` gaaliipata 2, - chitraloka.com | Kannada Movie News, Reviews | Image

gaaliipata 2,

 • ಗಾಳಿಪಟ 2 - ನಿರ್ಮಾಪಕ, ಕಲಾವಿದರ ಬದಲಾವಣೆಯ ಪ್ರವಾಹ..!

  ramesh reddy takes over gaalipata 2

  ಗಾಳಿಪಟ 2 ಚಿತ್ರ ತಂಡದಲ್ಲಿ ದಿಢೀರ್ ದಿಢೀರನೆ ಬದಲಾವಣೆಗಳಾಗುತ್ತಿವೆ. ಯೋಗರಾಜ್ ಭಟ್ ನಿರ್ದೇಶನದ ಚಿತ್ರ ಶುರುವಾದಾಗಲೇ ಹೀರೋಗಳ ಬದಲಾವಣೆಯಾಗಿತ್ತು. ಶರಣ್, ರಿಷಿ ಬದಲಾಗಿ.. ಗಣೇಶ್, ದಿಗಂತ್ ಬಂದಿದ್ದರು. ಈಗ ನಾಯಕಿಯರು ಹಾಗೂ ನಿರ್ಮಾಪಕರ ಬದಲಾವಣೆಯಾಗಿದೆ.

  ಆದಿತಿ ಪ್ರಭುದೇವ, ಸೋನಲ್ ಮಂಥೆರೋ ಬದಲಾವಣೆಯಾಗಿದೆ. ಅವರ ಸ್ಥಾನಕ್ಕೆ ನಿಶ್ವಿಕಾ ನಾಯ್ಡು, ವೈಭವಿ ಶಾಂಡಿಲ್ಯ ಹಾಗೂ ಸಂಯುಕ್ತಾ ಮೆನನ್ ಬಂದಿದ್ದಾರೆ. ಬದಲಾವಣೆಯಾಗದೆ ಉಳಿದಿರುವುದು ಶರ್ಮಿಳಾ ಮಾಂಡ್ರೆ.

  ನಿರ್ಮಾಪಕರಾಗಿದ್ದ ಮಹೇಶ್ ದಾನಣ್ಣವರ್ ಸ್ಥಾನಕ್ಕೆ ರಮೇಶ್ ರೆಡ್ಡಿ ನುಂಗ್ಲಿ ಬಂದಿದ್ದಾರೆ. ಪಡ್ಡೆಹುಲಿ, ನಾತಿಚರಾಮಿ, 100 ಚಿತ್ರಗಳ ನಿರ್ಮಾಪಕರಾಗಿರುವ ರಮೇಶ್ ರೆಡ್ಡಿ ನುಂಗ್ಲಿ ಸೂರಜ್ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

  ಗಣೇಶ್ ಎದುರು ವೈಭವಿ ನಾಯಕಿ. ಇವರು ತಮಿಳು, ಮರಾಠಿಯಲ್ಲಿ ಹೆಸರು ಮಾಡಿರುವ ಹುಡುಗಿ. ಶರಣ್ ಎದುರು ರಾಜ್ ವಿಷ್ಣು ಚಿತ್ರದಲ್ಲಿ ನಾಯಕಿಯಾಗಿದ್ದವರು. ಸಂಯುಕ್ತಾ ಮೆನನ್, ಮಲಯಾಳಂ ಚೆಲುವೆ. ಇವರು ದಿಗಂತ್‍ಗೆ ಜೋಡಿಯಾಗಲಿದ್ದಾರೆ. ಶರ್ಮಿಳಾ ಮಾಂಡ್ರೆ, ಪವನ್‍ಗೆ ಜೋಡಿಯಾಗಲಿದ್ದು, ನಿಶ್ವಿಕಾ ನಾಯ್ಡು ಗೆಸ್ಟ್ ರೋಲ್‍ನಲ್ಲಿ ಬರಲಿದ್ದಾರೆ.

  ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ನಾಯಕರಾಗಿದ್ದು, ಅರ್ಜುನ್ ಜನ್ಯ ಸಂಗೀತವಿದೆ. ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿದೆ.

  ಇಷ್ಟಕ್ಕೂ ಇಷ್ಟೆಲ್ಲ ಬದಲಾವಣೆಗೆ ಕಾರಣ, ಪ್ರವಾಹ. ಪ್ರವಾಹ ಬಂದು ಚಿತ್ರೀಕರಣ ತಡವಾಗಿ, ಡೇಟ್ಸ್‍ಗಳು ಹೊಂದಾಣಿಕೆಯಾಗದೆ ಅನಿವಾರ್ಯವಾಗಿ ಕಲಾವಿದರ ಬದಲಾವಣೆಯಾಗಿದೆ ಎಂದಿದ್ದಾರೆ ಯೋಗರಾಜ್ ಭಟ್

 • ಗಾಳಿಪಟ-2 : ಶರಣ್, ರಿಷಿ ಔಟ್. ಗಣೇಶ್, ದಿಗಂತ್ ಇನ್

  breaking news from gaalipata 2 team

  ಗಾಳಿಪಟ-2, ಯೋಗರಾಜ್ ಭಟ್ಟರ ಚಿತ್ರ. ಶೂಟಿಂಗ್ ಶುರುವಾಗಬೇಕಿರುವ ಚಿತ್ರದಲ್ಲಿ ಒಂದು ಅನಿರೀಕ್ಷಿತ ಬದಲಾವಣೆಯಾಗಿದೆ. ಪ್ಲಾನ್ ಪ್ರಕಾರ ಚಿತ್ರದಲ್ಲಿ ಶರಣ್, ರಿಷಿ ಹಾಗೂ ಪವನ್ ಕುಮಾರ್ ನಾಯಕರು. ಆದರೆ, ಈಗ ಆ ಮೂವರಲ್ಲಿ ಇಬ್ಬರು ಹೊರಹೋಗಿದ್ದಾರೆ. ಶರಣ್ ಮತ್ತು ರಿಷಿ. ಇಬ್ಬರು ಒಳಗೆ ಬಂದಿದ್ದಾರೆ ಗಣೇಶ್ ಮತ್ತು ದಿಗಂತ್. ಅದಕ್ಕೆಲ್ಲ ಕಾರಣ ಸ್ಕ್ರಿಪ್ಟ್.

  ನಿರ್ಮಾಪಕ ಮಹೇಶ್ ದಾನಣ್ಣವರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಚಿತ್ರದ ಸ್ಕ್ರಿಪ್ಟ್ ಡೆವಲಪ್ ಆಗುತ್ತಾ ಹೋದಂತೆ ಈ ಪಾತ್ರಗಳಿಗೆ ಗಣೇಶ್ ಮತ್ತು ದಿಗಂತ್ ಅವರೇ ಸೂಕ್ತ ಎನ್ನಿಸೋಕೆ ಶುರುವಾಯ್ತು. ಹೀಗಾಗಿ ಬದಲಾವಣೆ ಮಾಡಿಕೊಂಡಿದ್ದೇವೆ ಎಂದಿದ್ದಾರೆ.

  ಶರಣ್ ತುಂಬಾ ಒಳ್ಳೆಯ ನಟ. ಅವರು ಈ ಚಿತ್ರಕ್ಕಾಗಿ ಕೆಲವು ತಿಂಗಳು ಕೆಲಸ ಮಾಡಿದ್ದಾರೆ. ನಾವು ಈ ಚಿತ್ರದಲ್ಲಿ ಶರಣ್ ಅವರನ್ನು ಮಿಸ್ ಮಾಡಿಕೊಂಡರೂ, ಗಾಳಿಪಟ-2 ಮುಗಿದ ಮೇಲೆ ಶರಣ್-ಯೋಗರಾಜ್ ಭಟ್ ಕಾಂಬಿನೇಷನ್‍ನಲ್ಲಿ ಹೊಸ ಸಿನಿಮಾ ಶುರು ಮಾಡುತ್ತಿದ್ದೇನೆ ಎಂದಿದ್ದಾರೆ ಮಹೇಶ್.

