ಇದೇ ದಸರಾಗೆ ರಿಲೀಸ್ ಆಗುತ್ತಿರುವ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶಿಸಿರುವ ಮೊದಲ ಚಿತ್ರ. ವಿಜಯ್ ಜೊತೆಗೆ ಡಾಲಿ ಧನಂಜಯ್ ಕೂಡಾ ಜೊತೆಯಾಗಿದ್ದು, ಕೆ.ಪಿ.ಶ್ರೀಕಾಂತ್ ನಿರ್ಮಾಪಕರಾಗಿದ್ದಾರೆ. ಸಂಜನಾ ಆನಂದ್ ನಾಯಕಿ. ಚಿತ್ರದ ಬಿಡುಗಡೆಗೂ ಮುನ್ನ ಈವೆಂಟ್ ಆಯೋಜಿಸಿದ್ದ ಚಿತ್ರತಂಡಕ್ಕೆ ಚಿತ್ರರಂಗದಿಂದ ಶುಭ ಹಾರೈಕೆಗಳ ಮಹಾಪೂರವೇ ಹರಿದುಬಂತು. ಬೋನಸ್ ಆಗಿದ್ದುದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್. ಪ್ರತಿಯೊಬ್ಬರೂ ಚಿತ್ರದ ಬಗ್ಗೆ, ಚಿತ್ರದ ವಿಶೇಷತೆಗಳ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು.
ಸಿದ್ದರಾಮಯ್ಯ : ಸಲಗ ಚಿತ್ರದ ಮುಹೂರ್ತಕ್ಕೂ ನನ್ನನ್ನು ಕರೆದಿದ್ದರು. ಕ್ಲಾಪ್ ಮಾಡಿದ್ದೆ. ಈಗ ರಿಲೀಸ್ ಮಾಡೋಕೂ ಕರೆದಿದ್ದಾರೆ. ನಾನು ಥಿಯೇಟರ್ಗೆ ಹೋಗೋದು ಕಡಿಮೆ. ಒಂದು ಕಾಲದಲ್ಲಿ ವಾರಕ್ಕೆ ನಾಲ್ಕೈದು ಸಿನಿಮಾ ನೋಡುತ್ತಿದ್ದೆ. ರಾಜ್ಕುಮಾರ್ ಅಂದ್ರೆ ಇಷ್ಟ. ಅವರ ಚಿತ್ರಗಳನ್ನೇ ಹೆಚ್ಚು ನೋಡಿದ್ದು. ಈಗ ವಿಜಯ್ ನಿರ್ದೇಶಿಸಿರುವ ಸಿನಿಮಾ ಸಲಗ ರಿಲೀಸ್ ಆಗುತ್ತಿದೆ. ಸಲಗ ಅನ್ನೋ ಹೆಸರು ಕೇಳಿದರೆ ಚಿತ್ರವನ್ನು ಅದ್ಧೂರಿಯಾಗಿ ಮಾಡಿದ್ದಾರೆ ಎನಿಸುತ್ತಿದೆ. ಚಿತ್ರಕ್ಕೆ ಒಳ್ಳೆಯದಾಗಲಿ.
ಡಿಕೆ ಶಿವಕುಮಾರ್ : ನಾನೂ ಚಿತ್ರರಂಗದವನೇ. ನನ್ನದು 23 ಥಿಯೇಟರುಗಳಿವೆ. ಚಿತ್ರಗಳ ವಿತರಣೆಯನ್ನೂ ಮಾಡಿದ್ದೆ. ನೀವೆಲ್ಲ ಬಣ್ಣ ಹಚ್ಚಿಕೊಂಡು ನಟಿಸುತ್ತೀರ. ನಾವು ಬಣ್ಣ ಹಚ್ಚದೇ ನಟಿಸುತ್ತೇವೆ. ಸಲಗ ಚಿತ್ರಕ್ಕೆ ಒಳ್ಳೆಯದಾಗಲಿ. ಖಂಡಿತಾ ನಾನು ಸಲಗ ಸಿನಿಮಾ ನೋಡುತ್ತೇನೆ.
ಶಿವರಾಜ್ಕುಮಾರ್ : ನಿರ್ದೇಶಕರು, ನಿರ್ಮಾಪಕರು ಏನು ಹೇಳ್ತಾರೋ ಅದನ್ನು ಪಾಲಿಸಬೇಕು ಅನ್ನೋದು ನಮಗೆಲ್ಲ ಅಪ್ಪಾಜಿ ಹೇಳಿಕೊಟ್ಟಿದ್ದ ಪಾಠ. ಈಗ ದುನಿಯಾ ವಿಜಯ್ ನಿರ್ದೇಶಕರಾಗಿದ್ದಾರೆ. ಅವರೇನಾದರೂ ನನಗೆ ಡೈರೆಕ್ಷನ್ ಮಾಡೋದಾದ್ರೆ ನಾನು ರೆಡಿ. ಶ್ರೀಕಾಂತ್ ನಿರ್ಮಾಪಕ ಅನ್ನೋದಕ್ಕಿಂತ ಹೆಚ್ಚಾಗಿ ನನಗೆ ಹಳೆಯ ಸ್ನೇಹಿತ. ಚಿತ್ರ ಚೆನ್ನಾಗಿ ಬಂದಿದೆ. ಡಾಲಿ ಧನಂಜಯ್ ಲಕ್ಕಿ. ಚೆನ್ನಾಗಿ ನಟಿಸಿದ್ದಾರೆ.
ಉಪೇಂದ್ರ : ದುನಿಯಾ ವಿಜಯ್ ಸೂರಿ ಜೊತೆ ಕೆಲಸ ಮಾಡುವಾಗಲೇ ನಿರ್ದೇಶನ ಕಲಿತಿದ್ದರು ಎನಿಸುತ್ತಿದೆ. ಸಲಗ ಚಿತ್ರದ ಜೊತೆಗೆ ಕೋಟಿಗೊಬ್ಬ 3 ಕೂಡಾ ಬರುತ್ತಿದೆ. ಎರಡೂ ಚಿತ್ರಗಳು ಹಿಟ್ ಆಗಲಿ.
ಪುನೀತ್ ರಾಜ್ಕುಮಾರ್ : ದುನಿಯಾ ವಿಜಯ್ ನಿರ್ದೇಶನದ ಸಲಗ ಬರುತ್ತಿದೆ. ಅದೇ ದಿನ ಕೋಟಿಗೊಬ್ಬ 3 ಕೂಡಾ ಬರುತ್ತಿದೆ. ಎರಡೂ ಚಿತ್ರಗಳು ಯಶಸ್ವಿಯಾಗಲಿ.