ತಂಗಿ ಆಸ್ಟ್ರೇಲಿಯಾದಲ್ಲಿದ್ದು, ಅವರು ಬಂದ ನಂತರ ಅಂತ್ಯಕ್ರಿಯೆ ನೆರವೇರಲಿದೆ. 

 • ಅಶ್ವಿನಿ ಪುನೀತ್ ರಾಜಕುಮಾರ್`ಗೆ ರಾಹುಲ್ ಗಾಂಧಿ ಸಾಂತ್ವನ

  ಅಶ್ವಿನಿ ಪುನೀತ್ ರಾಜಕುಮಾರ್`ಗೆ ರಾಹುಲ್ ಗಾಂಧಿ ಸಾಂತ್ವನ

  ಪುನೀತ್ ಅಕಾಲಿಕ ನಿಧನದ ಬಳಿಕ ಕರ್ನಾಟಕಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಮೇರು ನಾಯಕ ರಾಹುಲ್ ಗಾಂಧಿ, ಪುನೀತ್ ರಾಜಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದರು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಕಾಂಗ್ರೆಸ್‍ನ ಹಲವು ನಾಯಕರು ರಾಹುಲ್ ಗಾಂಧಿ ಜೊತೆ ಪುನೀತ್ ನಿವಾಸಕ್ಕೆ ಭೇಟಿ ಕೊಟ್ಟರು.

  ಸಿದ್ದಗಂಗಾ ಮಠಕ್ಕೆ ತೆರಳಿದ್ದ ರಾಹುಲ್ ಗಾಂಧಿ, ಅಲ್ಲಿಂದ ನೇರವಾಗಿ ಪುನೀತ್ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಯವರಿಗೆ ಸಾಂತ್ವನ ಹೇಳಿದರು. ಅತಿ ಕಿರಿಯ ವಯಸ್ಸಿನಲ್ಲೇ ಅತಿ ದೊಡ್ಡ ಸಾಧನೆ ಮಾಡಿದವರು ಪುನೀತ್ ರಾಜಕುಮಾರ್ ಎಂದ ರಾಹುಲ್ ಗಾಂಧಿ, ಪುನೀತ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

 • ಅಶ್ವಿನಿ ಪುನೀತ್ ರಾಜ್`ಕುಮಾರ್ ಟ್ವೀಟ್ : ಪಿ.ಆರ್.ಕೆ. ಭವಿಷ್ಯ ಏನು?

  ಅಶ್ವಿನಿ ಪುನೀತ್ ರಾಜ್`ಕುಮಾರ್ ಟ್ವೀಟ್ : ಪಿ.ಆರ್.ಕೆ. ಭವಿಷ್ಯ ಏನು?

  ಪಿಆರ್‍ಕೆ, ಪುನೀತ್ ಅವರ ಕನಸಿನ ಕಂಪೆನಿ. ಹೊಸಬರಿಗೆ ಅವಕಾಶ ನೀಡುವ ಉದ್ದೇಶದಿಂದಲೇ ಶುರು ಮಾಡಿದ ಸಂಸ್ಥೆ. ಆ ಹಾದಿಯಲ್ಲಿ ಕವಲುದಾರಿ, ಫ್ರೆಂಚ್ ಬಿರಿಯಾನಿ, ಲಾ, ಮಾಯಾಬಜಾರ್.. ಮೊದಲಾದ ಚಿತ್ರಗಳನ್ನು ನಿರ್ಮಿಸಿದ್ದರು ಪುನೀತ್. ತಮ್ಮ ಸಂಸ್ಥೆಯಿಂದ ಹೊಸಬರ ಚಿತ್ರದ ಆಡಿಯೋ ಹಕ್ಕುಗಳನ್ನೂ ಖರೀದಿಸಿದ್ದರು. ಬೇರೆ ಬೇರೆ ರೀತಿಯಲ್ಲಿ ಹೊಸ ಪ್ರತಿಭಾವಂತರಿಗೆ ನೆರವಾಗಲೆಂದೇ ಹುಟ್ಟುಹಾಕಿದ್ದ ಸಂಸ್ಥೆಯ ಭವಿಷ್ಯ ಏನು? ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

  ಹಿಂದಿನದ್ದನ್ನು ಬದಲಿಸುವುದು ಅಸಾಧ್ಯ.  ಪುನೀತ್ ನಮಗೆ ನೀಡಿರುವ ಉತ್ಸಾಹ ಮತ್ತು ಸ್ಫೂರ್ತಿಯೊಂದಿಗೆ ಪಿಆರ್‍ಕೆ ಪ್ರೊಡಕ್ಷನ್ಸ್ ಮತ್ತು ಪಿಆರ್‍ಕೆ ಆಡಿಯೋದ ಉಜ್ವಲ ಭವಿಷ್ಯವನ್ನು ಮುಂದುವರೆಸುತ್ತೇವೆ. ನಮ್ಮ ಈ ಪ್ರಯಾಣಕ್ಕೆ ನಿಮ್ಮ ಬೆಂಬಲ ಇರಲಿ..

  ಇಂತಾದ್ದೊಂದು ಸಂದೇಶ ನೀಡಿದೆ ಪಿಆರ್‍ಕೆ. ಅದೂ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ. ಪಿಆರ್‍ಕೆಯ ಪಯಣ ಮುಗಿದಿಲ್ಲ ಎಂದು ಈ ಮೂಲಕ ಹೇಳಿದ್ದಾರೆ ಅಶ್ವಿನಿ. ಗುಡ್ ಲಕ್ ಅಶ್ವಿನಿ ಪುನೀತ್ ರಾಜ್‍ಕುಮಾರ್.

 • ಗಂಧದ ಗುಡಿ ನೋಡಿದ ಶಿವಣ್ಣ ಅಶ್ವಿನಿ ಬಗ್ಗೆ ಹೇಳಿದ ಮಾತಿದು

  ಗಂಧದ ಗುಡಿ ನೋಡಿದ ಶಿವಣ್ಣ ಅಶ್ವಿನಿ ಬಗ್ಗೆ ಹೇಳಿದ ಮಾತಿದು

  ಗಂಧದ ಗುಡಿ ಟೀಸರ್ ಹೊರಬಿದ್ದಿದೆ. ಪಾರ್ವತಮ್ಮ ರಾಜ್‍ಕುಮಾರ್ ಜನ್ಮದಿನದಂದೇ ಟೀಸರ್ ರಿಲೀಸ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್. ರಾಜ್ಯೋತ್ಸವದ ದಿನ ರಿಲೀಸ್ ಆಗಬೇಕಿದ್ದ ಟೀಸರ್ ಇದು. ಅಮೋಘವರ್ಷ ಅವರ ಕೈಚಳಕ, ಪರಿಕಲ್ಪನೆ, ಸಾಹಸ.. ಅದೆಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದ ಪುನೀತ್.. ಇವೆಲ್ಲದರ ಸಂಗಮವೇ ಗಂಧದ ಗುಡಿ. ಈ ಗಂಧದ ಗುಡಿಗಾಗಿ ಒಂದು ವರ್ಷ ಅವರ ಜೊತೆ ಇದ್ದೆ. ಅದೇ ಖುಷಿ. ಈ ಗಂಧದ ಗುಡಿಯಲ್ಲಿ ಪುನೀತ್ ಮೇಕಪ್ ಇಲ್ಲದೆ, ಸಹಜವಾಗಿ ಕಾಣಿಸಿಕೊಂಡಿದ್ದಾರೆ. ಕರ್ನಾಟಕದ ಒಂದು ಚೆಂದದ ಕಥೆ ಹೇಳಲಿದ್ದೇವೆ ಎಂದಿದ್ದಾರೆ ಅಮೋಘವರ್ಷ.