  ಯೋಗರಾಜ್ ಭಟ್ಟರ ಸೋದರ ಮೃತಪಟ್ಟಿದ್ದು, ಸದ್ಯಕ್ಕೆ ಹುಟ್ಟೂರಿನಲ್ಲಿದ್ದಾರೆ. ಹೀಗಾಗಿ ಅವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

 • ಗಾಳಿಪಟ-2ಗೆ ಪ್ರಭುದೇವ ಡ್ಯಾನ್ಸ್ ಪವರ್..?

  will yogaraj bhat be a part of gaalipata 2

  ಪಂಚತಂತ್ರ ಸಕ್ಸಸ್ ಬಳಿಕ ಯೋಗರಾಜ್ ಭಟ್ ಕೈಗೆತ್ತಿಕೊಂಡಿರೋ ಸಿನಿಮಾ ‘ಗಾಳಿಪಟ-2. ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ತಾರಾಗಣದಲ್ಲಿ ಬದಲಾವಣೆ ಮಾಡಿಕೊಂಡು ಸುದ್ದಿಯಾಗಿದ್ದ ಯೋಗರಾಜ್ ಭಟ್, ಈಗ ತಮ್ಮ ಟೀಂಗೆ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವಗೆ ಆಹ್ವಾನ ಕೊಟ್ಟಿದ್ದಾರೆ.

  ಈಗಾಗಲೇ ಯೋಗರಾಜ್ ಭಟ್ ಮತ್ತು ನಿರ್ಮಾಪಕ ಮಹೇಶ್ ದಾನಣ್ಣವರ್ ಪ್ರಭುದೇವರನ್ನು ಮುಂಬೈನಲ್ಲಿ ಭೇಟಿ ಮಾಡಿದ್ದಾರಂತೆ. ಮಾತುಕತೆಯೂ ನಡೆದಿದೆಯಂತೆ. 2002ರಲ್ಲಿ ಹೆಚ್2ಒ ಚಿತ್ರದಲ್ಲಿ ನಟಿಸಿದ್ದ ಪ್ರಭುದೇವ,ಆನಂತರ ಕನ್ನಡದಲ್ಲಿ ನಟಿಸಿಲ್ಲ. ಸದ್ಯಕ್ಕೆ ದಬಾಂಗ್-3ಯಲ್ಲಿ ಬ್ಯುಸಿಯಾಗಿರುವ ಪ್ರಭುದೇವ, ಭಟ್ಟರ ಚಿತ್ರಕ್ಕೆ ಓಕೆ ಎಂದಿದ್ದಾರೆ ಎಂಬ ಸುದ್ದಿಗಳಿವೆ.

  ಗಣೇಶ್, ದಿಗಂತ್, ಪವನ್ ಕುಮಾರ್, ಆದಿತಿ ಪ್ರಭುದೇವ, ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಟಿಸುತ್ತಿರುವ ಚಿತ್ರವಿದು. ಸೆಪ್ಟೆಂಬರ್ನಿಂದ ಶೂಟಿಂಗ್ ಶುರುವಾಗಲಿದ್ದು, ಮಲೆನಾಡಿನಲ್ಲಿಯೇ ಚಿತ್ರೀಕರಣಕ್ಕೆ ಪ್ಲಾನ್ ಮಾಡಿದ್ದಾರೆ ಯೋಗರಾಜ್ ಭಟ್.

 • ಗಾಳಿಪಟಕ್ಕೂ ಕೊವಿಡ್ 19 ಶಾಕ್

  gaalipata 2 foreign shooting postponed

  ಮೊದಲಿಗೆ ದರ್ಶನ್ ಅಭಿನಯದ ರಾಬರ್ಟ್, ನಂತರ ಪುನೀತ್ ಅಭಿನಯದ ಯುವರತ್ನ, ತದನಂತರ ಪ್ರಜ್ವಲ್ ಅಭಿನಯದ ಅರ್ಜುನ್ ಗೌಡ.. ಹೀಗೆ ಸರಣಿ ಮುಂದುವರಿಯುತ್ತಿದ್ದು, ಆ ಸರಣಿಗೆ ಈಗ ಭಟ್ಟರ ಗಾಳಿಪಟವೂ ಸೇರಿದೆ.

  ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟು ಹೊತ್ತಿಗೆ ಯೋಗರಾಜ್ ಭಟ್ಟರು ಗಣೇಶ್, ದಿಗಂತ್, ಪವನ್ ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯರ ದಂಡು ಕಟ್ಟಿಕೊಂಡು ಜಾರ್ಜಿಯಾದಲ್ಲಿರಬೇಕಿತ್ತು. ಲೊಕೇಷನ್ ನೋಡಿಕೊಂಡು ಬಂದು ಎಲ್ಲವನ್ನೂ ಪ್ಲಾನ್ ಮಾಡಿಯೂ ಆಗಿತ್ತು. ಈಗ ಅದಕ್ಕೆಲ್ಲ ಬ್ರೇಕ್ ಬಿದ್ದಿದೆ.

  ನಮ್ಮ ಚಿತ್ರಕ್ಕೆ ವಿದೇಶದ ಶೂಟಿಂಗ್ ಅತ್ಯಂತ ಮುಖ್ಯ. ಹೀಗಾಗಿ ಇನ್ನೂ ಕೆಲವು ದಿನ ಕಾಯುತ್ತೇವೆ. ಪರಿಸ್ಥಿತಿ ಸುಧಾರಿಸುವವರೆಗೂ ಕಾಯುವುದು ನಮಗೆ ಅನಿವಾರ್ಯ. ನಮ್ಮ ಕಥೆಗೆ ವಿದೇಶ ಬೇಕೇ ಬೇಕು ಎಂದಿದ್ದಾರೆ ನಿರ್ಮಾಪಕ ರಮೇಶ್ ರೆಡ್ಡಿ. ಅದರರ್ಥ, ಇನ್ನೂ ಎರಡು ತಿಂಗಳು ಗಾಳಿಪಟ 2ಗೆ ಬ್ರೇಕ್.

 • ಬಿಡುಗಡೆಗೂ ಮೊದಲೇ ಬಂಪರ್ : ಗಾಳಿಪಟ 2 ಬಿಸಿನೆಸ್ ಎಷ್ಟು ಕೋಟಿ?

  ಬಿಡುಗಡೆಗೂ ಮೊದಲೇ ಬಂಪರ್ : ಗಾಳಿಪಟ 2 ಬಿಸಿನೆಸ್ ಎಷ್ಟು ಕೋಟಿ?

  ಗಾಳಿಪಟ 2 ರಿಲೀಸ್ ಆಗೋಕೆ ಸಿದ್ಧವಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ. ಯೋಗರಾಜ್ ಭಟ್, ಗಣೇಶ್, ಅನಂತನಾಗ್, ದಿಗಂತ್.. ಎಲ್ಲರೂ 2ನೇ ಬಾರಿಗೆ ಗಾಳಿಪಟ ಹಾರಿಸುತ್ತಿದ್ದರೆ, ಅವರಿಗೆ ಈ ಬಾರಿ ಹೊಸದಾಗಿ ಜೊತೆಯಾಗಿರೋದು ಪವನ್ ಕುಮಾರ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್. ಇವರೆಲ್ಲರನ್ನೂ ಒಟ್ಟಿಗೇ ಸೇರಿಸಿರುವ ಕೀರ್ತಿ ರಮೇಶ್ ರೆಡ್ಡಿ ಅವರದ್ದು. ಚಿತ್ರವೀಗ ರಿಲೀಸ್ ಆಗೋಕೂ ಮೊದಲೇ ಭರ್ಜರಿ ಬಿಸಿನೆಸ್ ಮಾಡುತ್ತಿದೆ.

