ಸಾಯಿಪ್ರಕಾಶ್, 100 ಚಿತ್ರಗಳ ಹೊಸ್ತಿಲಲ್ಲಿ ನಿಂತಿರುವ ನಿರ್ದೇಶಕ. ನಟನಾಗಿ ನಟಿಸುವುದು ಬೇರೆ, ನಿರ್ದೇಶನವೇ ಬೇರೆ. ಹೀಗಿರುವಾಗ 100 ಚಿತ್ರಗಳ ನಿರ್ದೇಶನವೆಂದರೆ ಸುಮ್ಮನೆ ಮಾತಲ್ಲ. ಅಂಥಾದ್ದೊಂದು ಸಾಧನೆಯ ಹೊಸ್ತಿಲಲ್ಲಿರುವ ಸಾಯಿಪ್ರಕಾಶ್, 100ನೇ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ.
ತಮ್ಮ 100ನೇ ಚಿತ್ರಕ್ಕೆ ಶಿವರಾಜ್ ಕುಮಾರ್ ಹೀರೋ ಅಂಥಾ ಹಲವು ವರ್ಷಗಳಿಂದ ಹೇಳಿಕೊಂಡು ಬಂದಿದ್ದರು ಸಾಯಿಪ್ರಕಾಶ್. ರಾಧಿಕಾ ಕುಮಾರಸ್ವಾಮಿ ನಿರ್ಮಾಣದಲ್ಲಿ ಕಥೆಯೂ ಸಿದ್ಧವಾಗಿ, ಅವರೇ ನಿರ್ಮಾಪಕಿಯೂ ಆಗಿದ್ದರು. ಅದೇಕೋ ಏನೋ.. ಚಿತ್ರ ಸೆಟ್ಟೇರಲೇ ಇಲ್ಲ.
ಈಗ ಅದೆಲ್ಲವನ್ನೂ ಪಕ್ಕಕ್ಕಿಟ್ಟು ಹೊಸ ಕಥೆ ರೆಡಿ ಮಾಡಿದ್ದಾರೆ. ಅದಕ್ಕೆ ಶಿವರಾಜ್ ಕುಮಾರ್ ಕೂಡಾ ಓಕೆ ಎಂದಿದ್ದಾರೆ. ಸದ್ಯಕ್ಕೆ ಟಗರು ಚಿತ್ರದ ರಿಲೀಸ್ ಖುಷಿಯಲ್ಲಿರುವ ಶಿವರಾಜ್ ಕುಮಾರ್, ಏಪ್ರಿಲ್ ನಂತರ ಡೇಟ್ಸ್ ಕೊಡೋ ಭರವಸೆ ಕೊಟ್ಟಿದ್ದಾರೆ.
100ನೇ ಚಿತ್ರಕ್ಕೆ ಶಿವರಾಜ್ ಕುಮಾರ್ ಅವರನ್ನು ಫೈನಲ್ ಮಾಡಿಕೊಂಡ ಸಾಯಿಪ್ರಕಾಶ್, ಸದ್ಯಕ್ಕೆ 101ನೇ ಚಿತ್ರ ನಿರ್ದೇಶಿಸುತ್ತಿದ್ದಾರೆ. ರಾಮ್ಕುಮಾರ್ ಅಭಿನಯದ ಕ್ರಾಂತಿಯೋಗಿ ಮಹಾದೇವರು ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ಸಾಯಿಪ್ರಕಾಶ್.