ಸೂಪರ್‍ಸ್ಟಾರ್ ರಜನಿಕಾಂತ್ ಅಭಿನಯದ ಕಾಲಾ ಚಿತ್ರ, ಜೂನ್ 7ನೇ ತಾರೀಕು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಆದರೆ, ಕರ್ನಾಟಕದಲ್ಲಿ ಇಲ್ಲ. ರಜನಿಕಾಂತ್ ಕಾವೇರಿ ನದಿ ನೀರು ಹಂಚಿಕೆ ಕುರಿತು ಕರ್ನಾಟಕದ ವಿರುದ್ಧ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಾಲಾ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡದೇ ಇರಲು ಚಲನಚಿತ್ರ ಪ್ರದರ್ಶಕರು ನಿರ್ಧಾರ ತೆಗೆದುಕೊಂಡಿದ್ದಾರೆ. ಫಿಲಂಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಈ ವಿಷಯ ತಿಳಿಸಿದ್ದಾರೆ.
ವಿತರಕರು ಹಾಗೂ ಪ್ರದರ್ಶಕರ ಜೊತೆ ಸಭೆ ನಡೆಸಿದ ಸಾ.ರಾ.ಗೋವಿಂದು, ಸಭೆಯ ನಂತರ ಈ ವಿಷಯ ತಿಳಿಸಿದರು. ಅಷ್ಟೇ ಅಲ್ಲ, ವಿವಾದಾತ್ಮಕ ಹೇಳಿಕೆ ಕೊಡುವುದು, ಆನಂತರ ಕ್ಷಮೆ ಕೇಳಿ ಸುಮ್ಮನಾಗುವುದು.. ತಮಿಳು ನಟರಿಗೆ ಮಾಮೂಲಾಗಿಬಿಟ್ಟಿದೆ. ಹೀಗಾಗಿ ರಜನಿಕಾಂತ್ ಕ್ಷಮೆ ಕೇಳಿದರೂ ಕೂಡಾ ಕಾಲ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ ಸಾ.ರಾ.ಗೋವಿಂದು.
ವಿಶೇಷ ಅಂದ್ರೆ, ಸಾ.ರಾ.ಗೋವಿಂದು ಹಾಗೂ ರಜನಿಕಾಂತ್, ಆಪ್ತಸ್ನೇಹಿತರು. ಆದರೆ, ಭಾಷೆ, ನದಿ ವಿಚಾರದಲ್ಲಿ ಸ್ನೇಹವನ್ನೂ ಪಕ್ಕಕ್ಕಿಟ್ಟಿದ್ದಾರೆ ಸಾ.ರಾ.ಗೋವಿಂದು.