` gaalipata, - chitraloka.com | Kannada Movie News, Reviews | Image

gaalipata,

 • ಆ ಗಾಳಿಪಟದ ಈ ಗಾಳಿಪಟದ ಗಣಿಗೂ ಏನು ಡಿಫರೆನ್ಸು?

  ಆ ಗಾಳಿಪಟದ ಈ ಗಾಳಿಪಟದ ಗಣಿಗೂ ಏನು ಡಿಫರೆನ್ಸು?

  ಆ ಗಾಳಿಪಟ ನೋಡಿದ್ದರೆ.. ಗಣಿಯ ಪಾತ್ರ ಖಂಡಿತಾ ನಿಮ್ಮ ಮನಸ್ಸಿನಲ್ಲಿರುತ್ತೆ. ಬೋರ್ಡಿಂಗ್ ಸ್ಕೂಲಿನಲ್ಲಿ ಓದಿರೋ ಕನ್ನಡ ಬರೆಯಲು, ಓದಲು ಬಾರದ ಹುಡುಗ ಗಣಿ. ಮಹಾನ್ ತಿಂಡಿಪೋತ. ಕನ್ನಡವನ್ನು ಕಲಿತು ಪ್ರಿಯತಮೆಗಾಗಿ ಕವಿತೆ ಬರೆಯುವ ಪ್ರೇಮಿ... ಆ ಗಾಳಿಪಟದ ಗಣಿ.

  ಈ ಗಾಳಿಪಟದಲ್ಲೂ ತುಂಬಾ ವ್ಯತ್ಯಾಸವೇನೂ ಇಲ್ಲ. ಹೆಸರು ಕೂಡಾ ಅದೇ, ಗಣಿ. ಗಾಳಿಪಟದಲ್ಲಿ ಮಂಡ್ಯ ಎಂಎಲ್‍ಎ ಮಗ ನಾನು. ಆ ಜೋಡಿ ರಂಗಾಯಣ ರಘು ಮತ್ತು ಪದ್ಮಜಾ ರಾವ್ ಇಲ್ಲಿಯೂ ಅದೇ ಪಾತ್ರದಲ್ಲಿದ್ದಾರೆ. ಅಲ್ಲಿನಂತೆಯೇ ಇಲ್ಲಿಯೂ ತಿಂಡಿಪೋತ ನಾನು. ಚಿತ್ರದ ಮೊದಲಾರ್ಧದಲ್ಲಿ ದುಂಡು ದುಂಡಗೆ ಇರುತ್ತೇನೆ. ನಂತರ ಸಣ್ಣಗಾಗುತ್ತೇನೆ. 8 ಕೆಜಿ ತೂಕ ಹೆಚ್ಚಿಸಿಕೊಂಡು.. ನಂತರ 5 ಕೆಜಿ ಇಳಿಸಿಕೊಂಡು ಫಿಟ್ ಆಗಿದ್ದೇನೆ... ಎಂದೆಲ್ಲ ವಿವರ ಕೊಟ್ಟಿದ್ದಾರೆ ಗಣಿ.

