ಮಿಸ್ಟರ್ & ಮಿಸಸ್ ರಾಮಾಚಾರಿ. ಡಿಸೆಂಬರ್ 25ರಂದು ರಿಲೀಸ್ ಆಗಿದ್ದ ಸಿನಿಮಾ. ಕೆಜಿಎಫ್ ಬಿಡುಗಡೆಗೂ ಮುನ್ನ ಯಶ್ ವೃತ್ತಿ ಬದುಕಿನಲ್ಲಿ ದೊಡ್ಡ ಮಟ್ಟದ ಹಿಟ್ ಆಗಿದ್ದಿದ್ದು ಇದೇ ಸಿನಿಮಾ. 2014ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರಕ್ಕೀಗ 8 ವರ್ಷ. ಯಶ್ ವೃತ್ತಿ ಬದುಕಿನಲ್ಲಿ ಅತೀ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿರುವ ಜಯಣ್ಣ-ಭೋಗೇಂದ್ರ ಈ ಚಿತ್ರಕ್ಕೂ ನಿರ್ಮಾಪಕರು. ಸಂಭಾಷಣೆ, ಸಾಹಿತ್ಯ ಬರೆದುಕೊಂಡಿದ್ದ ಸಂತೋಷ್ ಆನಂದರಾಮ್ ಎಂಬ ಹುಡುಗ ಕನ್ನಡ ಚಿತ್ರರಂಗದ ಸಕ್ಸಸ್ ಸ್ಟಾರ್ ಡೈರೆಕ್ಟರ್ ಆಗಿದ್ದು ಇದೇ ಚಿತ್ರದಿಂದ.
ಚಿತ್ರದ ಯಶಸ್ಸಿಗೆ ಏನು ಕಾರಣ.. ಹುಡುಕಿದರೆ ನೂರೆಂಟು ಕಾರಣ ಸಿಗುತ್ತವೆ. ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ಯಶ್, ಕೇರ್‍ಲೆಸ್ ಹುಡುಗನಾಗಿ.. ನಂತರ ಜವಾಬ್ದಾರಿಯುತ ಮಗನಾಗಿ.. ಪ್ರೇಮಿಯಾಗಿ.. ನಟಿಸಿದ್ದರು. ಚಿತ್ರದುದ್ದಕ್ಕೂ ವಿಷ್ಣು ದಾದಾ ಕ್ಯಾರಿ ಆಗಿದ್ದರು. ಹೀರೋ ಉಢಾಳನೋ.. ಪೋಲಿಯೋ.. ಹೇಗೆಂದು ನಿರ್ಧರಿಸೋಕೆ ಸಾಧ್ಯವಿಲ್ಲದೆ ಪ್ರೇಕ್ಷಕರು ತೆರೆದ ಹೃದಯದಿಂದ ಅಪ್ಪಿಕೊಂಡಿದ್ದರು. ಯಶ್-ರಾಧಿಕಾ ಪಂಡಿತ್ ಲವ್ ಸ್ಟೋರಿ, ಬಾಗಿನ ಕೊಟ್ಟು ಪ್ರಪೋಸ್ ಮಾಡುವ ಸ್ಟೈಲ್ ಇವತ್ತಿಗೂ ಟ್ರೆಂಡಿಂಗ್‍ನಲ್ಲಿದೆ. ನಾನ್ ಬರೋವರ್ಗೂ ಮಾತ್ರ ಬೇರೆಯವರ ಹವಾ.. ನಾನ್ ಬಂದ್ ಮೇಲೆ ನಂದೇ ಹವಾ.. ಚಿತ್ರದ ಫೇಮಸ್ ಡೈಲಾಗ್.. ಆನಂತರ ಯಶ್ ಕೆರಿಯರಿಗೂ ಮ್ಯಾಚ್ ಆಗುವಂತೆ ಸಕ್ಸಸ್ ಸಿಕ್ಕಿತು. ಹರಿಕೃಷ್ಣ ಮ್ಯೂಸಿಕ್ಕಿನಲ್ಲಿ ಎಲ್ಲ ಹಾಡುಗಳೂ ಸೂಪರ್ ಹಿಟ್.
ನಿರ್ದೇಶಕ ಸಂತೋಷ್ ಆನಂದರಾಮ್ 8 ವರ್ಷಗಳ ಸಕ್ಸಸ್ ಟ್ವೀಟ್‍ನಲ್ಲಿ ನೆನಪಿಸಿಕೊಂಡಿರುವುದು ಯಶ್ ಅವರನ್ನೇ. ನಿರ್ಮಾಪಕ ಜಯಣ್ಣ ಕೂಡಾ ಚಿತ್ರದ ಗೆಲುವಿನ ಕ್ರೆಡಿಟ್‍ನ್ನು ಯಶ್ ಅವರಿಗೇ ಕೊಟ್ಟಿದ್ದಾರೆ. ಸಿನಿಮಾ ಚಿತ್ರೀಕರಣದ ಹೊತ್ತಿಗೆ ಯಶ್ ಮತ್ತು ರಾಧಿಕಾ ಪರಸ್ಪರ ಪ್ರೀತಿಸುತ್ತಿದ್ದುದು ಗೊತ್ತಾಗಿತ್ತು. ಆದರೆ ಇಬ್ಬರೂ ಬಹಿರಂಗಪಡಿಸಿರಲಿಲ್ಲ. ಅದು ಗೊತ್ತಿದ್ದೇ ಚಿತ್ರದ ಕೆಲವು ಸೀನ್ ರೂಪಿಸಿದ್ದೆವು ಎಂದಿದ್ದಾರೆ ಜಯಣ್ಣ.
ಯಶ್ ಫ್ಯಾನ್ಸ್ ಈಗ ರಾಜ್ಯಾದ್ಯಂತ ಸೆಲಬ್ರೇಷನ್ ಮಾಡುತ್ತಿದ್ದು 8ನೇ ವರ್ಷಕ್ಕೆ 8 ದಿನ ಸಂಭ್ರಮ ಇಟ್ಟುಕೊಂಡಿದ್ದಾರೆ. ಜನವರಿ 1ರಿಂದ ಜನವರಿ 8ರವರೆಗೆ ಯಶ್ ಟೈಮ್ಸ್ ಹೆಸರಲ್ಲಿ ಕ್ಯಾಂಪೇನ್ ಶುರುವಾಗುತ್ತಿದೆ. ಪ್ರತಿ ಸಂಜೆ 6ಕ್ಕೆ ಯಶ್ ಅವರೇ ಖುದ್ದು ಫ್ಯಾನ್ಸ್ ಸರ್‍ಪ್ರೈಸ್ ಕೊಡುತ್ತಾರೆ. 8ನೇ ತಾರೀಕು ಯಶ್ ಹೊಸ ಸಿನಿಮಾ ಅನೌನ್ಸ್ ಆಗುವ ಸೂಚನೆಗಳಿವೆ. ನಿರೀಕ್ಷೆಗಳಿವೆ. ಆದರೆ.. ಪಕ್ಕಾ ಇಲ್ಲ. ಏಕಂದ್ರೆ ಅದನ್ನು ಡಿಸೈಡ್ ಮಾಡೋದು ಯಶ್ ಆಗಿರುವ ಕಾರಣ ಕನ್‍ಫರ್ಮ್ ಮಾಡುವುದಕ್ಕೆ ಆಗುತ್ತಿಲ್ಲ.