ನಿರ್ಮಾಪಕ ಜಯಣ್ಣ ಮತ್ತು ಯಶ್ ಅವರದ್ದು ಬೇರೆಯದೇ ರೀತಿಯ ಸಂಬಂಧ. ಯಶ್ ಸ್ಟಾರ್ ಆಗುವ ಹಾದಿಯಲ್ಲಿ ಯಶ್ ಅವರಿಗೆ ಅತೀ ಹೆಚ್ಚು ಸಿನಿಮಾ ಮಾಡಿದವರು ಜಯಣ್ಣ. ಜಾನು, ಡ್ರಾಮಾ, ಗೂಗ್ಲಿ, ಗಜಕೇಸರಿ, ಮಿ & ಮಿಸಸ್ ರಾಮಾಚಾರಿ.. ಹೀಗೆ ಯಶ್ ಜಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ ಒಟ್ಟು 5 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಈಗ ಕಿರಾತಕ 2 ಚಿತ್ರಕ್ಕೆ ಜಯಣ್ಣ ಖರ್ಚು ಮಾಡಿದ್ದ ಅಷ್ಟೂ ಹಣವನ್ನು ಹಿಂದಿರುಗಿಸಿದ್ದಾರೆ.
ಕೆಜಿಎಫ್ ಮುಗಿದ ನಂತರ ಯಶ್ ಕಿರಾತಕ 2ಗೆ ಬಣ್ಣ ಹಚ್ಚಿದ್ದರು. ಗಡ್ಡ, ಕೂದಲಿಗೆ ಕತ್ತರಿಯೂ ಬಿದ್ದಿತ್ತು. 20 ದಿನಗಳ ಶೂಟಿಂಗ್ ಕೂಡಾ ಆಗಿತ್ತು. ಆದರೆ, ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವುದರೊಂದಿಗೆ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಕಿರಾತಕ 2 ನೆನೆಗುದಿಗೆ ಬಿತ್ತು.
ಕೆಲವು ಕಡೆ ಯಶ್ ಜಯಣ್ಣ ಅವರಿಗೆ 13 ಕೋಟಿ ವಾಪಸ್ ಕೊಟ್ಟಿದ್ದಾರೆ ಎಂದೆಲ್ಲ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಸ್ವತಃ ಜಯಣ್ಣ ಸ್ಪಷ್ಟನೆ ಕೊಟ್ಟಿದ್ದಾರೆ.
ಯಶ್ ಆ 20 ದಿನಗಳ ಒಟ್ಟು ಖರ್ಚನ್ನೂ ವಾಪಸ್ ಕೊಟ್ಟಿದ್ದಾರೆ. ಸ್ವಲ್ಪ ಹಣವನ್ನ ಸೇರಿಸಿಯೂ ಕೊಟ್ಟಿದ್ದಾರೆ. 13 ಕೋಟಿ ಅನ್ನೋದೆಲ್ಲ ಸುಳ್ಳು. ನಾನು ಬೇಡ ಎಂದರೂ ಯಶ್ ವಾಪಸ್ ಕೊಟ್ಟಿದ್ದಾರೆ. ಹಾಗಂತ ನಮ್ಮಿಬ್ಬರ ಬಾಂಧವ್ಯ ಹಾಳಾಗಿಲ್ಲ. ಮಂಡ್ಯ ನೇಟಿವಿಟಿ ಇರೋ ಕಿರಾತಕ 2 ಪ್ಯಾನ್ ಇಂಡಿಯಾಗೆ ಸೆಟ್ ಆಗಲ್ಲ ಎನ್ನುವುದಷ್ಟೇ ಕಾರಣ ಎಂದಿದ್ದಾರೆ ಜಯಣ್ಣ.
ಸದ್ಯಕ್ಕೆ ಜಯಣ್ಣ ಭಜರಂಗಿ 2 ರಿಲೀಸ್ ಮಾಡೋಕೆ ರೆಡಿಯಾಗಿ ನಿಂತಿದ್ದಾರೆ. ಅತ್ತ ಯಶ್ ಕೆಜಿಎಫ್ 2 ನಂತರ ಮುಂದೇನು ಅನ್ನೋ ಗುಟ್ಟನ್ನು ಗುಟ್ಟಾಗಿಯೇ ಇಟ್ಟಿದ್ದಾರೆ.