  ಗಾಳಿಪಟದಲ್ಲಿ ಆ ಗಣಿಗೆ ಪ್ರೀತಿಯಾಗೋದು ವಿಧವೆಯಾಗಿರುವ ಡೈಸಿ ಬೋಪಣ್ಣ ಮೇಲೆ. ಇಲ್ಲಿ.. ವೈಭವಿ ಶಾಂಡಿಲ್ಯ ಜೋಡಿ. ಸಿಕ್ಕಾಪಟ್ಟೆ ಮಾಡ್ & ಬೋಲ್ಡ್  ಅನ್ನೋದು ಟ್ರೇಲರಿನಲ್ಲೇ ಗೊತ್ತಾಗಿದೆ. ಭಟ್ರು ಪ್ರತಿ ಪಾತ್ರವನ್ನೂ ಸ್ಪೆಷಲ್ ಆಗಿ ರೂಪಿಸಿದ್ದಾರೆ. ಅವರ ಪಾತ್ರ ಮತ್ತು ಕಲ್ಪನೆ ಯಾವಾಗಲೂ ಔಟ್ ಆಫ್ ದಿ ಬಾಕ್ಸ್ ಎಂದಿರೋ ಗಣಿಗೆ ಇಲ್ಲಿ ದೂದ್‍ಪೇಡ ದಿಗಂತ್ ಮತ್ತು ಪವನ್ ಇಬ್ಬರೂ ಫ್ರೆಂಡ್ಸ್. ಅಲ್ಲಿನಂತೆಯೇ ಇಲ್ಲಿಯೂ ಅನಂತನಾಗ್ ಇದ್ದಾರೆ. ಆ ಗಾಳಿಪಟದಲ್ಲಿ ಇಬ್ಬರು  ನಾಯಕಿಯರ ಅಪ್ಪ ಮತ್ತೊಬ್ಬ ನಾಯಕಿಯ ಮಾವನಾಗಿದ್ದವರು ಇಲ್ಲಿ ಟೀಚರ್. ಆ ಟೀಚರ್ ಸುತ್ತಲೂ ಚೆಂದದ ಕಥೆಯಿದೆ. ಆದರೆ.. ಆ ಗಾಳಿಪಟದ ಅಂಗವೈಕಲ್ಯ ಮತ್ತು ಹಂದಿಬಾಲದ ಕಥೆಯಂತೂ ಅಲ್ಲ ಅನ್ನೋದು ಗಣಿ ಕೊಡೋ ಭರವಸೆ.

  ದನಕಾಯೋದು ಸಿನಿಮಾ ಮಾಡುವಾಗ ಗಾಳಿಪಟ 2 ಚಿತ್ರದ ಕಾನ್ಸೆಪ್ಟ್ ಮೂಡಿತ್ತು. ಅದಕ್ಕೆ ಕಾರಣ ಗಣೇಶ್ ನಟಿಸಿದ್ದ ಮುಂಗಾರು ಮಳೆ 2. ಅದಾದ ಮೇಲೆ ಮುಗುಳುನಗೆ ಚಿತ್ರ ಮಾಡುವಾಗ ಕಥೆ ಒಂದು ಹದಕ್ಕೆ ಬಂತು. ಈಗ ಗಾಳಿಪಟ 2 ಸಿದ್ಧವಾಗಿದೆ. ಗಾಳಿಪಟ 3 ಮಾಡೋಕೂ ಕಥೆಯ ಎಳೆ ಸಿದ್ಧವಾಗಿದೆ ಎನ್ನುತ್ತಿದ್ದಾರೆ ಯೋಗರಾಜ್ ಭಟ್.

  ಯೋಗರಾಜ್ ಭಟ್ ಮತ್ತು ಗಣೇಶ್ ಒಟ್ಟಿಗೇ ಮಾಡುತ್ತಿರೋ 4ನೇ ಸಿನಿಮಾ ಇದು. ಇದಕ್ಕೂ ಮುನ್ನ ಮುಂಗಾರು ಮಳೆ, ಗಾಳಿಪಟ ಮತ್ತು ಮುಗುಳುನಗೆ ಮೂರೂ ಚಿತ್ರಗಳು ಸೂಪರ್ ಹಿಟ್. ಈಗ ಗಾಳಿಪಟ 2. ರಮೇಶ್ ರೆಡ್ಡಿಯವರಂತೂ ಚಿತ್ರದ ಬಗ್ಗೆ ಕೇಳಿಬರುತ್ತಿರುವ ಪಾಸಿಟಿವ್ ಮಾತುಗಳಿಂದ ಖುಷಿಯಾಗಿದ್ದಾರೆ.

 • ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದಿಗಂತ್ ಚಡ್ಡಿ ಬಿಚ್ಚಿಸಿದ್ರಾ ಭಟ್ಟರು..?

  ದೂದ್ ಪೇಡ ದಿಗಂತ್ ಕ್ಯೂಟ್ ಕ್ಯೂಟ್. ಅಂತಹವರನ್ನ ಆಂಗ್ರಿ ಯಂಗ್ ಮ್ಯಾನ್ ಆಗಿ ತೋರಿಸಿದ್ರೆ.. ಹೆಸರು ನೋಡಿದ್ರೆ ದೂಧ್ ಪೇಡ. ಆದರೆ ಪೇಡದ ಬಾಯಲ್ಲಿ ಸದಾ ಉರಿಯುವ ಬೆಂಕಿ.. ಹೊಗೆ... ಭಗ್ನಪ್ರೇಮಿ.. ಬೆತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂದು ಹಿಮಾಲಯಕ್ಕೇ ಹೋಗಿ ಬೆತ್ತಲಾಗುವ.. ಹಾಗೆ ಬೆತ್ತಲಾದಾಗ ಕತ್ತಲಲ್ಲಿ ಸಕಲವನ್ನೂ ಕಿತ್ತು ಹಾಕುವ.. ಆಹಾ.. ಒಂದು ಪಾತ್ರದಲ್ಲಿ ಇಡೀ ಲೈಫನ್ನೇ ಉಲ್ಟಾಪಲ್ಟಾ ತೋರಿಸೋದ್ರಲ್ಲಿ ಭಟ್ಟರು ಎತ್ತಿದ ಕೈ.

  ಗಾಳಿಪಟ 2 ಚಿತ್ರದ ದಿಗಂತ್ ಪಾತ್ರದ ಪರಿಚಯ ಇದು. ಮೊನ್ನೆ ಮೊನ್ನೆಯಷ್ಟೇ ಗಣೇಶ್ ಪಾತ್ರದ ಪರಿಚಯ ಮಾಡಿಸಿದ್ದ ಭಟ್ಟರು ಈ ಬಾರಿ ದಿಗಂತ್ ಪಾತ್ರ ತಂದು ನಿಲ್ಲಿಸಿದ್ದಾರೆ. ಗಣೇಶ್-ವೈಭವಿ ಶಾಂಡಿಲ್ಯ, ದಿಗಂತ್-ಸಂಯುಕ್ತಾ ಮೆನನ್, ಪವನ್ ಕುಮಾರ್-ಶರ್ಮಿಳಾ ಮಾಂಡ್ರೆ ಜೋಡಿಗಳಾಗಿರೋ ಚಿತ್ರದಲ್ಲಿ ಅನಂತನಾಗ್, ರಂಗಾಯಣ ರಘು, ಬುಲೆಟ್ ಪ್ರಕಾಶ್, ಪದ್ಮಜಾ ರಾವ್.. ಹೀಗೆ ಘಟಾನುಘಟಿಗಳೇ ನಟಿಸಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾ ಆಗಸ್ಟ್ 12ಕ್ಕೆ ಥಿಯೇಟರಿಗೆ ಬರಲಿದೆ.

 • ಭಟ್ಟರಿಂದ ಮತ್ತೊಂದು ಗಾಳಿಪಟ

  yogaraj bhat ready for gaalipata sequel

  ಯೋಗರಾಜ್ ಭಟ್ಟರು ಗಾಳಿಪಟ ಹಾರಿಸೋಕೆ ರೆಡಿಯಾಗಿದ್ದಾರೆ. ಎರಡನೇ ಬಾರಿ. ಈ ಬಾರಿ ಗಾಳಿಪಟ ಹಾರಿಸೋಕೆ ಭಟ್ಟರು ಅಯ್ದುಕೊಂಡಿರೋದು ಶರಣ್, ಲೂಸಿಯಾ ಪವನ್ ಮತ್ತು ಅಲಮೇಲಮ್ಮ ಖ್ಯಾತಿಯ ರಿಷಿಯನ್ನು. ಅನುಮಾನವೇ ಇಲ್ಲ, ಇದು ಗಾಳಿಪಟ ಚಿತ್ರದ ಸೀಕ್ವೆಲ್.

  ಗಾಳಿಪಟದಲ್ಲಿ ಗಣೇಶ್, ದಿಗಂತ್, ರಾಜೇಶ್ ಕೃಷ್ಣ, ಡೈಸಿ ಬೋಪಣ್ಣ, ನೀತೂ, ಭಾವನಾ ರಾವ್ ಇದ್ದರು. ಈ ಗಾಳಿಪಟದಲ್ಲಿ ಸಂಪೂರ್ಣ ಹೊಸ ತಂಡ. ಭಟ್ಟರು ಈಗಾಗಲೇ ಕಥೆಯನ್ನೂ ರೆಡಿ ಮಾಡಿಟ್ಟುಕೊಂಡಿದ್ದಾರಂತೆ. ಪಂಚತಂತ್ರ ಮುಗಿಸಿದ ತಕ್ಷಣ, ಗಾಳಿಪಟ ಹಾರಿಸೋಕೆ ಭಟ್ಟರು ರೆಡಿಯಾಗಿದ್ದಾರೆ.

  2008ರಲ್ಲಿ ತೆರೆಕಂಡಿದ್ದ ಗಾಳಿಪಟ, ಸೂಪರ್ ಹಿಟ್ ಸಿನಿಮಾ. ಸರಿಯಾಗಿ 10 ವರ್ಷಗಳ ನಂತರ ಗಾಳಿಪಟ 2ಗೆ ಶ್ರೀಕಾರ ಹಾಕಿದ್ದಾರೆ ಭಟ್ಟರು. ಸದ್ಯಕ್ಕೆ ಪಂಚತಂತ್ರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

 • ಹಾಡಿನ ಟೀಸರ್`ನಲ್ಲೇ ಸಖತ್ ಗಾಳಿಪಟ ಬಿಟ್ರು ಭಟ್ರು..!

  ಹಾಡಿನ ಟೀಸರ್`ನಲ್ಲೇ ಸಖತ್ ಗಾಳಿಪಟ ಬಿಟ್ರು ಭಟ್ರು..!

  ಯೋಗರಾಜ್ ಭಟ್ಟರ ಸಿನಿಮಾ ಎಂದ ಮೇಲೆ ಒಂದಿಷ್ಟು ತರಲೆ.. ವೇದಾಂತ.. ಇರಲೇಬೇಕು. ಚಿತ್ರ ವಿಚಿತ್ರ ಅನ್ನಿಸುವಂತಾದ್ದು ಏನೊಂದಾದರೂ ಇರಲಾಕಾ ಬೇಕು.  ಗಾಳಿಪಟ 2 ನಲ್ಲೂ ಅಂತಹದ್ದೊಂದು ಬರೋಬ್ಬರಿ ತರಲೆ ಪಂಚ್ ಇಟ್ಟೇ ಹಾಡಿನ ಟೀಸರ್ ಬಿಟ್ಟಾರಾ ಯೋಗರಾಜ್ ಭಟ್ರು. ಇದು ಗಾಳಿಪಟ 2 ಚಿತ್ರದಿಂದ ಹೊರಬರುತ್ತಿರೋ ಮೊದಲನೇ ಸಾಂಗ್ನ ಟೀಸರು.