  ಚಿತ್ರದ ಆಡಿಯೋ ರೈಟ್ಸ್ ಸೇರಿದಂತೆ ಕೆಲವು ಹಕ್ಕುಗಳನ್ನು ಆನಂದ್ ಆಡಿಯೋ ತೆಗೆದುಕೊಂಡಿದೆ. ಸ್ಯಾಟಲೈಟ್ ಮತ್ತು ಒಟಿಟಿ ರೈಟ್ಸ್‍ನ್ನು ಝೀ ಗ್ರೂಪ್ ಖರೀದಿಸಿದೆ. ಇದೆಲ್ಲದರಿಂದ ಒಟ್ಟಾರೆ ಈಗಾಗಲೇ 8 ಕೋಟಿ ಲಾಭದಲ್ಲಿದೆ ಗಾಳಿಪಟ 2 ಟೀಂ. ಇನ್ನು ಮುಂದೆ ಬರೋದು ಬೋನಸ್.

  ಅಂದಹಾಗೆ 2008ರಲ್ಲಿ ರಿಲೀಸ್ ಆಗಿದ್ದ ಗಾಳಿಪಟ 25 ಕೋಟಿ ಬಿಸಿನೆಸ್ ಮಾಡಿತ್ತು. ಅದೂ 2008ರಲ್ಲಿ. 25 ವಾರ ಯಶಸ್ವಿಯಾಗಿ ಓಡಿದ್ದ ಸಿನಿಮಾ ಗಾಳಿಪಟ. ಈಗ 2022.  ರಿಲೀಸ್ ಆಗೋಕೂ ಮೊದಲೇ ಗಾಳಿಪಟ 2 ಲಾಭ ಮಾಡುತ್ತಿದೆ. ಸಿನಿಮಾ ಮೇ ತಿಂಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

 • ಭಟ್ಟರ 2ನೇ ಗಾಳಿಪಟಕ್ಕೆ ಇಬ್ಬರು ಚೆಲುವೆಯರು

  two heroines for bhatt's gaalipata 2 ..?

  ಯೋಗರಾಜ್ ಭಟ್, ಗಾಳಿಪಟ 2 ಸಿನಿಮಾ ಮಾಡೋದಾಗಿ ಘೋಷಿಸಿಯೂ ಆಗಿದೆ. ಶರಣ್, ಲೂಸಿಯಾ ಪವನ್, ರಿಷಿ ನಾಯಕತ್ವದ ಗಾಳಿಪಟ 2 ಚಿತ್ರಕ್ಕೆ  ಪಂಚತಂತ್ರ ಬಿಡುಗಡೆ ಟೈಮಿನಲ್ಲೇ ಕೆಲಸ ಶುರು ಮಾಡಿದ್ದಾರೆ. ಒಂದು ಚಿತ್ರ ಮುಗಿಯುತ್ತಿರುವಾಗಲೇ ಇನ್ನೊಂದು ಚಿತ್ರದಲ್ಲಿ ಬ್ಯುಸಿಯಾಗುತ್ತಿರುವುದು ಭಟ್ಟರ ಚರಿತ್ರೆಯಲ್ಲಿ ಇದೇ ಮೊದಲು ಎನ್ನಬೇಕು. ಈಗ ಆ ಚಿತ್ರಕ್ಕೆ ಇಬ್ಬರು ನಾಯಕಿಯರು ಓಕೆ ಆಗಿದ್ದಾರೆ.

  ಶೃಂಗಾರದ ಹೊಂಗೆ ಮರದಲ್ಲಿ ಹೂ ಬಿಟ್ಟಿದ್ದ ಚೆಲುವೆ ಸೋನಾಲ್ ಓಕೆ ಆಗಿದ್ದಾರೆ. ಇನ್ನೊಂದು ಪಾತ್ರಕ್ಕೆ ಶರ್ಮಿಳಾ ಮಾಂಡ್ರೆ ಜೊತೆ ಮಾತುಕತೆ ನಡೆದಿದೆ. ಬೆಳಗಾವಿ ಮೂಲದ ಮಹೇಶ್ ಎಂಬುವರು ನಿರ್ಮಿಸುತ್ತಿರುವ ಗಾಳಿಪಟ 2ಗೆ ಸಂಗಿತ ಸಂಯೋಜನೆಗೆ ರೆಡಿಯಾಗಿದ್ಧಾರೆ ಭಟ್ಟರು.

  ಇದು ಕಂಪ್ಲೀಟ್ ನನ್ನ ಶೈಲಿಯ ಸಿನಿಮಾ. ಮನರಂಜನೆ ಮತ್ತು ಭಾವನಾತ್ಮಕ ಅಂಶಗಳನ್ನು ಹದವಾಗಿ ಬೆರೆಸಿರುವ ಸಿನಿಮಾ. ಈಗಿನ ಜನರೇಷನ್‍ಗೆ ಇಷ್ಟವಾಗುವ ಸಿನಿಮಾ ಎಂದಿದ್ದಾರೆ ಭಟ್ಟರು.

 • ಶ್ಯಾನೆ ಟಾಪಾಗವ್ಳೆ.. ಗಾಳಿಪಟ ಹಾರಿಸ್ತಾವ್ಳೆ..

  aditi prabhudeva in gaalipata 2

  ಯೋಗರಾಜ್ ಭಟ್ಟರ ಹೊಸ ಸಿನಿಮಾ ಗಾಳಿಪಟ-2ಗೆ ಮತ್ತೊಬ್ಬ ಹೀರೋಯಿನ್ ಆಯ್ಕೆಯಾಗಿದೆ. ಈಗಾಗಲೇ ಪಂಚತಂತ್ರದ ಸೋನಲ್ ಮಂಥೆರೋ, ಶರ್ಮಿಳಾ ಮಾಂಡ್ರೆ ನಾಯಕಿಯರಾಗಿ ಆಯ್ಕೆಯಾಗಿದ್ದರು. ಶರಣ್, ರಿಷಿ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿರುವ ಚಿತ್ರವಿದು. ಈಗ 3ನೇ ನಾಯಕಿಯಾಗಿ ಆದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ.

  ಸಿಂಪಲ್ ಸುನಿ ಶೋಧಿಸಿದ ಪ್ರತಿಭೆ ಆದಿತಿ ಪ್ರಭುದೇವ. ಬಜಾರ್ ಹುಡುಗಿ. ಈಗ ಶ್ಯಾನೆ ಟಾಪಾಗವ್ಳೆ ಹಾಡಿನಿಂದ ಟಾಪ್‍ನಲ್ಲಿರೋ ನಟಿ. ಈ ಮೂವರು ನಾಯಕರಲ್ಲಿ ಆದಿತಿ ಯಾರಿಗೆ ನಾಯಕಿ ಅನ್ನೋದು ಭಟ್ಟರಿಗೆ ಮಾತ್ರ ಗೊತ್ತು. 

  ಆದಿತಿ ಪ್ರಭುದೇವ ಸದ್ಯಕ್ಕೆ ಬ್ರಹ್ಮಚಾರಿ, ಸಿಂಗ, ರಂಗನಾಯಕಿ, ತೋತಾಪುರಿ, ಕುಸ್ತಿ, ಆಪರೇಷನ್ ನಕ್ಷತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery