ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರ ದಿನಕ್ಕೊಂದು ಸೆನ್ಸೇಷನ್ ನ್ಯೂಸ್ ಕೊಡುತ್ತಿದೆ. ದರ್ಶನ್ ಎದುರು ಆಶಾ ಭಟ್ ನಾಯಕಿ. ಈಗ ನೋಡಿದರೆ, ಆ ಚಿತ್ರದಲ್ಲಿ ಸೋನಲ್ ಮಂಥೆರೋ ಕೂಡಾ ಇದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ಚಿತ್ರದ ಶೂಟಿಂಗ್ ಎಲ್ಲ ಮುಗಿಯುವವರೆಗೆ ಈ ವಿಷಯ ಗುಟ್ಟಾಗಿಟ್ಟಿದ್ದ ತರುಣ್ ಸುಧೀರ್, ಈಗ ಸೋನಲ್ ಅವರಿಗೆ ಮಾತನಾಡೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.
ತರುಣ್ ಸುಧೀರ್ ಸರ್ ನನ್ನನ್ನು ಭೇಟಿ ಮಾಡಿದಾಗ ಥ್ರಿಲ್ ಆಗಿದ್ದೆ. ಅಡಿಷನ್ ಮಾಡಿಸಬಹುದು ಎಂದುಕೊಂಡೆ, ಅವರು ಪಾತ್ರವನ್ನೇ ಕೊಟ್ಟರು. ಚಿತ್ರದಲ್ಲಿ ನಾನು ನಾಯಕಿ ಅಲ್ಲ, ಆದರೆ, ಅದು ಅತ್ಯಂತ ಪ್ರಮುಖವಾದ ಪಾತ್ರ. ಹೀಗಾಗಿಯೇ ಒಪ್ಪಿಕೊಂಡೆ ಎನ್ನುತ್ತಾರೆ ಸೋನಲ್. ಅಷ್ಟೇ ಅಲ್ಲ, ಚಿತ್ರದಲ್ಲಿ ನಟಿಸುತ್ತಿರುವ ಬಗ್ಗೆ, ಪಾತ್ರದ ಬಗ್ಗೆ ಹೊರಗೆಲ್ಲೂ ಹೇಳಿಕೊಳ್ಳಬಾರದು ಎಂಬ ಕಂಡಿಷನ್ ಹಾಕಿದ್ದರಂತೆ. ಈಗಲೂ ಅಷ್ಟೆ, ನಟಿಸಿದ್ದೇನೆ ಎಂದು ಹೇಳಿಕೊಳ್ಳೋಕೆ ಮಾತ್ರ ಪರ್ಮಿಷನ್. ಪಾತ್ರದ ಬಗ್ಗೆ ಹೇಳಿಕೊಳ್ಳುವ ಹಾಗೆ ಇಲ್ಲ.
ಪಂಚತಂತ್ರದಲ್ಲಿನ ನನ್ನ ನಟನೆ ನೋಡಿ ಇಷ್ಟಪಟ್ಟು ಅವಕಾಶ ಕೊಟ್ಟರು. ನಾನು ಇದುವರೆಗೆ ನಟಿಸಿರುವ ಎಲ್ಲ ಚಿತ್ರಗಳಲ್ಲೂ ಲೀಡ್ ರೋಲ್. ಆದರೆ, ಈ ಚಿತ್ರದಲ್ಲಿ ಆಶಾ ಭಟ್ ನಾಯಕಿ. ಹೀಗಿದ್ದರೂ ನಾನು ನಟಿಸಿದ್ದೇನೆ ಎಂದರೆ, ಅದಕ್ಕೆ ಕಾರಣ ಎರಡು. ಒಂದು ತರುಣ್ ಸುಧೀರ್ ಮತ್ತು ದರ್ಶನ್ ಚಿತ್ರ ಎನ್ನುವುದು. ಎರಡು ಆ ಪಾತ್ರಕ್ಕಿರುವ ಮಹತ್ವ ಎಂದಿದ್ದಾರೆ ಸೋನಲ್.
ರಾಬರ್ಟ್ ಚಿತ್ರ ರಿಲೀಸ್ ಆಗುವ ಹೊತ್ತಿಗೆ ಇನ್ನಷ್ಟು ಸೆನ್ಸೇಷನ್ ಸುದ್ದಿಗಳು ಹೊರಬೀಳುವುದು ಖಂಡಿತಾ.