ಕಾವೇರಿ ಹೋರಾಟದಲ್ಲಿ ಕನ್ನಡ ಚಿತ್ರರಂಗದವರು ಯಾಕೆ ತುಟಿ ಬಿಚ್ಚುತ್ತಿಲ್ಲ ಅನ್ನೋ ಸೋಷಿಯಲ್ ಮೀಡಿಯಾದವರು ಎತ್ತಿದ ಪ್ರಶ್ನೆಗೆ ಕೊನೆಗೂ ಉತ್ತರ ಬಂದಿದೆ. ಚಿತ್ರರಂಗದ ಕಲಾವಿದರು, ನಿರ್ದೇಶಕರು, ತಂತ್ರಜ್ಞರೆಲ್ಲ ಕಾವೇರಿಗಾಗಿ ಧ್ವನಿ ಎತ್ತಿದ್ದಾರೆ.
ಹಿರಿಯ ನಟರಾದ ಅನಂತನಾಗ್, ಶಿವಣ್ಣ, ರಾಘವೇಂದ್ರ ರಾಜ್‍ಕುಮಾರ್, ಸುದೀಪ್, ದರ್ಶನ್, ಅಭಿಷೇಕ್ ಅಂಬರೀಷ್, ವಿನೋದ್ ಪ್ರಭಾಕರ್,
ನಟ ಅನಂತನಾಗ್ ಅವರಂತೂ ದ್ರಾವಿಡ ಪಕ್ಷಗಳು ಕರ್ನಾಟಕವನ್ನು ಪಾಕಿಸ್ತಾನ ಅಥವಾ ಶ್ರೀಲಂಕಾ ಅಂದುಕೊಂಡಿದ್ದಾರೆ. ಕಾವೇರಿ ವಿಷಯದಲ್ಲಿ ಯುದ್ಧಕ್ಕೆ ನಿಂತಂತೆ ಅವರ ನಿಲುವಿದೆ. ಅವರೊಟ್ಟಿಗೆ ಮಾತುಕತೆ ಸಾಧ್ಯವಿಲ್ಲ. ಅವರು ಒಗ್ಗಟ್ಟಾಗಿ ಕೇಂದ್ರ ಸರ್ಕಾರಕ್ಕೆ ಹೋಗಿ ಸಮಸ್ಯೆ ಬಗ್ಗೆ ಚರ್ಚಿಸುತ್ತಾರೆ. ಹಕ್ಕೊತ್ತಾಯ ಮಾಡುತ್ತಾರೆ. ಆದರೆ ನಮ್ಮಲ್ಲಿ ಹಾಗೆ ಒಕ್ಕೂರಲಿನಿಂದ ಒಗ್ಗಟ್ಟು ಪ್ರದರ್ಶಿಸಿದ್ದು ಅಷ್ಟಾಗಿ ಕಂಡಿಲ್ಲ ಎಂದಿರುವ ಅನಂತನಾಗ್, ಬಹುಷಃ 45 ನೇ ಬಾರಿ ಡಿಎಂಕೆ ಪಕ್ಷಗಳು ಹೀಗೆ ಕಾವೇರಿ ವಿವಾದ ಎಬ್ಬಿಸುತ್ತಿರುವುದು ಎನಿಸುತ್ತದೆ. ಆದರೆ ಈ ಬಾರಿಯಾದರು ನಾವೆಲ್ಲ ಒಗ್ಗಟ್ಟಾಗಿ ನಿಲ್ಲಬೇಕಿದೆ. ಸಿಎಂ ಸಿದ್ದರಾಮಯ್ಯ ಅವರು ಈ ವಿಷಯದಲ್ಲಿ ಸೂಕ್ತ ನಾಯಕತ್ವ ನೀಡಬೇಕು, ಕಠಿಣ ನಿಲುವು ತಳೆಯಬೇಕು, ಸಮಸ್ಯೆಯನ್ನು ಇನ್ನಿಲ್ಲದಂತೆ ಬಗೆಹರಿಸಬೇಕು. ನಮ್ಮ ಸಂಸದರು, ಕೇಂದ್ರದಲ್ಲಿ ಮಂತ್ರಿಯಾಗಿರುವ ಕನ್ನಡಿಗರು ದೆಹಲಿ ಮಟ್ಟದಲ್ಲಿ ಚಳವಳಿ ಮುನ್ನಡೆಸಬೇಕು, ಇಲ್ಲಿ ಸಿಎಂ ಸಿದ್ದರಾಮಯ್ಯ ನಾಯಕತ್ವ ನೀಡಬೇಕು. ಮುಂದಿನ 48 ಗಂಟೆಗಳಲ್ಲಿ ಕಠಿಣವಾದ ನಿರ್ಣಯವನ್ನು ಪ್ರಕಟಿಸಬೇಕು” ಎಂದಿದ್ದಾರೆ.
ಕಿಚ್ಚ ಸುದೀಪ್ : ಸ್ನೇಹಿತರೆ, ನಮ್ಮ ಕಾವೇರಿ ನಮ್ಮ ಹಕ್ಕು . ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ . ಈ ಕೂಡಲೇ ತಜ್ಞರು ಕಾರ್ಯತಂತ್ರ ರೂಪಿಸಿ ನ್ಯಾಯ ನೀಡಲಿ ಎಂದು ಒತ್ತಾಯಿಸುತ್ತೇನೆ . ನೆಲ -ಜಲ -ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ.
ಶಿವರಾಜ್`ಕುಮಾರ್ : ರೈತ ದೇಶದ ಬೆನ್ನೆಲುಬು, ರೈತನ ಬೆನ್ನೆಲುಬು ಕಾವೇರಿ. ಈ ವರ್ಷ ರಾಜ್ಯದಲ್ಲಿ ಮಳೆ ಕಡಿಮೆ ಆಗಿರುವ ಕಾರಣ ಈಗಾಗಲೇ ನಮ್ಮ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಎರಡು ರಾಜ್ಯದ ನಾಯಕರು ಹಾಗೂ ನ್ಯಾಯಾಲಯ ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಬಗ್ಗೆ ಒಳ್ಳೆಯ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಳಿಕೊಳ್ಳುತ್ತಿದ್ದೇನೆ.
ದರ್ಶನ್ : ”ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ರಾಜ್ಯದಲ್ಲಿ ಸಾಕಷ್ಟಿದೆ. ಈ ಸಮಯದಲ್ಲಿ ನೀರಾವರಿ ಪ್ರದೇಶಕ್ಕೆ ಹಾನಿಯಾಗುವ ಸಾಧ್ಯತೆ ಬಹಳಷ್ಟು ಇರುವ ಕಾರಣ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ.
ಜಗ್ಗೇಶ್ : ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆಸಲ್ಲಿಸಿ ಕನ್ನಡಿಗರಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷಸಭೆಗೆ ಹಾಜರಾಗಿ ಸನ್ಮಾನ್ಯ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ರವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ. ನಾಳೆ ದೆಹಲಿಯಲ್ಲಿ ಕರ್ನಾಟಕ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ ಅದರಲ್ಲೂ ಭಾಗಿಯಾಗಿ “ಕಾವೇರಿ ನದಿಯ” ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ.
ವಿನೋದ್ ಪ್ರಭಾಕರ್ : ಕಾವೇರಿ ವಿವಾದದ ಬಗ್ಗೆ ಚಿತ್ರರಂಗ ಸುಮ್ಮನೆ ಕೂತಿಲ್ಲ, ಎಲ್ಲರೂ ತಮ್ಮ-ತಮ್ಮದೇ ರೀತಿಯಲ್ಲಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದಿದ್ದಾರೆ.