  ಟೀಸರ್ ನೋಡಿದವರೆಲ್ಲ ಮೆಚ್ಚುಗೆ ವ್ಯಕ್ತಪಡಿಸುತ್ತಿರುವಾಗ ಶಿವಣ್ಣ ಅಶ್ವಿನಿಯವರ ಬಗ್ಗೆ ಮಾತನಾಡಿದ್ದಾರೆ. ಅಶ್ವಿನಿ ಮೊನ್ನೆ ಕರೆ ಮಾಡಿದ್ದರು. ಪಿಆರ್‍ಕೆ ಕಚೇರಿಗೆ ಹೋಗಬೇಕು ಅಂದ್ಕೊಂಡಿದ್ದೇನೆ ಅಂದ್ರು. ನಾವೆಲ್ಲ ನಿನ್ನ ಜಒತೆ ಇದ್ದೇವೆ ಎಂದೆ. ಗೊತ್ತಿದೆ ಶಿವಣ್ಣ, ನಿಮಗೆ ಒಂದು ಮಾತು ಹೇಳೋಣ ಎಂದುಕೊಂಡು ಫೋನ್ ಮಾಡಿದೆ ಎಂದರು. ಅಶ್ವಿನಿಗೆ ಒಂದು ಪವರ್ ಇದೆ. ಅಪ್ಪು ಮತ್ತು ಅಶ್ವಿನಿ ಗಂಡ ಹೆಂಡತಿ ಅನ್ನೋದಕ್ಕಿಂತ ಹೆಚ್ಚಾಗಿ ಒಳ್ಳೆ ಫ್ರೆಂಡ್ಸ್ ರೀತಿ ಇದ್ದರು. ಅವರನ್ನು ಮದುವೆಗೆ ಮೊದಲಿನಿಂದಲೂ ನೋಡಿದ್ದೇನೆ. ಅಶ್ವಿನಿ ಎಷ್ಟು ಧೈರ್ಯವಂತೆ ಅಂದ್ರೆ, ಆಕೆಗೆ ನಮ್ಮ ಬೆಂಬಲ ಬೇಕಾಗದೆಯೇ ಇರಬಹುದು. ಆದರೂ.. ನಾವೆಲ್ಲರೂ ಅವರ ಜೊತೆಗೆ ಇರುತ್ತೇವೆ ಎಂದಿದ್ದಾರೆ ಶಿವಣ್ಣ.

  ಅಂದಹಾಗೆ ಈ ಗಂಧದ ಗುಡಿ ಸಿನಿಮಾ ಅಲ್ಲ. ಸಿನಿಮಾ ಶೈಲಿಯಲ್ಲಿಯೇ ಇರೋ ಡಾಕ್ಯುಮೆಂಟರಿ. ಆದರೆ, ಇದನ್ನು ರಾಜ್ಯಾದ್ಯಂತ ಥಿಯೇಟರಿಗೇ ರಿಲೀಸ್ ಮಾಡುತ್ತಿದ್ದಾರೆ ಅಶ್ವಿನಿ ಪುನೀತ್ ರಾಜ್‍ಕುಮಾರ್.

 • ಗಂಧದ ಗುಡಿ ಮೆಚ್ಚಿದವರು.. ಮೋದಿಯಿಂದ ಅಭಿಮಾನಿ ದೇವರುಗಳವರೆಗೆ..

  ಗಂಧದ ಗುಡಿ ಮೆಚ್ಚಿದವರು.. ಮೋದಿಯಿಂದ ಅಭಿಮಾನಿ ದೇವರುಗಳವರೆಗೆ..

  ಗಂಧದ ಗುಡಿ ಟ್ರೇಲರ್ ನೋಡಿ ಮೆಚ್ಚದೆ ಇರುವುದಕ್ಕೆ ಕಾರಣಗಳೇ ಇಲ್ಲ. ಇದು ರಿಲೀಸ್ ಆಗುವುದು ಅಕ್ಟೋಬರ್ 28ಕ್ಕೆ. ಅಪ್ಪು ಅವರನ್ನು ಕಟ್ಟಕಡೆಯ ಬಾರಿ ಥಿಯೇಟರಿನಲ್ಲಿ ಕಣ್ತುಂಬಿಕೊಳ್ಳುವ ಅವಕಾಶ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದ ಮೇಲಿನ  ಡಾಕ್ಯುಮೆಂಟರಿಯೊಂದನ್ನು ಥಿಯೇಟರಲ್ಲಿ ರಿಲೀಸ್ ಮಾಡಿ ಕನ್ನಡಿಗರಿಗೆ ಕನ್ನಡ ನಾಡಿನ ಹೆಮ್ಮೆಯ ಬಗ್ಗೆ ಪರಿಚಯಿಸುವ ಕನಸು ಕಂಡಿದ್ದವರು ಅಪ್ಪು. ಹೊಸಬರ ಚಿತ್ರಗಳನ್ನು ನಿರ್ಮಾಣ ಮಾಡುತ್ತಲೇ ಇಂತಾದ್ದೊಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡುವ ಮೂಲಕ ಅದನ್ನು ಥಿಯೇಟರಿಗೆ ತಂದು ತೋರಿಸಿ ಆ ಮೂಲಕ ಕನ್ನಡಿಗರೆಲ್ಲರೂ ಕನ್ನಡ ನಾಡಿನ ಬಗ್ಗೆ ಹೆಮ್ಮೆ, ಪ್ರೀತಿಯಿಂದ ಮಾತನಾಡುಬೇಕು ಎನ್ನುವುದು ಅಪ್ಪು ಕನಸಾಗಿತ್ತು. ಅದನ್ನು ತಮ್ಮ ಮೂಲಕವೇ ಸಾಕಾರಗೊಳಿಸಲು ಹೊರಟಿದ್ದರು. ಆ ಯತ್ನದ ಮೊದಲ ಸಾಹಸವೇ ಗಂಧದ ಗುಡಿ. ಟ್ರೇಲರ್ ನೋಡಿ ಮೆಚ್ಚಿದವರು ಒಬ್ಬಿಬ್ಬರಲ್ಲ.

  ಗಂಧದ ಗುಡಿ ಕರ್ನಾಟಕದ ಪ್ರಕೃತಿ ಮಾತೆಗೆ ವನ್ಯಜೀವಿ ಸೌಂದರ್ಯಕ್ಕೆ ನೀಡಿದ ಗೌರವ. ಪುನೀತ್ ಕರ್ನಾಟಕದ ಲಕ್ಷ ಲಕ್ಷ ಹೃದಯಗಳಲ್ಲಿ ಜೀವಂತವಾಗಿದ್ದಾರೆ. ಅಪ್ಪು ಅಪ್ರತಿಮ ಪ್ರತಿಭೆ, ಉತ್ತಮ ವ್ಯಕ್ತಿತ್ವ,ತೇಜಸ್ಸು ಅವರಲ್ಲಿತ್ತು.

  ನರೇಂದ್ರ ಮೋದಿ, ಪ್ರಧಾನಮಂತ್ರಿ-  ಗಂಧದ ಗುಡಿ ಕರ್ನಾಟಕದ ಆಸ್ತಿ. ಅಪ್ಪು ಗಂಧದ ಗುಡಿಯ ಆಸ್ತಿ. ಈ ಟ್ರೇಲರ್ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯಲಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಅಭಿನಂದನೆಗಳು.

  ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ - ಗಂಧದ ಗುಡಿ ಪ್ರಸ್ತುತ ಪಡಿಸುತ್ತಿದ್ದೇವೆ.ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯನ್ನು ವೈವಿದ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಪಯಣ

  ಡಾ.ಶಿವರಾಜಕುಮಾರ್ - ಹೊಂಬಾಳೆ ಫಿಲಮ್ಸ್‍ನವರು ಇದು ತಮ್ಮದೇ ಪ್ರಾಜೆಕ್ಟ್ ಎಂಬಂತೆ ತೊಡಗಿಸಿಕೊಂಡಿದ್ದರೆ, ಇಡೀ ಚಿತ್ರರಂಗ ಇದು ತಮ್ಮ ಮನೆಯ ಕೆಲಸ ಎಂಬಂತೆ ಪ್ರಮೋಟ್ ಮಾಡಿತು. ಪ್ರೀತಿಯ ಅಪ್ಪುಗೆ ನೀಡಿತು. ಯಶ್, ಸುದೀಪ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಮ್ಯಾ, ಪ್ರಶಾಂತ್ ನೀಲ್, ಯೋಗರಾಜ್ ಭಟ್, ಪೈಲ್ವಾನ್ ಕೃಷ್ಣ, ಸಂತೋಷ್ ಆನಂದರಾಮ್, ತರುಣ್ ಸುಧೀರ್.. ಲಿಸ್ಟು ಮುಗಿಯುವುದೇ ಇಲ್ಲ. ಪ್ರತಿಯೊಬ್ಬರೂ ಇದನ್ನು ಕರ್ತವ್ಯವೇನೋ ಎಂಬಂತೆ ತಮ್ಮ ಮನೆಯ ಕನಸಿನಂತೆ ಶುಭ ಹಾರೈಸಿದರು. ಜೊತೆಗಿರದ ಜೀವ ಎಂದಿಗೂ ಜೀವಂತ..

 • ಗಂಧದ ಗುಡಿ ರಿಯಾಯಿತಿ : ಅಶ್ವಿನಿ ಪುನೀತ್ ನಿಧಾರಕ್ಕೆ ಮೆಚ್ಚುಗೆ

  ಗಂಧದ ಗುಡಿ ರಿಯಾಯಿತಿ : ಅಶ್ವಿನಿ ಪುನೀತ್ ನಿಧಾರಕ್ಕೆ ಮೆಚ್ಚುಗೆ

  ಅಶ್ವಿನಿ ಪುನೀತ್ ರಾಜಕುಮಾರ್ ಮತ್ತೊಂದು ಮೆಚ್ಚುಗೆಯ ಹೆಜ್ಜೆ ಇಟ್ಟಿದ್ದಾರೆ. ಸೆ.28ರಂದು ರಿಲೀಸ್ ಆಗಿ ಅತ್ಯುತ್ತಮ ಪ್ರದರ್ಶನ ಕಾಣುತ್ತಿರುವ ಗಂಧದ ಗುಡಿ ಚಿತ್ರಕ್ಕೆ ರಿಯಾಯಿತಿ ಘೋಷಿಸಿದ್ದಾರೆ. ಸಿಂಗಲ್ ಥಿಯೇಟರ್ನಲ್ಲಿ 4 ದಿನಗಳ ಕಾಲ 'ಗಂಧದ ಗುಡಿ' ಸಾಕ್ಷ್ಯಚಿತ್ರದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗುವುದು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಘೋಷಿಸಿದ್ದಾರೆ.

  ಗಂಧದಗುಡಿ ಅಪ್ಪು ಅವರ ಒಂದು ಕನಸು ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಅಪ್ಪು ಅವರ ಉದ್ದೇಶ ಈ ಸಿನಿಮಾ ಎಲ್ಲ ಕನ್ನಡಿಗರು ನೋಡಬೇಕೆಂಬುದು. ಅದರಲ್ಲಿಯೂ ಮಕ್ಕಳು ನೋಡಬೇಕೆಂಬುದು. ಈ ಸಲುವಾಗಿ ನಾನು ಹಾಗೂ ಚಿತ್ರತಂಡ ಎಲ್ಲರೊಡನೆ ಚರ್ಚಿಸಿ ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದಗುಡಿಯನ್ನು 7-11-2022 ಸೋಮವಾರದಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ 56 ರೂಪಾಯಿಗಳಿಗೆ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ 112 ರೂಪಾಯಿಗಳಿಗೆ ಕರ್ನಾಟಕ ರಾಜ್ಯಾದ್ಯಂತ ದಿನದ ಎಲ್ಲ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ನಮ್ಮ ಮಕ್ಕಳ ನಾಳೆಗಳಿಗಾಗಿ ಕಾಡನ್ನು ರಕ್ಷಿಸೋಣ, ಗಂಧದಗುಡಿಯನ್ನು ತೋರಿಸೋಣ. ಜೈ ಹಿಂದ್, ಜೈ ಕರ್ನಾಟಕ ಮಾತೆ.

  ಗಂಧದ ಗುಡಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ಘೋಷಿಸಿದೆ. ಹಾಗೆ ನೋಡಿದರೆ ಗಂಧದ ಗುಡಿ ಟಿಕೆಟ್ ದರವನ್ನು ದುಬಾರಿಯೇನೂ ಮಾಡಿರಲಿಲ್ಲ. ಅಭಿಮಾನಿ ಸಾಗರ ಹರಿದು ಬರಲಿದೆ ಎಂದು ಗೊತ್ತಿದ್ದರೂ ಟಿಕೆಟ್ ದರ ಏರಿಸಿರಲಿಲ್ಲ. ಈಗ ಮಕ್ಕಳಿಗಾಗಿ ಟಿಕೆಟ್ ದರವನ್ನು ಇಳಿಸಿದ್ದಾರೆ. ಅಶ್ವಿನಿ ಪುನೀತ್ ನಿರ್ಧಾರಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದವರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

 • ಜೇಮ್ಸ್ ನೋಡೋಕೆ ನನಗೆ ಸಾಧ್ಯವಿಲ್ಲ. ಒಳ್ಳೆಯದಾಗಲಿ : ಅಶ್ವಿನಿ ಪುನೀತ್ ರಾಜಕುಮಾರ್

  ಜೇಮ್ಸ್ ನೋಡೋಕೆ ನನಗೆ ಸಾಧ್ಯವಿಲ್ಲ. ಒಳ್ಳೆಯದಾಗಲಿ : ಅಶ್ವಿನಿ ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್ ರಾಜ್ಯದ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಪ್ರೀತಿಯ ನಟ. ಆದರೆ ಅವರ ಕುಟುಂಬದವರಿಗೆ ಪುನೀತ್ ಬೇರೆಯೇ. ಅಭಿಮಾನಿಗಳೇ ಇನ್ನೂ ದುಃಖದಿಂದ ಹೊರಬರದಿರುವಾಗ, ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಇದನ್ನು ನಿರೀಕ್ಷಿಸಲಾಗದು. ಹಾಗೆ ನೋಡಿದರೆ ಅತ್ಯಂತ ಸಂಯಮ ಪಾಲಿಸುತ್ತಿರುವ ಅಶ್ವಿನಿ ಹೊರಗೆ ಎಲ್ಲಿಯೂ ತಮ್ಮ ದುಃಖ ತೋಡಿಕೊಳ್ಳುತ್ತಿಲ್ಲ.

  ಅಪ್ಪು ಅವರನ್ನು ಮರೆಯಲು ಆಗುತ್ತಿಲ್ಲ. ಅವರು ಹೋದ ನಂತರ ನಮ್ಮ ದುಃಖದಲ್ಲಿ ಇಡೀ ಕರುನಾಡು ನಿಂತಿತ್ತು. ಅವರ ಅಭಿಮಾನಿಗಳದ್ದಂತೂ ಮೇರೆ ಮೀರಿದ ಅಭಿಮಾನ. ಅವರು ನಡೆಸಿದ ರಕ್ತದಾನ, ಅನ್ನದಾನ, ನೇತ್ರದಾನ.. ಒಂದಾ ಎರಡಾ.. ನನಗೆ ಮಾತೇ ಬರುತ್ತಿಲ್ಲ. ಮನಸ್ಸು ತುಂಬಿ ಬಂದಿದೆ. ಅವರಿಗೆಲ್ಲ ನಾನು ಕೃತಜ್ಞಳಾಗಿದ್ದೇನೆ. ಅವರ ಅಗಲಿಕೆಯ ದುಃಖದಿಂದ ನಾನಿನ್ನೂ ಹೊರಬಂದಿಲ್ಲ. ಹಾಗಾಗಿ ಯಾವುದೇ ಸಂಭ್ರಮ ಸ್ವೀಕರಿಸುತ್ತಿಲ್ಲ. ನನಗೆ ಚಿತ್ರರಂಗ ಹೊಸದಲ್ಲ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುನ್ನಡೆಯುತ್ತೇನೆ. ಹೊಸಬರಿಗೆ ಅವಕಾಶ ನೀಡುತ್ತೇವೆ. ಅಪ್ಪು ಕನಸನ್ನು ಈಡೇರಿಸುತ್ತೇವೆ.

  ಜೇಮ್ಸ್ ಚಿತ್ರ ಚೆನ್ನಾಗಿ ಬಂದಿದೆ ಎಂದು ಎಲ್ಲರೂ ಹೇಳಿದ್ದಾರೆ. ನಾನು ನೋಡಿಲ್ಲ. ಮಕ್ಕಳೂ ಸೇರಿದಂತೆ ನಮ್ಮ ಕುಟುಂಬದವರೆಲ್ಲ ಚಿತ್ರ ನೋಡುತ್ತಾರೆ. ನನಗೆ ನೋಡಲು ಆಗುತ್ತಿಲ್ಲ. ಅಭಿಮಾನಿಗಳಿಗೆ ಒಳ್ಳೆಯದಾಗಲಿ, ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಪ್ಪು ಹಾರೈಕೆ ನಮ್ಮೆಲ್ಲರ ಮೇಲಿರಲಿ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

 • ತಮಿಳುನಾಡಿನಲ್ಲಿ ಪುನೀತ್ ಪ್ರಶಸ್ತಿ ಪ್ರದಾನ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

  ತಮಿಳುನಾಡಿನಲ್ಲಿ ಪುನೀತ್ ಪ್ರಶಸ್ತಿ ಪ್ರದಾನ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರವೇ ಘೋಷಣೆಯಾಗಿದೆ. ಹಲವು ಮಠಗಳು, ಸಂಸ್ಥೆಗಳು ಪುನೀತ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಅದೆಲ್ಲಕ್ಕೂ ಮಿಗಿಲಾಗಿ ಪುನೀತ್, ಅವರ ಅಭಿಮಾನಿ ದೇವರುಗಳ ಹೃದಯದಲ್ಲಿ ದೇವರಾಗಿದ್ದಾರೆ. ವಿಶೇವೆಂದರೆ ತಮಿಳುನಾಡಿನಲ್ಲಿ ಕೂಡಾ ಪ್ರತಿಷ್ಠಿತ ಸಂಸ್ಥೆಯೊಂದು ಪುನೀತ್ ಹೆಸರಲ್ಲಿ ಪ್ರಶಸ್ತಿ ಆರಂಭಿಸಿದೆ.

  ತಮಿಳುನಾಡಿನಲ್ಲಿ ದಿ ಗಲಾಟಾ ಕ್ರೌನ್`ಗೆ ವಿಶೇಷ ಗೌರವವಿದೆ. ಆ ಸಂಸ್ಥೆ ಈ ವರ್ಷ ಪುನೀತ್ ಅವರ ಹೆಸರಲ್ಲಿ ಪ್ರಶಸ್ತಿ ಆರಂಭಿಸಿದೆ. ಪುನೀತ್ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲಿಗ ಎಂಬ ಗೌರವಕ್ಕೆ ಪಾತ್ರರಾಗಿರುವುದು ನಟ ಆರ್ಯ. ಆರ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದವರು ಅಶ್ವಿನಿ ಪುನೀತ್ ರಾಜಕುಮಾರ್.

  ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನಟ ಆರ್ಯ ತಾವು ಒಮ್ಮೆ ಸುಮಾರು 10 ಜನರೊಂದಿಗೆ ಪುನೀತ್ ಮನೆಗೆ ಹೋಗಿದ್ದೆವು. ಆವತ್ತು ಭಾನುವಾರ. ಆ ದಿನ ಅವರ ಮನೆಯಲ್ಲಿ ಕೆಲಸದವರೂ ಇರಲಿಲ್ಲ. ಆದರೆ ಪುನೀತ್ ಮತ್ತು ಅಶ್ವಿನಿ ಸ್ವತಃ ಅಡುಗೆ ಮಾಡಿ ಪ್ರೀತಿಯಿಂದ ಬಡಿಸಿದ್ದನ್ನು ನಾನು ಯಾವತ್ತಿಗೂ ಮರೆಯಲ್ಲ. ಈಗ ಅವರ ಹೆಸರಲ್ಲಿ ಪ್ರಶಸ್ತಿ ಸಿಕ್ಕಿದೆ. ಅವರ ಸಾಧನೆಯ ಶೇ.5ರಷ್ಟೂ ನಾನಿಲ್ಲ. ಈ ಪ್ರಶಸ್ತಿ ನಮ್ಮ ಚಿತ್ರರಂಗಕ್ಕೆ ಸಿಕ್ಕ ಗೌರವ ಎಂದುಕೊಳ್ತೇನೆ. ನನಗೆ ಅಶ್ವಿನಿ ಪುನೀತ್ ಅವರ ಧೈರ್ಯ ಇಷ್ಟವಾಯಿತು ಎಂದರು ಆರ್ಯ.

  ಇದೇ ವೇಳೆ ಯುವರತ್ನ ಚಿತ್ರಕ್ಕಾಗಿ ಪುನೀತ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು.

 • ಧನ್ಯವಾದ ಕರ್ನಾಟಕ : ಅಶ್ವಿನಿ ಪುನೀತ್ ರಾಜ್ ಕುಮಾರ್

  ಧನ್ಯವಾದ ಕರ್ನಾಟಕ : ಅಶ್ವಿನಿ ಪುನೀತ್ ರಾಜ್ ಕುಮಾರ್

  ಡಾ. ಪುನೀತ್ ರಾಜ್ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಅಪ್ಪು ಅವರನ್ನು ನಮ್ಮ ನಡುವೆ ಸದಾ ಜೀವಂತವಾಗಿಟ್ಟಿರುವುದಕ್ಕೆ ಅಭಿಮಾನಿಗಳಿಗೆ, ರಾಜ್ಯ ಸರ್ಕಾರಕ್ಕೆ, ಚಲನಚಿತ್ರ ವಾಣಿಜ್ಯ ಮಂಡಳಿಗೆ ಹಾಗೂ ಚಿತ್ರರಂಗದ ಬಂಧುಗಳಿಗೆ ನಾನು ಎಂದೆಂದಿಗೂ ಚಿರಋಣಿ.

  ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನಾಯಂಡಹಳ್ಳಿ ಜಂಕ್ಷನ್ನಿಂದ ವೆಗಾ ಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ಹೊರ ವರ್ತುಲ ರಸ್ತೆಯನ್ನು ಅಪ್ಪು ಗೌರವಾರ್ಥ ಡಾ. ಪುನೀತ್ ರಾಜ್ಕುಮಾರ್ ರಸ್ತೆ ಲೋಕಾರ್ಪಣೆ ಮಾಡಿದಕ್ಕಾಗಿ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು.

  ಡಾ.ರಾಜ್ ಪುನೀತ್ ರಾಜ್ ಕುಮಾರ್ ರಸ್ತೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ

  ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಧನ್ಯವಾದ ಅರ್ಪಿಸಿದ್ದು ಹೀಗೆ. ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಸ್ತೆಯ ಹೆಸರನ್ನು ಲೋಕಾರ್ಪಣೆ ಮಾಡಿ ಅಪ್ಪು ಸತ್ತ ನಂತರವೂ ನಮ್ಮ ಜೊತೆಗೆ ಇದ್ದಾರೆ. ಅಪ್ಪು ಹೆಸರಿನಲ್ಲಿ ಸಮಾಧಿಯಲ್ಲಿ ಅದ್ಭುತ ಸ್ಮಾರಕವನ್ನು ಮಾಡುತ್ತೇವೆ. ಈ ಭಾಗ್ಯ ನನ್ನದು. ಅಷ್ಟೇ ಅಲ್ಲ ಕರ್ನಾಟಕ ರತ್ನ ಕೊಡುವ ಭಾಗ್ಯವೂ ನನ್ನದಾಗಿತ್ತು ಸ್ವಾಮಿ ವಿವೇಕಾನಂದರು ಒಂದು ಮಾತು ಹೇಳಿದ್ದಾರೆ. ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕಿರುವವನು ಸಾಧಕ. ಬೀದರ್ನ ಔರಾದ, ಚಾಮರಾಜನಗರ, ನಿಪ್ಪಾಣಿ ಎಲ್ಲ ಕಡೆ ಅಪ್ಪು ಬಗ್ಗೆ ಅದೇ ಪ್ರೀತಿ ಗಳಿಸಿದ್ದಾರೆ. ಕೋಟಿ ಹೃದಯಗಳಲ್ಲಿ ಅಪ್ಪು ಜೀವಂತವಿದ್ದಾರೆ ಎಂದರು. ಪುನೀತ್ ನಮ್ಮ ನಿಮ್ಮೆಲ್ಲರ ಅಪ್ಪು, ಅವನು ನನ್ನ ಅಪ್ಪು. ರಾಜಕುಮಾರ್ ಕುಟುಂಬದೊಂದಿಗೆ ಸುಮಾರು ನಾಲ್ಕು ದಶಕದ ಒಡನಾಟ, ಅತಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅವರಲ್ಲಿ ಅಪ್ಪು ಒಬ್ಬರು ಎಂದು ಸ್ಮರಿಸಿದರು.

  ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ ಇದನ್ನು ಸಂಭ್ರಮಿಸಬೇಕೋ.. ಬೇಡವೋ ತಿಳಿಯದಾಗಿದೆ. ಅಪ್ಪಾಜಿಗೂ 46ರಲ್ಲಿ ಡಾಕ್ಟರೇಟ್ ಬಂದಿತ್ತು. ಪುನೀತ್ ಗೂ 46ಏ ವಯಸ್ಸಿನಲ್ಲಿ ಬಂದಿದೆ. ಅಪ್ಪು ಪವರ್‍ನ್ನ ಇಲ್ಲೇ ಬಿಟ್ಟು ಸ್ಟಾರ್ ಆಗಿ ಮೇಲೆ ಹೋದ. ನಾನೂ ಇನ್ನು ಮುಂದೆ ಅಪ್ಪು ಆಗಿಯೇ ಬದುಕುತ್ತೇನೆ. ಎಲ್ಲರೂ ಸೇರಿ ಒಂದು ಸುಂದರ ರಾಜ್ಯ ಕಟ್ಟೋಣ ಎಂದು ಭಾವುಕರಾದರು ರಾಘಣ್ಣ.

  ಬಾನದಾರಿಯಲ್ಲಿ ಪುನೀತ್ ಪಯಣ ಕಾರ್ಯಕ್ರಮದಲ್ಲಿ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಅಭಿಷೇಕ್ ಅಂಬರೀಷ್ ಸೇರಿದಂತೆ ಚಿತ್ರರಂಗದ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 • ನಟಭಯಂಕರನಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾರೈಕೆ

  ನಟಭಯಂಕರನಿಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಹಾರೈಕೆ

  ಒಳ್ಳೆ ಹುಡ್ಗ ಪ್ರಥಮ್, ಬಿಗ್ ಬಾಸ್ ಪ್ರಥಮ್.. ಇನ್ನು ಮುಂದೆ ನಟಭಯಂಕರ ಪ್ರಥಮ್ ಆಗಲಿದ್ದಾರೆ. ಅವರದ್ದೇ ನಟನೆ ಹಾಗೂ ನಿರ್ದೇಶನದ ನಟಭಯಂಕರ ಇದೇ ಶುಕ್ರವಾರ ರಿಲೀಸ್ ಆಗುತ್ತಿದೆ. ಚಿತ್ರದ ಒಂದು ಹಾಡನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದು ವಿಶೇಷ. ಚಿತ್ರದ ಪ್ರಚಾರವನ್ನೂ ಎಂದಿನಂತೆ ವಿಭಿನ್ನವಾಗಿಯೇ ಮಾಡಿರುವ ಪ್ರಥಮ್ ಚಿತ್ರದಲ್ಲಿ ಹಾರರ್ ಕಾಮಿಡಿ ಸಬ್ಜೆಕ್ಟ್ ಕಥೆ ಹೇಳಿದ್ದಾರೆ.

  ಅಶ್ವಿನಿ ಎಂದಿನಂತೆ ಆಲ್ ದಿ ಬೆಸ್ಟ್ ಎಂದಷ್ಟೇ ಹೇಳಿದರಾದರೂ, ವೇದಿಕೆಯಲ್ಲಿದ್ದ ಅವರನ್ನೂ ತುಸುಹೊತ್ತು ನಗಿಸಿದ್ದು ಪ್ರಥಮ್ ಸಾಧನೆ. ಟ್ರೇಲರ್ ನೋಡಿ ಮೆಚ್ಚಿದ್ದಾರಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್. ಚಿತ್ರದ ಹಾಡುಗಳನ್ನು ಲಹರಿ ಸಂಸ್ಥೆ ಖರೀದಿಸಿದೆ. ಪ್ರಥಮ್ ಎದುರು ಚಂದನ, ನಿಹಾರಿಕಾ, ಸುಶ್ಮಿತಾ ಜೋಷಿ ನಾಯಕಿಯರಾಗಿ ನಟಿಸಿದ್ದಾರೆ.

 • ಪಾರ್ವತಮ್ಮ, ಪುನೀತ್ ಹೆಸರಲ್ಲಿ ಇಬ್ಬರು ಸಾಧಕರಿಗೆ ಚಿನ್ನದ ಪದಕ - ಅಶ್ವಿನಿ ಪುನೀತ್ ರಾಜಕುಮಾರ್

  ಪಾರ್ವತಮ್ಮ, ಪುನೀತ್ ಹೆಸರಲ್ಲಿ ಇಬ್ಬರು ಸಾಧಕರಿಗೆ ಚಿನ್ನದ ಪದಕ - ಅಶ್ವಿನಿ ಪುನೀತ್ ರಾಜಕುಮಾರ್

  ಪುನೀತ್ ರಾಜಕುಮಾರ್ ಅವರ ಸೇವೆ ಕನ್ನಡಿಗರಿಗೆ ಗೊತ್ತಾಗಿದ್ದೇ ಪುನೀತ್ ನಿಧನದ ನಂತರ. ಅದುವರೆಗೆ ಪುನೀತ್ ಮೇಲಿದ್ದ ಅಭಿಮಾನ ನಂತರ ಆರಾಧನೆಯಾಗಿ ಬದಲಾಯ್ತು. ಪುನೀತ್ ಅವರಿಗೆ ಕರ್ನಾಟಕ ರತ್ನ, ಸಹಕರಾ ರತ್ನ, ಬಸವಶ್ರೀ ಸೇರಿದಂತೆ ವಿವಿಧ ಪುರಸ್ಕಾರಗಳು ಬಂದವು. ಈಗ ಮೈಸೂರು ವಿವಿ ಗೌರವ ಡಾಕ್ಟರೇಟ್ ಕೂಡಾ ನೀಡಿದೆ. ಪುನೀತ್ ಅವರ ಪರವಾಗಿ ಅಶ್ವಿನಿ ಪುನೀತ್ ರಾಜಕುಮಾರ್ ಗೌರವ ಡಾಕ್ಟರೇಟ್ ಸ್ವೀಕರಿಸಿದ್ದಾರೆ. ಮೈಸೂರು ವಿವಿಯ ಆವರಣದಲ್ಲಿ ನಡೆದ 102ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಅಶ್ವಿನಿ ಕೆಲ ಕಾಲ ಭಾವುಕರಾದರು.

  ಪುನೀತ್ ಮತ್ತು ನಮ್ಮ ಕುಟುಂಬದ ಪರವಾಗಿ ಈ ಗೌರವ ಸ್ವೀಕರಿಸಿದ್ದೇನೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಈ ವರ್ಷದಿಂದಲೇ ಬಿಸಿನೆಸ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿ ಒಂದು ಚಿನ್ನದ ಪದಕವನ್ನು ಪಾರ್ವತಮ್ಮ ರಾಜಕುಮಾರ್ ಹೆಸರಲ್ಲಿ ಹಾಗೂ ಲಲಿತಕಲೆ ವಿಭಾಗದಲ್ಲಿ ಒಂದು ಚಿನ್ನದ ಪದಕವನ್ನು ಪುನೀತ್ ಹೆಸರಲ್ಲಿ ನೀಡುತ್ತೇವೆ ಎಂದು ಘೋಷಿಸಿದರು ಅಶ್ವಿನಿ ಪುನೀತ್ ರಾಜಕುಮಾರ್.

  ಈ ಗೌರವ ಡಾಕ್ಟರೇಟ್ ಪದವಿ ನಾನು ಒಳ್ಳೆಯ ಸ್ಥಾನಕ್ಕೆ ಸೇರಿದ್ದೇನೆ ಎಂದು ಹೆಮ್ಮೆ ಪಡಬೇಕು. ಹಾಗೆ ಬದುಕುತ್ತೇವೆ. ಪುನೀತ್ ಮಾರ್ಗದರ್ಶನದಲ್ಲಿ ಬದುಕುತ್ತೇವೆ. ನಮ್ಮ ಜೊತೆ ನೀವಿರಿ ಎಂದರು ರಾಘವೇಂದ್ರ ರಾಜಕುಮಾರ್.

  ಗೌರವ ಡಾಕ್ಟರೇಟ್ ಸ್ವೀಕರಿಸಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರನ್ನು ಇಡೀ ಚಿತ್ರರಂಗ ಪ್ರೀತಿಯಿಂದ ಅಭಿನಂದಿಸಿದೆ.

   

 • ಪುನೀತ್ ಆರಂಭಿಸಿದ್ದ ಸಿನಿಮಾಗಳಿಗೆ ಅಶ್ವಿನಿ ಪುನೀತ್ ಮತ್ತೆ ಚಾಲನೆ

  ಪುನೀತ್ ಆರಂಭಿಸಿದ್ದ ಸಿನಿಮಾಗಳಿಗೆ ಅಶ್ವಿನಿ ಪುನೀತ್ ಮತ್ತೆ ಚಾಲನೆ

  ಪಿ.ಆರ್.ಕೆ. ಈ ಬ್ಯಾನರ್ ಶುರುವಾಗಿದ್ದೇ ಹೊಸ ಪ್ರತಿಭೆಗಳಿಗಾಗಿ. ಹೊಸ ಕಥೆಗಳಿಗಾಗಿ. ಅದರಲ್ಲಿ ಬಹುಪಾಲು ಗೆದ್ದಿದ್ದ ಪುನೀತ್, ಹಲವು ಚಿತ್ರಗಳಿಗೆ ಚಾಲನೆ ಕೊಟ್ಟಿದ್ದರು. ಕವಲುದಾರಿ, ಮಾಯಾ ಬಜಾರ್, ಲಾ ಮತ್ತು ಫ್ರೆಂಚ್ ಬಿರಿಯಾನಿ ತೆರೆ ಕಂಡಿದ್ದವು.

  ಲಿಖಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ನಟನೆಯ ಫ್ಯಾಮಿಲಿ ಪ್ಯಾಕ್, ಡಾನಿಷ್ ಸೇಠ್ ಜೊತೆಗೆ ಒನ್ ಕಟ್ ಟು ಕಟ್, ರಾಮಾ ರಾಮಾ ರೇ ಸತ್ಯಪ್ರಕಾಶ್ ಜೊತೆ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರಗಳು ರಿಲೀಸ್ ಆಗಬೇಕಿವೆ. ಇದರ ಮಧ್ಯೆ ಅಶಿಕಾ ರಂಗನಾಥ್, ಪ್ರವೀಣ್ ತೇಜ್ ಅಭಿನಯದ 02 ಶುರುವಾಗಿತ್ತು. ಅಕ್ಟೋಬರ್ 8ರಂದು ಮುಹೂರ್ತವೂ ಆಗಿತ್ತು. ಪುನೀತ್ ನಿಧನದಿಂದಾಗಿ ಸ್ಥಗಿತಗೊಂಡಿದ್ದ ಚಿತ್ರದ ಚಿತ್ರೀಕರಣಕ್ಕೆ ಮತ್ತೆ ಉಸಿರು ಕೊಟ್ಟಿದ್ದಾರೆ ಅಶ್ವಿನಿ ಪುನೀತ್, ಜನವರಿ 22ರಿಂದ ಶೂಟಿಂಗ್ ಶುರುವಾಗಲಿದೆ. ಈ ಚಿತ್ರಕ್ಕೆ ಪ್ರಶಾಂತ್ ರಾಜ್ ಮತ್ತು ರಾಘವ್ ನಾಯಕ್ ನಿರ್ದೇಶಕರು.

 • ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

  ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

  ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿದ್ದಾರೆ.  ಇಂದು ನಡೆಯಲಿರುವ ಏರ್ ಶೋ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕರ್ನಾಟಕದ ಕೆಲವು ಗಣ್ಯರ ಜೊತೆ ಔತಣಕೂಟ ಏರ್ಪಡಿಸಿದ್ದು, ಹಲವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ವಿಜಯ್ ಕಿರಗಂದೂರು, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್, ಯಶ್, ಅಶ್ವಿನಿ ಪುನೀತ್ ರಾಜಕುಮಾರ್, ಆರ್.ಜೆ.ಶ್ರದ್ಧಾ, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಕುಂಬ್ಳೆ ದಂಪತಿ, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಸೇರಿ ಇತರರಿಗೆ ಆಹ್ವಾನವಿತ್ತು.

  ಕಾಂತಾರಾ ಸಿನಿಮಾ ನಿರ್ಮಾಣ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 20 ನಿಮಿಷಗಳ ಕಾಲ ರಾಜ್ಯದ ಪ್ರಸಕ್ತ ಬೆಳವಣಿಗೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿನಿಮಾ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ಕಾರಗಳ ಸಹಕಾರಕ್ಕೆ ಬದ್ಧ ಎಂದ ಪ್ರಧಾನಿ, ನಿರೀಕ್ಷೆಗಳೇನಾದರೂ ಇದೆಯಾ ಎಂದು ಕೇಳಿದ್ದಾರೆ. ನಂತರ ಕ್ರೀಡಾ ಕ್ಷೇತ್ರದ ಗಣ್ಯರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾದ ಪಿಎಂಓ ಕಚೇರಿ ಅಧಿಕಾರಿಗಳು ನಂತರ ಪ್ರಧಾನಿ ರಾಜಭವನದ ಸಿಬ್ಬಂದಿ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾರೆ.

 • ಮನೆಯ ಮಹಾರಾಣಿಗೆ ಅಪ್ಪು ಕೊಟ್ಟರು ಲ್ಯಾಂಬೋರ್ಗಿನಿ

  [uneeth gifts lamorghini to his wife ashwini

  ಪುನೀತ್ ರಾಜ್‍ಕುಮಾರ್ ಮನೆಗೆ ಅವರೇ ಮಹಾರಾಣಿ. ಹೆಸರು ಅಶ್ವಿನಿ. ಆ ಮಹಾರಾಣಿಗೀಗ ಲ್ಯಾಂಬೋರ್ಗಿನಿ. ಅದು ಆ ಮನೆಯ ಮಹಾರಾಜ ಕೊಟ್ಟಿರುವ ಪ್ರೀತಿಯ ಕಾಣಿಕೆ. ಮಹಿಳಾ ದಿನಕ್ಕೆ ಈ ಬಾರಿ ಪುನೀತ್, ತಮ್ಮ ಪತ್ನಿಗೆ ಲ್ಯಾಂಬೋರ್ಗಿನಿ ಕಾರ್‍ನ್ನೇ ಉಡುಗೊರೆಯಾಗಿ ಕೊಟ್ಟಿದ್ದಾರೆ.

  ಎಕ್ಸ್ ಶೋರೂಂ ಬೆಲೆಯೇ 3 ಕೋಟಿ ರೂ. ಇನ್ನು ರೋಡ್ ಟ್ಯಾಕ್ಸ್, ಇನ್ಷೂರೆನ್ಸ್, ರಿಜಿಸ್ಟ್ರೇಷನ್ ಎಲ್ಲ ಸೇರಿಬಿಟ್ರೆ 4 ಕೋಟಿ ರೂ. ದಾಟುತ್ತೆ. 

  ಪುನೀತ್ ಬಳಿ ಈಗಾಗಲೇ ಇರುವ ಆಡಿ, ರೇಂಜ್ ರೋವರ್‍ನಂತಹ ಐಷಾರಾಮಿ ಕಾರುಗಳ ಕ್ಲಬ್ಬಿಗೆ ಈಗ ಲ್ಯಾಂಬೋರ್ಗಿನಿಯೂ ಸೇರಿದೆ. 

 • ಮೊದಲ ಬಾರಿ ಬಹಿರಂಗವಾಗಿ ಕಣ್ಣೀರಿಟ್ಟ ಅಶ್ವಿನಿ : ಭಾವುಕರಾದ ಫ್ಯಾನ್ಸ್

  ಮೊದಲ ಬಾರಿ ಬಹಿರಂಗವಾಗಿ ಕಣ್ಣೀರಿಟ್ಟ ಅಶ್ವಿನಿ : ಭಾವುಕರಾದ ಫ್ಯಾನ್ಸ್

  ಪುನೀತ್ ರಾಜ್‍ಕುಮಾರ್ ನಿಧನದ ನಂತರ ಇಡೀ ಕರುನಾಡು ಕಣ್ಣೀರಿಟ್ಟಿತ್ತು. ಇವತ್ತಿಗೂ ಆ ಕಣ್ಣೀರು ಆರಿಲ್ಲ. ಕಂಠೀರವ ಸ್ಟುಡಿಯೋ ಬಳಿ ಹೋದರೆ ಪ್ರತಿದಿನವೂ ಕಣ್ಣೀರಿಡುವ ಅಭಿಮಾನಿ ದೇವರುಗಳು ಕಾಣಸಿಗುತ್ತಾರೆ. ಡಾ.ರಾಜ್ ಕುಟುಂಬದವರಲ್ಲಿ ಶಿವಣ್ಣ ಅಂತೂ ಬಿಕ್ಕಿ ಬಿಕ್ಕಿ ಅತ್ತಿದ್ದರು. ದೊಡ್ಮನೆಯವರಲ್ಲಿ ಕಣ್ಣೀರಿಡದವರೇ ಇಲ್ಲ. ಆದರೆ ಅಶ್ವಿನಿ ಪುನೀತ್ ರಾಜಕುಮಾರ್ ಹಾಗಲ್ಲ. ದುಃಖವನ್ನು ತಡೆದುಕೊಂಡೇ ಗಂಭೀರವದನದವರಾಗಿರುತ್ತಿದ್ದರು. ಅಶ್ವಿನಿ ಅವರ ವ್ಯಕ್ತಿತ್ವ ನೋಡಿ ಅಭಿಮಾನಿಗಳು ಭಾವುಕರಾಗಿದ್ದರು. ಆದರೆ ಗಂಧದ ಗುಡಿ ಪ್ರಿ-ರಿಲೀಸ್ ಈವೆಂಟ್‍ನಲ್ಲಿ ಹಾಗಾಗಲಿಲ್ಲ.

  ಕಾರ್ಯಕ್ರಮದಲ್ಲಿ ಇಡೀ ದೊಡ್ಮನೆಯವರು ಬೊಂಬೆ ಹೇಳುತೈತೆ ಹಾಡನ್ನು ಹಾಡಿದರು. ಶಿವಣ್ಣ ಭಾವುಕರಾಗಿದ್ದರು. ಕನ್ನಡಕ ಹಾಕಿಕೊಂಡು ಕಣ್ಣೀರು ಕಾಣದಂತೆ ತಡೆಯುತ್ತಿದ್ದರು. ಪುನೀತ್ ಅಕ್ಕಂದಿರಂತೂ ಕಣ್ಣೀರು ಒರೆಸಿಕೊಂಡೇ ವೇದಿಕೆಯ ಮೇಲೆ ನಿಂತಿದ್ದರು. ಅಶ್ವಿನಿ ಮೊದಲ ಸಾಲುಗಳನ್ನು ಹಾಡಿದ್ದಷ್ಟೇ.. ನಂತರ ಭಾವುಕರಾದರು. ಉಮ್ಮಳಿಸಿ ಬಂದ ದುಃಖವನ್ನು ತಡೆದುಕೊಂಡು ಹಾಡು ಮುಗಿಯುತ್ತಿದ್ದಂತೆಯೇ ವೇದಿಕೆಯ ಹಿಂದಕ್ಕೆ ಹೋಗಿಬಿಟ್ಟರು.

  ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಈ ವರ್ಷವಿಡೀ ಆಘಾತವೇ. ಪುನೀತ್ ಅಗಲಿದ ಬೆನ್ನಲ್ಲೇ ಅಶ್ವಿನಿ ಅವರ ತಂದೆ ಕೂಡಾ ಮೃತಪಟ್ಟರು. ಪುನೀತ್ ಅಗಲಿಕೆಗೂ ಮುನ್ನ ಕೋಮಾದಲ್ಲಿದ್ದ ಅಶ್ವಿನಿ ಅವರ ತಂದೆ, ಅದಾದ 4 ತಿಂಗಳ ನಂತರ ಅಗಲಿದರು. ಅಶ್ವಿನಿ ಕಣ್ಣೀರಿಟ್ಟಿದ್ದನ್ನು ನೋಡಿ ವೇದಿಕೆಯಲ್ಲಿದ್ದವರು ಹಾಗೂ ಅಭಿಮಾನಿಗಳು ಕಣ್ಣೀರಾದರು.