  ಫೇಲ್ ಆಗುವ ಹುಡುಗ ಒಂದೊಂದೇ ಸಬ್ಜೆಕ್ಟ್ ಹೋಯ್ತು.. ಹೋಯ್ತು.. ಅಂತ ಗೆಳೆಯನಿಗೆ ಹೇಳ್ತಿರೋವಾಗ.. ಟೋಟಲ್ ಆಗಿ ಹೋಯ್ತ್ ಅಂತಾ ಹೇಳ್ಬಾರ್ದಾ ಎನ್ನೋ ಸಲಹೆ.. ಬಿಡಿ ಬಿಡಿಯಾಗಿ ಹೇಳಿದ್ರೆ ಯಾವ್ದಾದ್ರೂ ಒಂದ್ ಪಾಸಾಗೇತಿ ಅಂದ್ಕೋತಾರೆ ಅನ್ನೋ ಬುದ್ದಿವಂತನ ಮಾತಿನೊಂದಿಗೆ ಹಾಡಿನ ಟೀಸರ್ ಕೊಟ್ಟಿದ್ದಾರೆ ಭಟ್ಟರು. ಜೊತೆಗೆ ಬಾಯ್ ಬಡ್ಕೊಳ್ಳೋ ಸ್ಟೂಡೆಂಟ್ಸು.

  ಭಟ್ಟರೊಂದಿಗೆ 2ನೇ ಗಾಳಿಪಟ ಹಾರಿಸ್ತಿರೋದು ಗಣೇಶ್, ಅನಂತ ನಾಗ್, ದಿಗಂತ್, ಲೂಸಿಯಾ ಪವನ್, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ.. ಮತ್ತಿತರರು. ಬುಲೆಟ್ ಪ್ರಕಾಶ್ ನಟಿಸೊರೋ ಕೊನೆಯ ಸಿನಿಮಾ ಇದು.

  ಉಮಾ ಎಂ. ರಮೇಶ್ ರೆಡ್ಡಿ ನಿರ್ಮಾಣದ ಸಿನಿಮಾವಿದು. ಅರ್ಜುನ್ ಜನ್ಯಾ ಸಂಗೀತ ಇದೆ. ಹಾಡು ರಿಲೀಸ್ ಆಗೋದು ಏಪ್ರಿಲ್ 21ಕ್ಕೆ. ಕಾಯ್ತಾ ಇರಿ.

 • ಹಿಮಾಚಲದಲ್ಲೇ ಗಾಳಿಪಟ

  yogaraj bhat plans gaalipata 2 shooting in himachal pradesh

  ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಇಷ್ಟು ಹೊತ್ತಿಗೆ ಗಾಳಿಪಟ 2 ಚಿತ್ರ ವಿದೇಶದಲ್ಲೂ ಶೂಟಿಂಗ್ ಮುಗಿಸಿಕೊಂಡು ಬಂದು ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್‍ನಲ್ಲಿರುತ್ತಿತ್ತು. ಎಲ್ಲ ಯೋಜನೆಗಳನ್ನೂ ನುಂಗಿಹಾಕಿದ್ದು ಕಣ್ಣಿಗೆ ಕಾಣದ ಕೊರೊನಾ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ.

  `ಮೊದಲು ನಮ್ಮ ಪ್ಲಾನ್ ಇದ್ದದ್ದು ಉತ್ತರ ಭಾರತದಲ್ಲಿ ಶೂಟಿಂಗ್ ಅಂತ. ಆದರೆ ಅದು ಆನಂತರ ಯೂರೋಪ್‍ಗೆ ಶಿಫ್ಟ್ ಆಗಿತ್ತು. ಈಗ ವಿದೇಶಗಳಿಗೆ ಹೋಗೋ ಹಾಗಿಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮಾಡೋ ಪ್ಲಾನ್ ಇದೆ. ಲೊಕೇಷನ್ ಕೂಡಾ ಹೊಂದಾಣಿಕೆಯಾಗುತ್ತಿದೆ' ಎಂದಿದ್ದಾರೆ ಯೋಗರಾಜ್ ಭಟ್.

  ಗಣೇಶ್, ದಿಗಂತ್, ಲೂಸಿಯಾ ಪವನ್ ಮತ್ತು ಅನಂತ್ ನಾಗ್ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವಿದು.